ಮಂಡ್ಯ: ನಾಡಕ ಮಾಡುತ್ತ, ಕಣ್ಣೀರು ಸುರಿಸುತ್ತ ಅಧಿಕಾರಕ್ಕೆ ಬಂದ ಜೆಡಿಎಸ್‌ಗೆ ಈ ಬಾರಿ ತಕ್ಕ ಪಾಠ ಕಲಿಸಬೇಕು ಎಂದು ಐಟಿಬಿಟಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಕರೆ ನೀಡಿದರು.
ಮಂಡ್ಯದಲ್ಲಿರುವ ಬಾಲಕರ ಸರ್ಕಾರಿ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಜನಸಂಕಲ್ಪ ಸಮಾವೇಶದಲ್ಲಿ ಮಾತನಾಡಿದರು.
ಸಿಎಂ ಯಡಿಯೂರಪ್ಪ ಅವರನ್ನು ಕೊಟ್ಟ ನಾಡು ಮಂಡ್ಯ. ಆದರೆ ಇದು ಆರ್ಥಿಕ- ಸಾಮಾಜಿಕ- ಅಭಿವೃದ್ಧಿ ವಿಚಾರದಲ್ಲಿ ಹಿನ್ನಡೆ ಕಂಡಿದೆ. ಅವಕಾಶ ಕೊಟ್ಟ ಜನರಿಗೆ ಜೆಡಿಎಸ್ ನಾಯಕರು ಕಥೆಗಳನ್ನು ಹೇಳಿಕೊಂಡು ನಂಬಿಕೆದ್ರೋಹ ಮಾಡಿದ್ದಾರೆ. ಮೈಶುಗರ್ ಮುಚ್ಚಿದ್ದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಹಳೆ ಮೈಸೂರಿಗೆ ಜೆಡಿಎಸ್ ಪಕ್ಷ ಅನ್ಯಾಯ ಮಾಡಿತ್ತು ಎಂದು ಟೀಕಿಸಿದರು.
ಕಣ್ಣೀರು, ನಾಟಕ ಮಾಡುತ್ತ ಬಂದ ಜೆಡಿಎಸ್ ಪಕ್ಷಕ್ಕೆ ಈ ಬಾರಿ ಪಾಠ ಕಲಿಸಬೇಕು. ಕಾಂಗ್ರೆಸ್- ಜೆಡಿಸ್‌ಗಳು ಕುಟುಂಬಕ್ಕೆ ಸೀಮಿತ ಪಕ್ಷಗಳು. ಹಿಂದುತ್ವಕ್ಕೆ ಗೌರವ ನೀಡದ ಪಕ್ಷಗಳಿವು. ಆದ್ದರಿಂದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ಕೊಡಲು 2023ರ ಚುನಾವಣೆಯಲ್ಲಿ ಮಂಡ್ಯ- ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ಆನಂತರ ಸಚಿವ ಕೆ.ಸಿ. ನಾರಾಯಣಗೌಡ ಮಾತನಾಡಿದರು. ಭಾಷಣದ ಪ್ರಾರಂಭದಲ್ಲಿ ವಿಜಯೇಂದ್ರ ಗುಣಗಾನ ಮಾಡಿದ ಸಚಿವ ನಾರಾಯಣಗೌಡ, ಕೆ. ಆರ್. ಪೇಟೆಯಲ್ಲಿ ನನ್ನ ಗೆಲ್ಲಿಸಲು ಹಗಲು ಇರಳು ಕೆಲಸ ಮಾಡಿದ್ದು ವಿಜಯೇಂದ್ರಣ್ಣ ಎಂದರು. ಮಂಡ್ಯದಲ್ಲಿ ಬಿಜೆಪಿ ಗೆಲ್ಲುವುದಿಲ್ಲ ಎಂದು ವಿರೋಧ ಪಕ್ಷದವರು ಹಠ ತೊಟ್ಟಿದ್ದರು. ಆದರೆ ಯಡಿಯೂರಪ್ಪನವರ ಆಶೀರ್ವಾದದಿಂದ ನಾನು ಜಿಲ್ಲೆಯಲ್ಲೇ ಮೊದಲು ಗೆದ್ದಿದ್ದೇನೆ. ಇವತ್ತಿನಿಂದ ಮಂಡ್ಯ ಜಿಲ್ಲೆಗೆ ಅದೃಷ್ಟ ಬಂದಿದೆ. ಭದ್ರಕೋಟೆಯನ್ನು ಒಡೆದು ಆಗಿದೆ, ಇನ್ನು ಏನಿದ್ದರೂ ಚೂರು ಚೂರು ಮಾಡೋದೊಂದೆ ಬಾಕಿ. ನನ್ನ ಮನೆಗೆ ಬೆಂಕಿ ಹಾಕಿ ಕಲ್ಲು ಹೊಡೆದಿದ್ದರು. ಇವರ ಗೂಂಡಾಗಿರಿ, ಬೆದರಿಕೆಗಳಿಗೆಲ್ಲ ನಾವು ಹೆದರುವುದಿಲ್ಲ. ಇಲ್ಲಿ ನಾಲ್ಕು ಸ್ಥಾನ ಗೆದ್ದು, ಇವರ ಮುಖಕ್ಕೆ ಮಸಿ ಬಳಿಯೋಣ ಎಂದರು.