ಬೆಂಗಳೂರು: ಬೆಳೆಯುತ್ತಿರುವ ರಕ್ಷಣಾ ಕ್ಷೇತ್ರವು ಅಸಂಖ್ಯಾತ ಉದ್ಯೋಗಾವಕಾಶಗಳನ್ನೂ ಸೃಷ್ಟಿಸಲಿದ್ದು, ಕರ್ನಾಟಕದ ಯುವಕರು ತಮ್ಮ ತಾಂತ್ರಿಕ ಕೌಶಲವನ್ನು ರಕ್ಷಣಾ ಕ್ಷೇತ್ರದಲ್ಲಿ ತೊಡಗಿಸುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು. ಯಲಹಂಕದ ವಾಯುನೆಲೆಯಲ್ಲಿ ಐದು ದಿನ ನಡೆಯಲಿರುವ ಏಷ್ಯಾದ ಅತ್ಯಂತ ದೊಡ್ಡ ಏರ್ ಶೋ, 14ನೇ ಆವೃತ್ತಿಯ ಏರೋ ಇಂಡಿಯಾಗೆ(Aero India 2023) ಚಾಲನೆ ನೀಡಿ ಮಾತನಾಡಿದರು.
ಕರ್ನಾಟಕದ ಮೂಲಕ ಭಾರತದ ತಂತ್ರಜ್ಞಾನವು ಎಷ್ಟು ಮುಂದೆ ಇದೆ ಎನ್ನುವುದನ್ನು ಏರೋ ಇಂಡಿಯಾ ತೋರಿಸುತ್ತದೆ. ಏರೋ ಸ್ಪೇಸ್‌ನಲ್ಲಿ ಹೊಸ ಅವಕಾಶಗಳು ಹೆಚ್ಚಾಗುತ್ತಿವೆ. ಕರ್ನಾಟಕದ ಯುವಕರಿಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ. ತಂತ್ರಜ್ಞಾನ ಕ್ಷೇತ್ರದಲ್ಲಿ ತಮಗೆ ಇರುವ ಕೌಶಲವನ್ನು ರಕ್ಷಣಾ ಕ್ಷೇತ್ರದಲ್ಲಿ ವಿನಿಯೋಗಿಸಿ ದೇಶದ ಅಭಿವೃದ್ಧಿಯಲ್ಲಿ ಕೈಜೋಡಿಸಿ ಎಂದು ಕರ್ನಾಟಕದ ಯುವಕರಿಗೆ ಕರೆ ನೀಡುತ್ತೇನೆ.
ದೇಶವು ಹೊಸ ಆಲೋಚನೆಗಳನ್ನು ಅಳವಡಿಸಿಕೊಂಡರೆ ಅದಕ್ಕೆ ಅನುಗುಣವಾಗಿ ವ್ಯವಸ್ಥೆ ರೂಪುಗೊಳ್ಳುತ್ತದೆ. ಈ ಹಿಂದೆ ಏರೊ ಇಂಡಿಯಾವನ್ನು ಕೇವಲ ಒಂದು ಶೋ ರೀತಿಯಲ್ಲಿ ಮಾಡಲಾಗುತ್ತಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಇದರ ಸ್ವರೂಪ ಬದಲಾಗಿದೆ. ಇಂದು ಏರೋ ಇಂಡಿಯಾವು ಕೇವಲ ಶೋ ಆಗಿ ಉಳಿಯದೆ ಇದು ರಕ್ಷಣಾ ಕ್ಷೇತ್ರದಲ್ಲಿ ಭಾರತದ ಶಕ್ತಿ ಪ್ರದರ್ಶನದ, ಸಾಮರ್ಥ್ಯದ ವೇದಿಕೆಯಾಗಿದೆ. ಭಾರತ ಇಂದು ಕೇವಲ ರಕ್ಷಣಾ ಉಪಕರಣಗಳ ಖರೀದಿ ದೇಶವಲ್ಲ, ಪಾಲುದಾರನೂ ಆಗಿದೆ.
ಇದನ್ನೂ ಓದಿ: Aero India 2023: ಏರೋ ಇಂಡಿಯಾದಲ್ಲಿ 98 ದೇಶಗಳಿಂದ 809 ಕಂಪನಿಗಳು ಭಾಗಿ, ಭಾರಿ ಹೂಡಿಕೆ ನಿರೀಕ್ಷೆ
ನಮ್ಮ ದೇಶದ ಉತ್ಪನ್ನಗಳು ಕಡಿಮೆ ದರದ ಜತೆಗೆ ನಂಬಿಕರ್ಹವೂ ಆಗಿವೆ. ಪ್ರತ್ಯಕ್ಷಂ ಕಿಂ ಪ್ರಮಾಣಂ? ಎಂಬ ಮಾತಿದೆ. ಅಂದರೆ ಪ್ರತ್ಯಕ್ಷವಾಗಿ ಕಾಣುವುದಕ್ಕೆ ಸಾಕ್ಷಿ ಏಕೆ ಬೇಕು? ಎಂದು ಅದರರ್ಥ. ಇಂದು ಆಕಾಶದಲ್ಲಿ ಹಾರಾಡುವ ತೇಜಸ್ ವಿಮಾನವೇ ನಮ್ಮ ಸಾಮರ್ಥ್ಯವನ್ನು ತೋರಿಸುತ್ತದೆ. ಗುಜರಾತ್‌ನ ವಡೋದರಾದಲ್ಲಿ, ತುಮಕೂರಿನಲ್ಲಿ ಸ್ಥಾಪನೆಯಾಗಿರುವ ಉತ್ಪಾದನಾ ಘಟಕಗಳು ಭಾರತಕ್ಕೆ ಹೊಸ ಅವಕಾಶಗಳನ್ನು ಒದಗಿಸಿದೆ ಎಂದರು.