ಬೆಂಗಳೂರು: ಭಾರತದ ಸ್ವಾತಂತ್ರ್ಯದ 75ನೇ ವರ್ಷಾಚರಣೆ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜನೆ ಮಾಡಲಾಗಿದ್ದ ʼಅಮೃತ ಭಾರತಿಗೆ ಕನ್ನಡದಾರತಿʼ ಕಾರ್ಯಕ್ರಮಗಳು ರಾಜ್ಯಾದ್ಯಂತ ಶನಿವಾರ ನಡೆದವು. ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟ ನಡೆದ 75 ಸ್ಥಳಗಳ ಕುರಿತು ಇಲಾಖೆ ಈಗಾಗಲೆ 75 ಕೃತಿಗಳನ್ನು ಲೋಕಾರ್ಪಣೆ ಮಾಡಿದ್ದು, ಆ 75 ಸ್ಥಳಗಳಲ್ಲೂ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಿದರು. ʼಯಾವುದೇ ಹೋರಾಟ ಆಗಬೇಕಾದರೆ ಚಿಂತನೆ ಬಹಳ ಮುಖ್ಯ. ಕನ್ನಡಿಗರು ಪ್ರಗತಿಪರ ಚಿಂತಕರು. ಸ್ವಾತಂತ್ರ್ಯ ಪೂರ್ವ ಹಾಗೂ ನಂತರದಲ್ಲಿ ದೇಶಕ್ಕೆ ಕನ್ನಡಿಗರ ಕೊಡುಗೆ ಬಹಳಷ್ಟಿದೆ. ಕನ್ನಡ ಪರಂಪರೆಯ ಮೂಲಕ ಭಾರತ ಪರಂಪರೆಗೆ ನಾಂದಿ ಹಾಡಬೇಕಿದೆ. ನವಕರ್ನಾಟಕದಿಂದ ನವಭಾರತ ನಿರ್ಮಾಣದ ಚಿಂತನೆಯನ್ನು ಸರ್ಕಾರ ಹೊಂದಿದೆ. ಮೋದಿಯವರ ಗುರಿಯಾದ ಭಾರತದ 5 ಟ್ರಿಲಿಯನ್ ಆರ್ಥಿಕತೆಯಲ್ಲಿ ಕರ್ನಾಟಕದ ಕೊಡುಗೆ ದೊಡ್ಡ ಪ್ರಮಾಣದಲ್ಲಿದೆ. ದೂರದೃಷ್ಟಿಯ ಚಿಂತನೆಯಿಂದ ರಾಜ್ಯ ಸರ್ಕಾರ ಕೆಲಸ ಮಾಡಲಿದೆ ಎಂದು ತಿಳಿಸಿದರು.
ಮೊದಲನೇ ಸ್ವಾತಂತ್ರ್ಯ ಹೋರಾಟವು ಲೋಕಮಾನ್ಯ ತಿಲಕ್, ವೀರಸಾವರ್ಕರ್‌ರಿಂದ ಪ್ರಾರಂಭವಾಯಿತು. ವೀರ ಸಾವರ್ಕರ್ ಅವರು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿನ ಕಾರಾಗೃಹದಲ್ಲಿ ಕಾಲಾಪಾನಿ ಶಿಕ್ಷೆಯನ್ನು ಅನುಭವಿಸಿದ್ದರು. ದೇಶಕ್ಕಾಗಿ ತ್ಯಾಗ ಮಾಡಲು ಸಿದ್ಧರಾಗಿದ್ದ ವೀರ ಸಾವರ್ಕರ್ ಅವರು ದಿಟ್ಟ, ಧೀಮಂತ ನಾಯಕರಾಗಿದ್ದರು. ಸ್ವಾತಂತ್ರ್ಯ ನನ್ನ ಜನ್ಮಸಿದ್ಧ ಹಕ್ಕು ಎಂದ ಲೋಕಮಾನ್ಯ ತಿಲಕರ ಚಿಂತನೆ, ಯೋಚನಾಶಕ್ತಿ ವಿಶಿಷ್ಟವಾದುದಾಗಿತ್ತು. ಸ್ವಾತಂತ್ರ್ಯ ಹೊರತುಪಡಿಸಿ, ಮಿಕ್ಕೆಲ್ಲವೂ ನಗಣ್ಯ ಎಂದ ಈ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ನನ್ನ ಪ್ರಥಮ ನಮಸ್ಕಾರಗಳು ಎಂದರು.
ಕೊಪ್ಪಳದಲ್ಲಿ ಕನ್ನಡದಾರತಿ
ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮಕ್ಕೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ದೀಪ ಬೆಳಗಿಸುವ ಮೂಲಕ ಹಾಗೂ ಭಾರತಾಂಬೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಬಿ.ಸಿ ನಾಗೇಶ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಾಗೇಶ್, ಪರಕೀಯರ ಆಕ್ರಮಣಕ್ಕೂ ಮುನ್ನ ನಮ್ಮ ದೇಶದಲ್ಲಿ ನ್ಯಾಯ, ಶಿಕ್ಷಣ ಸೇರಿದಂತೆ ವಿವಿಧ ತನ್ನದೆ ಆದ ವ್ಯವಸ್ಥೆ ಇತ್ತು. ಹಂಪೆಯಲ್ಲಿ ಮುತ್ತು ರತ್ನಗಳನ್ನು, ಚಿನ್ನವನ್ನು ಸೇರಿನಲ್ಲಿ ಅಳೆಯುವಂತಹ ವ್ಯವಸ್ಥೆ ಇತ್ತು. ಮೊಘಲರು, ಬ್ರಿಟಿಷರು ಮಾಡಿದಷ್ಟು ಅನ್ಯಾಯವನ್ನು ಈ ದೇಶಕ್ಕೆ ಬೇರೆಯವರು ಮಾಡಿಲ್ಲ.
ನಮ್ಮ ದೇವಸ್ಥಾನಗಳನ್ನು ಮೊಘಲರು ಒಡೆದು ಹಾಕಿದರು. ನಮ್ಮ ದೇಶದ ಸಂಸ್ಕತಿ, ಸ್ವಾಭಿಮಾನವನ್ನು ಕಿತ್ತುಕೊಳ್ಳುವಂತಹ ಪ್ರಯತ್ನ ಮಾಡಿದರು. ನಮ್ಮ ದೇಶದವರು ಬೇರೆ ದೇಶಗಳಿಗೆ ಹೋದರೂ ಅವರು ಖಡ್ಗ, ಕತ್ತಿ ಹಿಡಿದು ಹೋಗಲಿಲ್ಲ. ಅವರು ಜ್ಞಾನವನ್ನು ಹಿಡಿದು ಹೋದರು. ಬ್ರಿಟಿಷರು ಬುದ್ದಿವಂತಿಕೆಯಿಂದ, ಶಕ್ತಿಯಿಂದ ಈ ದೇಶದ ಮೇಲೆ ಆಕ್ರಮಣ ಮಾಡಲಿಲ್ಲ. ಕ್ರಾಂತಿಕಾರಿಗಳು ಬ್ರಿಟೀಷರ ನಿದ್ದೆಗೆಡಿಸಿದ್ದರು. ದೇಶದಾದ್ಯಂತ ಏಕಕಾಲದಲ್ಲಿ ನಡೆದಿದ್ದರೆ 1857 ರಲ್ಲಿಯೇ ನಮ್ಮ ಸ್ವಾತಂತ್ರ್ಯ ಸಿಕ್ಕಿರುತ್ತಿತ್ತು. ಸ್ವಾತಂತ್ರ್ಯ ಬಳಿಕ ಬಂದ ಸರ್ಕಾರಗಳು ಈ ಸತ್ಯವನ್ನು ಹೇಳಲಿಲ್ಲ ಎಂದರು.
ಸಂಸದ ಸಂಗಣ್ಣ ಕರಡಿ ಮಾತನಾಡಿ, ಹಿಂದೂ ಮುಸ್ಲಿಮರು ಸಹೋದರತ್ವದಿಂದ ಬದುಕಬೇಕು. ಅವರವರ ಧರ್ಮವನ್ನು ಅವರು ಆಚರಿಸಬೇಕು. ಅವರನ್ನು ದೇಶದಿಂದ ಓಡಿಸಲು ಆಗುವುದಿಲ್ಲ. ರಾಜಕಾರಣಿಗಳು ಸೀದಾ ಆದಾಗ ಅಧಿಕಾರಿಗಳು ಸೀದಾ ಆಗುತ್ತಾರೆ. ಇತಿಹಾಸ ತಿಳಿಯದ ವ್ಯಕ್ತಿ ಇತಿಹಾಸ ನಿರ್ಮಿಸಲಾರ. ಸ್ವಾತಂತ್ರ್ಯದ ಆ ಕ್ಷಣಗಳನ್ನು ನಾವೆಲ್ಲರೂ ಮೆಲುಕು ಹಾಕಬೇಕು. ಭಾರತಕ್ಕೆ ಆಧ್ಯಾತ್ಮಿಕ ಹಿನ್ನೆಲೆಯಿದ್ದು ಭಾರತದ ಕೀರ್ತಿಯನ್ನು ಮೋದಿಯವರು ಹೆಚ್ಚಿಸಿದ್ದಾರೆ. ಅಂದಿನ ಸರ್ಕಾರ ಮಾಡಿದ ತಪ್ಪು ನಿರ್ಧಾರದಿಂದ ದೇಶ ಮುಂದೆ ಹೋಗಲು ಆಗಿಲ್ಲ ಎಂದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಗೆ ಸಂಕಲ್ಪ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಇದನ್ನೂ ಓದಿ | ಮೇ 28 ರಿಂದ ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನ ಆರಂಭ: ವಿ.ಸುನಿಲ್ ಕುಮಾರ್
ಉಡುಪಿಯಲ್ಲಿ ಅಮೃತ ಮಹೋತ್ಸವ
ಉಡುಪಿಯಲ್ಲಿ ಅಜ್ಜರಕಾಡು ಮೈದಾನದಲ್ಲಿ ನಡೆದ ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಕಾರರಾಗಿ ಸಂಸದ ಪ್ರತಾಪ್ ಸಿಂಹ ಮಾತನಾಡಿದರು. ಸ್ವಾತಂತ್ರ್ಯದ ಪರಿಕಲ್ಪನೆ ಹುಟ್ಟುಹಾಕಿದ್ದೇ ವೀರಸಾವರ್ಕರ್. ಉಪವಾಸದಿಂದ ದೇಶ ಸ್ವತಂತ್ರವಾಗಲು ಸಾಧ್ಯವಿಲ್ಲ.
ವಿಶ್ವದ 63 ದೇಶಗಳು ಸ್ವತಂತ್ರವಾದದ್ದು ಕ್ರಾಂತಿಯಿಂದ. ಪಾಠದಲ್ಲಿ ನಮ್ಮ ಮೇಲಿನ ಆಕ್ರಮಣದ ಬಗ್ಗೆ ಮಾತ್ರ ಓದುತ್ತೇವೆ. ಚೋಳರು, ಚೇರರು ಗುಪ್ತರು ರಾಷ್ಟ್ರಕೂಟರು ಕದಂಬರು ಹೊಯ್ಸಳರು ಪೇಶ್ವೆಯನ್ನು ನಾವು ಮರೆತೇ ಬಿಟ್ಟೆವು. ತ್ರಿವರ್ಣ ಧ್ವಜದಲ್ಲಿ ಇಂದು ಗಾಂಧೀಜಿ ಚರಕ ಇರುತ್ತಿತ್ತು, ಅದರ ಬದಲಿಗೆ ತ್ರಿವರ್ಣ ಧ್ವಜದಲ್ಲಿ ಅಶೋಕ ಚಕ್ರ ಹಾಕಿಸಿದ್ದು ವೀರ ಸಾವರ್ಕರ್.
ಅಶೋಕ ಚಕ್ರ ಮುಂದೊಂದು ದಿನ ಸುದರ್ಶನ ಚಕ್ರ ಆಗುತ್ತದೆ. ಅಂಡಮಾನ್ ಬರ್ಮಾ ಜೈಲಿನಲ್ಲಿ ಇದ್ದವರು ನಿಜವಾದ ಸ್ವಾತಂತ್ರ ಹೋರಾಟಗಾರರು. ಕಾಲಾಪಾನಿ ಶಿಕ್ಷೆ ಅನುಭವಿಸಿದವರು ಸ್ವಾತಂತ್ರ ಹೋರಾಟಗಾರರು. ಪುಣೆಯ ಪ್ಯಾಲೇಸ್‌ನಲ್ಲಿ ಇದ್ದವರು ಸ್ವತಂತ್ರ ಹೋರಾಟಗಾರರ ಆಗಲು ಸಾಧ್ಯವಿಲ್ಲ ಎಂದು ಮಾತನಾಡಿದರು.
ಇದನ್ನೂ ಓದಿ | ಪಠ್ಯದಲ್ಲಿ ಬ್ರಾಹ್ಮಣೀಕರಣ ಮಾಡುತ್ತಿಲ್ಲ, ಇತಿಹಾಸ ಹಾಗೂ ರಾಷ್ಟ್ರೀಯತೆ ಇದೆ ಎಂದ ಸಚಿವ ನಾಗೇಶ್
ದೇಶಭಕ್ತಿ ಮತ್ತು ಹೊಣೆಗಾರಿಕೆಯಿಂದ ಬದುಕಬೇಕು: ಸಚಿವ ಆರಗ ಜ್ಞಾನೇಂದ್ರ
ಶಿವಮೊಗ್ಗ ಜಿ.ಪಂ., ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ಮೂಡುಗೊಪ್ಪೆ ಗ್ರಾ.ಪಂ. ಸಹಯೋಗದಲ್ಲಿ ಹೊಸನಗರ ತಾಲೂಕಿನ ಬಿದನೂರು ಕೋಟೆ ಮೂಡುಗುಪ್ಪೆಯಲ್ಲಿ ಕಾರ್ಯಕ್ರಮ ಆಯೋಜನೆಯಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಗೃಹಸಚಿವ ಆರಗ ಜ್ಞಾನೇಂದ್ರ, ದೇಶಕ್ಕಾಗಿ ತ್ಯಾಗ, ಬಲಿದಾನ ನೀಡಿದ ಸ್ವಾತಂತ್ರ್ಯ ಹೋರಾಟಗಾರರ ಋಣ ನಮ್ಮ ಮೇಲಿದ್ದು, ನಾವೆಲ್ಲ ದೇಶಭಕ್ತರಾಗಿ ಹೊಣೆಗಾರಿಕೆಯಿಂದ ಬದುಕಬೇಕಿದೆ. ಭಾರತ ಮಾತೆಯನ್ನು ಬ್ರಿಟಿಷರ ದಾಸ್ಯದಿಂದ ಬಂಧಮುಕ್ತಗೊಳಿಸುವುದಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನವನ್ನು, ಹೋರಾಟದ ವೃತ್ತಾಂತವನ್ನು ಸ್ಮರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಪತ್ರಕರ್ತ ಸಂತೋಷ್ ತಮ್ಮಯ್ಯ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಬಿದನೂರು ಕೋಟೆ ಮೂಡುಗೊಪ್ಪೆ ಗ್ರಾ.ಪಂ ಅಧ್ಯಕ್ಷ ಕರುಣಾಕರ ಶೆಟ್ಟಿ, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್, ಎಸಿ ಡಾ.ನಾಗರಾಜ್, ಹೊಸನಗರ ತಹಶೀಲ್ದಾರ್ ರಾಜೀವ್, ತಾ.ಪಂ ಇಒ ಪ್ರವೀಣ್ ಕುಮಾರ್, ಕನ್ನಡ ಸಂಸ್ಕ್ರತ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದರು.
ಮಡಿಕೇರಿಯಲ್ಲಿ ಕನ್ನಡದಾರತಿ
ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ ಅಪ್ಪಚ್ಚು ರಂಜನ್ ಅವರು ಮಹತ್ವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿದರು. ಮಡಿಕೇಯ ವಿವಿಧ ಜಾನಪದ ಕಲಾತಂಡಗಳೊಂದಿಗೆ ಚೌಡೇಶ್ವರಿ ದೇವಾಲಯದಿಂದ ಆರಂಭಗೊಂಡ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಸಂಪನ್ನಗೊಂಡಿತ್ತು. ಕೀಲುಗೊಂಬೆ ಕುಣಿತ, ಪೂಜಾ ಕುಣಿತ ಸೇರಿ ವಿವಿಧ ಕಲಾ ತಂಡದ ಜಾನಪದ ಕಲೆ ಎಲ್ಲರ ಮನೆಸೂರೆಗೊಳಿಸಿತು.
ಮೆರವಣಿಗೆ ಸಾಗುವಾಗ ದಾರಿ ಮದ್ಯೆ ಗಣ್ಯ ಅತಿಥಿಗಳ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಲಾಯಿತು. ಶಾಸಕರಾದ ಎಂ.ಪಿ. ಅಪ್ಪಚ್ಚುರಂಜನ್, ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷರಾದ ರವಿಕುಶಾಲಪ್ಪ, ಶಾಸಕರಾದ ವೀಣಾ ಅಚ್ಚಯ್ಯ, ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ, ಸಾಮಾಜಿಕ ಕಾರ್ಯಕರ್ತರಾದ ಸಿ.ಆರ್. ಪ್ರೇಮ್ ಕುಮಾರ್, ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ, ಸೇರಿದಂತೆ ಗಣ್ಯ ಅತಿಥಿಯಾಗಳು ಭಾಗವಹಿಸಿದ್ದರು.
ಇದನ್ನೂ ಓದಿ | ರೋಹಿತ್ ಚಕ್ರತೀರ್ಥರನ್ನು ಸುಮ್ಮನೆ ಟಾರ್ಗೆಟ್ ಮಾಡೋದ್ಯಾಕೆ ಎಂದ ಪ್ರತಾಪ ಸಿಂಹ