ಬೆಳಗಾವಿ: ಅನಾರೋಗ್ಯದ ಹಿನ್ನೆಲೆಯಲ್ಲಿ ನಿಧನರಾದ ಬಿಜೆಪಿ ಶಾಸಕ, ವಿಧಾನಸಭೆ ಉಪ ಸಭಾಪತಿ ಆನಂದ ಮಾಮನಿ(56) ಅವರ ಅಂತ್ಯ ಸಂಸ್ಕಾರ, ಜಿಲ್ಲೆಯ ಸವದತ್ತಿ ಹೊರವಲಯದ ಫಾರ್ಮ್ ಹೌಸ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಕುಟುಂಬಸ್ಥರು, ಬಂಧುಗಳು ಹಾಗೂ ಸಾವಿರಾರು ಮಂದಿ ಕಾರ್ಯಕರ್ತರ ಸಮ್ಮುಖದಲ್ಲಿ ನೆರವೇರಿತು.
ಅಂತಿಮಯಾತ್ರೆ ಬಳಿಕ ವೀರಶೈವ ಲಿಂಗಾಯತ ಸಂಪ್ರದಾಯದಂತೆ ಬೆಡಸೂರ ಅಜ್ಜಯ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಇದಕ್ಕೂ ಮುನ್ನಾ ಜಿಲ್ಲೆಯ ಸವದತ್ತಿ ತಾಲೂಕು ಕ್ರೀಡಾಂಗಣದಲ್ಲಿ ಮಾಮನಿ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿತ್ತು. ಬೆಂಗಳೂರಿನಿಂದ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಅಂತಿಮ ದರ್ಶನವನ್ನು ಪಡೆದುಕೊಂಡು ಸರ್ಕಾರದ ಪರವಾಗಿ ಅಂತಿಮ ನಮನ ಸಲ್ಲಿಸಿ, ಮಾಮನಿ ಅವರ ತಾಯಿ ಗಂಗಮ್ಮ ಹಾಗೂ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಹುತಾತ್ಮ ಗೌರವ ಪಡೆಯ ವತಿಯಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ರಾಷ್ಟ್ರಗೀತೆ ನುಡಿಸುವ ಮೂಲಕ ಸರ್ಕಾರಿ ಗೌರವ ವಂದನೆ ಸಲ್ಲಿಸಿ, ಎರಡು ನಿಮಿಷಗಳ ಕಾಲ ಮೌನ ಆಚರಿಸಲಾಯಿತು. ಸಿಎಂ ಬಸವರಾಜ ಬೊಮ್ಮಾಯಿ ಅವರು ರತ್ನಾ ಆನಂದ ಮಾಮನಿ ಅವರಿಗೆ ರಾಷ್ಟ್ರ ಧ್ವಜವನ್ನು ನೀಡುವ ಮೂಲಕ ಸರ್ಕಾರಿ ಗೌರವ ಸಮರ್ಪಿಸಿದರು. ಈ ಸಂದರ್ಭದಲ್ಲಿ ಪತ್ನಿ ಹಾಗೂ ಮಕ್ಕಳು ಉಪಸ್ಥಿತರಿದ್ದರು.
ಇದನ್ನೂ ಓದಿ | Anand Mamani | ಪ್ರಭಾವಿ ನಾಯಕರ ಅಗಲಿಕೆ, ಚುನಾವಣಾ ವರ್ಷದಲ್ಲಿ ಬೆಳಗಾವಿ ಬಿಜೆಪಿಗೆ ಆಘಾತ
ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಮುರುಗೇಶ್ ನಿರಾಣಿ, ಲೋಕೋಪಯೋಗಿ ಇಲಾಖೆಯ ಸಚಿವರಾದ ಸಿ.ಸಿ.ಪಾಟೀಲ ಮತ್ತಿತರರು ಪಾರ್ಥೀವ ಶರೀರಕ್ಕೆ ಪುಷ್ಪಗುಚ್ಛ ಸಮರ್ಪಿಸಿ ಅಂತಿಮ ನಮನ ಸಲ್ಲಿಸಿದರು.
ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಂಸದೆ ಮಂಗಲ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಮಹೇಶ್ ಕುಮಠಳ್ಳಿ, ಶಾಸಕರಾದ ಮಹಾಂತೇಶ ದೊಡ್ಡಗೌಡರ, ಮಹಾದೇವಪ್ಪ ಯಾದವಾಡ, ದುರ್ಯೋಧನ ಐಹೊಳೆ, ಮಹಾಂತೇಶ ಕೌಜಲಗಿ, ಸಿದ್ದು ಸವದಿ, ಧಾರವಾಡ ಜಿಲ್ಲೆಯ ಶಾಸಕರಾದ ಅಮೃತ ದೇಸಾಯಿ, ಅರವಿಂದ ಬೆಲ್ಲದ, ನಿಂಬಣ್ಣವರ ವಿಧಾನಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಪ್ರಕಾಶ್ ಹುಕ್ಕೇರಿ, ಲಕ್ಷ್ಮಣ ಸವದಿ, ಕಾಡಾ ಅಧ್ಯಕ್ಷ ವಿ.ಐ.ಪಾಟೀಲ, ಸೇರಿದಂತೆ ಅನೇಕ ಜನಪ್ರತಿನಿಧಿಗಳು, ವಿವಿಧ ಮಠಾಧೀಶರು ಹಾಗೂ ಗಣ್ಯರು ಅಂತಿಮ ದರ್ಶನ ಪಡೆದುಕೊಂಡರು.
ಐಜಿಪಿ ಸತೀಶ್ ಕುಮಾರ್, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ಮತ್ತಿತರ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು. ಸವದತ್ತಿ ಪಟ್ಟಣ ಸೇರಿದಂತೆ ವಿವಿಧ ಕಡೆಯಿಂದ ಆಗಮಿಸಿದ್ದ ಸಾವಿರಾರು ಜನರು ಅಂತಿಮಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಕೊನೆಯಲ್ಲಿ ಹುತಾತ್ಮ ಗೌರವ ಪಡೆಯ ವತಿಯಿಂದ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ರಾಷ್ಟ್ರಗೀತೆ ನುಡಿಸುವ ಮೂಲಕ ಸರ್ಕಾರಿ ಗೌರವ ವಂದನೆ ಸಲ್ಲಿಸಿ, ಎರಡು ನಿಮಿಷಗಳ ಕಾಲ ಮೌನ ಆಚರಿಸಲಾಯಿತು. ಸಿಎಂ ಬಸವರಾಜ ಬೊಮ್ಮಾಯಿ ಅವರು ರತ್ನಾ ಆನಂದ ಮಾಮನಿ ಅವರಿಗೆ ರಾಷ್ಟ್ರ ಧ್ವಜವನ್ನು ನೀಡುವ ಮೂಲಕ ಸರ್ಕಾರಿ ಗೌರವ ಸಮರ್ಪಿಸಿದರು. ಈ ಸಂದರ್ಭದಲ್ಲಿ ಪತ್ನಿ ಹಾಗೂ ಮಕ್ಕಳು ಉಪಸ್ಥಿತರಿದ್ದರು.
ಆನಂದ ಮಾಮನಿ ರೈತರ ನೈಜಪ್ರತಿನಿಧಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಅಭಿವೃದ್ಧಿ ದೃಷ್ಟಿಕೋನ ಮತ್ತು ರೈತಪರ ಕಾಳಜಿ ಹೊಂದಿದ್ದ ಯುವ ನಾಯಕನನ್ನು ಕಳೆದುಕೊಂಡಂತಾಗಿದೆ. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆನಂದ ಮಾಮನಿ ಅವರ ಕೆಲಸ ಸ್ಮರಣೀಯ. ಧೀಮಂತ ನಾಯಕ, ರೈತನ ನೈಜ ಪ್ರತಿನಿಧಿಯನ್ನು ಕಳೆದುಕೊಂಡು ನಾಡು ಬಡವಾಗಿದೆ ಎಂದು ಎಂದು ದುಃಖ ವ್ಯಕ್ತಪಡಿಸಿದರು.
ಸಣ್ಣ ವಯಸ್ಸಿನಲ್ಲಿ ಮಾಮನಿ ಅವರ ಅಗಲಿಕೆ ದಿಗ್ಭ್ರಮೆ ಮೂಡಿಸಿದೆ. ಕ್ರಿಯಾಶೀಲ ವ್ಯಕ್ತಿಯಾಗಿದ್ಸ ಮಾಮನಿಯವರು ಸದಾ ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಕುರಿತು ನಿರಂತರ ಚರ್ಚೆ ನಡೆಸುತ್ತಿದ್ದರು. ಒಂದೂವರೆ ತಿಂಗಳ ಹಿಂದೆಯಷ್ಟೇ ಆರೋಗ್ಯಯುತವಾಗಿದ್ದರು. ಯುವ ಹಾಗೂ ಜನಪರ ನಾಯಕರಾಗಿದ್ದ ಅವರು ರೈತಪರ ಕಾಳಜಿಯ ವ್ಯಕ್ತಿಯಾಗಿದ್ದರು. ವಿಶೇಷವಾಗಿ ನೀರಾವರಿ ಸೌಲಭ್ಯ ವಿಸ್ತರಣೆಗೆ ಅತ್ಯಂತ ಕಳಕಳಿಯಿಂದ ಕೆಲಸ ಮಾಡಿದ್ದರು ಎಂದರು.
ಕುಟುಂಬದ ಒಡನಾಟ, ಅನೋನ್ಯತೆಯನ್ನು ಮೆಲುಕುಹಾಕಿದ ಮುಖ್ಯಮಂತ್ರಿ, ಮಾಮನಿಯವರ ತಂದೆ ನನಗೆ ಮಾರ್ಗದರ್ಶಕರಾಗಿದ್ದರು. ಆನಂದ ಮಾಮನಿಯವರು ರೈತರ ಅನುಕೂಲಕ್ಕಾಗಿ ಈ ಭಾಗದಲ್ಲಿ ಒಂದು ಸಕ್ಕರೆ ಕಾರ್ಖಾನೆ ಸ್ಥಾಪನೆ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸದ ಕನಸುಗಳನ್ನು ಕಂಡಿದ್ದರು. ಅವರ ಕನಸುಗಳ ಸಾಕಾರಕ್ಕೆ ನಾವೆಲ್ಲರೂ ಪ್ರಯತ್ನಿಸೋಣ ಎಂದು ಹೇಳಿದರು.
ಇದನ್ನೂ ಓದಿ | Anand Mamani | ವಿಧಾನಸಭೆ ಉಪ ಸಭಾಧ್ಯಕ್ಷ ಆನಂದ್ ಮಾಮನಿ ಇನ್ನಿಲ್ಲ