ಬೆಂಗಳೂರು: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಏಕೆ ಟಿಕೆಟ್ ನೀಡಿಲ್ಲ ಎನ್ನುವುದನ್ನು ಅವರಿಗೆ ತಿಳಿಸಲಾಗಿದೆ ಎಂದಿರುವ ಕೇಂದ್ರ ಗೃಹಸಚಿವ ಅಮಿತ್ ಶಾ, (Amit Shah) ಸ್ವತಃ ಶೆಟ್ಟರ್ ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ ಸೋಲಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮಿತ್ ಶಾ, ಜಗದೀಶ ಶೆಟ್ಟರ್ ಹೋಗಿದ್ದರಿಂದ ಯಾವುದೇ ನಷ್ಟ ಆಗುವುದಿಲ್ಲ. ಸ್ವತಃ ಜಗದೀಶ ಶೆಟ್ಟರ್ ಚುನಾವಣೆಯಲ್ಲಿ ಸೋಲುತ್ತಾರೆ. ಹುಬ್ಬಳ್ಳಿ ಯಾವಾಗಲೂ ಪಕ್ಷಕ್ಕೆ ಮತ ನೀಡಿದೆಯೇ ಹೊರತು ವ್ಯಕ್ತಿಗಲ್ಲ. ಬಿಜೆಪಿ ಕಾರ್ಯಕರ್ತ ಒಟ್ಟಾಗಿ ಪಕ್ಷವನ್ನು ಗೆಲ್ಲಿಸುತ್ತಾರೆ. ಶೆಟ್ಟರ್ ಒಬ್ಬರನ್ನು ಮಾತ್ರವಲ್ಲ, ಅನೇಕರನ್ನು ಕೈಬಿಡಲಾಗಿದೆ. ಶೆಟ್ಟರ್ ಅವರೊಬ್ಬರನ್ನೇ ಬಿಟ್ಟಿಲ್ಲ. ಲಿಂಗಾಯತ ಸಮುದಾಯ ಈಗಾಗಲೆ ಬಿಜೆಪಿ ಜತೆಗಿದೆ ಎಂದರು.
ಯಾವ ಕಾರಣಕ್ಕೆ ಶೆಟ್ಟರ್‌ಗೆ ಟಿಕೆಟ್ ನೀಡಲಿಲ್ಲ ಎಂಬ ಕುರಿತು ಪ್ರತಿಕ್ರಿಯಿಸಿ, ಇದಕ್ಕೆ ಕಾರಣವನ್ನು ಶೆಟ್ಟರ್‌ಗೆ ಹೇಳಲಾಗಿದೆ. ಕಾರ್ಯಕರ್ತರ ಜತೆಗೆ ಆಡಿದ ಮಾತನ್ನು ನಾವು ಹೊರಗೆ ಹೇಳುವುದಿಲ್ಲ. ಹಾಗೊಂದು ವೇಳೆ ಮತದಾರರಿಗೆ ಇದರ ಬಗ್ಗೆ ಗೊಂದಲ ಇದ್ದರೆ ಮತದಾರರಿಗೇ ತಿಳಿಸುತ್ತೇವೆ. ಮಾಧ್ಯಮಗಳಿಗೆ ಹೇಳುವುದಿಲ್ಲ ಎಂದರು.
ಒಂದು ಜಾಗದಲ್ಲಿಯೂ ಲಿಂಗಾಯತರನ್ನು ಬದಲಾಯಿಸಿ ಬೇರೆಯವರಿಗೆ ಟಿಕೆಟ್ ನೀಡಿಲ್ಲ. ನಮ್ಮಿಂದ ಒಂದಿಬ್ಬರು ಲಿಂಗಾಯತರು ಹೋದ ಕೂಡಲೆ ಕಾಂಗ್ರೆಸ್ ಬಾಯಲ್ಲಿ ನೀರು ಬರುತ್ತಿದೆ. ಕಾಂಗ್ರೆಸ್ ಇಬ್ಬರು ಲಿಂಗಾಯತರ ಸಿಎಂಗಳಿಗೂ ಅಪಮಾನ ಮಾಡಿದೆ. ಆದರೆ ಬಿಜೆಪಿ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಕೆಲಸ ಮಾಡುತ್ತಿದೆ ಎಂದರು.
ಕರ್ನಾಟಕದಲ್ಲಿ ಬಿಜೆಪಿ ಬಿ.ಎಲ್. ಸಂತೋಷ್ ಹಾಗೂ ಕೆಲವರ ಮುಷ್ಠಿಯಲ್ಲಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯಿಸಿ, ಇಲ್ಲಿವರೆಗೆ ಯಾರ ಮುಷ್ಠಿಯಲ್ಲಿತ್ತೋ ಅವರ ಕೈಯಲ್ಲೇ ಇದೆ. ಬಿಜೆಪಿ ಒಂದು ತಂಡವಾಗಿ ಕೆಲಸ ಮಾಡುತ್ತದೆ, ಒಂದಿಬ್ಬರ ಕೈಯಲ್ಲಿ ಇರುವುದಿಲ್ಲ ಎಂದು ಹೇಳಿದರು.
ಎಸ್‌ಡಿಪಿಐ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿದೆ ಎಂಬ ಕುರಿತು ಪ್ರತಿಕ್ರಿಯಿಸಿ, ಎಸ್‌ಡಿಪಿಐ ರಾಜಕೀಯ ಪಕ್ಷ. ಕಾಂಗ್ರೆಸ್‌ಗೆ ಚುನಾವಣೆ ಗೆಲ್ಲುವುದೇ ಮುಖ್ಯವೇ ಹೊರತು ಸುರಕ್ಷಿತ ಕರ್ನಾಟಕವಲ್ಲ ಎಂದರು.
ಬಿಜೆಪಿ ಪಟ್ಟಿಯಲ್ಲೂ ಕುಟುಂಬದ ಹಿನ್ನೆಲೆಯವರಿದ್ದಾರೆ ಎಂಬ ಕುರಿತು ಪ್ರತಿಕ್ರಿಯಿಸಿ, ನಮ್ಮಲ್ಲಿ ಅದು ಇಲ್ಲ. ಪರಿವಾರದ ಆಧಾರದಲ್ಲಿ ಬಿಜೆಪಿ ಅಧ್ಯಕ್ಷ ಹಾಗೂ ಸಿಎಂ ಮಾಡುವುದಿಲ್ಲ. ನಮ್ಮಲ್ಲಿ ಕುಟುಂಬದವರಿಗೆ ಟಿಕೆಟ್ ನೀಡಿದ್ದೇವೆ, ಆದರೆ ಅವರಿಗೇ ಪಕ್ಷವನ್ನು ಒಪ್ಪಿಸಿಲ್ಲ ಎಂದು ಹೇಳಿದರು.
ಕರ್ನಾಟಕದಲ್ಲಿ ಪೂರ್ಣ ಬಹುಮತದೊಂದಿಗೆ ಸುಸ್ಥಿರ ಸರ್ಕಾರ ರಚಿಸುವ ವಿಶ್ವಾಸದೊಂದಿಗೆ ಚುನಾವಣೆ ಎದುರಿಸುತ್ತಿದೆ. ಬಿಜೆಪಿಯ ಡಬಲ್ ಎಂಜಿನ್ ಸರ್ಕಾರದ ಲಾಭಗಳನ್ನು ಜನರಿಗೆ ತಿಳಿಸುವ ಮೂಲಕ ಚುನಾವಣೆ ಎದುರಿಸುತ್ತಿದೆ.
ಅನಧಿಕೃತವಾಗಿ ತುಷ್ಟೀಕರಣ ರಾಜನೀತಿಯನ್ನು ಮುಂದುವರಿಸಲು ಕಾಂಗ್ರೆಸ್ ನೀಡಿದ್ದ ಮೀಸಲಾತಿಯನ್ನು (ಮುಸ್ಲಿಂ ಮೀಸಲಾತಿ) ತೆಗೆದುಹಾಕಿ ಎಸ್‌ಸಿಎಸ್‌ಟಿ, ಲಿಂಗಾಯತ, ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ನೀಡಿ ಸಾಮಾಜಿಕ ನ್ಯಾಯ ಎತ್ತಿಹಿಡಿದಿದೆ. ಧಾರ್ಮಿಕ ಮೀಸಲಾತಿ ಅಸಾಂವಿಧಾನಿಕವಾದದ್ದು. ಆದರೆ ಕಾಂಗ್ರೆಸ್ ಓಟ್‌ಗಾಗಿ ಇದನ್ನು ಮುಂದುವರಿಸಿತು. ಕರ್ನಾಟಕ ತನ್ನ ಏಳಿಗೆಗೆ ಎಟಿಎಂಗಾಗಿ ಹುಡುಕುತ್ತಿದೆ.
ಮೀಸಲಾತಿ ವಿಚಾರ ನ್ಯಾಯಾಲಯದಲ್ಲಿದೆ. ಆದರೆ ಬಿಜೆಪಿ ಸರ್ಕಾರ ಈ ಮೀಸಲಾತಿಯನ್ನು ಜಾರಿ ಮಾಡುವುದರಲ್ಲಿ ಹಿಂದೆ ಬೀಳುವುದಿಲ್ಲ. ಕಾಂಗ್ರೆಸ್ ಮತ್ತೆ ಮುಸ್ಲಿಮರಿಗೆ ಮೀಸಲಾತಿ ನೀಡುತ್ತಿದ್ದೇನೆ ಎನ್ನುತ್ತಿದೆ, ಇದಕ್ಕೆ ಕಾಂಗ್ರೆಸ್ ಉತ್ತರಿಸಬೇಕು.
ಇನ್ನೊಂದೆಡೆ ಜೆಡಿಎಸ್ ಕುಟುಂಬದ ಪಕ್ಷವಾಗಿದ್ದು, ಮೇಲ್ನೋಟಕ್ಕೆ ಕಾಂಗ್ರೆಸ್ ವಿರುದ್ಧ ಚುನಾವಣೆ ನಡೆಸುತ್ತದೆ. ಆದರೆ ಚುನಾವಣೆ ನಂತರ ಕಾಂಗ್ರೆಸ್ ಜತೆಗೇ ಹೋಗುತ್ತದೆ. ಹಾಗಾಗಿ ಕರ್ನಾಟಕದ ಸರ್ವಾಂಗೀಣ ವಿಕಾಸಕ್ಕೆ ಹಾಗೂ ಬಡತನವನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಬಿಜೆಪಿ ಸರ್ಕಾರಕ್ಕೆ ರಾಜ್ಯದ ಜನರ ಮತ ನೀಡಬೇಕು.
ಬಿಜೆಪಿ ಸರ್ಕಾರವು ಪಿಎಫ್‌ಐ ಬ್ಯಾನ್ ಮಾಡಿದೆ, ಮುಖ್ಯವಾದವರನ್ನು ಬಂಧಿಸಿದೆ, ಎನ್‌ಐಎ ತನಿಖೆ ನಡೆಯುತ್ತಿದೆ. ದೇಶವಿರೋಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಪಿಎಫ್‌ಐ ಕಾರ್ಯಕರ್ತರಿಗೆ ವಿಶೇಷ ಕಾಳಜಿ ವಹಿಸಲಾಗುತ್ತಿತ್ತು. ಆದರೆ ನಾವು ಸಂಪೂರ್ಣ ನಿಯಂತ್ರಣ ಹೇರಿದ್ದೇವೆ.
ಕಿತ್ತೂರು ಕರ್ನಾಟಕಕ್ಕೆ ಕಾಂಗ್ರೆಸ್ ಯಾವಾಗಲೂ ಅಪಮಾನ ಮಾಡಿದೆ. ಈ ಹಿಂದೆ ಕೇಂದ್ರ, ಕರ್ನಾಟಕ ಹಾಗೂ ಗೋವಾದಲ್ಲಿ ಬಿಜೆಪಿ ಸರ್ಕಾರವಿದ್ದಾಗಲೂ ಮಹದಾಯಿ ಸಮಸ್ಯೆಯನ್ನು ಬಗೆಹರಿಸಲಿಲ್ಲ. ನವಲಗುಂದದಲ್ಲಿ ಹೋರಾಟಗಾರರ ಮೇಲೆ ಗುಂಡು ಹಾರಿಸಲಾಗಿತ್ತು. ನಾವು ಈ ವಿವಾದಕ್ಕೆ ಪರಿಹಾರ ನೀಡಲು ಪ್ರಯತ್ನಿಸಿದ್ದೇವೆ.
ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ., ಕೃಷ್ಣಾ ಯೋಜನೆಗೆ 5,000 ಕೋಟಿ ರೂ., ಕಳಸಾ ಬಂಡೂರಿಗೆ 1,000 ಕೋಟಿ ರೂ. ಅನುದಾನ ನೀಡಿದೆ. ಇದರ ಜತೆಗೆ ಏಳು ನಗರಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಆಯ್ಕೆ ಮಾಡಲಾಗಿದೆ. ಇದರಲ್ಲಿ ಹುಬ್ಬಳ್ಳಿ-ಧಾರವಾಡ ಸಹ ಇದೆ.
ಕೆರೂರು ಏತ ನೀರಾವರಿ ಯೋಜನೆ, ಬೆಳಗಾವ-ಧಾರವಾಡ ರೈಲ್ವೆ, ಬಾಗಲಕೋಟೆ-ಕುಡಚಿ ರೈಲ್ವೆ, ಕಿದ್ವಾಯಿ ಕ್ಯಾಣ್ಸರ್ ಕೇಂದ್ರ, ಹಾವೇರಿಯಲ್ಲಿ ಹೊಸ ಮೆಡಿಕಲ್ ಕಾಲೇಜು, ಶೀಗ್ಗಾಂವಿಯಲ್ಲಿ ಟೆಕ್ಸ್‌ಟೈಲ್ ಪಾರ್ಕ್ ಸೇರಿ ಅನೇಕ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಇದರಿಂದ ಸಾವಿರಾರು ಯುವಕರಿಗೆ ಉದ್ಯೋಗ ದೊರಕಲಿದೆ ಎಂದರು.
ಇದನ್ನೂ ಓದಿ: Amit Shah: ಲಿಂಗಾಯತ, ಒಕ್ಕಲಿಗರ ಮೀಸಲಾತಿ ಕಿತ್ತು ಮುಸ್ಲಿಮರಿಗೆ ಕೊಡುತ್ತೀರಾ?; ಕಾಂಗ್ರೆಸ್‌ಗೆ ಅಮಿತ್ ಶಾ ಪ್ರಶ್ನೆ