ತುಮಕೂರು: ಇಡೀ ವಿಶ್ವವೇ ಒಂದು ಕುಟುಂಬ ಎನ್ನುವ ಮೌಲ್ಯವನ್ನು ಭಾರತ ಉಳಿಸಿಕೊಳ್ಳಬೇಕೆಂದರೆ, ಪಾಕಿಸ್ತಾನದಂತೆಯೇ ಭಾರತವೂ ಆಗಬಾರದು ಎಂದರೆ, ಈಗಿರುವ ಪ್ರಭುತ್ವವನ್ನು ಉಳಿಸಿಕೊಳ್ಳಬೇಕಾಗಿರುವುದು ಎಲ್ಲ ರಾಷ್ಟ್ರೀಯವಾದಿ ಸಾಹಿತಿಗಳ ಕಾರ್ಯವಾಗಬೇಕು ಎಂದು ಲೇಖಕ, ಚಿಂತಕ ಡಾ. ಪ್ರೇಮಶೇಖರ ಅಭಿಮತ ವ್ಯಕ್ತಪಡಿಸಿದ್ದಾರೆ.
ತುಮಕೂರಿನ ಸಿದ್ದಗಂಗಾ ಪದವಿ ಕಾಲೇಜಿನಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವತಿಯಿಂದ ತುಮಕೂರಿನಲ್ಲಿ ಆಯೋಜಿಸಿದ್ದ, ಆದಿಕವಿ ಹಾಗೂ ವಾಗ್ದೇವಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಾತಂತ್ರ್ಯ ಬಂದ ನಂತರ ಅಧಿಕಾರವನ್ನು ಪ್ರಜಾಪ್ರಭುತ್ವ ವಿರೋಧಿ ಮಾರ್ಗದಿಂದ ಪಡೆದುಕೊಂಡ ಅಂದಿನ ನಮ್ಮ ಪ್ರಭುತ್ವ, ನಮ್ಮ ಐತಿಹಾಸಿಕ ಪರಂಪರೆಗಳಿಂದ ಪ್ರೇರಣೆಯನ್ನು ಪಡೆಯಲಿಲ್ಲ. ಬಾಹ್ಯ ಜಗತ್ತಿನಿಂದ ಪ್ರೇರೇಪಣೆಗೊಂಡು ಆ ವಿಚಾರವನ್ನು ಪ್ರಚಾರ ಮಾಡಲು ಸಾಹಿತಿಗಳ ಹೊಸ ತಳಿಗಳನ್ನು ತಯಾರು ಮಾಡಿತು. ಆ ಸರ್ಕಾರ ಯಾವ ದೃಷ್ಟಿಯಲ್ಲೂ ಭಾರತೀಯ ಆಗಿಲ್ಲ. ಅದು ಸಾಮಾಜಿಕ, ಆರ್ಥಿಕವಾಗಿ ಅನುಸರಿಸಿದ ಮಾರ್ಗಗಳಿಂದಾಗಿ ನಮ್ಮ ದೇಶದ ಅಭಿವೃದ್ಧಿ ಆಗಲೇ ಇಲ್ಲ. ತಾವೇ ಮಾಡಿದ ಆರ್ಥಿಕ ನೀತಿಯಿಂದಾಗಿ ದೇಶ ಬೆಳವಣಿಗೆ ಆಗದೇ ಇದ್ದಾಗ ಅದನ್ನು ಹಿಂದು ಆರ್ಥಿಕತೆ ಎಂದು ಹಣೆಪಟ್ಟಿ ಕಟ್ಟಿದರು ಎಂದು ತಿಳಿಸಿದರು.
ಇದನ್ನೂ ಓದಿ | ಅಡಿಗರ ನಂತರದ ಪ್ರಮುಖ ಸಾಹಿತಿಗಳಲ್ಲಿ ಶಿವರಾಮು ಅವರೂ ಒಬ್ಬರು: ಡಾ. ಜಿ.ಬಿ. ಹರೀಶ್
ಅಲಿಪ್ತ ನೀತಿ ಎಂಬ ಎಡಬಿಡಂಗಿ ನೀತಿಯನ್ನು ಅನುಸರಿಸಲಾಯಿತು ಎಂದ ಪ್ರೇಮಶೇಖರ್, ಎಲ್ಲ ರೀತಿಯಲ್ಲೂ ಪ್ರತಿಗಾಮಿ ನೀತಿಯನ್ನು ಪ್ರಚಾರ ಮಾಡಲು ಈ ಸಾಹಿತಿಗಳ ಗುಂಪನ್ನು ಸೃಷ್ಟಿ ಮಾಡಿತು. ಹೊರ ಜಗತ್ತಿನವರು ಕೊಟ್ಟ ದೃಷ್ಟಿಕೋನದಲ್ಲಿ ನಮ್ಮ ದೇಶವನ್ನು ನೋಡಿದರು. ಅಲ್ಲಲ್ಲಿ ಭಾರತದ ನಿಜವಾದ ರಾಷ್ಟ್ರೀಯ ಚಿಂತನೆಯುಳ್ಳವರು ಇದ್ದರಾದರೂ ಪ್ರಭುತ್ವದ ಬೆಂಬಲ ಅವರಿಗೆ ಇಲ್ಲದಿದ್ದರಿಂದ ಸಂಘಟಿತರಾಗಲು ಸಾಧ್ಯವಾಗಲಿಲ್ಲ.
ಈಗ ರಾಷ್ಟ್ರೀಯತೆಯ ಪರವಾಗಿರುವವರ ವಿರುದ್ಧ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಕೆಲಸ ನಡೆಯುತ್ತಿದೆ. ಪ್ರತಿ ಚುನಾವಣೆಯ ಸಂದರ್ಭದಲ್ಲೂ, ಎಡಪಂಥೀಯಯರು ಹಿಂದುಗಳ ವಿರುದ್ಧ ಅಸಹಿಷ್ಣುತೆಯ ಕೂಗೆಬ್ಬಿಸುತ್ತಾರೆ. ಅವರ ದಬ್ಬಾಳಿಕೆಯನ್ನು ಸಹಿಸಿಕೊಂಡಿದ್ದರೆ ಸರಿಯಾಗಿರುತ್ತದೆ. ಅದನ್ನು ವಿರೋಧಿಸಿದ ಕೂಡಲೆ ಅಸಹಿಷ್ಣುತೆ ಎನ್ನುತ್ತಾರೆ. ಬಿಹಾರ ಚುನಾವಣೆ ಸಂದರ್ಭದಲ್ಲಿ ಅಸಹಿಷ್ಣುತೆ, ಗುಜರಾತ್ ಚುನಾವಣೆ ಸಂದರ್ಭದಲ್ಲಿ ಜಸ್ಟಿಸ್ ಲೋಧಾ ಪ್ರಕರಣ … ಹೀಗೆ ಪ್ರತಿ ಬಾರಿ ಸುಳ್ಳು ಸುಳ್ಳು ವಿಚಾರ ಹರಡುತ್ತಾರೆ. ಈ ರಾಷ್ಟ್ರೀಯವಾದಿ ಸರ್ಕಾರವನ್ನು ಕೆಡವಿ ಮತ್ತೆ ಕಳ್ಳಕಾಕರ ಸರ್ಕಾರವನ್ನು ತರಬೇಕೆಂದು ಈ ಸಣ್ಣ ಗುಂಪು ಕೆಲಸ ಮಾಡುತ್ತಿದೆ ಎಂದರು.
ಇನ್ನೂ ನಮ್ಮ ದೇಶದ ಮೇಲೆ ಅಪಾಯ ತಪ್ಪಿಲ್ಲ. 2047ರ ಹೊತ್ತಿಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡುವ ಹುನ್ನಾರ ನಡೆದಿದೆ. ಹಿಂದಿನ ಸರ್ಕಾರಗಳು, ವಕ್ಫ್ ಹೆಸರಿನಲ್ಲಿ ಒಂದು ಸಮುದಾಯಕ್ಕೆ ಲಕ್ಷಾಂತರ ಎಕರೆ ಭೂಮಿಯನ್ನು ನೀಡಿತು. ಮನಮೋಹನ್ ಸಿಂಗ್ ಅವರು, ಈ ದೇಶದ ಸಂಪನ್ಮೂಲಗಳ ಮೇಲೆ ಅಲ್ಪಸಂಖ್ಯಾತರ ಮೊದಲ ಅಧಿಕಾರ ಇದೆ ಎಂದಿದ್ದರು. ದೇಶವನ್ನು ಒಡೆದ ಸಮುದಾಯ ಅದು ಹೇಗೆ ಅಲ್ಪಸಂಖ್ಯಾತ ಆಗುತ್ತದೆ? ಎಂದು ಪ್ರೇಮಶೇಖರ ಪ್ರಶ್ನಿಸಿದರು.
ಇದೀಗ ಅದೇ ಸಮುದಾಯದ ಗುಂಪು ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡಲು ಮುಂದಾಗಿದೆ. ಇಸ್ಲಾಮಿಕ್ ರಾಷ್ಟ್ರವನ್ನು ಒಪ್ಪಿಕೊಂಡರೆ, ಈಗ ಪಾಕಿಸ್ತಾನಕ್ಕೆ ಆಗಿರುವ ಸ್ಥಿತಿ ಆಗುತ್ತದೆ. ಹಿಂದುಗಳ ಅಪಹರಣ, ಯುವತಿಯರ ಅತ್ಯಾಚಾರ, ಮಂದಿರಗಳ ನಾಶದಂತಹ ಘಟನೆಗಳು ನಡೆಯುತ್ತವೆ. ಈ ರೀತಿ ಆಗಬಾರದು ಎಂಬ ಸಂಕಲ್ಪ ನಮ್ಮದಾಗಬೇಕು. ಅದಕ್ಕಾಗಿ ಈಗಿರುವ ಪ್ರಭುತ್ವವನ್ನು ನಾವು ಉಳಿಸಿಕೊಳ್ಳಬೇಕು. ಮುಂದಿನ ಒಂದೂವರೆ ವರ್ಷದಲ್ಲಿ ಈ ಕುರಿತು ಜಾಗೃತರಾಗಿ, ಆ ಪ್ರಭುತ್ವವನ್ನು ಉಳಿಸಿಕೊಂಡರೆ ಈಗಿರುವಂತೆಯೇ, ವಸುಧೈವ ಕುಟುಂಬಕಂ ಎನ್ನುವ ಭಾರತವನ್ನು ಮುಂದೆಯೂ ನೋಡಲು ಸಾಧ್ಯವಾಗುತ್ತದೆ. ಇದೇ ರಾಷ್ಟ್ರೀಯವಾದಿ ಸಾಹಿತಿಗಳ ತಕ್ಷಣದ ಜವಾಬ್ದಾರಿ ಎಂದರು.
ಡಾ. ಬಾಬು ಕೃಷ್ಣಮೂರ್ತಿ ಅವರಿಗೆ 2021ನೇ ಸಾಲಿನ ಆದಿಕವಿ ಪುರಸ್ಕಾರ, 2022ನೇ ಸಾಲಿನ ಆದಿಕವಿ ಪುರಸ್ಕಾರವನ್ನು ಪುಟ್ಟು ಪರಶುರಾಮ ಕುಲಕರ್ಣಿ ಅವರಿಗೆ ಪ್ರದಾನ ಮಾಡಲಾಯಿತು. 2021ನೇ ಸಾಲಿನ ವಾಗ್ದೇವಿ ಪ್ರಶಸ್ತಿಯನ್ನು ಡಾ.ವಿಶ್ವನಾಥ ಸುಂಕಸಾಳ, 2022ನೇ ಸಾಲಿನ ವಾಗ್ದೇವಿ ಪ್ರಶಸ್ತಿಯನ್ನು ರೋಹಿತ್ ಚಕ್ರತೀರ್ಥ ಅವರಿಗೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿಸ್ತಾರ ಮೀಡಿಯಾ ಸಿಇಒ ಹಾಗೂ ಪ್ರಧಾನ ಸಂಪಾದಕ ಮತ್ತು ಅಖಿಲ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ ಉಪಾಧ್ಯಕ್ಷ ಹರಿಪ್ರಕಾಶ್ ಕೋಣೆಮನೆ, ಪ್ರಧಾನ ಕಾರ್ಯದರ್ಶಿ ರಘುನಂದನ್ ಭಟ್ ಮತ್ತಿತರರು ಉಪಸ್ಥಿತರಿದ್ದರು.
ನಾನು ನಿಮಿತ್ತ ಮಾತ್ರ
ಆದಿಕವಿ ಪ್ರಶಸ್ತಿ ಸ್ವೀಕರಿಸಿದ ಬಾಬು ಕೃಷ್ಣಮೂರ್ತಿ ಮಾತನಾಡಿ, ಬರವಣಿಗೆಯ ಅವಶ್ಯಕತೆಯನ್ನು ಅರ್ಥ ಮಾಡಿಕೊಂಡಿರುವುದರಿಂದ ಅದಕ್ಕಾಗಿ ನನ್ನ ಲೇಖನಿಯನ್ನು ಮುಡಿಪಾಗಿಟ್ಟಿದ್ದೇನೆ. ಕೆ.ಎಸ್. ನಾರಾಯಣಾಚಾರ್ಯ ಅಂಥವರು ಪಡೆದ ಪ್ರಶಸ್ತಿಯನ್ನು ನಮಗೆ ನೀಡುತ್ತಿರುವುದು ಹೆಮ್ಮೆಯ ವಿಚಾರ. ನನ್ನ ತಂದೆ, ತಾಯಿ ಬಾಲ್ಯದಲ್ಲಿಯೇ ಸಾಹಿತ್ಯದ ಆಸಕ್ತಿ ಬೆಳೆಸಿದರು. ನನ್ನ ಸಹೋದರನಿಂದ ಪ್ರೇರಣೆ ಸಿಕ್ಕಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಅನೇಕ ಮಹನೀಯರ ಸಂಸ್ಕಾರ ನನಗೆ ಲಭಿಸಿತು, ನನ್ನ ಸಾಹಿತ್ಯ ಯಾತ್ರೆಯಲ್ಲಿ ಪ್ರಕಟವಾಗುತ್ತಿರುವ ಸಂಪೂರ್ಣ ಶ್ರೇಯಸ್ಸು ಅವರಿಗೆ ಸಲ್ಲಬೇಕು. ಅವರೇ ನನ್ನ ಕೈಯಲ್ಲಿ ಬರೆಯಿಸಿ, ಪುಸ್ತಕವನ್ನು ಅತ್ಯುನ್ನತ ಮಟ್ಟದಲ್ಲಿ ಪ್ರಕಟಿಸಿದವರು ಅವರೆ. ಇದೆಲ್ಲ ಕಾರ್ಯದಲ್ಲಿ ಜತೆಗಿದ್ದು ಬರೆಸಿದ್ದು ಪತ್ನಿ. ಇವರೆಲ್ಲರೂ ಬರೆಸಿದ್ದಾರೆ, ನಾನು ನಿಮಿತ್ತ ಮಾತ್ರ ಎಂದರು.
ಇದನ್ನೂ ಓದಿ | ವಿಸ್ತಾರ ನ್ಯೂಸ್‌ಗೆ ಶುಭ ಹಾರೈಸಿದ ವಾಗ್ದೇವಿ ಶಿಕ್ಷಣ ಸಮೂಹದ ಚೇರ್ಮನ್ ಹರೀಶ್