ಮಂಡ್ಯ: ಮೆಗಾ ಡೈರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಹಾಗೂ ಸಹಕಾರ ಸಚಿವ ಅಮಿತ್ ಶಾ (amit shah) ಆಡಿತ ಮಾತುಗಳು, ರಾಜ್ಯದ ಪ್ರತಿಷ್ಠಿತ ನಂದಿನಿ ಬ್ರ್ಯಾಂಡ್ ಅಸ್ತಿತ್ವದ ಕುರಿತು ಗೊಂದಲಗಳನ್ನು ಹುಟ್ಟುಹಾಕಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಅಮಿತ್ ಶಾ, ಅಮೂಲ್ ಹಾಗೂ ನಂದಿನಿ ಎರಡೂ ಒಟ್ಟಾಗಿ ಕೆಲಸ ಮಾಡಿದರೆ ಕರ್ನಾಟಕದ ಪ್ರತಿ ಹಳ್ಳಿಯಲ್ಲೂ ಪ್ರಾಥಮಿಕ ಡೇರಿಯನ್ನು ಸ್ಥಾಪನೆ ಮಾಡಬಹುದು ಎಂದರು.
ಇದಕ್ಕಾಗಿ ರಾಷ್ಟ್ರೀಯ ಡೇರಿ ಅಭಿವೃದ್ಧಿ ಅಭಿವೃದ್ಧಿ ಮಂಡಳಿ(ಎನ್‌ಡಿಡಿಬಿ) ಯೋಜನೆಯಲ್ಲಿ ಮೂರು ವರ್ಷದ ಕ್ರಿಯಾ ಯೋಜನೆ ಸಿದ್ಧವಾಗಿದೆ. ದೇಶದೆಲ್ಲೆಡೆ 2 ಲಕ್ಷ ಪ್ರಾಥಮಿಕ ಡೇರಿಗಳು ಸ್ಥಾಪನೆಯಾಗಲಿವೆ. ಈ ಕ್ಷೀರ ಕ್ರಾಂತಿಯಲ್ಲಿ ಎಲ್ಲರೂ ಕೈಜೋಡಿಸಿ ಎಂದರು.
ಮುಂದುವರಿದ ಅಮಿತ್ ಶಾ, ಕೆಎಂಎಫ್‌ಗೆ ಅಗತ್ಯವಿರುವ ಎಲ್ಲ ತಾಂತ್ರಿಕ, ಸಹಕಾರ ಹಾಗೂ ಕಾರ್ಯಪದ್ಧತಿಯ ಸಹಾಯವನ್ನು ನೀಡಲು ಅಮೂಲ್ ಸಿದ್ಧವಾಗಿದೆ. ಎಲ್ಲ ರೀತಿಯಲ್ಲೂ ನಂದಿನಿಯನ್ನು ಬೆಂಬಲಿಸಲಾಗುತ್ತದೆ ಎಂದರು.
ಗುಜರಾತ್ ಹಾಗೂ ಕರ್ನಾಟಕ ಸೇರಿ ದೇಶದ ಎಲ್ಲ ಹಾಲು ಉತ್ಪಾದಕ ರೈತರಿಗೆ ಒಳ್ಳೆಯದಾಗುವ ಕೆಲಸ ಮಾಡಬಹುದಾಗಿದೆ ಎಂದರು.
ಪ್ರಾರಂಭದಲ್ಲಿ, ಅಮೂಲ್ ಹಾಗೂ ನಂದಿನಿ ಒಟ್ಟುಗೂಡಿ ಕರ್ನಾಟಕದಲ್ಲಿ ಎಲ್ಲ ಹಳ್ಳಿಗಳಲ್ಲಿ ಡೇರಿ ಸ್ಥಾಪನೆ ಮಾಡಬಹುದು ಎಂದಿದ್ದ ಅಮಿತ್ ಶಾ, ನಂತರದಲ್ಲಿ ದೇಶಾದ್ಯಂತ ಕಾರ್ಯ ಮಾಡುವ ಇಂಗಿತ ವ್ಯಕ್ತಪಡಿಸಿದರು. ಅವರು ನಿಜವಾಗಿ ಯಾವ ಅರ್ಥದಲ್ಲಿ ಈ ಮಾತುಗಳನ್ನು ಹೇಳಿದ್ದಾರೆ? ಅಮೂಲ್ ಹಾಗೂ ನಂದಿನಿಯನ್ನು ಸೇರಿಸಿ ಹೊಸ ಬ್ರ್ಯಾಂಡ್ ಸೃಜನೆ ಮಾಡಲಾಗುತ್ತದೆಯೇ? ಅಮೂಲ್‌ನಲ್ಲಿ ನಂದಿನಿ ವಿಲೀನವಾಗುತ್ತದೆಯೇ? ರಾಷ್ಟ್ರೀಯ ಮಟ್ಟದಲ್ಲಿ ಅಮೂಲ್ ಹಾಗೂ ನಂದಿನಿ ಒಟ್ಟಿಗೆ ಕೆಲಸ ಮಾಡಲಿವೆಯೇ? ಎಂಬ ಅನೇಕ ಪ್ರಶ್ನೆಗಳ ಕುರಿತು ಚರ್ಚೆ ನಡೆಯುತ್ತಿವೆ.
ಅಕ್ಟೋಬರ್‌ನಲ್ಲಿ ಅಸ್ಸಾಂನಲ್ಲಿ ನಡೆದಿದ್ದ ಈಶಾನ್ಯ ಮಂಡಳಿಯ 70ನೇ ಸಮಗ್ರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಅಮಿತ್ ಶಾ, ಐದು ಬಹುರಾಜ್ಯ ಸಹಕಾರಿ ಸಂಘಗಳನ್ನು ವಿಲೀನಗೊಳಿಸಲಾಗುತ್ತದೆ ಎಂದು ತಿಳಿಸಿದ್ದರು.
ಆನಂತರದಲ್ಲಿ ಕರ್ನಾಟಕದಲ್ಲಿ ಈ ಕುರಿತು ಚರ್ಚೆಗಳು ನಡೆದಿದ್ದವು. ಗುಜರಾತ್‌ನವರಾದ ಅಮಿತ್ ಶಾ, ಅಲ್ಲಿನ ಅಮೂಲ್ ಜತೆಗೆ ನಂದಿನಿಯನ್ನು ವಿಲೀನ ಮಾಡಿ ಅಸ್ತಿತ್ವವನ್ನೇ ಇಲ್ಲವಾಗಿಸುತ್ತಾರೆಯೇ ಎಂಬ ಪ್ರಶ್ನೆಗಳು ಎದ್ದಿದ್ದವು. ಆದರೆ ಆ ರೀತಿ ಯಾವುದೇ ಚರ್ಚೆ ನಡೆದಿಲ್ಲ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಸ್ಪಷ್ಟಪಡಿಸಿದ್ದರು.
ಶುಕ್ರವಾರದ ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರೂ, ನಂದಿನಿ ಮೇಲೆ ಯಾವುದೇ ಧ್ವೇಷ ತೀರಿಸಿಕೊಂಡಿಲ್ಲ ಎಂದು ಅಮಿತ್ ಶಾ ಅವರನ್ನು ಹಾಡಿ ಹೊಗಳಿದರು. ದೇವೇಗೌಡರ ಈ ಮಾತಿನ ಹಿನ್ನೆಲೆಯಲ್ಲೂ, ನಂದಿನಿಯ ಅಸ್ತಿತ್ವದ ಪ್ರಶ್ನೆ ಇದೆಯೇ ಎಂಬ ಚರ್ಚೆ ನಡೆಯುತ್ತಿದೆ.
ಇದನ್ನೂ ಓದಿ | Amit Shah | ಮುಂದಿನ 3 ವರ್ಷದಲ್ಲಿ ದೇಶದ ಎಲ್ಲ ಪಂಚಾಯಿತಿಗಳಲ್ಲಿ ಡೇರಿ ಸ್ಥಾಪನೆ: ಸಚಿವ ಅಮಿತ್ ಶಾ ಭರವಸೆ