Site icon Vistara News

ಡಿಗ್ರಿ ವಿದ್ಯಾರ್ಥಿಗಳಿನ್ನು ಷೇರುಪೇಟೆ ಹೂಡಿಕೆದಾರರು: ಸರ್ಕಾರದಿಂದ ಮಹತ್ವದ ಒಪ್ಪಂದ

business

ಬೆಂಗಳೂರು: ಕರ್ನಾಟಕದಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಹತ್ತಾರು ವರ್ಷ ಕಲಿತರೂ ಇನ್ನೂ ಮುಗಿಯದಷ್ಟಿರುವ ಷೇರುಪೇಟೆ, ಫೈನಾನ್ಷಿಯಲ್‌ ಎಜುಕೇಷನ್‌ ಕುರಿತು ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿರುವ 5 ಲಕ್ಷ ವಿದ್ಯಾರ್ಥಿಗಳೂ ಇನ್ನು ತಿಳಿದುಕೊಳ್ಳಲಿದ್ದಾರೆ.

ಕರ್ನಾಟಕದ ಎಲ್ಲ 20 ವಿಶ್ವವಿದ್ಯಾಲಯಗಳಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೂ ಹಣಕಾಸು ಶಿಕ್ಷಣ (ಫೈನಾನ್ಶಿಯಲ್ ಎಜುಕೇಶನ್) ಮತ್ತು ಹೂಡಿಕೆ ಜಾಗೃತಿ (ಇನ್ವೆಸ್ಟ್‌ಮೆಂಟ್ ಅವೇರ್ನೆಸ್‌) ಕಲಿಸುವುದನ್ನು ರಾಜ್ಯ ಸರ್ಕಾರ ಕಡ್ಡಾಯ ಮಾಡಿದೆ. ಈ ಎರಡೂ ಶಿಕ್ಷಣವನ್ನು ಎಲ್ಲ ಕೋರ್ಸ್‌ಗಳ ವಿದ್ಯಾರ್ಥಿಗಳೂ ಪಡೆಯಲಿದ್ದಾರೆ. ಎರಡನೇ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ರೂಪಿಸಿರುವ ಈ ಯೋಜನೆಯ ಕುರಿತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಮತ್ತು ದೇಶದ ಪ್ರತಿಷ್ಠಿತ ಷೇರು ಮಾರುಕಟ್ಟೆ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನ (NSE) ಅಂಗಸಂಸ್ಥೆಯಾದ ಎನ್‌ಎಸ್‌ಇ ಅಕಾಡೆಮಿ ಲಿಮಿಟೆಡ್‌ (ಎನ್‌ಎಎಲ್‌) ಜತೆಗೆ ಬುಧವಾರ (ಜುಲೈ 13) ಒಪ್ಪಂದ ಮಾಡಿಕೊಳ್ಳಲಾಗಿದೆ.

ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬೇಕಾಗಿರುವ ನಮ್ಮ ವಿದ್ಯಾರ್ಥಿಗಳಿಗೆ ಹಣಕಾಸು ಶಿಕ್ಷಣ ಮತ್ತು ಹೂಡಿಕೆ ಜಾಗೃತಿ ಎರಡನ್ನೂ ಕಲಿಕೆಯ ಭಾಗವನ್ನಾಗಿ ಮಾಡುವುದು ಈ ಒಪ್ಪಂದದ ಉದ್ದೇಶ. ಇದರಿಂದ ರಾಜ್ಯದ 5 ಲಕ್ಷ ವಿದ್ಯಾರ್ಥಿಗಳಿಗೆ ಈ ಶೈಕ್ಷಣಿಕ ವರ್ಷದಲ್ಲಿ ಲಾಭವಾಗಲಿದೆ. ಈ ಕೋರ್ಸನ್ನು ಎಲ್ಲ ಪದವಿ ಕಾಲೇಜುಗಳೂ ತಮ್ಮ ಪಠ್ಯಕ್ರಮದ ಭಾಗವನ್ನಾಗಿ ಮಾಡಿಕೊಳ್ಳಬೇಕಾದ್ದು ಕಡ್ಡಾಯ. ಈ ನಿಟ್ಟಿನಲ್ಲಿ ಈಗಾಗಲೇ ಎಲ್ಲ ಕಾಲೇಜುಗಳಿಗೂ ಸರ್ಕಾರ ಮಾಹಿತಿ ನೀಡಿದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಉಳಿತಾಯ, ಹೂಡಿಕೆ, ಆರ್ಥಿಕ ತಿಳಿವಳಿಕೆ, ಬಂಡವಾಳ ಹೂಡಿಕೆಗೆ ಇರುವ ಅವಕಾಶಗಳು ಇತ್ಯಾದಿಗಳ ಬಗ್ಗೆ ಸಮಗ್ರ ಅರಿವು ಮೂಡಿಸಲಾಗುತ್ತದೆ.

ಇದನ್ನೂ ಓದಿ | LIC ಪ್ರತಿ ಷೇರಿಗೆ 1.50 ರೂ. ಡಿವಿಡೆಂಡ್‌ ಘೋಷಣೆ, ಷೇರು ದರ ಚೇತರಿಕೆ

ಈ ಮೂಲಕ ಇನ್ನು ಮುಂದೆ ರಾಜ್ಯದ ಪದವಿ ವಿದ್ಯಾರ್ಥಿಗಳು ಷೇರು ಮಾರುಕಟ್ಟೆಯ ಕುರಿತು ಶಿಕ್ಷಣ ಪಡೆಯಲಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅತ್ಯಂತ ಸರಳವಾಗಿರುವ ಷೇರು ವ್ಯವಹಾರ ಹಾಗೂ ಇನ್ನಿತರೆ ಹಣಕಾಸು ವ್ಯವಹಾರಗಳಲ್ಲಿ ಕೌಶಲ ಗಳಿಸಲು ಸಾಧ್ಯವಾಗಲಿದೆ.

ಉಪನ್ಯಾಸಕರಿಗೆ ತರಬೇತಿ

ಎಲ್ಲ ಕಾಲೇಜುಗಳಲ್ಲೂ ಶಿಕ್ಷಣ ನೀಡಲು ಉಪನ್ಯಾಸಕರಿಗೆ ತರಬೇತಿ ನೀಡಬೇಕಿದೆ. ಒಡಂಬಡಿಕೆಯ ಭಾಗವಾಗಿ ಎನ್‌ಎಸ್‌ಇ ಅಕಾಡೆಮಿಯು ಉಪನ್ಯಾಸಕರಿಗೆ ತರಬೇತಿ ಕೊಡಲು ರಾಜ್ಯ ಮಟ್ಟದ ಟ್ರೈನ್ ದಿ ಟ್ರೈನರ್ ಕಾರ್ಯಕ್ರಮವನ್ನು ಹಮ್ಮಿಕೊಂಡು, ಅಗತ್ಯ ಕೌಶಲಗಳನ್ನು ಕಲಿಸಿಕೊಡಲಿದೆ. ಬಳಿಕ, ಬೋಧಕ ವೃಂದದವರು ಇದನ್ನು ತಮ್ಮ ವಿದ್ಯಾರ್ಥಿಗಳಿಗೆ ವರ್ಗಾಯಿಸಲಿದ್ದಾರೆ.

ಎಲ್ಲ ವಿವಿಗಳೂ ಒಪ್ಪಂದಕ್ಕೆ ಸಹಿ

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರ ಸಮ್ಮುಖದಲ್ಲಿ ಎರಡೂ ಸಂಸ್ಥೆಗಳು ಒಡಂಬಡಿಕೆಗೆ ಮಂಗಳವಾರ ಸಹಿ ಮಾಡಿವು. ಇಷ್ಟೂ ವಿ.ವಿ.ಗಳ ಕುಲಪತಿಗಳು ಮತ್ತು ರಿಜಿಸ್ಟ್ರಾರ್ ಗಳು ಹಾಜರಿದ್ದು, ಒಪ್ಪಂದ ಪತ್ರಗಳನ್ನು ವಿನಿಮಯ ಮಾಡಿಕೊಂಡರು.

ಈ ಕುರಿತು ಮಾತನಾಡಿದ ಡಾ. ಸಿ.ಎನ್‌. ಅಶ್ವತ್ಥನಾರಾಯಣ, ರಾಜ್ಯದ ಯುವಜನರನ್ನು ಉದ್ಯೋಗದಾತರನ್ನಾಗಿ, ಉದ್ಯೋಗಾರ್ಹರನ್ನಾಗಿ ಮತ್ತು ಆರ್ಥಿಕ ಬೆಳವಣಿಗೆಯ ಭಾಗವನ್ನಾಗಿ ಮಾಡಬೇಕೆಂಬುದು ಸರ್ಕಾರದ ಹಂಬಲ. ಇದಕ್ಕಾಗಿ ಉನ್ನತ ಶಿಕ್ಷಣ ಇಲಾಖೆಯಡಿ ಹಲವು ಉಪಯುಕ್ತ ಉಪಕ್ರಮಗಳನ್ನು ಜಾರಿಗೆ ತರಲಾಗಿದೆ. ಜತೆಗೆ, ಕೌಶಲಾಭಿವೃದ್ಧಿ ಇಲಾಖೆಯಿಂದಲೂ ಉದ್ಯೋಗ ಮೇಳ, ಕೌಶಲ ಕಲಿಕೆಗಳಂತಹ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಪದವೀಧರರಾಗಿ ಯಾರೊಬ್ಬರೂ ನಿರುದ್ಯೋಗಿಗಳಾಗಿ ಉಳಿಯಬಾರದು ಎನ್ನುವ ದೃಷ್ಟಿಯ ಸಬಲೀಕರಣ ನಮ್ಮದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಪರಿಷತ್ತಿನ ಅಧ್ಯಕ್ಷ ಪ್ರೊ.ಬಿ.ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಡಾ. ಗೋಪಾಲಕೃಷ್ಣ ಜೋಶಿ, ಎನ್‌ಎಸ್‌ಇ ಇಂಡಿಯಾ ಲಿಮಿಟೆಡ್‌ನ ಪ್ರಧಾನ ಆರ್ಥಿಕ ತಜ್ಞ ಡಾ. ತೀರ್ಥಂಕರ್ ಪಟ್ನಾಯಕ್, ಎನ್‌ಎಸ್‌ಇ ಅಕಾಡೆಮಿ ಲಿಮಿಟೆಡ್ ಸಿಇಒ ಅಭಿಲಾಷ್‌ ಮಿಶ್ರ, ಮುಖ್ಯ ವ್ಯವಸ್ಥಾಪಕ ಎಸ್. ರಂಗನಾಥನ್ ಉಪಸ್ಥಿತರಿದ್ದರು.

ಇದನ್ನೂ ಓದಿ | SENSEX 1,027 ಅಂಕ ಜಿಗಿತ, ಷೇರುಪೇಟೆಯಲ್ಲಿ ಗೂಳಿಯ ಅಬ್ಬರಕ್ಕೆ ಕಾರಣವೇನು?

Exit mobile version