Site icon Vistara News

ಮೈಸೂರು ಸಕ್ಕರೆ ಕಾರ್ಖಾನೆಗೆ ತುರ್ತು 10 ಕೋಟಿ ರೂ. ಬಿಡುಗಡೆ ಮಾಡಿ: ಸರ್ಕಾರಕ್ಕೆ ದಿನೇಶ್‌ ಗೂಳಿಗೌಡ, ರವಿ ಗಣಿಗ ಮನವಿ

Mysore Sugar Factory

Mysore Sugar Factory

ಮಂಡ್ಯ: ಮೈಸೂರು ಸಕ್ಕರೆ ಕಾರ್ಖಾನೆಗೆ 2023-24ನೇ ಸಾಲಿನಲ್ಲಿ ಕಬ್ಬು ನುರಿಸಲು ಸರ್ಕಾರದಿಂದ ತುರ್ತಾಗಿ ಧನ ಸಹಾಯ ನೀಡಬೇಕಿದೆ. ಕಬ್ಬು ಕಟಾವು ಪ್ರಾರಂಭವಾಗುವ ಮೊದಲು ಹಣದ ಅವಶ್ಯಕತೆ ಇದೆ. ಇದಕ್ಕಾಗಿ 18 ಕೋಟಿ ರೂಪಾಯಿಗಳ ಅವಶ್ಯಕತೆ ಇದ್ದರೂ ತುರ್ತಾಗಿ 10 ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರಿಗೆ ಎಂಎಲ್‌ಸಿ ದಿನೇಶ್‌ ಗೂಳಿಗೌಡ ಹಾಗೂ ಮಂಡ್ಯ ಶಾಸಕ ರವಿ ಗಣಿಗ ಮನವಿ ಮಾಡಿದ್ದಾರೆ.

ಕಳೆದ ವರ್ಷ ಆಯವ್ಯಯದಲ್ಲಿ ಕಾರ್ಖಾನೆ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ 50 ಕೋಟಿ ರೂ.ಗಳನ್ನು ಘೋಷಣೆ ಮಾಡಿತ್ತು. ಆದರೆ, ಈವರೆಗೆ ಕೇವಲ 32 ಕೋಟಿ ರೂ.ಗಳನ್ನಷ್ಟೇ ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಬಾಕಿ ಹಣವನ್ನು ಬಿಡುಗಡೆ ಮಾಡಬೇಕಿದೆ. ಅದರಲ್ಲಿ ಈ ಬಾರಿ ತುರ್ತಾಗಿ 10 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿಸುವಂತೆ ಆರ್ಥಿಕ ಇಲಾಖೆಗೆ ಸೂಚನೆ ನೀಡಬೇಕು ಎಂದು ಪತ್ರದ ಮೂಲಕ ಕೋರಿದ್ದಾರೆ.

ಮಂಡ್ಯ ಜಿಲ್ಲೆಯ ಮೈಸೂರು ಸಕ್ಕರೆ ಕಾರ್ಖಾನೆ (ಮೈ ಶುಗರ್ ) ಯು ರೋಗಗ್ರಸ್ತವಾಗಿದ್ದು, ಕೆಲವು ವರ್ಷಗಳಿಂದ ಕಬ್ಬು ನುರಿಸುವಿಕೆಯನ್ನು ಸ್ಥಗಿತ ಮಾಡಿತ್ತು. ಕಳೆದ ವರ್ಷವಷ್ಟೇ ಕಬ್ಬು ನುರಿಸುವಿಕೆಯನ್ನು ಮರು ಪ್ರಾರಂಭಿಸಿದೆ.‌ ಅಲ್ಲದೆ, ಕಳೆದ ವರ್ಷ ಸರ್ಕಾರವು ಬಜೆಟ್‌ನಲ್ಲಿ ಕಾರ್ಖಾನೆಯ ಪುನಶ್ಚೇತನಕ್ಕೆ ₹50 ಕೋಟಿ ಹಣ ನೀಡುವುದಾಗಿ ಘೋಷಿಸಿತ್ತು. ಆದರೆ, ಇದುವರೆಗೆ ₹32 ಕೋಟಿ ಮಾತ್ರವೇ ಬಿಡುಗಡೆಯಾಗಿದೆ. ಇದರಿಂದ ರೈತರಿಗೆ ತೀವ್ರ ಅನಾನುಕೂಲವಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | CM Siddaramaiah: ಹಾವೇರಿ ಗೋಲಿಬಾರ್‌ಗೆ ಮತ್ತೆ ಅವಕಾಶ ಮಾಡಬೇಡಿ: ಡಿಸಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್‌ ಎಚ್ಚರಿಕೆ

ಕಾರ್ಖಾನೆಯ ವ್ಯಾಪ್ತಿಯಲ್ಲಿ ಈ ಹಂಗಾಮಿನಲ್ಲಿ 10,002 ಹೆಕ್ಟೇರ್ ಪ್ರದೇಶದಲ್ಲಿ ರೈತರು ಕಬ್ಬು ಬೆಳೆದಿದ್ದು, ಸುಮಾರು 5,00,100 ಮೆಟ್ರಿಕ್‌ ಟನ್‌ ಕಬ್ಬು ಪೂರೈಕೆ ಮಾಡುವ ಕುರಿತು ಒಪ್ಪಂದ ಮಾಡಿಕೊಳ್ಳಲಾಗಿದೆ. 5,745 ರೈತರು ಕಾರ್ಖಾನೆಗೆ ಕಬ್ಬು ನುರಿಸಲು ನೀಡುವುದಾಗಿ ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ರೈತರ ಹಿತ ದೃಷ್ಟಿಯಿಂದ ಹಾಗೂ ಕಾರ್ಖಾನೆಯ ಭವಿಷ್ಯದ ದೃಷ್ಟಿಯಿಂದ ಸಕಾಲದಲ್ಲಿ ಕಬ್ಬು ನುರಿಸಲು ಪ್ರಾರಂಭಿಸಬೇಕಿದೆ ಎಂದು ಹೇಳಿದ್ದಾರೆ.

ಕಬ್ಬು ನುರಿಸುವಿಕೆಯ ಸಿದ್ಧತೆಯು ಜೂನ್‌ನಿಂದ ಆರಂಭವಾಗಬೇಕಿದೆ. ಆದರೆ, ಕಾರ್ಖಾನೆಯಲ್ಲಿ ತುರ್ತು ನಿರ್ವಹಣಾ ಕೆಲಸ,‌ ಕಟಾವು ಮಾಡುವವರಿಗೆ ಹಣ ಪಾವತಿ, ಸಿಬ್ಬಂದಿ ವೇತನ ಎಲ್ಲ ಸೇರಿ 18.54 ಕೋಟಿ ರೂಪಾಯಿಯ ಅಗತ್ಯವಿದೆ. ಹಾಗಾಗಿ ತುರ್ತಾಗಿ 10 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವಂತೆ ವಿನಂತಿ ಮಾಡಿದ್ದಾರೆ.

ಮಾಡಬೇಕಾದ ಕಾರ್ಯಗಳ ವಿವರ

ಹಂಗಾಮು ಪೂರ್ವ ನಿರ್ವಹಣೆ ಕೆಲಸ ಪೂರ್ಣ ಮಾಡಲು ₹5 ಕೋಟಿ, ಫ್ಯಾಕ್ಟರಿ ಕಾರ್ಮಿಕರಿಗೆ ಏಪ್ರಿಲ್, ಮೇ ಹಾಗೂ ಜೂನ್ ತಿಂಗಳ ವೇತನ ಪಾವತಿಗೆ ₹1.50 ಕೋಟಿ, ಸ್ಥಳೀಯ ಹಾಗೂ ಹೊರಗಿನ ಕಬ್ಬು ಕಟಾವು ಗ್ಯಾಂಗ್‌ಗಳಿದ್ದು, ಮುಂಗಡ ಹಣ ಪಾವತಿಗೆ ₹ 5.80 ಕೋಟಿ, ಕಾರ್ಖಾನೆಗೆ ಕೋಣನಹಳ್ಳಿ ನೀರಿನ ಲೈನ್ ನಿರ್ಮಾಣಕ್ಕೆ ₹ 98 ಲಕ್ಷ, ಘಟಕದ ಒಳಗೆ ವಿವಿಧ ಸಿವಿಲ್ ಕಾಮಗಾರಿಗಳಿಗೆ ₹ 98 ಲಕ್ಷ, ಇಆರ್‌ಪಿ ಪ್ರಾಜೆಕ್ಟ್‌ಗೆ ₹98 ಲಕ್ಷ, ನೀರು ಮತ್ತು ಸ್ಟೇಕ್ ಆನ್‌ಲೈನ್ ಮಾನಿಟರಿಂಗ್ ವ್ಯವಸ್ಥೆ ಅಳವಡಿಕೆಗೆ ₹30 ಲಕ್ಷ, ಜೂಸ್ ಸಪ್ಲೀಟರ್ ಮತ್ತು ಗೇರ್ ಬಾಕ್ಸ್ ಅಳವಡಿಕೆಗೆ ₹ 1 ಕೋಟಿ, ಜಿಐ ಶೀಟ್ ಹಾಗೂ ಕಟಾವು ಕಾರ್ಮಿಕರ ಸಾಮಗ್ರಿಗೆ ₹ 2 ಕೋಟಿ ಅಗತ್ಯವಾಗಿದೆ.

ಇದನ್ನೂ ಓದಿ | Panchamasali: ಪಂಚ ಶಾಸಕರರಿಗೆ ಸಚಿವ ಸ್ಥಾನ ನೀಡಿ: ಪಂಚಮಸಾಲಿ ಕಾರ್ಯಕಾರಿಣಿಯಲ್ಲಿ ಸರ್ಕಾರಕ್ಕೆ ಒತ್ತಾಯ

ಹೀಗಾಗಿ ರೈತರ ಹಿತದೃಷ್ಟಿಯಿಂದ ಕೂಡಲೇ ಹಣ ಬಿಡುಗಡೆಗೆ ಕ್ರಮ ವಹಿಸಬೇಕು ಎಂದು ಎಂಎಲ್‌ಸಿ ದಿನೇಶ ಗೂಳಿಗೌಡ ಹಾಗೂ ಶಾಸಕ ರವಿ ಗಣಿಗ ಮನವಿ ಮಾಡಿದ್ದಾರೆ.

Exit mobile version