ಬೆಂಗಳೂರು: ಟೊಮ್ಯಾಟೊ ಬೆಲೆಯೇರಿಕೆಯಿಂದಾಗಿ (Tomato Price Hike) ದೇಶಾದ್ಯಂತ ಬಡವರು ಹಾಗೂ ಮಧ್ಯಮ ವರ್ಗದವರು ಸಂಕಷ್ಟ ಅನುಭವಿಸಿದರು. ಒಂದು ಕೆ.ಜಿ ಟೊಮ್ಯಾಟೊಗೆ 100, 200, 300 ರೂ. ಕೊಟ್ಟು ಖರೀದಿಸುವ ಸಂಕಷ್ಟ ಎದುರಿಸಿದರು. ಇದರ ಬೆನ್ನಲ್ಲೇ ಮತ್ತೊಂದು ಬೆಲೆಯೇರಿಕೆಯ ಬಿಸಿ ಜನರನ್ನು ಬಾಧಿಸಲಿದೆ. ಹೌದು, ಟೊಮ್ಯಾಟೊ ಬೆಲೆಯೇರಿಕೆ ಬಿಸಿಯ ಬೆನ್ನಲ್ಲೇ ಕೆಲವು ದಿನಗಳಲ್ಲಿ ಈರುಳ್ಳಿ ಬೆಲೆಯೇರಿಕೆಯೂ (Onion Price) ಜನರ ಜೇಬಿಗೆ ಹಾಕುವುದು ನಿಶ್ಚಿತ ಎಂದು ತಿಳಿದುಬಂದಿದೆ.
ಹೌದು, ಕಳೆದ ನಾಲ್ಕು ತಿಂಗಳಿಂದ ಕೆ.ಜಿಗೆ 25-30 ರೂ. ಇದ್ದ ಈರುಳ್ಳಿ ಬೆಲೆಯು ಸೆಪ್ಟೆಂಬರ್‌ನಲ್ಲಿ 60-70 ರೂ.ಗೆ ಏರಿಕೆಯಾಗುವುದು ನಿಶ್ಚಿತ ಎಂದು ಕ್ಯಾಪಿಟಲ್ ಮಾರ್ಕೆಟ್ ಕಂಪನಿ ಸಿಆರ್‌ಐಎಸ್‌ಐಎಲ್ (CRISIL) ವರದಿ ತಿಳಿಸಿದೆ. ಹಾಗಾಗಿ, ಈಗಾಗಲೇ ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಈರುಳ್ಳಿ ಬೆಲೆಯೇರಿಕೆಯೂ ತಿಂಗಳ ಬಜೆಟ್‌ಗೆ ಭಾರಿ ಹೊಡೆತ ನೀಡಲಿದೆ ಎಂದೇ ಹೇಳಲಾಗುತ್ತಿದೆ.
ಬೆಲೆ ಏರಿಕೆಗೆ ಕಾರಣಗಳೇನು?
ಹಿಂಗಾರು ಹಂಗಾಮಿನಲ್ಲಿ ಈರುಳ್ಳಿಯ ಉತ್ಪಾದನೆಯು ದೇಶಾದ್ಯಂತ ಅಂದಾಜಿನಷ್ಟು ಆಗಿಲ್ಲ. ಇನ್ನು ಮುಂಗಾರು ವಿಳಂಬವಾದ ಕಾರಣ ಮುಂಗಾರು ಹಂಗಾಮಿನಲ್ಲೂ ಉತ್ಪಾದನೆ ಕುಂಠಿತವಾಗಲಿದೆ ಎಂದು ಹೇಳಲಾಗುತ್ತಿದೆ. ಮುಂಗಾರು ಹಂಗಾಮಿನ ಈರುಳ್ಳಿಯು ಅಕ್ಟೋಬರ್‌ನಲ್ಲಿ ಮಾರುಕಟ್ಟೆಗೆ ಪೂರೈಕೆಯಾಗಲಿದೆ. ಇನ್ನು ಕೆಲವೆಡೆ ಭಾರಿ ಮಳೆಯಿಂದಾಗಿ ದಾಸ್ತಾನು ಮಾಡಿದ ಈರುಳ್ಳಿಯು ಹಾನಿಯಾಗಿದೆ. ಇದರಿಂದಾಗಿ ಸೆಪ್ಟೆಂಬರ್ ಮೊದಲ ವಾರದಲ್ಲಿಯೇ ಈರುಳ್ಳಿ ಬೆಲೆ ಏರಿಕೆಯಾಗಲಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: Tomato Price: ರಾಜ್ಯಪಾಲರಿಗೂ ತಟ್ಟಿದ ಟೊಮ್ಯಾಟೊ ಬೆಲೆಯೇರಿಕೆ ಬಿಸಿ; ಅಡುಗೆಯಿಂದ ಟೊಮ್ಯಾಟೊಗೆ ಕೊಕ್
ಭಾರತದಲ್ಲಿ ಹಿಂಗಾರು ಹಂಗಾಮಿನಲ್ಲಿಯೇ ದೇಶದ ಬೇಡಿಕೆಯ ಶೇ.70ರಷ್ಟು ಈರುಳ್ಳಿಯ ಉತ್ಪಾದನೆಯಾಗುತ್ತದೆ. ಆದರೆ, ಈ ಅವಧಿಯಲ್ಲಿಯೇ ಉತ್ಪಾದನೆ ಕುಂಠಿತವಾಗಿದೆ. ಕರ್ನಾಟಕದಲ್ಲಿ ಸದ್ಯ ಒಂದು ಕೆ.ಜಿ ಈರುಳ್ಳಿ ಬೆಲೆ 15-20 ರೂ. ಇದೆ. ಆದರೆ, ಸೆಪ್ಟೆಂಬರ್‌ನಲ್ಲಿ ಇದು ಗಗನಕ್ಕೇರುವ ಕಾರಣ ಜನ ಮೊದಲೇ ಹೆಚ್ಚಿನ ಈರುಳ್ಳಿಯನ್ನು ಖರೀದಿಸಿ ಇಟ್ಟುಕೊಳ್ಳುವುದು ಒಳಿತು ಎಂಬ ಸಲಹೆಗಳು ಕೇಳಿಬಂದಿವೆ. ಕಳೆದ ಮಾರ್ಚ್‌ನಲ್ಲಿ ಈರುಳ್ಳಿ ಬೆಲೆಯು ಜಾಸ್ತಿಯಾಗಿತ್ತು. ಇದಾದ ನಂತರ ಬೆಲೆ ನಿಯಂತ್ರಣಕ್ಕೆ ಬಂದಿತ್ತು. ಈಗ ಅಕ್ಟೋಬರ್ ಕೊನೆಯ ವಾರದವರೆಗೆ ಈರುಳ್ಳಿ ಬೆಲೆ ಹೆಚ್ಚಿರಲಿದೆ ಎಂದು ತಿಳಿದುಬಂದಿದೆ.