ಬೆಂಗಳೂರು: ಕೃಷಿ ಸಚಿವ ಚಲುವರಾಯಸ್ವಾಮಿ (Minister Chaluvarayaswamy) ಅವರು ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಸ್ವತಃ ಕೃಷಿ ಇಲಾಖೆಯ ಅಧಿಕಾರಿಗಳು (Agriculture department officers) ನೇರವಾಗಿ ರಾಜ್ಯಪಾಲರಿಗೇ ದೂರು (Complaint to Governor) ನೀಡಿದ್ದಾರೆನ್ನಲಾದ ಪ್ರಕರಣವನ್ನು ಸಿಐಡಿ ತನಿಖೆಗೆ (CID Investigation) ಒಪ್ಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಸಂಬಂಧ ಮುಖ್ಯಮಂತ್ರಿಯವರು ಸೂಚನೆ ನೀಡಿದ್ದಾರೆ.
ಮಂಡ್ಯ ಜಿಲ್ಲೆ ಕೃಷಿ ಅಧಿಕಾರಿಗಳು ಕೃಷಿ ಸಚಿವರ ವಿರುದ್ಧ ಬರೆದಿದ್ದಾರೆನ್ನಲಾದ ಪತ್ರದ ಕುರಿತು ಗೃಹ ಸಚಿವರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ. ಬಳಿಕ ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸುವ ನಿರ್ಧಾರಕ್ಕೆ ಸಿಎಂ ಬಂದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: DK Shivakumar : ಡಿಕೆಶಿ ಮೇಲೆ ಬಿಬಿಎಂಪಿ ಕಮಿಷನ್ ಆರೋಪ; ಅಜ್ಜಯ್ಯನ ಮೇಲೆ ಪ್ರಮಾಣಕ್ಕೆ ಸವಾಲು
ಸರ್ಕಾರಕ್ಕೆ ಮುಜುಗರ ತಂದಿದ್ದ ಪ್ರಕರಣ
ಸಚಿವ ಚಲುವರಾಯಸ್ವಾಮಿ ಅವರು ಈಚೆಗೆ ಅನೇಕ ವಿವಾದಗಳಿಗೆ ಗುರಿಯಾಗುತ್ತಾ ಬಂದಿದ್ದಾರೆ. ಬಸ್ ಚಾಲಕನ ಆತ್ಮಹತ್ಯೆ, ಬೆದರಿಕೆ ಕರೆ ಮತ್ತಿತರ ಕಾರಣಕ್ಕೆ ಸುದ್ದಿಯಲ್ಲಿದ್ದ ಸಚಿವರ ಮೇಲೆ ಈಗ ಲಂಚ ಬೇಡಿಕೆಯಂತಹ ಗಂಭೀರ ಆರೋಪ ಕೇಳಿಬಂದಿದೆ. ಕೃಷಿ ಸಚಿವರು ಲಂಚಕ್ಕಾಗಿ ಪೀಡಿಸುತ್ತಿದ್ದಾರೆ ಎಂದು ಸ್ವತಃ ಕೃಷಿ ಇಲಾಖೆಯ ಅಧಿಕಾರಿಗಳು ನೇರವಾಗಿ ರಾಜ್ಯಪಾಲರಿಗೆ ಪತ್ರ ಬರೆದು ದೂರು (Complaint to Governor) ನೀಡಿದ್ದಾರೆ ಎಂಬ ಪತ್ರವು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು. ಇದು ಸರ್ಕಾರಕ್ಕೆ ಮುಜುಗರವನ್ನೂ ತಂದಿತ್ತು. ಆದರೆ, ಇದು ಫೇಕ್ ಲೆಟರ್ ಎಂದು ಸಚಿವ ಚಲುವರಾಯಸ್ವಾಮಿ ಸ್ಪಷ್ಟನೆ ನೀಡಿದ್ದರು. ಜತೆಗೆ ಅಧಿಕಾರಿಗಳು ಸಹ ಇದನ್ನು ಅಲ್ಲಗಳೆದಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದರು. ಇದರಿಂದ ವಿರೋಧ ಪಕ್ಷಗಳ ಕೈಗೆ ಹೊಸ ಅಸ್ತ್ರವನ್ನು ಕೊಟ್ಟಂತೆ ಆಗಿತ್ತು. ಹೀಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ ಈಗ ಸಿಐಡಿಗೆ ತನಿಖೆಯ ಹೊಣೆಯನ್ನು ನೀಡುವ ತೀರ್ಮಾನಕ್ಕೆ ಬಂದಿದೆ.
ಇದೊಂದು ಫೇಕ್ ಲೆಟರ್ ಎಂದಿದ್ದ ಚಲುವರಾಯಸ್ವಾಮಿ
ಕೃಷಿ ಅಧಿಕಾರಿಗಳಿಂದ ರಾಜ್ಯಪಾಲರಿಗೆ ಪತ್ರ ಬರೆದ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ, ಈ ಸಂಬಂಧ ಜಂಟಿ ಕೃಷಿ ನಿರ್ದೇಶಕರು (ಜೆಡಿ) ಬಳಿ ಈಗ ಮಾತನಾಡಿದ್ದೇನೆ. ನಾನು ಯಾರ ಬಳಿಯೂ ಮಾತನಾಡಿಲ್ಲ. ಇದೊಂದು ಫೇಕ್ ಲೆಟರ್ ಎಂದು ಹೇಳಿದ್ದಾರೆ. ಪಾಪ ಬಹಳ ಹುಡುಕಿ ಹುಡುಕಿ ಏನೇನೋ ಮಾಡುತ್ತಿರುತ್ತಾರೆ. ಹಾಗೇನಾದರೂ ಇದ್ದರೆ ನಮ್ಮ ಇಲಾಖೆಯ ಕಾರ್ಯದರ್ಶಿಗಳಿಗೆ ತನಿಖೆ ಮಾಡಲು ಹೇಳುತ್ತೇನೆ ಎಂದು ಮಂಡ್ಯದಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿಕೆ ನೀಡಿದ್ದರು.
ಇದೊಂದು ಫೇಕ್ ಲೇಟರ್ ಇರಬಹುದು ಎಂದು ಜೆಡಿ ಹೇಳಿದ್ದಾರೆ. ನಮ್ಮಲ್ಲಿ ಆ ರೀತಿಯ ಯಾರೂ ಇಲ್ಲ ಎಂದು ಹೇಳುತ್ತಿದ್ದಾರೆ. ಜೆಡಿ ಅವರು ನಾನು ಯಾರ ಬಳಿ ಹಣ ಕೇಳಿಲ್ಲ ಎನ್ನುತ್ತಿದ್ದಾರೆ. ಈ ಬಗ್ಗೆ ತನಿಖೆ ಮಾಡಿಸುತ್ತೇವೆ. ಮೊದಲು ಇದು ಸತ್ಯನಾ, ಅಸತ್ಯಾನ ಎಂದು ತಿಳಿದು ತನಿಖೆ ಮಾಡಿಸುತ್ತೇವೆ. ಈ ರೀತಿ ನಮ್ಮ ಮೇಲೆ ಆರೋಪ ಮಾಡುತ್ತಿದ್ದರೆ ಹೆಚ್ಚು ಪ್ರಕಾಶಮಾನವಾಗಿರಲು ಸಾಧ್ಯ. ಕಲ್ಲನ್ನು ಕೆತ್ತಿದರೇ ತಾನೇ ವಿಗ್ರಹ ಆಗುವುದು. ವರದಿ ಬಂದ ನಂತರ ಮಾತನಾಡುತ್ತೇನೆ ಎಂದು ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದರು.
ನನಗೆ ಮಾಹಿತಿ ಬಂದ ತಕ್ಷಣ ಜಂಟಿ ಕೃಷಿ ನಿರ್ದೇಶಕರ ಬಳಿ ಮಾತನಾಡಿದ್ದೇನೆ ನೀವು ಯಾರ ಬಳಿಯಾದರೂ ಹಣ ಕೊಡಿ ಎಂದು ಮಾತನಾಡಿದ್ದೀರಾ ಎಂದು ಕೇಳಿದ್ದೇನೆ. ನಾನು ಯಾವ ಸಹಾಯಕ ಕೃಷಿ ನಿರ್ದೇಶಕರನ್ನೂ ಭೇಟಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಯಾರೋ ನನ್ನನ್ನು ಟಾರ್ಗೆಟ್ ಮಾಡಬೇಕು ಎಂದು ತಿಂಡಿ, ಊಟ ಮಾಡದೇ ಕೆಲಸ ಮಾಡುತ್ತಿದ್ದಾರೆ. ಅದರ ಬಗ್ಗೆ ಬೇಜಾರು ಮಾಡಿಕೊಳ್ಳುವುದಿಲ್ಲ ಎಂದು ಚಲುವರಾಯಸ್ವಾಮಿ ಹೇಳಿದ್ದರು.
ಏನಿದು ದೂರು?
ಮಂಡ್ಯ ಜಿಲ್ಲೆಯ 7 ಸಹಾಯಕ ಕೃಷಿ ನಿರ್ದೇಶಕರು ನೇರವಾಗಿ ರಾಜಭವನಕ್ಕೆ ದೂರು ಸಲ್ಲಿಸಿದ್ದಾರೆ ಎಂದು ಹೇಳಲಾಗಿತ್ತು. ಕೃಷಿ ಸಚಿವರು 6 ರಿಂದ 8 ಲಕ್ಷ ರೂ. ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಅವರ ಕಿರಿಕಿರಿ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ನೇರವಾಗಿ ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು.
ಈ ರೀತಿ ಅಧಿಕಾರಿಗಳೇ ನೇರವಾಗಿ ರಾಜಭವನಕ್ಕೆ ದೂರು ಸಲ್ಲಿಸಿರುವುದು ಅತ್ಯಂತ ವಿಶೇಷವಾಗಿದೆ. ಅಷ್ಟೇ ಅಲ್ಲ, ಲಂಚದ ಅನಿಷ್ಟ ಪದ್ಧತಿಗೆ ಕಡಿವಾಣ ಹಾಕದಿದ್ದರೆ ಅಧಿಕಾರಿಗಳು ಕುಟುಂಬ ಸಮೇತ ವಿಷ ಕುಡಿಯುವುದಾಗಿ ದೂರಿನಲ್ಲಿ ಹೇಳಲಾಗಿತ್ತು
ದೂರು ಕೊಟ್ಟವರು ಯಾರು?
ಮಂಡ್ಯ, ಜಿಲ್ಲೆಯ ಮಂಡ್ಯ, ಮಳವಳ್ಳಿ, ಕೃಷ್ಣರಾಜಪೇಟೆ, ಪಾಂಡವಪುರ, ನಾಗಮಂಗಲ, ಶ್ರೀರಂಗಪಟ್ಟಣ ಮತ್ತು ಮದ್ದೂರು ತಾಲೂಕಿನ ಕೃಷಿ ಸಹಾಯಕ ನಿರ್ದೇಶಕರು ಮತ್ತು ಸಿಬ್ಬಂದಿ ಈ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ತಲಾ 6ರಿಂದ 8 ಲಕ್ಷ ರೂ.ಗಳಿಗಾಗಿ ಬೇಡಿಕೆ ಇಡಲಾಗಿದೆ. ಜಿಲ್ಲಾ ಜಂಟಿ ಕೃಷಿ ನಿರ್ದೇಶಕರ ಮೂಲಕ ಒತ್ತಡ ಹೇರಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಇದನ್ನೂ ಓದಿ: Arecanut Price : ಭೂತಾನ್‌ನಿಂದ 17 ಸಾವಿರ ಟನ್ ಅಡಿಕೆ ಆಮದು; ಬೆಲೆಗೆ ಪೆಟ್ಟು, ಬೆಳೆಗಾರರಿಗೆ ಇಕ್ಕಟ್ಟು
ರಾಜಭವನದಿಂದ ಸರ್ಕಾರಕ್ಕೆ ಪತ್ರ
ರಾಜಭವನವು ಈ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯಪಾಲರ ಕಚೇರಿಯಿಂದ ಸರ್ಕಾರಕ್ಕೆ ಈ ಬಗ್ಗೆ ಪತ್ರ ಬರೆಯಲಾಗಿದೆ. ರಾಜ್ಯಪಾಲರ ಅಧೀನ ಕಾರ್ಯದರ್ಶಿಗಳು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಈ ಪತ್ರದ ಬಗ್ಗೆ ಕ್ರಮವಹಿಸುವಂತೆ ಸೂಚಿಸಲಾಗಿತ್ತು.