ಚಿಕ್ಕಬಳ್ಳಾಪುರ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಾಂಗ್ರೆಸ್ ರಾಜ್ಯಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಈ ಪೈಕಿ ಚಿಕ್ಕಬಳ್ಳಾಪುರದ ಕೈವಾರದಿಂದ ಚಿಂತಾಮಣಿ ನಗರದವರೆಗೆ ಆಯೋಜಿಸಿರುವ ಬೈಕ್ ರ‍್ಯಾಲಿ ಬೆಳಗ್ಗೆ ಆರಂಭಗೊಂಡಿದ್ದು ೧೦೦೦೦ಕ್ಕೂ ಅಧಿಕ ಮಂದಿ ಭಾಗವಹಿಸಿದ್ದಾರೆ. ಚಿಂತಾಮಣಿ ನಗರದಲ್ಲಿ ದೊಡ್ಡಮಟ್ಟದ ಪಾದಯಾತ್ರೆಯನ್ನು ಆಯೋಜಿಸಲಾಗಿದೆ.
ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸಾರಥ್ಯದಲ್ಲಿ ಈ ರ‍್ಯಾಲಿ ನಡೆಯುತ್ತಿದ್ದು, ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಕೈಜೋಡಿಸಿದ್ದಾರೆ. ಕಾಂಗ್ರೆಸ್ ಶಾಸಕ ಶಿವಶಂಕರ ರೆಡ್ಡಿ, ಮಾಜಿ ಶಾಸಕ ಎಂ.ಸಿ.ಸುಧಾಕರ್ ಅವರು ರ‍್ಯಾಲಿ ಆಯೋಜನೆ ಮಾಡಿದ್ದಾರೆ.
ಕೈವಾರ ಕ್ರಾಸ್‌ನಲ್ಲಿ ಇಬ್ಬರು ಹಿರಿಯ ನಾಯಕರು ಬೈಕ್ ರ‍್ಯಾಲಿಗೆ ಚಾಲನೆ ನೀಡಿದರು. ಕೈವಾರದಿಂದ ಚಿಂತಾಮಣಿಗೆ ಏಳು ಕಿ.ಮೀ. ಅಂತರವಿದ್ದು, ರಸ್ತೆಯ ಇಕ್ಕೆಲಗಳಲ್ಲೂ ಜನ ಸೇರಿರುವುದು ಕಂಡುಬಂದಿದೆ. ಟ್ರಾಫಿಕ್ ನಿಯಂತ್ರಿಸಲು ಪೊಲೀಸರು ಹರಸಾಹಸ ನಡೆಸುತ್ತಿದ್ದಾರೆ.
ಬೊಲೆರೊ ಗಾಡಿಯಲ್ಲಿ ಡಿಕೆಶಿ ಸಿದ್ದು
ಈ ನಡುವೆ ಕಾಂಗ್ರೆಸ್‌ನ ಹಿರಿಯ ನಾಯಕರಾದ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಬೊಲೆರೊ ವಾಹನದಲ್ಲಿ ಸಾಗುತ್ತಿದ್ದಾರೆ. ತಿಮ್ಮಸಂದ್ರದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ಅವರನ್ನು ನೋಡಲು ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ. ಇದರ ನಡುವೆ, ನಾಯಕರು ಸಾಗುತ್ತಿದ್ದ ವಾಹನ ಪಂಕ್ಚರ್ ಆಗಿದೆ.
ಬಸ್‌ಗಳಿಗೆ ತಡೆ, ಪುಂಡಾಟ
ಕೈವಾರದಿಂದ ಚಿಂತಾಮಣಿಗೆ ದೊಡ್ಡ ಪ್ರಮಾಣದ ಬೈಕ್ ರ‍್ಯಾಲಿ ಸಾಗುತ್ತಿರುವುದರಿಂದ ಇತರ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಈ ನಡುವೆ ಕೆಲವೊಂದು ಬಸ್, ವಾಹನಗಳನ್ನು ಕೈ ಕಾರ್ಯಕರ್ತರು ತಡೆದು ಪುಂಡಾಟ ನಡೆಸಿದರು ಎಂಬ ಆರೋಪಗಳಿವೆ. ಮಧ್ಯಾಹ್ನ ೧೨ ಗಂಟೆಯ ಹೊತ್ತಿಗೆ ರ‍್ಯಾಲಿ ಚಿಂತಾಮಣಿ ತಲುಪಿದೆ.