ವಿಜಯಪುರ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶಂಕಿತ ಉಗ್ರರನ್ನು ಪೊಲೀಸರು ವಶಕ್ಕೆ ಪಡೆದು ಆತಂಕ ಸೃಷ್ಟಿಯಾದ ಸಂದರ್ಭದಲ್ಲಿಯೇ ಇಲ್ಲಿನ ನಿಡಗುಂದಿ ತಾಲೂಕಿನ ಆಲಮಟ್ಟಿ ಡ್ಯಾಂ (Almatti Dam) ಆವರಣದಲ್ಲಿ ಬುರ್ಖಾಧಾರಿಯೊಬ್ಬ ಕೆಲಕಾಲ ಆತಂಕ ಸೃಷ್ಟಿಸಿದ್ದ ಸನ್ನಿವೇಶ ಸೃಷ್ಟಿಯಾಗಿತ್ತು.
ಬುರ್ಖಾಧಾರಿಯೊಬ್ಬರು ಬೆಳಗ್ಗೆಯೇ ಡ್ಯಾಂಗೆ ಆಗಮಿಸಿದ್ದಾರೆ. ಪ್ರವೇಶ ಸಮಯ ಆಗದ ಹಿನ್ನೆಲೆಯಲ್ಲಿ ಅಲ್ಲಿದ್ದ ಸಿಬ್ಬಂದಿ ಅವರನ್ನು ತಡೆದಿದ್ದಾರೆ. ಈ ವೇಳೆ ಬುರ್ಖಾಧಾರಿಯು ಮಾತನಾಡಿದಾಗ ಪುರುಷನ ಧ್ವನಿಯಂತೆ ಕೇಳಿಸಿದೆ. ಇದೇ ಎಲ್ಲ ಅವಾಂತರಕ್ಕೆ ಕಾರಣವಾಗಿದೆ. ಬುರ್ಖಾಧಾರಿ ಮಹಿಳೆ ಹೇಗೆ ಪುರುಷನ ಧ್ವನಿಯಲ್ಲಿ ಮಾತನಾಡುತ್ತಾರೆ. ಪುರುಷ ಏಕೆ ಬುರ್ಖಾ ಧರಿಸಿ ಆಗಮಿಸಿದ್ದಾನೆ ಎಂದು ಸಿಬ್ಬಂದಿ ಸಂಶಯಗೊಂಡು ಅಲ್ಲಿದ್ದ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ಜತೆಗೆ ಬುರ್ಖಾಧಾರಿ ಚಲನ ವಲನಗಳ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ, ಡ್ಯಾಂ ಸಮೀಪದಲ್ಲಿನ ಮುಳ್ಳು ಕಂಟಿಗಳ ಬಳಿ ಹೋಗಿ ಬುರ್ಖಾ ತೆಗೆದ ವ್ಯಕ್ತಿ, ಅದನ್ನು ಬ್ಯಾಗ್‌ನಲ್ಲಿಟ್ಟುಕೊಂಡು ವಾಪಸ್ ಡ್ಯಾಂ ಪ್ರವೇಶ ದ್ವಾರದ ಬಳಿ ಬಂದಾಗ ಆಲಮಟ್ಟಿ ಪೊಲೀಸರು ಹಾಗೂಕರ್ನಾಟಕ ಇಂಡಸ್ಟ್ರೀಯಲ್ ಸೆಕ್ಯೂರಿಟಿ ಫೋರ್ಸ್‌ನವರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ | Terror Accused | ಬೆಂಗಳೂರಿನಲ್ಲಿ ಮತ್ತೊಬ್ಬ ಶಂಕಿತ ಉಗ್ರ ಬಂಧನ, ಒಂದೇ ದಿನ ಇಬ್ಬರು ಅರೆಸ್ಟ್!
ಮದುವೆಗೆ ಮನಸ್ಸಿಲ್ಲ, ಹೆಣ್ಣಾಗಲು ಮನಸ್ಸಿದೆ
ಬುರ್ಖಾಧರಿಯು ಹಾಸನದ ಸಕಲೇಶಪುರ ತಾಲೂಕಿನ ಕೋಮಲನಹಳ್ಳಿ ನಿವಾಸಿ ಕಿಶೋರ್ ಮಲ್ಲಿಕಾರ್ಜುನ ಸ್ವಾಮಿ (21) ಎಂದು ತಿಳಿದು ಬಂದಿದೆ. ಮನೆಯಲ್ಲಿ ಮದುವೆ ಆಗುವಂತೆ ಒತ್ತಡ ಹೆಚ್ಚಿದೆ. ಆದರೆ, ನನ್ನ ದೇಹದಲ್ಲಿ ಬದಲಾವಣೆ ಆಗುತ್ತಿದ್ದು, ತೃತೀಯ ಲಿಂಗಿಯಾಗಿ ಪರಿವರ್ತನೆ ಹೊಂದುತ್ತಿದ್ದೇನೆ. ಆದ್ದರಿಂದ ನನಗೆ ಮದುವೆ ಬೇಡವೆಂದರೂ ಕೇಳುತ್ತಿಲ್ಲ. ಮದುವೆ ಮಾಡಿಕೊಳ್ಳುವ ಮನಸ್ಸಿಲ್ಲ, ಹೆಣ್ಣಾಗಲು ಮನಸ್ಸಿದೆ ಎಂದಿರುವ ಈತ ಮನೆ ಬಿಟ್ಟು ಬಂದಿರವುದಾಗಿ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ.
ವಿಚಾರಣೆ ಮುಂದುವರಿಕೆ
ಯುವಕನ ವಿಚಾರಣೆಯನ್ನು ಆಲಮಟ್ಟಿ ಪೊಲೀಸರು ಮುಂದುವರಿಸಿದ್ದಾರೆ. ಜತೆಗೆ ಕಿಶೋರ್ ನೀಡಿರುವ ಮಾಹಿತಿ ಕುರಿತು ಸಕಲೇಶಪುರ ಪೊಲೀಸರಿಗೂ ವಿಚಾರವನ್ನು ಮುಟ್ಟಿಸಲಾಗಿದೆ. ಆತನ ಹೆಸರು, ವಿಳಾಸ ದಾಖಲೆಗಳ ಪರಿಶೀಲಿಸಲು ತಿಳಿಸಲಾಗಿದ್ದು, ಮಾಹಿತಿ ಸರಿಯಾಗಿದ್ದರೆ ಪೋಷಕರನ್ನು ಕರೆಸಿ ಅವರಿಂದ ಹಾಗೂ ಯುವಕನಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ಬಿಟ್ಟು ಕಳುಹಿಸುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | ಪ್ರೀತಿಗೆ ಎಲ್ಲಿಯ ಗಡಿ? ಕೆನಡಾ ಯುವತಿ ಈಗ ವಿಜಯಪುರದ ಸೊಸೆ