ನವದೆಹಲಿ: ಅಮೃತ ಭಾರತ ಸ್ಟೇಷನ್ ಯೋಜನೆ (Amrit Bharat Station) ಅಡಿಯಲ್ಲಿ ಕರ್ನಾಟಕದ 13 ರೈಲು ನಿಲ್ದಾಣಗಳು ಸೇರಿ ದೇಶದ 508 ರೈಲು ನಿಲ್ದಾಣಗಳ ಮರು ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾನುವಾರ (ಆಗಸ್ಟ್ 6) ಶಂಕುಸ್ಥಾಪನೆ ನೆರವೇರಿಸಿದರು. 508 ರೈಲು ನಿಲ್ದಾಣಗಳ ಅಭಿವೃದ್ಧಿಗೆ ಸುಮಾರು 25 ಸಾವಿರ ಕೋಟಿ ರೂ. ವ್ಯಯವಾಗಲಿದ್ದು, ಇದಕ್ಕೆ ವರ್ಚ್ಯುವಲ್ ವೇದಿಕೆ ಮೂಲಕ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಹೊಸ ಅಧ್ಯಾಯ ಎಂದ ಮೋದಿ
ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಮೋದಿ, “ದೇಶದ ರೈಲ್ವೆ ಕ್ಷೇತ್ರದಲ್ಲಿ ಈ ದಿನ ಹೊಸ ಅಧ್ಯಾಯ ಶುರುವಾಗಿದೆ” ಎಂದರು. “ದೇಶದ ಸಂಸ್ಕೃತಿ, ಪರಂಪರೆಯ ತಾಣವಾಗಿ 508 ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಆಧುನಿಕ ವ್ಯವಸ್ಥೆ, ಸೌಕರ್ಯಗಳು ಜನರಿಗೆ ಉತ್ತಮ ಅನುಭವ ನೀಡಲಿವೆ. ದೇಶದ ರೈಲ್ವೆ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆಗೆ ನಾಂದಿ ಹಾಡಲಾಗುತ್ತಿದೆ” ಎಂದು ಹೇಳಿದರು.
ಕರ್ನಾಟಕದ 13 ನಿಲ್ದಾಣಗಳು ಯಾವವು?
ಕರ್ನಾಟಕದ 13 ರೈಲು ನಿಲ್ದಾಣಗಳನ್ನು ಅಮೃತ ಭಾರತ ಸ್ಟೇಷನ್ ಯೋಜನೆ ಅಡಿಯಲ್ಲಿ ಅಭಿವೃದ್ಧಿಗೊಳಿಸಲು ತೀರ್ಮಾನಿಸಲಾಗಿದೆ. ಕಲಬುರಗಿ ಜಂಕ್ಷನ್, ಇದೇ ಜಿಲ್ಲೆಯ ಶಹಬಾದ್, ವಾಡಿ, ಬೀದರ್ ನಗರ, ಬೆಳಗಾವಿ ಜಿಲ್ಲೆಯ ಘಟಪ್ರಭಾ, ಗೋಕಾಕ್ ರಸ್ತೆ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಜಂಕ್ಷನ್, ಬಳ್ಳಾರಿ ನಗರ, ದಾವಣಗೆರೆಯ ಹರಿಹರ, ಧಾರವಾಡದ ಅಳ್ನಾವರ, ಹಾಸನದ ಅರಸೀಕೆರೆ, ಗದಗ ನಗರ ಹಾಗೂ ಕೊಪ್ಪಳ ನಗರ ಸೇರಿ ಒಟ್ಟು 13 ರೈಲು ನಿಲ್ದಾಣಗಳನ್ನು ಮರು ಅಭಿವೃದ್ಧಿಗೊಳಿಸಲಾಗುತ್ತದೆ.
ಇದನ್ನೂ ಓದಿ: PM Modi France Visit: ನರೇಂದ್ರ ಮೋದಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ನೀಡಿದ ಫ್ರಾನ್ಸ್
ಯಾವ ರಾಜ್ಯದಲ್ಲಿ ಎಷ್ಟು ರೈಲು ನಿಲ್ದಾಣ ಅಭಿವೃದ್ಧಿ?
ದೇಶದ 16 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 508 ರೈಲು ನಿಲ್ದಾಣಗಳನ್ನು ಮರು ಅಭಿವೃದ್ಧಿಗೊಳಿಸಲಾಗುತ್ತಿದೆ. ಕರ್ನಾಟಕದ 13, ಉತ್ತರ ಪ್ರದೇಶ ಹಾಗೂ ರಾಜಸ್ಥಾನದ ತಲಾ 55, ಬಿಹಾರ 49, ಮಹಾರಾಷ್ಟ್ರ 44, ಪಶ್ಚಿಮ ಬಂಗಾಳ 37, ಮಧ್ಯಪ್ರದೇಶ 34, ಅಸ್ಸಾಂ 32, ಒಡಿಶಾ 25, ಪಂಜಾಬ್ 22, ಗುಜರಾತ್ ಹಾಗೂ ತೆಲಂಗಾಣದಲ್ಲಿ ತಲಾ 21, ಜಾರ್ಖಂಡ್ 20, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ ತಲಾ 18 ಹಾಗೂ ಹರಿಯಾಣದಲ್ಲಿ 15 ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.