ಬೆಂಗಳೂರು: ಸೇನೆಯಲ್ಲಿ ಉದ್ಯೋಗಕ್ಕೆ ಸಂಬಂಧಿಸಿ ಕೇಂದ್ರ ಸರಕಾರದ ನೂತನ ಯೋಜನೆಯಾದ ʼಅಗ್ನಿಪಥ್ʼ (Agnipath) ವಿರುದ್ಧ ದೇಶದ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ಜೋರಾಗಿದೆ. ಈಗ ಈ ಪ್ರತಿಭಟನೆಯ ಕಾವು ಕರ್ನಾಟಕ್ಕ ರಾಜ್ಯಕ್ಕೂ ಆವರಿಸಿದೆ. ಧಾರವಾಡ, ಬೆಳಗಾವಿ ಹಾಗೂ ಯಾದಗಿರಿ ಜಿಲ್ಲೆಯ ಅನೇಕ ಪ್ರದೇಶಗಳಲ್ಲಿ ಯುವಕರು ತೀವ್ರ ಪ್ರತಿಭಟನೆ ಆರಂಭಿಸಿದ್ದಾರೆ. ಸನ್ನಿವೇಶ ಹತೋಟಿಗೆ ತರಲು ಪೊಲೀಸರು ಕಠಿಣ ಕ್ರಮ ಕೈಗೊಂಡು ಲಾಠಿ ಚಾರ್ಜ್ ನಡೆಸಿದ್ದಾರೆ.
ಧಾರವಾಡ: ನಾಯ್ಕ ಅಡ್ಡಾ ಸರ್ಕಲ್ ಬಳಿ ನೂರಾರು ಯುವಕರು ಸೇರಿ ಅಗ್ನಿಪಥ್ ಯೋಜನೆಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯನ್ನು ನಿಯಂತ್ರಿಸಲು ಸ್ಥಳದಲ್ಲಿ ಪೊಲೀಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ಸ್ಥಳಕ್ಕೆ ಎಡಿಸಿ ಶಿವಾನಂದ ಭಜಂತ್ರಿ, ಡಿಸಿಪಿ ಶ್ರೀಶೈಲ ಬ್ಯಾಕೋಡ್ ಭೇಟಿ ನೀಡಿ ಪರಿಸ್ಥಿತಿ ಹತೋಟಿಗೆ ತರಲು ಪ್ರಯತ್ನಿಸಿದರು. ಹಾಗಿದ್ದರೂ ಪೊಲೀಸರ ಮಾತು ಲೆಕ್ಕಿಸದೆ ಗಲಾಟೆ ಮಾಡುತ್ತಿರುವ ಯುವಕರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಪೊಲೀಸರಿಂದ ಲಾಠಿ ಚಾರ್ಜ್ ಆಗುತ್ತಿದ್ದಂತೆಯೇ ಯುವಕರು ದಿಕ್ಕಾಪಾಲಾಗಿ ಓಡಿದ್ದಾರೆ. ಈ ಪ್ರತಿಭಟನೆಯ ಹೆಸರಲ್ಲಿ ಗಲಾಟೆ ನಡೆಸಿದ 15 ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮಧ್ಯೆ ಹುಬ್ಬಳ್ಳಿಯಲ್ಲೂ ಪ್ರತಿಭಟನೆ ಜೋರಾಗಿದೆ. ಧಾರವಾಡದಲ್ಲಿ ಲಾಠಿಚಾರ್ಜ್ ಮಾಡುತ್ತಿದ್ದಂತೆ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ ಪ್ರತಿಭಟನಾಕಾರರು ಬಳಿಕ ಪರಾರಿಯಾಗಿದ್ದಾರೆ.
ಬೆಳಗಾವಿ: ಸೇನಾ ನೇಮಕಾತಿಯ ಹೊಸ ನಿಯಮ ಅಗ್ನಿಪಥ್ ಯೋಜನೆ ಜಾರಿಗೆ ವಿರೋಧ ವ್ಯಕ್ತಪಡಿಸಿ ಬೆಳಗಾವಿ ಜಿಲ್ಲೆಯ ಹಲವೆಡೆ ಪ್ರತಿಭಟನೆ ತೀವ್ರಗೊಂಡಿದೆ. ಗೋಕಾಕ್ ನಗರದಲ್ಲಿ ಪ್ರತಿಭಟನೆ ನಡೆಸುತ್ತಿರುವ ಯುವಕರು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು. ಅಲ್ಲದೆ ಅಗ್ನಿಪಥ್ ಯೋಜನೆ ರದ್ದು ಮಾಡಬೇಕು, ಇಲ್ಲವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ. ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ನಡೆಸುವ ಮೂಲಕ ನಿಯಂತ್ರಣಕ್ಕೆ ತರಲು ಯತ್ನಿಸಿದ್ದಾರೆ. ಖಾನಾಪುರದಲ್ಲಿ ಶಾಸಕಿ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ನೂರಾರು ಸಂಖ್ಯೆಯಲ್ಲಿ ಯುವಕರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಬಳಿಕ ತಹಸೀಲ್ದಾರ್‌ಗೆ ಮನವಿ ಪತ್ರ ನೀಡಲಾಯಿತು. ಮಹಾರಾಷ್ಟ್ರದ ಗಡಿ ತಾಲೂಕಾದ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲೂ ಪ್ರತಿಭಟನೆ ಜೋರಾಗಿದೆ.
ಮಂಡ್ಯ: ಅಗ್ನಿಪಥ್ ನೇಮಕಾತಿ ಯೋಜನೆ ವಿರೋಧಿಸಿ ವಾರಣಾಸಿ ರೇಲ್ವೇ ನಿಲ್ದಾಣದಲ್ಲಿ ಪ್ರತಿಭಟನೆ ನಡೆದಿದೆ. ಪ್ರತಿಭಟನಾಕಾರರು ರೈಲು ಸಂಚಾರ ಮಾಡದಂತೆ ತಡೆದಿದ್ದು, ಇದರಿಂದ ಪ್ರವಾಸಿಗರೆಗೆ ಅನೇಕ ಸಮಸ್ಯೆ ಉಂಟಾಗಿದೆ. ಮಂಡ್ಯದಿಂದ ಕಾಶಿಗೆ ತೆರಳಿದ ಪ್ರವಾಸಿಗರು ಈ ವೇಳೆ ರೈಲ್ವೇ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ.
ಜೂನ್ 9ರಂದು ಮಂಡ್ಯದಿಂದ 72 ಪ್ರವಾಸಿಗರು ಕಾಶಿಗೆ ತೆರಳಿದ್ದರು. ಜೂನ್ 17 ರಂದು ತವರಿಗೆ ವಾಪಾಸ್ ಬರಲು ಸಂಗಮಿತ್ರ ಎಕ್ಸ್‌ಪ್ರೆಸ್ ರೈಲಿಗೆ ಟಿಕೆಟ್ ಕಾಯ್ದಿರಿಸಿದ್ದರು. ಆದರೆ ಅಗ್ನಿಪಥ್ ಯೋಜನೆಯ ವಿರುದ್ಧ ಆರಂಭವಾದ ಪ್ರತಿಭಟನೆಯಿಂದ ಈ ಪ್ರವಾಸಿಗರು ಪ್ರಯಾಣ ಮಾಡದಂತಾಗಿದೆ. ಹಾಗಾಗಿ ಇವರಿಗೆ ಈಗ ಕಾಶಿಯಲ್ಲಿ ವಾಸ್ತವ್ಯ ಮಾಡುವಂತಹ ಪರಿಸ್ಥಿತಿ ಎದುರಾಗಿದೆ. ಈ ಗುಂಪಿನಲ್ಲಿ ಹೆಚ್ಚಾಗಿ ವಯೋವೃದ್ಧರೇ ಇರುವುದರಿಂದ ವಾಸ್ತವ್ಯಕ್ಕೂ ಕಷ್ಟವಾಗಿದೆ. ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ.
ಇದನ್ನೂ ಓದಿ: Agnipath protestಗೆ ಸಾವಿನ ತಿರುವು, ಒಬ್ಬ ದೊಂಬಿಕೋರ ಪೊಲೀಸ್ ಗುಂಡಿಗೆ ಬಲಿ