Site icon Vistara News

Karnataka Election 2023: ಕಾಂಗ್ರೆಸ್‌ಗೆ ಗುಂಡಿಗೆಯೇ ಇಲ್ಲ, ಇನ್ನು ಗಂಡಸ್ತನ ಎಲ್ಲಿ ಬರುತ್ತೆ?; ಆನಂದ್‌ ಸಿಂಗ್‌

Anand Singh accuses Congress of not having courage Karnataka Election 2023 updates

ಕೊಪ್ಪಳ: ವಿಧಾನಸಭೆ ಚುನಾವಣೆ (Karnataka Election 2023) ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ನಾಯಕರ ವಾಕ್ಸಮರಗಳು ತಾರಕಕ್ಕೇರಿವೆ. ಪಕ್ಷವಾರು, ವ್ಯಕ್ತಿವಾರು ತೀವ್ರ ವಾಗ್ದಾಳಿಗಳು ನಡೆಯುತ್ತಿವೆ. ಈ ಮಧ್ಯೆ ಕಾಂಗ್ರೆಸ್‌ ವಿರುದ್ಧ ಸಚಿವ ಆನಂದ್‌ ಸಿಂಗ್‌ (Anand singh) ಹರಿಹಾಯ್ದಿದ್ದಾರೆ. ಕಾಂಗ್ರೆಸ್‌ಗೆ ಗುಂಡಿಗೆಯೇ ಇಲ್ಲ, ಇನ್ನು ಗಂಡಸ್ತನ ಎಲ್ಲಿ ಬರುತ್ತೆ? ಎಂದು ಪ್ರಶ್ನಿಸುವ ಮೂಲಕ ವಿವಾದಿತ ಹೇಳಿಕೆ ನೀಡಿದ್ದಾರೆ.

ಗಂಗಾವತಿ ತಾಲೂಕಿನ ಮರಳಿ ಬಳಿಯ ಖಾಸಗಿ ಹೋಟೆಲ್‌ನಲ್ಲಿ ನಡೆಯುತ್ತಿರುವ ಬಿಜೆಪಿ ಡಿಜಿಟಲ್ ಕಾರ್ಯಕರ್ತರ ಸಮ್ಮೇಳನದಲ್ಲಿ ಮಾತನಾಡಿದ ಅವರು, ದೇಶದ ಅನೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಕಥೆ ಮುಗಿದು ಹೋಗಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಂತ್ಯಗೊಳಿಸಬೇಕಾಗಿದೆ. ಇಡೀ ದಕ್ಷಿಣ ಭಾರತದಲ್ಲಿ ಬಿಜೆಪಿ ಬಾವುಟ ಹಾರಲಿದೆ. ನಮ್ಮ ನಾಯಕರದ್ದು ಕೇವಲ ಆಡಳಿತಕ್ಕಾಗಿ ಅಧಿಕಾರಕ್ಕೆ ಬರಬೇಕೆಂದೇನೂ ಇಲ್ಲ. ದೇಶದ ರಕ್ಷಣೆ, ಭಾರತ ವಿಶ್ವ ಗುರುವಾಗಲು ನಾವು ಯತ್ನಿಸಬೇಕಾಗಿದೆ ಎಂದು ಹೇಳಿದರು.

ಇದನ್ನೂ ಓದಿ: SC ST Reservation : ಒಳಮೀಸಲಾತಿ ವರ್ಗೀಕರಣ ಅವೈಜ್ಞಾನಿಕ; ದಲಿತ ಸಮುದಾಯಕ್ಕೆ ದ್ರೋಹ ಎಂದ ದಸಂಸ

ರಾಜಾಹುಲಿ ಎಂದೇ ಖ್ಯಾತವಾಗಿರುವ ‌ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಾರಿಗೆ ತಂದಿರುವ ಯೋಜನೆಗಳನ್ನು ಪ್ರಚಾರ ಮಾಡಬೇಕು. ಇದು ಯುದ್ಧಕ್ಕೆ ಸಿದ್ಧವಾಗುವ ಸಮಾವೇಶವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಸೈನಿಕರಂತೆ ಎಲ್ಲರೂ ಕೆಲಸ ಮಾಡಬೇಕು. ಕಾಂಗ್ರೆಸ್ ಕುಟುಂಬ ರಾಜಕಾರಣ ಮಾಡುತ್ತಿದೆ. ದೇಶದ ಆರ್ಥಿಕತೆ ಹಿಂದೆ ಬೀಳುವ ನಿಟ್ಟಿನಲ್ಲಿ ಕಾಂಗ್ರೆಸ್ ಕೆಲಸ ಮಾಡಿದೆ. ಕಾರ್ಯಕರ್ತರು ನಾಯಕರಾಗಿ ಬೆಳೆಯಬೇಕೆಂದು ಮೋದಿ ಹೇಳಿದ್ದಾರೆ ಎಂದು ಆನಂದ್‌ ಸಿಂಗ್‌ ಹೇಳಿದರು.

ಕಾರ್ಯಕ್ರಮ ಅರ್ಧಕ್ಕೇ ಮೊಟಕು

ಬಳ್ಳಾರಿ ವಿಭಾಗದ ಡಿಜಿಟಲ್ ಕಾರ್ಯಕರ್ತರ ಸಮ್ಮೇಳನದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ ಭಾಗವಹಿಸಿದ್ದರು. ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಾರ್ಯಕ್ರಮ ನಡೆಸಲು ಅನುಮತಿ ಪಡೆಯಲಾಗಿತ್ತು. ಆದರೆ, ಅವಧಿ ಮೀರಿದ್ದರಿಂದ ಚುನಾವಣಾ ಸಿಬ್ಬಂದಿ ಮಧ್ಯ ಪ್ರವೇಶಿಸಿ ಕಾರ್ಯಕ್ರಮವನ್ನು ಮೊಟಕುಗೊಳಿಸುವಂತೆ ಸೂಚನೆ ನೀಡಿದರು. ಹಾಗಾಗಿ ಅರ್ಧಕ್ಕೆ ಮೊಟಕು ಮಾಡಿ ಎಲ್ಲರೂ ತೆರಳಿದ್ದಾರೆ.

ಇದನ್ನೂ ಓದಿ: Karnataka Election 2023: ಧಾರವಾಡದಿಂದಲೇ ಸ್ಪರ್ಧಿಸುವಂತೆ ವಿನಯ್‌ ಕುಲಕರ್ಣಿಗೆ ರಕ್ತದ ಪತ್ರ ಬರೆದ ಅಭಿಮಾನಿಗಳು

ಬಿ.ಎಲ್.‌ ಸಂತೋಷ್‌ ಅವರನ್ನು ಭೇಟಿ ಮಾಡಿದ ಕರಿಯಣ್ಣ ಸಂಗಟಿ

ಕರಿಯಣ್ಣ ಸಂಗಟಿ ಬಿಜೆಪಿಗೇ?

ವಿಧಾನ ಪರಿಷತ್ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆಯೇ ಎಂಬ ಚರ್ಚೆಯೊಂದು ಹರಿದಾಡುತ್ತಿದೆ. ಕಾರಣ ಅವರು ಬಿಜೆಪಿ ಸಮಾವೇಶದ ವೇಳೆ ಬಿ.ಎಲ್. ಸಂತೋಷ್‌ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಶಾಸಕ ಪರಣ್ಣ ಮುನವಳ್ಳಿ, ವಿರುಪಾಕ್ಷಪ್ಪ ಸಿಂಗನಾಳ ಉಪಸ್ಥಿತಿಯಲ್ಲಿ ಈ ಭೇಟಿ ನಡೆದಿದೆ. ಸದ್ಯ ಕಾಂಗ್ರೆಸ್‌ನಲ್ಲಿರುವ ಕರಿಯಣ್ಣ ಸಂಗಟಿ ಅವರು, ಗಂಗಾವತಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಎಚ್.ಆರ್. ಶ್ರೀನಾಥ ಬೆಂಬಲಿಗರಾಗಿದ್ದಾರೆ. ಕಳೆದ ಬಾರಿ ಜೆಡಿಎಸ್‌ನಿಂದ ಗಂಗಾವತಿ ಕ್ಷೇತ್ರದಲ್ಲಿ ಇವರು ಸ್ಪರ್ಧಿಸಿದ್ದರು. ಆದರೆ, ಈ ಬಾರಿ ಎಚ್.ಆರ್. ಶ್ರೀನಾಥ್‌ ಅವರಿಗೆ ಕಾಂಗ್ರೆಸ್ ಟಿಕೆಟ್ ತಪ್ಪುವ ಸಾಧ್ಯತೆ ಇರುವುದರಿಂದ ಈ ಭೇಟಿಯು ಕುತೂಹಲ ಮೂಡಿಸಿದೆ.

Exit mobile version