Site icon Vistara News

Admission | ಜುಲೈ11ರಿಂದ ಪದವಿ ಪ್ರವೇಶಾತಿ ಆರಂಭ: ರಾಜ್ಯಕ್ಕೆ ಏಕರೂಪ ಶೈಕ್ಷಣಿಕ ವೇಳಾಪಟ್ಟಿ

student

ಬೆಂಗಳೂರು: ಶಿಕ್ಷಣ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ಕೇಳಿಬರುತ್ತಿದ್ದ ಬೇಡಿಕೆಯೊಂದು ಕೊನೆಗೂ ಈಡೇರಿದೆ. 2022-23ನೇ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಪದವಿ ಮತ್ತು ಸ್ನಾತಕೋತ್ತರ ಕೋರ್ಸುಗಳಿಗೆ ಇಡೀ ರಾಜ್ಯಕ್ಕೆ ಅನ್ವಯಿಸುವ ಹಾಗೆ ಏಕರೂಪ ಶೈಕ್ಷಣಿಕ ವೇಳಾಪಟ್ಟಿಯನ್ನು (common calendar of events) ಇದೇ ಮೊದಲ ಬಾರಿಗೆ ಸಿದ್ಧಪಡಿಸಲಾಗಿದೆ. ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಇದನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

ಶನಿವಾರ ಈ ಬಗ್ಗೆ ಮಾತನಾಡಿರುವ ಸಚಿವರು, ಈ ಏಕರೂಪದ ಕಾರ್ಯಕ್ರಮ ಪಟ್ಟಿಯಂತೆ, ರಾಜ್ಯದ ಉದ್ದಗಲಕ್ಕೂ ಪದವಿ ತರಗತಿಗಳಿಗೆ ಜುಲೈ 11ರಿಂದ ಪ್ರವೇಶಾತಿ ಆರಂಭವಾಗಲಿದೆ. ಆಗಸ್ಟ್ 17ರಿಂದ 22ರ ನಡುವೆ ತರಗತಿಗಳು ಆರಂಭವಾಗಲಿವೆ. ಇದೇ ರೀತಿಯಲ್ಲಿ ಸ್ನಾತಕೋತ್ತರ ಕೋರ್ಸುಗಳಿಗೆ ಅಕ್ಟೋಬರ್ 15ರಿಂದ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದ್ದು, ನವೆಂಬರ್ 2ರಿಂದ 14ರ ನಡುವೆ ತರಗತಿಗಳಿಗೆ ಚಾಲನೆ ಸಿಗಲಿದೆ ಎಂದಿದ್ದಾರೆ.

ಇದನ್ನೂ ಓದಿ | ಪದವಿ, ಸ್ನಾತಕೋತ್ತರ ಕೋರ್ಸ್ ಗಳಿಗೆ ಆನ್‌ಲೈನ್‌ ಮೂಲಕ ಪ್ರವೇಶ

ಇದುವರೆಗೂ ರಾಜ್ಯದಲ್ಲಿ ಒಂದೊಂದು ವಿ.ವಿ.ಯೂ ತಮ್ಮ ಅನುಕೂಲಕ್ಕೆ ತಕ್ಕಂತೆ ಶೈಕ್ಷಣಿಕ ವೇಳಾಪಟ್ಟಿ ರೂಪಿಸಿಕೊಳ್ಳುತ್ತಿದ್ದವು. ಇದರಿಂದಾಗಿ ವಿದ್ಯಾರ್ಥಿಗಳಿಗೆ ಗೊಂದಲ ಮತ್ತು ಅನನುಕೂಲ ಆಗುತ್ತಿತ್ತು. ಇದನ್ನು ಗಮನಿಸಿ ಈಗ ಏಕರೂಪದ ವೇಳಾಪಟ್ಟಿಯನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದು ಸಚಿವರು ತಿಳಿಸಿದರು.

ಏಕರೂಪದ ಶೈಕ್ಷಣಿಕ ವೇಳಾಪಟ್ಟಿ ಆದೇಶ

ಈ ವೇಳಾಪಟ್ಟಿಯಲ್ಲಿ ಪ್ರತಿ ಸೆಮಿಸ್ಟರ್‌ಗಳ ಆರಂಭ, ದಂಡರಹಿತ ಮತ್ತು ದಂಡ ಸಹಿತ ಪ್ರವೇಶಾತಿ ಅವಧಿ, ಪ್ರತಿ ಸೆಮಿಸ್ಟರ್‌ಗಳಿಗೆ ಬೋಧನಾ ತರಗತಿಗಳು ಆರಂಭವಾಗುವ ಮತ್ತು ಮುಗಿಯುವ ದಿನ, ಪರೀಕ್ಷೆ ಆರಂಭವಾಗುವ ದಿನ, ಮೌಲ್ಯಮಾಪನ ಆರಂಭ ಮತ್ತು ಫಲಿತಾಂಶ ಪ್ರಕಟಣೆಯ ದಿನ, ರಜೆ ಆರಂಭದ ದಿನಗಳನ್ನೆಲ್ಲ ಸ್ಪಷ್ಟವಾಗಿ ಸೂಚಿಸಲಾಗಿದೆ.

ಈ ಪಟ್ಟಿಯಲ್ಲಿ ಪದವಿಯ 6, ಸ್ನಾತಕೋತ್ತರ ಮಟ್ಟದ 4 ಮತ್ತು ವೃತ್ತಿಪರ ಕೋರ್ಸುಗಳ 8 ಸೆಮಿಸ್ಟರ್‌ಗಳನ್ನೂ ಗಣನೆಗೆ ತೆಗೆದುಕೊಳ್ಳಲಾಗಿದೆ. ಸೆಮಿಸ್ಟರ್ ಮುಗಿದ ನಂತರದ ರಜೆ ಅವಧಿಯಲ್ಲಿ   ಪರೀಕ್ಷಾ ಕರ್ತವ್ಯ ಬಂದರೆ, ಉಪನ್ಯಾಸಕರು ಆ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ಹೇಳಿದರು.

ಉನ್ನತ ಶಿಕ್ಷಣ ಪರಿಷತ್ ಮುಖ್ಯಸ್ಥರಾದ ಬಿ.ತಿಮ್ಮೇಗೌಡರ ಅಧ್ಯಕ್ಷತೆಯಲ್ಲಿ ಈ ಸಂಬಂಧ ಇದೇ 7ರಂದು ಎಲ್ಲ ವಿ.ವಿ.ಗಳ ಕುಲಪತಿಗಳು ಮತ್ತು ರಿಜಿಸ್ಟ್ರಾರ್‌ ಜತೆ ವರ್ಚುಯಲ್ ಸಭೆ ನಡೆಸಿ, ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ | ಆಪ್ತನ ಮೇಲಿನ ದಾಳಿಗೆ ಅಶ್ವತ್ಥನಾರಾಯಣ, ವಿಜಯೇಂದ್ರ ಕಡೆ ಬೊಟ್ಟು ಮಾಡಿದ ಸಿದ್ದರಾಮಯ್ಯ

Exit mobile version