ಮೈಸೂರು: ಹುಲಿ ದಾಳಿಯಿಂದ ದನಗಾಹಿ ಗಂಭೀರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಗ್ರಾಮಸ್ಥರು ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಂಜನಗೂಡಿನ ಮಹದೇವನಗರದ ಹೊರವಲಯದಲ್ಲಿ ನಡೆದಿದೆ.
ಮಂಗಳವಾರ ದನಗಳನ್ನು ಮೇಯಿಸುತ್ತಿದ್ದಾಗ ಹಸು ಮೇಲೆ ಹುಲಿ ದಾಳಿ ಮಾಡಿತ್ತು. ಈ ವೇಳೆ ಹಸುವನ್ನು ರಕ್ಷಿಸಲು ಹೋಗಿದ್ದಾಗ ದನಗಾಹಿಗೆ ಗಂಭೀರ ಗಾಯಗಳಾಗಿದ್ದವು. ನಂತರ ಅವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿತ್ತು. ಹೀಗಾಗಿ ಸ್ಥಳ ಪರಿಶೀಲನೆಗೆಂದು ಬುಧವಾರ ಅರಣ್ಯ ಇಲಾಖೆ ಸಿಬ್ಬಂದಿಯಿಬ್ಬರು ಆಗಮಿಸಿದ್ದರು. ಈ ವೇಳೆ ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ಜನ, ಜಾನುವಾರುಗಳ ಪ್ರಾಣ ಹೋಗುತ್ತಿದೆ ಎಂದು ಆಕ್ರೋಶ ಹೊರಹಾಕಿದ ಗ್ರಾಮಸ್ಥರು, ಅರಣ್ಯ ಸಿಬ್ಬಂದಿ ಮಹಂತೇಶ್ ಎಂಬುವವರನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಕಳದೆ ವರ್ಷದ ಹಾದನೂರು ಒಡೆಯನಪುರದ ಮಹದೇವೇಗೌಡ ಎಂಬ ರೈತನನ್ನು ಹುಲಿ ಬಲಿ ಪಡೆದಿತ್ತು.
ಆ ನರಭಕ್ಷಕ ಹುಲಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿಯಲೇ ಇಲ್ಲ ಎಂದು ಅರಣ್ಯ ಸಿಬ್ಬಂದಿ ವಿರುದ್ಧ ಗ್ರಾಮಸ್ಥರು ಸಿಟ್ಟು ಪ್ರದರ್ಶನ ಮಾಡಿದ್ದಾರೆ.
ಇದನ್ನೂ ಓದಿ | Kidnap Case: ಬೆಂಗಳೂರಿನಲ್ಲಿ ಕಿಡ್ನ್ಯಾಪ್ ಮಾಡಿ ಹಾಸನದಲ್ಲಿ ವಿದ್ಯಾರ್ಥಿಯನ್ನು ಬಿಟ್ಟುಹೋದರು
ದಿಢೀರ್ ಹುಲಿ ಪ್ರತ್ಯಕ್ಷ
ನಂಜನಗೂಡು ತಾಲೂಕು ಮಹದೇವನಗರದಲ್ಲಿ ರೈತನ ಮೇಲೆ ದಾಳಿ ಮಾಡಿದ್ದ ಹುಲಿ ಮತ್ತೆ ದಿಢೀರ್ ಪ್ರತ್ಯಕ್ಷವಾಗಿದೆ. ಇದರಿಂದ ರೈತರು ಆತಂಕಗೊಂಡಿದ್ದಾರೆ. ಧನಗಾಹಿ ವೀರಭದ್ರ ಭೋವಿ ಮೇಲೆ ದಾಳಿ ನಡೆಸಿದ್ದ ಹುಲಿ, ಮತ್ತಿಮರದ ಜೇನುಕಟ್ಟೆ ಬಳಿ ಪ್ರತ್ಯಕ್ಷವಾಗಿದೆ. ಕಳೆದ ಮೂರು ದಿನಗಳಿಂದ ಹುಲಿ ಕಾಣಿಸಿಕೊಳ್ಳುತ್ತಿದ್ದು, ಅದನ್ನು ಶೀಘ್ರ ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಆಪರೇಷನ್ ಸಕ್ಸಸ್; 3 ದಿನದಿಂದ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ
ಆನೇಕಲ್: ಬೊಮ್ಮನಹಳ್ಳಿಯ ಕೂಡ್ಲು ಗೇಟ್ ಬಳಿ ಇರುವ ಕೃಷ್ಣಾ ರೆಡ್ಡಿ ಬಡಾವಣೆಯಲ್ಲಿ ಕಳೆದ ಮೂರು ದಿನಗಳಿಂದ ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ ಸಿಕ್ಕಿದೆ. ಅರಣ್ಯಾಧಿಕಾರಿಗಳು ನಡೆಸಿದ್ದ ಕಾರ್ಯಾಚರಣೆ (Operation Leopard) ಯಶಸ್ವಿಯಾಗಿದೆ. ಬುಧವಾರ ಬೆಳಗ್ಗೆ ಪಾಳುಬಿದ್ದ ಕಟ್ಟಡವೊಂದರ ಬೇಸ್‌ಮೆಂಟ್‌ನಲ್ಲಿ ಪತ್ತೆಯಾಗಿ ಹಿಡಿಯಲು ಹೋದ ವೈದ್ಯರ ಮೇಲೆ ದಾಳಿ ಮಾಡಿ ಪರಾರಿಯಾಗಿದ್ದ ಈ ಚಿರತೆ ಕಟ್ಟಡದ ಪಕ್ಕದ ಖಾಲಿ ಜಾಗದಲ್ಲಿ ಸೆರೆಯಾಗಿದೆ.
ಬೇಸ್‌ಮೆಂಟ್‌ನಿಂದ ಆರಂಭಿಸಿ ಕಟ್ಟಡದ ನಾನಾ ಭಾಗಗಳಲ್ಲಿ ಓಡಾಡಿದ್ದ ಚಿರತೆ ಕೊನೆಗೆ ಪಕ್ಕದ ಖಾಲಿ ಜಾಗಕ್ಕೆ ಜಿಗಿದು ಪರಾರಿಯಾಗಲು ಯತ್ನಿಸಿತ್ತು. ಈ ಹಂತದಲ್ಲಿ ಅದು ಸೆರೆಯಾಗಿದೆ.
ಕೂಡ್ಲು ಸಮೀಪದ ಕೃಷ್ಣಾರೆಡ್ಡಿ ಬಡಾವಣೆಯಲ್ಲಿ ಕಳೆದ ಭಾನುವಾರ ರಾತ್ರಿ ಚಿರತೆಯೊಂದು ಓಡಾಡಿತ್ತು. ರಾತ್ರಿ 11 ಗಂಟೆಗೆ ಕಾಂಪೌಂಡ್ ಗೋಡೆ ಜಿಗಿದು ಓಡಿದ್ದನ್ನು ಪರಪ್ಪನ ಅಗ್ರಹಾರ ಲಾ ಆ್ಯಂಡ್ ಆರ್ಡರ್ ಪೊಲೀಸರು ಗಮನಿಸಿದ್ದರು. ಮರುದಿನ ಗಮನಿಸುವಾಗ ಅಲ್ಲಿ ಚಿರತೆಯ ಹೆಜ್ಜೆಗಳು ಪತ್ತೆಯಾಗಿತ್ತು. ಕಡೆಂಜಾ ಅಪಾರ್ಟ್‌ಮೆಂಟ್‌ನಲ್ಲಿ ಮಧ್ಯಾಹ್ನದ ಹೊತ್ತಿಗೇ ಚಿರತೆ ಮೆಟ್ಟಿಲು ಹತ್ತಿ ಹೋಗುವುದು ಸಿಸಿ ಟಿವಿಯಲ್ಲಿ ದಾಖಲಾಗಿತ್ತು.
ಇದನ್ನೂ ಓದಿ | Shivamogga News: ಇಸ್ಪೀಟ್ ಅಡ್ಡೆ ಮೇಲೆ ದಾಳಿ: ನಗದು ಸಹಿತ 8 ಜನರ ಬಂಧನ
ಈ ಎಲ್ಲ ಘಟನಾವಳಿಗಳ ಹಿನ್ನೆಲೆಯಲ್ಲಿ ಸೋಮವಾರ ಸಂಜೆಯಿಂದಲೇ ಕಾರ್ಯಾಚರಣೆಗೆ ಇಳಿದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಂದು ದಿನವಾದರೂ ಚಿರತೆಯನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ಈ ನಡುವೆ ಮಂಗಳವಾರ ಸಂಜೆ ಥರ್ಮಲ್ ತಂತ್ರಜ್ಞಾನದ ಡ್ರೋಣ್ ಮೂಲಕ ಕಾರ್ಯಾಚರಣೆ ನಡೆಸಿದ್ದರೂ ಸಿಕ್ಕಿರಲಿಲ್ಲ. ಮೂರನೇ ದಿನದ ಕಾರ್ಯಾಚರಣೆಗೆ ಹುಣಸೂರಿನಿಂದ ವನ್ಯ ಜೀವಿ ರಕ್ಷಣಾ ತಂಡ ಆಗಮಿಸಿತ್ತು. ಜತೆಗೆ ವನ್ಯ ಜೀವಿ ಸಂರಕ್ಷಣಾ ವಿಭಾಗದ ಶಾರ್ಪ್ ಶೂಟರ್ಸ್ ಕೂಡಾ ಬಂದಿದ್ದರು. ಬುಧವಾರ ಸುದೀರ್ಘ ಕಾರ್ಯಾಚರಣೆ ನಂತರ ಅರಿವಳಿಕೆ ಮದ್ದು ನೀಡಿ ಚಿರತೆಯನ್ನು ಸೆರೆ ಹಿಡಿಯಲಾಗಿದೆ.