ಬೆಂಗಳೂರು: ಕರ್ನಾಟಕ ವಿಧಾನಸಭಾ (Karnataka Election 2023) ಕಣ ದಿನೇ ದಿನೆ ರಂಗೇರುತ್ತಿದೆ. ಪಕ್ಷಗಳು ತಮ್ಮ ಗೆಲುವಿಗಾಗಿ ರಾಜಕೀಯ ಪಟ್ಟುಗಳನ್ನು ಹಾಕಲು ಆರಂಭಿಸಿದ್ದಾರೆ. ಇನ್ನು ಕಾಂಗ್ರೆಸ್‌ನಿಂದ ಈಗಾಗಲೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕಲು ಬಿಜೆಪಿ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದೆ. ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಕಣಕ್ಕಿಳಿಸುವ ತಂತ್ರ ಹೂಡಿದೆ ಎನ್ನಲಾಗಿದ್ದು, ಕೋಲಾರ ಬಳಿಕ ವರುಣದಲ್ಲೂ ಸಿದ್ದರಾಮಯ್ಯ ಅವರಿಗೆ ಈಗ ಆತಂಕ ಶುರುವಾಗಿದೆ. ಈ ಮಧ್ಯೆ ವಿಜಯೇಂದ್ರ ಆರ್‌ಎಸ್‌ಎಸ್ ಕಚೇರಿಗೆ ಭೇಟಿ ನೀಡಿದ್ದು, ಈ ಎಲ್ಲ ಬೆಳವಣಿಗೆಗೆ ಪುಷ್ಟಿ ನೀಡಿದೆ. ಇನ್ನು ಯಡಿಯೂರಪ್ಪ ಸಹ ಪ್ರತಿಕ್ರಿಯೆ ನೀಡಿದ್ದು, ಈ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧೆ ಮಾಡಲಿದ್ದಾರೆ ಎಂಬ ಚರ್ಚೆ ಜೋರಾಗಿಯೇ ಇತ್ತು. ಇದು ವರುಣದಲ್ಲಿ ಒಂದು ಮಟ್ಟಿನ ಸಂಚಲವನ್ನು ಸೃಷ್ಟಿ ಮಾಡಿತ್ತು. ವಿಜಯೇಂದ್ರ ಸಹ ಅಲ್ಲಿಗೆ ಭೇಟಿ ನೀಡಿ ಹವಾ ಹುಟ್ಟಿಸಿದ್ದರು. ಅವರ ಪರವಾಗಿ ಬಿಜೆಪಿ ಕಾರ್ಯಕರ್ತರು ಪ್ರಚಾರಕ್ಕೂ ಅಣಿಯಾಗಿದ್ದರು. ಆದರೆ, ಕಡೇ ಘಳಿಗೆಯಲ್ಲಿ ಅವರಿಗೆ ಟಿಕೆಟ್ ನಿರಾಕರಣೆ ಮಾಡಲಾಯಿತು. ಇದು ಸ್ಥಳೀಯ ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೂ ಕಾರಣವಾಗಿತ್ತು. ಆದರೆ, ಈ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸುತ್ತಲೇ ಬಂದಿದ್ದು, ಸಿದ್ದರಾಮಯ್ಯ ಸಹ ರಾಷ್ಟ್ರೀಯ ನಾಯಕರ ಮೇಲೆ ಕಟು ಮಾತುಗಳಿಂದ ಟೀಕಿಸುತ್ತಲೇ ಬಂದಿದ್ದಾರೆ. ಇನ್ನು ಸಿದ್ದರಾಮಯ್ಯ ಅವರಿಗೆ ಅವರದ್ದೇ ಆದ ಅನುಯಾಯಿಗಳು ಹಾಗೂ ಅಭಿಮಾನಿಗಳು ರಾಜ್ಯದ ಹಲವು ಕಡೆ ಇದ್ದಾರೆ. ಈ ಹಿನ್ನೆಲೆಯಲ್ಲಿ ಅವರು ರಾಜ್ಯ ಪ್ರವಾಸ ಕೈಗೊಂಡರೆ ಒಂದಷ್ಟು ಮತಗಳು ಕಾಂಗ್ರೆಸ್ ಬುಟ್ಟಿಗೆ ಬೀಳುವುದರಲ್ಲಿ ಯಾವುದೇ ಸಂಶಯ ಇಲ್ಲ. ಇದನ್ನು ತಡೆಯಲು ಈಗ ಬಿಜೆಪಿ ತಂತ್ರಗಾರಿಕೆ ಹೂಡಿದೆ ಎಂದೇ ಹೇಳಲಾಗುತ್ತಿದೆ.
ಇದನ್ನೂ ಓದಿ: ವಿಸ್ತಾರ Special: ಬಿಜೆಪಿ ಇತಿಹಾಸದಲ್ಲೇ ಮೊದಲ ಪ್ರಯತ್ನ ಇದು: ಅಭ್ಯರ್ಥಿ ಆಯ್ಕೆಗೆ ಶುಕ್ರವಾರ ನಡೆಯಲಿದೆ ಆಂತರಿಕ ಚುನಾವಣೆ
ವಿಜಯೇಂದ್ರ ಎಂಬ ಬ್ರಹ್ಮಾಸ್ತ್ರ
ಕಳೆದ ಬಾರಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಲ್ಲದೆ ಯಶಸ್ವಿಯಾಗಿ 5 ವರ್ಷ ಪೂರೈಸಿದ್ದ ಹೆಗ್ಗಳಿಕೆಯನ್ನು ಹೊಂದಿದ್ದರು. ಈ ಉಮೇದಿನಲ್ಲಿದ್ದ ಅವರು ತಮ್ಮ ಪುತ್ರನಿಗೆ ವರುಣ ಕ್ಷೇತ್ರವನ್ನು ಬಿಟ್ಟುಕೊಟ್ಟು ಮೈಸೂರಿನ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಹಾಗೂ ಬಾಗಲಕೋಟೆ ಜಿಲ್ಲೆಯ ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ತಂತ್ರ ನಡೆಸಿ ಬಾದಾಮಿಯಲ್ಲಿ ಶ್ರೀರಾಮುಲು ಅವರನ್ನು ಸಿದ್ದರಾಮಯ್ಯ ವಿರುದ್ಧ ಕಣಕ್ಕಿಳಿಸಿತ್ತು. ಈ ರೀತಿ ಮಾಡುವ ಮೂಲಕ ಸಿದ್ದರಾಮಯ್ಯ ಅವರು ಹೆಚ್ಚಿನ ಕಡೆಗೆ ಪ್ರಚಾರಕ್ಕೆ ಹೋಗಲು ಆಗದಂತೆ ಕಟ್ಟಿಹಾಕಿತ್ತು. ಈ ಬಾರಿ ಇದೇ ರೀತಿಯಾಗಿ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕುವಲ್ಲಿ ಬಿಜೆಪಿ ತಂತ್ರಗಾರಿಕೆ ನಡೆಸಿದ್ದು, ಅವರಿಗೆ ಪ್ರಬಲ ಪ್ರತಿರೋಧ ಒಡ್ಡಬೇಕೆಂದರೆ ವಿಜಯೇಂದ್ರ ಅವರೇ ಸರಿ ಎಂಬ ಲೆಕ್ಕಾಚಾರಕ್ಕೆ ಬಂದಿದೆ ಎಂದೇ ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಜಯೇಂದ್ರ ಎಂಬ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಲು ಮುಂದಾಗಿದೆ ಎನ್ನಲಾಗಿದೆ.
ಆರ್‌ಎಸ್‌ಎಸ್ ಕಚೇರಿಗೆ ವಿಜಯೇಂದ್ರ ಭೇಟಿ
ಈ ಎಲ್ಲ ರಾಜಕೀಯ ಬೆಳವಣಿಗೆ ಬೆನ್ನಲ್ಲೇ ಬೆಂಗಳೂರಿನ ಆರ್‌ಎಸ್‌ಎಸ್ ಕಚೇರಿಗೆ ವಿಜಯೇಂದ್ರ ಭೇಟಿ ನೀಡಿದ್ದಾರೆ. ಅಲ್ಲಿ ಕೆಲವು ಆರ್‌ಎಸ್‌ಎಸ್ ಮುಖಂಡರ ಜತೆ ಮಾತುಕತೆ ನಡೆಸಿದ್ದು, ಕುತೂಹಲ ಮೂಡಿಸಿದೆ. ಚುನಾವಣಾ ಸಮಯದಲ್ಲಿ ನಡೆದ ಈ ಭೇಟಿ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಹೈಕಮಾಂಡ್ ಸಂದೇಶವೇನಾದರೂ ಇಲ್ಲಿ ಚರ್ಚೆಯಾಗಿದೆಯಾ? ಚುನಾವಣೆಯಲ್ಲಿ ವಿಜಯೇಂದ್ರ ಅವರಿಗೆ ಬೇರೆಯದ್ದೇ ಜವಾಬ್ದಾರಿ ನೀಡಲಾಗುತ್ತಿದೆಯಾ? ಎಂಬ ಚರ್ಚೆಗಳು ಸಹ ಹುಟ್ಟಿಕೊಂಡಿವೆ.
ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧೆ ಚಿಂತನೆ ಇದೆ ಎಂದಿರುವ ಬಿಎಸ್‌ವೈ
ವರುಣಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಮುಂದಾಗಿರುವ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಕಣಕ್ಕಿಳಿಸುವ ಕುರಿತು ಚರ್ಚೆ ನಡೆಯುತ್ತಿದೆ. ಸಿದ್ದರಾಮಯ್ಯ ಅವರ ಗೆಲುವು ಅಷ್ಟು ಸುಲಭವಿಲ್ಲ. ಅವರು ನಿಂತ ನೆಲವೇ ಕುಸಿಯುತ್ತಿದೆ. ಈ ಬಾರಿ ಅವರ ವಿರುದ್ಧ ಸರಿಯಾದ ಅಭ್ಯರ್ಥಿ ಹಾಕುತ್ತೇವೆ. ವಿಜಯೇಂದ್ರ ಅವರನ್ನು ಕಣಕ್ಕಿಳಿಸುವ ಕುರಿತು ಹೈಕಮಾಂಡ್ ಅಂತಿಮ ತೀರ್ಮಾನ ಮಾಡಲಿದೆ ಎಂದು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಇನ್ನು ಕಳೆದ ವಾರವಷ್ಟೇ ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಜತೆ ವರುಣ ಸ್ಪರ್ಧೆ ಬಗ್ಗೆ ಪ್ರಸ್ತಾಪ ಮಾಡಿದ್ದರು ಎಂದು ವಿಜಯೇಂದ್ರ ಸಹ ಹೇಳಿಕೊಂಡಿದ್ದರು. ಈ ಎಲ್ಲ ಬೆಳವಣಿಗೆಗಳನ್ನು ನೀಡಿದರೆ, ಈ ಬಾರಿ ಕರ್ನಾಟಕ ವಿಧಾನಸಭೆಯಲ್ಲಿ ಕಾಂಗ್ರೆಸ್‌ಗೆ ಸರಿಯಾಗಿ ಠಕ್ಕರ್ ಕೊಡಲು ಬಿಜೆಪಿ ಹೈಕಮಾಂಡ್ ರಣತಂತ್ರವನ್ನೇ ಹೂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸಿದ್ದರಾಮಯ್ಯಗೆ ವರುಣ ಸುರಕ್ಷಿತ ಹೌದು, ಆದ್ರೆ ಸುಲಭ ಅಲ್ಲ
ವರುಣ ವಿಧಾನಸಭಾ ಕ್ಷೇತ್ರವು ಸಿದ್ದರಾಮಯ್ಯ ಅವರಿಗೆ ಸುರಕ್ಷಿತ ಹೌದು. ಆದರೆ, ಸುಲಭ ಅಲ್ಲ ಎಂಬ ರಾಜಕೀಯ ಲೆಕ್ಕಾಚಾರಗಳು ಶುರುವಾಗಿವೆ. ಕಾಂಗ್ರೆಸ್- ಬಿಜೆಪಿ ನಡುವೆ ಮುಖಾಮುಖಿ ಫೈಟ್ ಆಗಲಿದ್ದು, ಯಾರಿಗೆ ಬೇಕಾದರೂ ವಿಜಯಮಾಲೆ ಬೀಳಬಹುದು ಎನ್ನಲಾಗಿದೆ. ಆದರೆ, ಸಿದ್ದರಾಮಯ್ಯ ವಿರುದ್ಧ ಯಾವ ಅಭ್ಯರ್ಥಿಯನ್ನು ಬಿಜೆಪಿ ಹಾಕಲಿದೆ ಎಂಬುದರ ಮೇಲೆ ಇದು ನಿರ್ಧರಿತವಾಗುತ್ತದೆ.
ವರುಣದಲ್ಲಿ ಕೊಂಚ ಯಾಮಾರಿದರೂ ಸಿದ್ದರಾಮಯ್ಯ ಅವರಿಗೆ ಸಂಕಷ್ಟ ಎದುರಾಗಲಿದೆ ಎಂದೇ ಹೇಳಲಾಗುತ್ತಿದೆ. ಇನ್ನೊಂದು ಕಡೆ ಜಾತಿ ಲೆಕ್ಕಾಚಾರದ ಪ್ರಕಾರ ನೋಡಿದರೂ ಅವರಿಗೆ ಅನುಕೂಲಕರ ವಾತಾವರಣ ಇಲ್ಲ. ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಸಾಂಪ್ರದಾಯಿಕ ಮತಗಳೊಂದಿಗೆ 50 ಸಾವಿರ ಮತಗಳ ಮೇಲೆ ಖಾತೆ ಪ್ರಾರಂಬಿಸುತ್ತದೆ. ಅದೇ ಲೆಕ್ಕಾಚಾರ ಬಿಜೆಪಿಯದ್ದೂ ಆಗಿದ್ದು, ಇಲ್ಲೂ ಸಹ 50 ಸಾವಿರ ಮತದಿಂದ ಖಾತೆ ಶುರುವಾಗುತ್ತದೆ.
ವೀರಶೈವ-ಲಿಂಗಾಯತ ಸಮುದಾಯದ ಬಹುಪಾಲು ಮತ ಬಿಜೆಪಿ ಬುಟ್ಟಿಗೆ ಈ ಬಾರಿ ಬೀಳಬಹುದು ಎಂದು ಹೇಳಲಾಗುತ್ತಿದೆ. ಸ್ಥಳೀಯ ಹಿಡಿತದ ಆಧಾರದ ಮೇಲೆ ಇವುಗಳಲ್ಲಿ ಒಂದಷ್ಟು ಮತಗಳನ್ನು ಸಿದ್ದರಾಮಯ್ಯ ಪಡೆಯಲಿದ್ದಾರೆ. ಉಳಿದಂತೆ ಅಹಿಂದ ಮತಗಳು ಯಾರ ಪಾಲಿಗೆ ತಿರುಗಿಕೊಳ್ಳಲಿದೆ ಎಂಬುದರ ಆಧಾರದ ಮೇಲೆ ಎಲ್ಲವೂ ಅವಲಂಬಿತವಾಗಿದೆ. ದಲಿತ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತ ಮತಗಳು ಸಿದ್ದರಾಮಯ್ಯ ಪಾಲಿಗೆ ಸಿಗಲಿದ್ದರೂ ಇನ್ನೂ ನಿರ್ಧಾರ ಕೈಗೊಳ್ಳದ ಒಂದು ವರ್ಗದ ಮತಗಳು ಯಾರ ಕಡೆಗೆ ತಿರುಗುತ್ತದೆ ಎಂಬುದು ನಿರ್ಣಾಯಕವಾಗಲಿದೆ.
ಇದನ್ನೂ ಓದಿ: Karnataka Elections : ನನ್ನ ರಾಮ ಅಂತಃಕರಣ ಸ್ವರೂಪಿ, ನಿಮಗೆ ರಾಮ ಚುನಾವಣೆ ಸರಕು: ಸಿದ್ದು, ಬಿಜೆಪಿ ನಡುವೆ ರಾಮನವಮಿ ಫೈಟ್
ವರುಣ ಕ್ಷೇತ್ರದ ಜಾತಿ ಲೆಕ್ಕಾಚಾರ
ಲಿಂಗಾಯತ | 60,000 |
ಪರಿಶಿಷ್ಟ ಜಾತಿ | 50,000 |
ಕುರುಬ | 40,000 |
ಮುಸ್ಲಿಂ | 6000 |
ಒಕ್ಕಲಿಗ | 15,000 |
ಪರಿಶಿಷ್ಟ ಪಂಗಡ | 14,000 |
ಇತರೆ | 15,000 |