Site icon Vistara News

Karnataka Election: ಗೆದ್ದ ಕಡೆ ಅಭಿವೃದ್ಧಿ ಮಾಡದೇ ಇದ್ದಿದ್ದಕ್ಕೆ ಸಿದ್ದರಾಮಯ್ಯರಿಂದ ಕ್ಷೇತ್ರ ಬದಲಾವಣೆ: ಅಮಿತ್‌ ಶಾ

Amit shah says Siddaramaiah changes constituency in every election for not developing

Amit shah says Siddaramaiah changes constituency in every election for not developing

ಮೈಸೂರು: ಸಿದ್ದರಾಮಯ್ಯ ಅವರೇ ಪ್ರತಿ ಬಾರಿ ಯಾಕೆ ಕ್ಷೇತ್ರ ಬದಲಿಸುತ್ತೀರಿ? ಚಾಮುಂಡೇಶ್ವರಿ, ಬಾದಾಮಿ, ವರುಣ ಅಂತ ಯಾಕೆ ಓಡಾಡುತ್ತೀರಿ? ಅಭಿವೃದ್ಧಿ ಮಾಡದ ಕಾರಣಕ್ಕೆ ಕ್ಷೇತ್ರ ಬದಲಾಯಿಸುತ್ತಿದ್ದೀರಿ. ಮತದಾರರೇ ಚುನಾವಣೆಯಲ್ಲಿ (Karnataka Election) ನಿವೃತ್ತಿ ಪಡೆಯುವ ಅಭ್ಯರ್ಥಿ ಬೇಕಾ ಅಥವಾ ಕೆಲಸ ಮಾಡುವ ಅಭ್ಯರ್ಥಿ ಬೇಕಾ ಆಯ್ಕೆ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕಿಡಿಕಾರಿದರು.

ವರುಣ ಕ್ಷೇತ್ರದ ಹೊಸಕೋಟೆ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ದೇಶವನ್ನು ಅಭಿವೃದ್ಧಿ ಮಾಡುತ್ತಿದ್ದಾರೆ. ಕಾಂಗ್ರೆಸ್ ದೇಶವನ್ನು ಸುರಕ್ಷಿತ, ಸಮೃದ್ಧವಾಗಿ ಇಡುತ್ತಾ? ಕಾಂಗ್ರೆಸ್ ಭ್ರಷ್ಟಾಚಾರ ಮುಕ್ತ, ಅಭಿವೃದ್ಧಿ ಮಾಡಲು ಆಗುತ್ತಾ? ಹಾಗಿದ್ದರೆ ವರುಣದಲ್ಲಿ ಸಿದ್ದರಾಮಯ್ಯ ಅವರಿಗೆ ಯಾಕೆ ಮತ ಹಾಕುತ್ತೀರಾ? ವರುಣದಲ್ಲಿ ಸೋಮಣ್ಣ ಅವರನ್ನು ಗೆಲ್ಲಿಸಿದರೆ ಕ್ಷೇತ್ರವನ್ನು ಮಾದರಿ ತಾಲೂಕಾಗಿ ಅಭಿವೃದ್ಧಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

ವರುಣ ಚುನಾವಣೆಗೆ ಅತ್ಯಂತ ಪ್ರಾಮುಖ್ಯತೆ ಇದೆ. ವಿ.ಸೋಮಣ್ಣ ಅವರನ್ನು ಗೆಲ್ಲಿಸಿ ಕಳುಹಿಸಿ. ಅವರನ್ನು ದೊಡ್ಡ ವ್ಯಕ್ತಿ ಮಾಡುತ್ತೇವೆ. ಸೋಮಣ್ಣ, ಟಿ.ನರಸೀಪುರ ಅಭ್ಯರ್ಥಿ ಡಾ.ರೇವಣ್ಣ ಅವರಿಗೆ ನೀಡುವ ಮತ ಮೈಸೂರನ್ನು ಸುರಕ್ಷಿತವಾಗಿ ಇಡುತ್ತದೆ. ಕರ್ನಾಟಕ ಸಮೃದ್ಧ, ಸುರಕ್ಷಿತ ರಾಜ್ಯವಾಗಿಸಲು ನರೇಂದ್ರ ಮೋದಿ ಅವರಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಇದನ್ನೂ ಓದಿ | Karnataka Election 2023: ಏಳು ಸುತ್ತಿನ ಕೋಟೆಯಂತೆ ಬಿಜೆಪಿಯ ಏಳು ಸುರಕ್ಷತೆಯ ಯೋಜನೆಗಳು; ಪ್ರಧಾನಿ ಮೋದಿ ಬಣ್ಣನೆ

ಪಿಎಫ್‌ಐ ಬ್ಯಾನ್ ಮಾಡಬೇಕಿತ್ತೇ ಬೇಡವೇ? ಸಿದ್ದರಾಮಯ್ಯ ಗೆದ್ದರೆ ಪಿಎಫ್‌ಐ ಮೇಲಿನ ಮೇಲಿನ ನಿಷೇಧ ತೆಗೆಯುತ್ತಾರೆ. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಕರ್ನಾಟಕವನ್ನು ಎಟಿಎಂ ಮಾಡಿಕೊಳ್ಳಲಾಗಿತ್ತು. ಅವರು ಭ್ರಷ್ಟಾಚಾರ ಬಿಟ್ಟು ಬೇರೇನೂ ಮಾಡಲಿಲ್ಲ. ದೇಶದಲ್ಲೇ ಭ್ರಷ್ಟ ಸರ್ಕಾರ ಸಿದ್ದರಾಮಯ್ಯ ಸರ್ಕಾರ ಆಗಿತ್ತು. ಆದರೆ, ಸಿದ್ದರಾಮಯ್ಯ ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟರು ಎಂದು ಹೇಳಿದ್ದಾರೆ. ಯಡಿಯೂರಪ್ಪ ರೈತ ಬಜೆಟ್ ನೀಡಿದ್ದರು. ಬೊಮ್ಮಾಯಿ ಸರ್ಕಾರ ರಾಜ್ಯದ ಅಭಿವೃದ್ಧಿ ಮಾಡಿದೆ ಎಂದು ಹೇಳಿದರು.

ಕಾಂಗ್ರೆಸ್ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ ಅವರಿಗೆ ಅಪಮಾನ ಮಾಡಿತ್ತು. ಈಗ ಸಿದ್ದರಾಮಯ್ಯ ಲಿಂಗಾಯತರಿಗೆ ಅಪಮಾನ ಮಾಡಿದ್ದಾರೆ. ನಾವು ಲಿಂಗಾಯತರಿಗೆ ನೀಡಿರುವ ಮೀಸಲಾತಿಯನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತೆಗೆಯುತ್ತಾರೆ. ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಮಾಡಿರುವುದನ್ನು ತೆಗೆದು ಹಾಕುತ್ತಾರೆ. ಅವರಿಗೆ ತುಷ್ಟೀಕರಣ ಬಿಟ್ಟು ಬೇರೇನೂ ಗೊತ್ತಿಲ್ಲ ಎಂದು ಕಿಡಿಕಾರಿದರು.

ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ವಿ. ಶ್ರೀನಿವಾಸ ಪ್ರಸಾದ್ ಅವರ ಆಶೀರ್ವಾದ ನಮ್ಮೆಲ್ಲರ ಮೇಲಿದೆ. ಮೊನ್ನೆ ಮಂಡಿಸಿದ ಪ್ರಣಾಳಿಕೆಯಲ್ಲಿ ವಿಧವೆಯರ ಮಾಸಾಶನ 800 ರೂ. ನಿಂದ 2000ಕ್ಕೆ ಏರಿಸಿದ್ದೇವೆ.
ಮೂರು ಸಿಲಿಂಡರ್ ಉಚಿತ, ಪ್ರತಿ ದಿನ ಅರ್ಧ ಲೀಟರ್ ಹಾಲು, 5 ಕಿ.ಮೀ. ಸಿರಿಧಾನ್ಯ ನೀಡಲು ತೀರ್ಮಾನಿಸಿದ್ದೇವೆ.
ವಿ.ಸೋಮಣ್ಣ ಎಂತಹ ಕೆಲಸಗಾರ ಅಂತ ಎಲ್ಲರಿಗೂ ಗೊತ್ತು. ವರುಣ ಕ್ಷೇತ್ರದಲ್ಲಿ ಸೋಮಣ್ಣ 20- 25 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ‌ ಎಂದು ಹೇಳಿದರು.

ಇದನ್ನೂ ಓದಿ | dk shivakumar : ಹೆಲಿಕಾಪ್ಟರ್‌ ಅಪಘಾತ; ಡಿ ಕೆ ಶಿವಕುಮಾರ್‌ ಸ್ವಲ್ಪದರಲ್ಲಿಯೇ ಪಾರು

ವರುಣ ಅಭ್ಯರ್ಥಿ ವಿ.ಸೋಮಣ್ಣ ಮಾತನಾಡಿ, ನಾನು ವರುಣಕ್ಕೆ ಬಂದು ನಿಲ್ಲಲು ಅಮಿತ್ ಶಾ, ನರೇಂದ್ರ ಮೋದಿ, ಯಡಿಯೂರಪ್ಪ ಕಾರಣ. ಪ್ರತಿಪಕ್ಷ ನಾಯಕರಿಗೆ ನನ್ನ ಪ್ರಶ್ನೆ ಇಷ್ಟೆ. ನನ್ನನ್ನು ಬಿಟ್ಟು ಬೇರೆ ಇಲ್ಲ ಎನ್ನುತ್ತೀರಿ. ಸಿದ್ದರಾಮಯ್ಯ ಸಾಹೇಬರೇ, 15 ವರ್ಷದಿಂದ ನೀವು ಹಾಗೂ ಮಗ ಶಾಸಕರಾಗಿದ್ದೀರಿ. ಆಡಳಿತಾತ್ಮಕ ಕೆಲಸಗಳಿಗೆ ನಂಜನಗೂಡು, ತಿ.ನರಸೀಪುರ, ಮೈಸೂರಿಗೆ ಹೋಗಬೇಕು. ಎಲ್ಲವನ್ನೂ ಒಂದೇ ಸೂರಿನಡಿ ತರಲು ಸಾಧ್ಯವಾಯಿತೇ ಎಂದು ಕಿಡಿಕಾರಿದರು.

ಹಳ್ಳಿಹಳ್ಳಿ ಜನ ನಿಮಗೆ ವೋಟು ಕೊಟ್ಟಿದ್ದಾರೆ. ಯುವಕರಿಗೆ ಉದ್ಯೋಗ ಇದೆಯೋ ಇಲ್ಲವೋ ಎಂದು ನೋಡಿದ್ದೀರಾ? ಯಾರನ್ನು ಹೇಗೆ ಹೆದರಿಸಿ ಗುಂಪುಗಾರಿಕೆ ಮಾಡಿದ್ದೀರಿ ಎಂದು ನೋಡಿದ್ದೇನೆ. ನಾನು ಪ್ರಚಾರಕ್ಕೆ ಹೋದಾಗ ಅಡ್ಡಿಪಡಿಸಿದ್ದಾರೆ. ಇದು ಪ್ರಜಾಪ್ರಭುತ್ವವಾ? ಸಿದ್ದರಾಮಯ್ಯ ಅವರಿಗೆ 15 ವರ್ಷ ಅಧಿಕಾರ ಕೊಟ್ಟಿದ್ದೀರಿ. ನನಗೆ ಒಂದೇ ಒಂದು ಅವಕಾಶ ಕೊಡಿ. ವರುಣವನ್ನು ಗೋವಿಂದರಾಜನಗರದಂತೆ ಅಭಿವೃದ್ಧಿ ಮಾಡುತ್ತೇನೆ ಎಂದು ಸೋಮಣ್ಣ ಹೇಳಿದರು.

ಇದನ್ನೂ ಓದಿ | Karnataka Election 2023: ಪ್ರಭು ರಾಮ ಆಯ್ತು, ಈಗ ಹನುಮನನ್ನು ಬಂಧಿಸಿಡಲು ಹೊರಟಿದೆ ಕಾಂಗ್ರೆಸ್: ಪಿಎಂ ಮೋದಿ

ನಟ ಶಶಿಕುಮಾರ್ ಮಾತನಾಡಿ, ಕ್ಷೇತ್ರದಲ್ಲಿನ ವಾತಾವರಣ ನೋಡಿದರೆ ಜನರು ಬಿಜೆಪಿ ಅಂತ ಮಾನಸಿಕವಾಗಿ ಫಿಕ್ಸ್ ಆಗಿದ್ದಾರೆ. ಬೆಂಗಳೂರಿನಲ್ಲಿ ಗೋವಿಂದರಾಜನಗರ ಮಾದರಿ ಕ್ಷೇತ್ರ. ಸೋಮಣ್ಣ ಅವರು ಆಸ್ಪತ್ರೆ ಸೇರಿ ಮೂಲ ಸೌಕರ್ಯ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅಂತಹ ಸೋಮಣ್ಣ ಅವರನ್ನು ನಿಮ್ಮ ಮಡಿಲಿಗೆ ಹಾಕಿದ್ದಾರೆ. ಅವರನ್ನು ಮೇ 10ರಂದು ವೋಟು ಹಾಕಿ ಗೆಲ್ಲಿಸಬೇಕು ಎಂದು ಹೇಳಿದರು.

Exit mobile version