| ರಂಗಸ್ವಾಮಿ ಎಂ.ಮಾದಾಪುರ, ಮೈಸೂರು
ಮೂಲ ಸೌಕರ್ಯಕವೂ ಇಲ್ಲ, ರಾಜಕೀಯವೂ ಪ್ರಾತಿನಿಧ್ಯವೂ ಇಲ್ಲ. ಇದರಿಂದ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಆದಿವಾಸಿ ಸಮುದಾಯಗಳ ಮುಖಂಡರು ಸಿಡಿದೆದ್ದಿದ್ದು, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Karnataka Election) ರಾಜಕೀಯ ಪಕ್ಷಗಳಿಂದ ಆದಿವಾಸಿಗಳಿಗೆ ಟಿಕೆಟ್ ನೀಡದಿದ್ದರೆ ಮತದಾನ ಬಹಿಷ್ಕಾರ ಮಾಡಲು ಚಿಂತನೆ ನಡೆಸುತ್ತಿದ್ದಾರೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನಕ್ಕೆ ಹೊಂದಿಕೊಂಡಿರುವ ಕಾಡಂಚಿನ ಪ್ರದೇಶಗಳಲ್ಲಿ ಬರೋಬ್ಬರಿ 119 ಹಾಡಿಗಳು ಇವೆ. ಜೇನುಕುರುಬ, ಬೆಟ್ಟ ಕುರುಬ, ಸೋಲಿಗ ಹಾಗೂ ಎರವ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿದ್ದಾರೆ. ಅಂದಾಜು 40 ಸಾವಿರ ಜನಸಂಖ್ಯೆ ಇದ್ದು, ಸುಮಾರು 25 ಸಾವಿರ ಮತದಾರರು ಇದ್ದಾರೆ. ಅಂದರೆ ಪರಿಶಿಷ್ಟ ವರ್ಗಕ್ಕೆ ಮೀಸಲಾಗಿರುವ ಎಚ್.ಡಿ.ಕೋಟೆ ಕ್ಷೇತ್ರದಲ್ಲಿ ಆದಿವಾಸಿಗಳೇ ನಿರ್ಣಾಯಕ. ಈ ಸಮುದಾಯದ ಜನರು ರಾಷ್ಟ್ರೀಯ ಪಕ್ಷಗಳ ವಿರುದ್ಧ ರೋಸಿ ಹೋಗಿದ್ದಾರೆ. ವೋಟು ಹಾಕುವುದಕ್ಕೆ ನಾವು ಬೇಕು, ಅಧಿಕಾರ ಅನುಭವಿಸುವುದಕ್ಕೆ ಬೇರೆಯವರು ಬೇಕೇ ಎಂದು ಪ್ರಶ್ನಿಸಿದ್ದಾರೆ.
ವೋಟ್ಗೆ ಮಾತ್ರ ಬರ್ತಾರೆ
ಕರ್ನಾಟಕದಲ್ಲಿ ಒಟ್ಟು 15 ವಿಧಾನಸಭಾ ಕ್ಷೇತ್ರಗಳು ಎಸ್.ಟಿ.ಗೆ ಮೀಸಲಾಗಿವೆ. ಪರಿಶಿಷ್ಟ ವರ್ಗದಲ್ಲಿ 54 ಜಾತಿಗಳಿವೆ. ಆದರೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿ ಎಲ್ಲ ಪಕ್ಷಗಳೂ ನಾಯಕ ಸಮುದಾಯದವರನ್ನು ಮಾತ್ರ ಅಭ್ಯರ್ಥಿ ಮಾಡುತ್ತಾರೆ. ಎಸ್.ಟಿ. ಪಟ್ಟಿಯಲ್ಲಿ ನಾಯಕರು ಮಾತ್ರ ಇದ್ದಾರಾ? ನಾವೆಲ್ಲ ಮನುಷ್ಯರಲ್ಲವೇ? ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಈಗಲೂ ನಮ್ಮವರು ವಿಧಾನಸಭೆಗೆ ಹೋಗುವುದು ಬೇಡವೇ? ಮೂಲಸೌಕರ್ಯವನ್ನಂತೂ ಕೊಟ್ಟಿಲ್ಲ. ರಾಜಕೀಯ ಪ್ರಾತಿನಿಧ್ಯ ಕೊಡಿ ಅಂತ ಕೇಳುವುದರಲ್ಲಿ ತಪ್ಪೇನಿದೆ ಎಂಬುದು ಆದಿವಾಸಿ ಮುಖಂಡ ಶಿವರಾಜು ಅವರ ಪ್ರಶ್ನೆಯಾಗಿದೆ.
ಎಚ್.ಡಿ. ಕೋಟೆ ಕ್ಷೇತ್ರದಲ್ಲಿ ಆದಿವಾಸಿಗಳೇ ನಿರ್ಣಾಯಕ. ಇದು ಎಲ್ಲ ರಾಜಕೀಯ ಪಕ್ಷಗಳಿಗೂ ಗೊತ್ತು. ಆದ್ದರಿಂದಲೇ ಐದು ವರ್ಷಕ್ಕೊಮ್ಮೆ ನಮ್ಮ ಹಾಡಿಗಳಿಗೆ ಬರುತ್ತಾರೆ. ಅದು ಇದು ಅಂತ ಏನೇನೋ ಹೇಳಿ ವೋಟು ಕೇಳುತ್ತಾರೆ. ವೋಟು ಹಾಕಿಸಿಕೊಂಡ ಮೇಲೆ ಮತ್ತೆ ನಾವು ಬದುಕಿದ್ದೇವೋ ಇಲ್ಲವೋ ಅಂತಲೂ ತಿರುಗಿ ನೋಡಲ್ಲ. ಇದುವರೆಗೆ ಆಯ್ಕೆಯಾಗಿರುವ ಎಲ್ಲರೂ ಇದನ್ನೇ ಮಾಡಿದ್ದಾರೆ ಎಂದು ಹಾಡಿ ಭಾಸ್ಕರ ಬೇಸರ ವ್ಯಕ್ತಪಡಿಸಿದ್ದಾರೆ.
ಹಣವೂ ಬೇಡ, ಹೆಂಡವೂ ಬೇಡ
ಆದಿವಾಸಿಗಳಿಗೆ ವಿದ್ಯೆ, ಬುದ್ಧಿ ಇಲ್ಲ. ಇದು ರಾಜಕೀಯದವರಿಗೆ ಚೆನ್ನಾಗಿಯೇ ಗೊತ್ತು. ಎಲೆಕ್ಷನ್ ಹೊತ್ತಿಗೆ ಹಣ, ಹೆಂಡ ತೆಗೆದುಕೊಂಡು ಬರುತ್ತಾರೆ. ಊರಿಗೆಲ್ಲ ಹಂಚುತ್ತಾರೆ. ಅವರು ಕೊಡುವ ಕಳ್ಳಬಟ್ಟಿ, ಮದ್ಯ ಕುಡಿದು ಎಲೆಕ್ಷನ್ ಮುಗಿಯುವಷ್ಟರಲ್ಲಿ 100 ಜನರಾದರೂ ಸಾಯುತ್ತಾರೆ. ಪ್ರತಿ ಬಾರಿಯ ಎಲೆಕ್ಷನ್ನಲ್ಲೂ ಇದನ್ನು ನೋಡಿ ನೋಡಿ ನಮಗೆ ಸಾಕಾಗಿದೆ. ನಮಗೆ ನಿಮ್ಮ ಹಣವೂ ಬೇಡ, ನಿಮ್ಮ ಹೆಂಡವೂ ಬೇಡ. ನಮ್ಮಲ್ಲೇ ಯಾರಿಗಾದರೂ ಟಿಕೆಟ್ ಕೊಡಿ. ಕೈ-ಕಾಲು ಹಿಡಿದು ಗೆದ್ದುಕೊಳ್ಳುತ್ತೇವೆ.
| ಬೈರಾ. ಪೆಂಜಹಳ್ಳಿ ಹಾಡಿ
ನಾವು ಜೇನು ಸಂಗ್ರಹಕಾರರು ಸ್ವಾಮಿ. ಗೆಡ್ಡೆ ಗೆಣಸು ತಿಂತೀವಿ. ನಮ್ಮ ಎಂಎಲ್ಎ ಸಾಹೇಬರು ಗೆಡ್ಡೆ, ಗೆಣಸು ಎಲ್ಲ ತಿನ್ನೋದಿಲ್ಲ. ಅವರಿಗೆ ಕುರಿ ಕೋಳಿ ಮಾಂಸ ಬೇಕು. ನಾವು ಎಲ್ಲಿಂದ ತರೋದು. ಅದರಿಂದಲೇ ಅವರು ನಮ್ಮೂರಿಗೆ ಬರೋದಿಲ್ಲ. ನಮ್ಮ ಕಷ್ಟ ಏನು ಅಂತ ಕೇಳೋದಿಲ್ಲ.
| ಕೆಂಪ, ಆದಿವಾಸಿ
ಪರಿಶಿಷ್ಟ ವರ್ಗಕ್ಕೆ ಮೀಸಲಾತಿ ಇರುವುದು ಸರಿ. ಆದರೆ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಒಳಮೀಸಲಾತಿ ಜಾರಿಗೆ ತರಬೇಕು. 15 ಮೀಸಲು ಕ್ಷೇತ್ರಗಳಲ್ಲಿ ಕನಿಷ್ಠ 2-3 ಕ್ಷೇತ್ರಗಳಲ್ಲಿ ಆದಿವಾಸಿಗಳು ಸ್ಪರ್ಧೆ ಮಾಡಿ ಗೆಲ್ಲುವ ಅವಕಾಶ ಮಾಡಬೇಕು. ಅಲ್ಲಿವರೆಗೂ ಆದಿವಾಸಿಗಳು ವಿಧಾನಸೌಧದ ಮುಖ ನೋಡಲು ಸಾಧ್ಯವಿಲ್ಲ.
| ತಿಮ್ಮಯ್ಯ, ಆದಿವಾಸಿ ಮುಖಂಡ