ಬೆಂಗಳೂರು: ಕೇಂದ್ರ ಗೃಹ ಸಚಿವ, ಬಿಜೆಪಿ ರಾಷ್ಟ್ರೀಯ ನಾಯಕ ಅಮಿತ್ ಶಾ ಅವರು ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ತಂಗಿದ್ದ ಪ್ರತಿಷ್ಠಿತ ತಾಜ್ ವೆಸ್ಟ್ ಎಂಡ್ ಹೋಟೆಲ್ ೨೫೦೦ ಪೊಲೀಸರ ಬಿಗಿ ಸರ್ಪಗಾವಲನ್ನೇ ವ್ಯವಸ್ಥೆ ಮಾಡಲಾಗಿತ್ತು. ಅಮಿತ್ ಶಾ ಅವರಿಗೆ ಝಡ್ ಪ್ಲಸ್ ಕೆಟಗರಿಯ ಭದ್ರತೆ ಇರುವುದರಿಂದ ಸಾಕಷ್ಟು ಭದ್ರತಾ ವ್ಯವಸ್ಥೆಗಳು ಇರುತ್ತವೆ. ಆದರೆ, ಇವುಗಳನ್ನು ಮೀರಿ ಹೆಚ್ಚುವರಿ ಭದ್ರತಾ ವ್ಯವಸ್ಥೆ ಮಾಡಿದ್ದು ಕಂಡುಬಂತು.
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಬಳಿಕ ರಾಜ್ಯದ ಬಿಜೆಪಿ ಮತ್ತು ಹಿಂದು ಕಾರ್ಯಕರ್ತರಲ್ಲಿ ಪಕ್ಷದ ನಾಯಕರ ಬಗ್ಗೆ ಅಸಹನೆ ಹೆಚ್ಚಾಗಿದೆ. ಹಲವು ಕಡೆಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಹಲವು ಪದಾಧಿಕಾರಿಗಳು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಈ ನಡುವೆ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಜಯಮಹಲ್‌ನಲ್ಲಿರುವ ಮನೆಗೇ ಎಬಿವಿಪಿ ಪದಾಧಿಕಾರಿಗಳು ಮುತ್ತಿಗೆ ಹಾಕಿದ್ದರು. ಇದನ್ನೆಲ್ಲ ಗಮನಿಸಿಕೊಂಡು ಅಮಿತ್ ಶಾ ಭೇಟಿಯ ವೇಳೆ ಕಟ್ಟೆಚ್ಚರ ವಹಿಸಲಾಗಿದೆ ಎಂದು ತಿಳಿದುಬಂದಿದೆ.
ಯಾವುದಾದರೂ ಸಂಘಟನೆ ಕಾರ್ಯಕರ್ತರು ಅಮಿತ್ ಶಾ ಅವರ ಗಮನ ಸೆಳೆಯಲು ಹೋಟೆಲ್ ಪರಿಸರದಲ್ಲಿ ಪ್ರತಿಭಟನೆಗೆ ಮುಂದಾಗಬಹುದು. ಅನಗತ್ಯ ಕಿರಿಕಿರಿಗಳನ್ನು ಮಾಡಬಹುದು ಎಂಬ ಗುಮಾನಿಯಿಂದ ಭದ್ರತೆ ವಿಚಾರದಲ್ಲಿ ಭಾರಿ ಎಚ್ಚರ ವಹಿಸಲಾಗಿದೆ ಎನ್ನಲಾಗಿದೆ.
ಹೇಗಿತ್ತು ಭದ್ರ ಕೋಟೆ?
7 ಮಂದಿ ಡಿಸಿಪಿಗಳ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. 18 ಎಸಿಪಿ, 53 ಇನ್ಸ್‌ಪೆಕ್ಟರ್‌ಗಳು, 147 ಸಬ್ ಇನ್ಸ್‌ಪೆಕ್ಟರ್‌ಗಳು, 180 ಎಎಸ್ ಐ, 1162 ಹೆಡ್ ಕಾನ್‌ಸ್ಟೇಬಲ್‌ಗಳು ,15 ಕೆಎಸ್ ಆರ್ ಪಿ ಬೆಟಾಲಿಯನ್ ನಿಯೋಜನೆ ನಿಯೋಜನೆ ಮಾಡಲಾಗಿತ್ತು. 3 ಕೆಎಸ್ಆರ್‌ಪಿ ತುಕಡಿ, ಬಾಂಬ್ ನಿಷ್ಕ್ರಿಯ ದಳ, ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗಿತ್ತು. ಇವೆಲ್ಲವೂ ಝಡ್ ಪ್ಲಸ್ ಕೆಟಗರಿಯಲ್ಲಿ ಬರುವ ಪ್ರಧಾನ ರಕ್ಷಣಾ ವ್ಯವಸ್ಥೆಯನ್ನು ಹೊರತುಪಡಿಸಿ ನಿಯೋಜಿಸಿದ ಪೊಲೀಸ್ ಬಲ.
ರಾತ್ರಿಯಿಂದಲೇ ಕಟ್ಟೆಚ್ಚರ
ಅಮಿರ್ ಶಾ ಅವರು ಬುಧವಾರ ರಾತ್ರಿ ದಿಲ್ಲಿಯಿಂದ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ತಾಜ್ ವೆಸ್ಟ್ ಎಂಡ್‌ಗೆ ಬಂದು ವಾಸ್ತವ್ಯ ಹೂಡಿದ್ದರು. ಬೆಳಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಬಿಜೆಪಿ ನಾಯಕರ ತಂಡ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಜತೆ ಮಾತುಕತೆ ನಡೆಸಿ ರಾಜ್ಯದ ರಾಜಕೀಯ ಮತ್ತು ಕಾನೂನು ಸುವ್ಯವಸ್ಥೆ ಬಗ್ಗೆ ಅವಲೋಕನ ನಡೆಸಿದ್ದರು.
ಬೆಳಿಗ್ಗೆ 11 ಗಂಟೆಗೆ ತಾಜ್ ವೆಸ್ಟ್ ಎಂಡ್‌ನಲ್ಲಿ ನಡೆದ ಸಂಕಲ್ಪ್ ಸೇ ಸಿದ್ಧಿ ಕಾರ್ಯಕ್ರಮದಲ್ಲಿ ಭಾಗಿಯಾದರು. ಮಧ್ಯಾಹ್ನ ಭೋಜನ ಮುಗಿಸಿದ ಅವರು ಯಲಹಂಕದ ಮದರ್ ಡೈರಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಮದರ್ ಡೈರಿ ಬಳಿಯೂ ಭದ್ರತೆಯ ಕಾರಣಕ್ಕಾಗಿ ಅಕ್ಕ ಪಕ್ಕದ ಅಂಗಡಿಗಳು, ವಾಹನಗಳನ್ನು ತೆರವುಗೊಳಿಸಲಾಗಿದೆ. ಬಳಿಕ ಬಿಗಿ ಭದ್ರತೆಯ ಮೂಲಕ ಅವರು ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ತೆರಳಿ ದಿಲ್ಲಿಗೆ ಹಾರಿದರು.
ಇದನ್ನೂ ಓದಿ| Amit shah in state | ಸರಕಾರದ ನಡೆ ಬಗ್ಗೆ ಅಮಿತ್ ಶಾಗೆ ತೃಪ್ತಿ ಎಂದ ಆರಗ ಜ್ಞಾನೇಂದ್ರ