ಬೆಂಗಳೂರು: ಉದ್ಯಮಿಯೊಬ್ಬರಿಂದ ೭೦ ಲಕ್ಷ ರೂ. ಮೌಲ್ಯದ ಹ್ಯೂಬ್ಲೊಟ್ ವಾಚ್‌ನ್ನು ಉಡುಗೊರೆಯಾಗಿ ಸ್ವೀಕರಿಸಿದ ಆರೋಪ ಇನ್ನೂ ಕಾಡುತ್ತಿರುವಂತೆಯೇ ಸಿದ್ದರಾಮಯ್ಯ ಅವರ ಮೇಲೆ ಬಿಜೆಪಿ ಇನ್ನೊಂದು ವಾಚ್ ಬಾಂಬ್ ಎಸೆದಿದೆ. ಈ ಬಾರಿ ವಾಚ್‌ನ ರೇಟ್ ಒಂದು ಕೋಟಿಯನ್ನೂ ಮೀರಿಸಿದೆ.
ಸಿದ್ದರಾಮಯ್ಯ ಅವರು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ರೋಲೆಕ್ಸ್ ವಾಚನ್ನು ಉಡುಗೊರೆಯಾಗಿ ಪಡೆದಿದ್ದಾರೆ ಎಂದು ಬಿಜೆಪಿ ಮೇಲ್ಮನೆ ಸದಸ್ಯ ಹಾಗೂ ಎಸ್‌ಸಿ ಮೋರ್ಚಾ ಅಧ್ಯಕ್ಷರಾಗಿರುವ ಛಲವಾದಿ ನಾರಾಯಣ ಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಹೊಸ ಬಾಂಬ್ ಸಿಡಿಸಿದ್ದಾರೆ.
ನಾರಾಯಣ ಸ್ವಾಮಿ ಅವರ ಪ್ರಕಾರ, ಸಿದ್ದರಾಮಯ್ಯ ಅವರು ಹೈದರಾಬಾದ್ ಮೂಲದ ವಿಜಯ್ ಮಂದಾನಿ ಅವರಿಂದ ವಾಚ್ ಪಡೆದಿದ್ದಾರೆ. ಮೈಸೂರಿನ ನಿವಾಸದಲ್ಲೇ ಉಡುಗೊರೆಯನ್ನು ಸ್ವೀಕರಿಸಲಾಗಿದೆ.
ಸಿದ್ದರಾಮಯ್ಯ ಅವರ ಬಳಿ ಎಂಟು ವಾಚ್‌ಗಳಿವೆ. ಅದರ ಜತೆಗೆ ಈ ಹೊಸ ವಾಚ್ ಸೇರಿದೆ. ಇದನ್ನು ಕೊಟ್ಟಿದ್ದು ಎಂಎಸ್ ಡಿಸಿ ಕಂಪನಿಯವರು ಎನ್ನುವುದು ಛಲವಾದಿ ಆರೋಪ. ಕಲ್ಲಿದ್ದಲು ವ್ಯವಹಾರಕ್ಕೆ ಸಂಬಂಧಿಸಿ ಈ ಉಡುಗೊರೆಯನ್ನು ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗ ಎಂಟು ವಾಚ್‌ಗಳನ್ನು ಉಡುಗೊರೆಯಾಗಿ ಪಡೆದಿದ್ದಾರೆ. ಈ ಎಲ್ಲ ವಾಚ್‌ಗಳ ಹಿಂದೆ ಒಂದೊಂದು ಕಥೆ ಇದೆ. ಸದ್ಯದಲ್ಲೇ ಎಲ್ಲ ವಾಚ್‌ಗಳ ಕಥೆಯನ್ನು ಬಿಚ್ಚಿಡುತ್ತೇನೆ ಎಂದು ಹೇಳಿದ ಛಲವಾದಿ ನಾರಾಯಣಸ್ವಾಮಿ ಅವರು, ಕೆಂಪಣ್ಣ ಮತ್ತು ಕೆಂಪಯ್ಯ ಅವರನ್ನು ಜತೆಗಿಟ್ಟು ಓಡಾಡುತ್ತಿದ್ದ ಸಿದ್ದರಾಮಯ್ಯ ಎಲ್ಲ ಕಥೆ ಹೇಳುತ್ತೇನೆ. ಎಲ್ಲ ಅಕ್ರಮಗಳನ್ನು ತೆರೆದಿಡುತ್ತೇನೆ ಎಂದು ಛಲವಾದಿ ನುಡಿದರು.
ಜೈಲು ರಾಮಯ್ಯ ಆಗ್ತಾರೆ!
ಸಿದ್ದರಾಮಯ್ಯ ಕಾಲದಲ್ಲಿ ಬಹಳಷ್ಟು ರೀಡೂ ಅಕ್ರಮ ನಡೆದಿದೆ. ಲೋಕಾಯುಕ್ತದ ಬಾಗಿಲು ಓಪನ್ ಮಾಡಿಸಿದ್ದೀವಿ. ಅದೆಲ್ಲದರ ತನಿಖೆ ನಡೆಯಲಿದೆ. ಮುಂದಿನ ದಿನಗಳಲ್ಲಿ ಜೈಲಿಗೆ ಹೋಗ್ತೀರಿ. ಜೈಲು ರಾಮಯ್ಯ ಆಗ್ತೀರಿ ಎಂದು ನೇರವಾಗಿ ಸವಾಲು ಹಾಕಿದರು ಛಲವಾದಿ ನಾರಾಯಣ ಸ್ವಾಮಿ.
ಇದನ್ನೂ ಓದಿ | PSI Scam | ಕಾನೂನು ಸಚಿವರ Law ಪಾಯಿಂಟ್‌ಗೆ ತಲೆಯಾಡಿಸಿ ಸುಮ್ಮನಾದ ಲಾಯರ್ ಸಿದ್ದರಾಮಯ್ಯ !