Site icon Vistara News

ಟ್ವೀಟ್‌ನಿಂದ ಕಾಂಗ್ರೆಸ್‌ಗೆ ಉಂಟಾದ ಲಾಭ; ಸಿಎಂ ಬೊಮ್ಮಾಯಿಗೆ ಆದ ಅನುಕೂಲ ಏನು?

Congress tweet

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗಳೂ ಹತ್ತಿರ ಆಗುತ್ತಿರುವಂತೆ ರಾಜಕೀಯ ಚಟುವಟಿಕೆಗಳು ಹೆಚ್ಚಾಗಿವೆ. ಪಕ್ಷಗಳು ತಮ್ಮ ಸಂಘಟನೆಯನ್ನು ಗಟ್ಟಿಗೊಳಿಸಿಕೊಳ್ಳುವುದಕ್ಕಿಂತಲೂ ಎದುರಾಳಿಗಳ ಕೊರತೆಗಳ ಮೇಲೆ ಹೆಚ್ಚು ಗಮನ ಹರಿಸಿವೆ. ಇದೇ ಪ್ರಯತ್ನದ ಮುಂದುವರಿದ ಭಾಗವೇ ಕರ್ನಾಟಕ ಕಾಂಗ್ರೆಸ್‌ ಟ್ವಿಟರ್‌ ಖಾತೆಯಿಂದ ಮಾಡಲಾದ ಟ್ವೀಟ್‌, ನಂತರದ ವಿವಾದ.

ಸಾಮಾನ್ಯವಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ ಟ್ವಿಟರ್‌ ಖಾತೆಗಳನ್ನು ಅಧಿಕೃತ ಖಾತೆಗಿಂತಲೂ ಹೆಚ್ಚಾಗಿ ʻವ್ಯಕ್ತಿಯಾಗಿʼ ಪರಿಗಣಿಸಲಾಗುತ್ತದೆ. ಪಕ್ಷದ ನಾಯಕರು ಮಾಡಿದ ಭಾಷಣಗಳು, ಕಾರ್ಯಕ್ರಮಗಳ ವಿವರ, ಅಧಿಕೃತ ಪ್ರಕಟಣೆಗಳನ್ನು ಹೊರಡಿಸಲಷ್ಟೆ ಈ ಖಾತೆಗಳು ಸೀಮಿತವಾಗಿಲ್ಲ. ಎದುರಾಳಿಗಳ ವಿರುದ್ಧ ವಾಗ್ದಾಳಿಗೂ ಬಳಕೆ ಮಾಡಿಕೊಳ್ಳಲಾಗುತ್ತದೆ.

2018ರ ವಿಧಾನಸಭೆ ಚುನಾವಣೆ ಸಮಯದಿಂದಲೂ ಕಾಂಗ್ರೆಸ್‌ ಹಾಗೂ ಬಿಜೆಪಿ ಟ್ವಿಟರ್‌ ಮೂಲಕ ಎದುರಾಳಿಗಳ ವಿರುದ್ಧ ಆರೋಪಕ್ಕೆ ಬಳಸಿಕೊಳ್ಳಲಾಗುತ್ತಿದೆ. ಆಗಸ್ಟ್‌ 3ರಂದು ಮಾಜಿ ಸಿದ್ದರಾಮಯ್ಯ ಅವರ ಜನ್ಮದಿನದ ಕಾರ್ಯಕ್ರಮದ ಸಂದರ್ಭದಲ್ಲಿ ಉಂಟಾದ ಗೊಂದಲವನ್ನು ಪರಿಹರಿಸಿಕೊಳ್ಳಲು ಕಾಂಗ್ರೆಸ್‌ ಆಯ್ಕೆ ಮಾಡಿಕೊಂಡ ಮಾರ್ಗವೇ ಈ ಟ್ವೀಟ್‌.

ಗಮನ ಬೇರೆಡೆಗೆ ತೆರಳಿದ ಟ್ವೀಟ್‌

ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ನಡೆಯುವವರೆಗೂ ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ವರ್ಸಸ್‌ ಡಿ.ಕೆ. ಶಿವಕುಮಾರ್‌ ವಿಚಾರ ಚರ್ಚೆ ಆಗುತ್ತಿತ್ತು. ಸಿದ್ದರಾಮೋತ್ಸವದ ನಂತರ ಕಾಂಗ್ರೆಸ್‌ ಎರಡು ಹೋಳಾಗುತ್ತದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಹೇಳಿದ್ದರು. ಅನೇಕ ಬಿಜೆಪಿ ನಾಯಕರು ಇದೇ ರೀತಿ ಹೇಳಿಕೆಗಳನ್ನು ನೀಡುತ್ತಿದ್ದರು. ಮತ್ತೊಂದೆಡೆ ಕಾಂಗ್ರೆಸ್‌ ನಾಯಕರು ಈ ಮಾತುಗಳಿಗೆ ಪ್ರತಿಕ್ರಿಯೆ ನೀಡುವುದರಲ್ಲೇ ನಿರತರಾಗಿದ್ದರು.

ಸಿದ್ದರಾಮೋತ್ಸವ ನಡೆಯುವ ದಿನವೂ ಇದೇ ಮಾತುಗಳ ಚಾಲ್ತಿಯಲ್ಲಿದ್ದವು. ಕೊನೆಗೆ ವೇದಿಕೆ ಮೇಲಿಂದಲೇ ಒಗ್ಗಟ್ಟಿನ ಮಂತ್ರ ಪಠಿಸಲಾಯಿತು. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ಕೈಸನ್ನೆ ಮಾಡುವ ಮೂಲಕ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಆಲಿಂಗನ ಮಾಡುವಂತೆ ಸೂಚಿಸಿದ್ದರು. ಪಕ್ಷದಲ್ಲಿ ಒಗ್ಗಟ್ಟಿದೆ ಎಂದು ರಾಹುಲ್‌ ಗಾಂಧಿ ಹೇಳಿದರೂ ನಂತರವೂ ಸಿದ್ದರಾಮಯ್ಯ ವರ್ಸಸ್‌ ಶಿವಕುಮಾರ್‌ ಚರ್ಚೆ ನಿಲ್ಲಲೇ ಇಲ್ಲ. ಈ ಸಮಯದಲ್ಲಿ ಆಗಸ್ಟ್‌ 9ರಂದು ಕೆಪಿಸಿಸಿ ಟ್ವಿಟರ್‌ ಖಾತೆಯಿಂದ ಟ್ವೀಟ್‌ ಮಾಡಿತು.

ಇದನ್ನೂ ಓದಿ | ಪ್ರಿಯಾಂಕ್‌ ಖರ್ಗೆಗೆ ತಿರುಗೇಟು: ಕಾಂಗ್ರೆಸ್‌ ನಾಯಕರ ಲಂಚ-ಮಂಚದ ಕತೆ ತೆರೆದಿಟ್ಟ ಬಿಜೆಪಿ

“ಅಮಿತ್ ಶಾ ಬಂದು ಹೋದ ನಂತರ ಬಿಜೆಪಿಯಲ್ಲಿ ಮೋಡ ಕವಿದ ವಾತಾವರಣವಿದೆ! 40% ಸರ್ಕಾರದಲ್ಲಿ ‘3ನೇ ಸಿಎಂ’ ಸೀಟು ಹತ್ತುವ ಕಾಲ ಸನ್ನಿಹಿತವಾಗಿದೆ! ಬಸವರಾಜ ಬೊಮ್ಮಾಯಿ ಅವರ ಗೊಂಬೆಯಾಟ ಮುಗಿಯುವ ಹಂತಕ್ಕೆ ಬಂದಿದೆ. ಅಮಿತ್ ಶಾ ಅವರ ಭೇಟಿಯ ಬಗ್ಗೆ ಸರ್ಕಾರದ ಯಾವೊಬ್ಬ ಸಚಿವರು ಮಾತಾಡದಿರುವುದು, ಸಂಭ್ರಮವಿಲ್ಲದಿರುವುದೇ ಇದಕ್ಕೆ ನಿದರ್ಶನ” ಎಂಬುದೂ ಸೇರಿ ಸರಣಿ ಟ್ವೀಟ್‌ ಮಾಡಿತು. ತಾವು ಮುಖ್ಯಮಂತ್ರಿಯಾಗಲು ಸಿದ್ಧ ಎಂಬ ಸಚಿವ ಉಮೇಶ್‌ ಕತ್ತಿ ಹೇಳಿಕೆ ಹಾಗೂ ಮುಖ್ಯಮಂತ್ರಿ ಬದಲಾವಣೆ ಆಗಬಹುದು ಎಂಬ ಮಾಜಿ ಶಾಸಕ ಸುರೇಶ್‌ ಗೌಡ ಹೇಳಿಕೆಯನ್ನು ಪ್ರಧಾನವಾಗಿಸಿ ಟ್ವೀಟ್‌ ಮಾಡಲಾಯಿತು. ಇದರ ನಂತರ ರಾಜ್ಯ ಬಿಜೆಪಿಯಲ್ಲಿ ಸಂಚಲನ ಉಂಟಾಯಿತು.

1. ಕಾಂಗ್ರೆಸ್‌ ಟ್ವೀಟ್‌ ನಂತರ ಬಿಜೆಪಿಯಲ್ಲಿ ಭಾರೀ ಚರ್ಚೆಗಳು ನಡೆಯಲಾರಂಭಿಸಿದವು. ಪ್ರಾರಂಭದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಆರೋಗ್ಯ ಸಚಿವ ಡಾ. ಕೆ. ಸುಧಾಕರ್‌ ಪ್ರತಿಕ್ರಿಯೆ ನೀಡಿದರು. ಸಿಎಂ ಬದಲಾವಣೆ ಆಗುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಕ್ಕೆ ಪ್ರತಿಕ್ರಿಯೆಯಾಗಿ ಕಾಂಗ್ರೆಸ್‌ ಮತ್ತಷ್ಟು ಟ್ವೀಟ್‌ ಮಾಡಿತು. ಇದೆಲ್ಲದರಿಂದ, ಕಾಂಗ್ರೆಸ್‌ನಲ್ಲಿ ನಡೆಯುತ್ತಿದ್ದ ಡಿ.ಕೆ. ಶಿವಕುಮಾರ್‌ ವರ್ಸಸ್‌ ಸಿದ್ದರಾಮಯ್ಯ ಚರ್ಚೆಗೆ ಬಹುತೇಕ ಬ್ರೇಕ್‌ ಬಿದ್ದಿತು.

2. ಸಿಎಂ ಬದಲಾವಣೆ ಕುರಿತು ಕಾಂಗ್ರೆಸ್‌ ಟ್ವೀಟ್‌ನಿಂದಾಗಿ, ವೀರಶೈವ ಲಿಂಗಾಯತ ಸಮುದಾಯದಲ್ಲಿ ಚರ್ಚೆ ಜೋರಾಯಿತು. ಸಿಎಂ ಬದಲಾದರೆ ಯಾರನ್ನು ಮಾಡಬಹುದು? ಲಿಂಗಾಯತ ಸಮುದಾಯವನ್ನು ಹೊರತುಪಡಿಸಿ ಬೇರೆ ಸಮುದಾಯಕ್ಕೆ ನೀಡಬಹುದೇ ಎಂಬ ಚರ್ಚೆಗಳು ನಡೆದವು. ಇದಕ್ಕೆ ಪೂರಕವಾಗಿ, ಮಾಜಿ ಸಚಿವ ಎಂ.ಬಿ. ಪಾಟೀಲ್‌ ಪ್ರತಿಕ್ರಿಯೆ ನೀಡಿದರು. ಇದರಿಂದಾಗಿ, ಸರ್ಕಾರದ ಸಚಿವರುಗಳು ಒಬ್ಬೊಬ್ಬರೇ ಉತ್ತರ ನೀಡಲು ಆರಂಭಿಸಿದರು. ಸಿಎಂ ಬದಲಾವಣೆ ಮಾಡುವುದಿಲ್ಲ ಎಂಬ ಧ್ವನಿ ಹೆಚ್ಚಾಯಿತು. ಬಸವರಾಜ ಬೊಮ್ಮಾಯಿ ಅವರ ಸ್ಥಾನ ಭದ್ರವಾಗುತ್ತ ಸಾಗಿತು.

3. ಕಾಂಗ್ರೆಸ್‌ನಲ್ಲಿ ಮೇಲ್ನೋಟಕ್ಕೆ ಸಿದ್ದರಾಮಯ್ಯ ವರ್ಸಸ್‌ ಡಿ.ಕೆ. ಶಿವಕುಮಾರ್‌ ಶೀತಲ ಸಮರದ ಚರ್ಚೆಗಳು ಬಹಿರಂಗವಾಗಿ ತಗ್ಗಿದವು. ಆದರೆ ಸಿಎಂ ಬದಲಾವಣೆ ವಿಚಾರದಲ್ಲಿ ತಣ್ಣಗೆ ಈ ಭಿನ್ನಾಭಿಪ್ರಾಯ ಮುಂದುವರಿಯಿತು. ಸಿಎಂ ಬದಲಾವಣೆ ಕುರಿತು ಟ್ವೀಟ್‌ ಅನ್ನು ಡಿ.ಕೆ. ಶಿವಕುಮಾರ್‌ ಬೆಂಬಲ ಸೂಚಿಸಿದರು. ಬಿಜೆಪಿ ನಾಯಕರ ಮೂಲವನ್ನೇ ಬಳಸಿಕೊಂಡು ಈ ಟ್ವೀಟ್‌ ಮಾಡಲಾಗಿದೆ ಎಂದರು. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಈ ಟ್ವೀಟ್‌ನಿಂದ ಅಂತರ ಕಾಯ್ದುಕೊಂಡರು. ಆ ಟ್ವೀಟ್‌ ಬಗ್ಗೆ ನನಗೆ ಗೊತ್ತಿಲ್ಲ. ಈ ಹಿಂದೆ ಯಡಿಯೂರಪ್ಪ ಬದಲಾವಣೆ ಆಗುತ್ತಾರೆ ಎಂಬ ಮಾಹಿತಿ ಇತ್ತು, ಆಗ ಅದನ್ನು ಹೇಳಿದ್ದೆ. ಈಗ ನನಗೆ ಯಾವುದೇ ಮಾಹಿತಿ ಇಲ್ಲ, ಹಾಗಾಗಿ ಸಿಎಂ ಬದಲಾವಣೆ ಕುರಿತು ಹೇಳಿಕೆ ನೀಡುವುದಿಲ್ಲ ಎಂದು ಅಂತರ ಕಾಯ್ದುಕೊಂಡರು.

4. ಸಿಎಂ ಸ್ಥಾನದಲ್ಲಿ ಬದಲಾವಣೆ ಇಲ್ಲ ಎಂದು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರು ಮೂರ್ನಾಲ್ಕು ಬಾರಿ ಪುನರುಚ್ಛರಿಸಿದರು. ಇದೆಲ್ಲದರ ನಂತರ ಸ್ವತಃ ರಾಜ್ಯ ಬಿಜೆಪಿ ಪ್ರಭಾರಿ ಅರುಣ್‌ ಸಿಂಗ್‌ ನವದೆಹಲಿಯಲ್ಲಿ ಪ್ರತಿಕ್ರಿಯಿಸಿ, ಮುಂದಿನ ಚುನಾವಣೆಯನ್ನು 100% ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ಎದುರಿಸುತ್ತೇವೆ ಎಂದರು. ಇದೆಲ್ಲದರಿಂದ, ಸಿಎಂ ಸ್ಥಾನ ಭದ್ರವಾಯಿತು. ಆದರೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಕುರಿತು ಯಡಿಯೂರಪ್ಪ ಅವರ ಹೇಳಿಕೆ, ನಳಿನ್‌ಕುಮಾರ್‌ ಕಟೀಲ್‌ ಬದಲಾವಣೆಯ ಮುನ್ಸೂಚನೆ ನೀಡಿತು. ಸಿಎಂ ಬದಲಾವಣೆ ಇಲ್ಲ, ರಾಜ್ಯಾಧ್ಯಕ್ಷರು ಬದಲಾಗುತ್ತಾರೆ ಎಂಬ ಮಾತುಗಳು ಪಕ್ಷದ ವಲಯದಲ್ಲೇ ಕೇಳಿಬರಲು ಆರಂಭಿಸಿದವು.

ಇದನ್ನೂ ಓದಿ | ಬೊಮ್ಮಾಯಿ ನೇತೃತ್ವದಲ್ಲೇ 2023ರ ಚುನಾವಣೆ: ಬಿಜೆಪಿ ಹೈಕಮಾಂಡ್‌ ಘೋಷಣೆ, ಎಲ್ಲ ಗೊಂದಲಕ್ಕೆ ತೆರೆ

Exit mobile version