Site icon Vistara News

Anjali Murder Case: ಅಂಜಲಿ ಹತ್ಯೆ ಪ್ರಕರಣ; ಆತ್ಮಹತ್ಯೆಗೆ ಯತ್ನಿಸಿದ ಸಹೋದರಿ ಚೇತರಿಕೆ

Anjali Murder Case

Anjali Murder Case

ಹುಬ್ಬಳ್ಳಿ: ಅಂಜಲಿ ಅಂಬಿಗೇರ ಹತ್ಯೆ ಪ್ರಕರಣ (Anjali Murder Case) ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದೆ. ಈ ಮಧ್ಯೆ ಸಹೋದರಿಯ ಹತ್ಯೆಯಿಂದ ಮಾನಸಿಕವಾಗಿ ಕುಗ್ಗಿ ಹೋಗಿರುವ ಯಶೋದಾ ಮನನೊಂದು ಫಿನಾಯಿಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಅವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಈ ಬಗ್ಗೆ ಮಾತನಾಡಿದ ಯಶೋದಾ ಅವರ ಅಜ್ಜಿ ಗಂಗಮ್ಮ, ʼʼಅಕ್ಕನ ಕೊಲೆಯಿಂದ ಮಾನಸಿಕವಾಗಿ ನೊಂದಿದ್ದ ಯಶೋದಾ ಶನಿವಾರ ರಾತ್ರಿ ಫಿನಾಯಿಲ್‌ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಳು. ಅಸ್ವಸ್ಥಳಾಗಿದ್ದ ಅವಳನ್ನು ಕೂಡಲೇ ಕಿಮ್ಸ್​ (KIMS) ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಯಶೋದಾ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಜತೆಗೆ ಚಿಕಿತ್ಸೆ ಮುಂದುವರಿದಿದೆʼʼ ಎಂದು ವಿವರಿಸಿದ್ದಾರೆ.

ಕಾರಣವೇನು?

ಅಂಜಲಿ ಅವರನ್ನು ಕೊಲೆ ಮಾಡಿದ್ದ ಗಿರೀಶ್‌ನನ್ನು ಸದ್ಯ ಗಾಯಗೊಂಡಿದ್ದು, ಪೊಲೀಸರು ಆತನಿಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ. ʼʼಪೊಲೀಸರು ತನ್ನ ಅಕ್ಕನನ್ನು ಕೊಂದ ಗಿರೀಶ್‌ಗೆ ಚಿಕಿತ್ಸೆ ನೀಡಿ ಗುಣಮುಖನನ್ನಾಗಿ ಮಾಡಲು ಯತ್ನಿಸುತ್ತಿದ್ದಾರೆ. ಆತನನ್ನು ಎನ್‌ಕೌಂಟರ್‌ ಮಾಡುವ ಬದಲು ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ವಿಚಾರವನ್ನೇ ಮನಸ್ಸಿಗೆ ಹಚ್ಚಿಕೊಂಡಿದ್ದಾಳೆ. ಈ ಬಗ್ಗೆ ನಿನ್ನೆ ಬೆಳಿಗ್ಗೆಯಿಂದಲೂ ಆಕೆ ಮಾನಸಿಕವಾಗಿ ಕುಗ್ಗಿದ್ದಳು. ಇದರಿಂದ ಆತ್ಮಹತ್ಯೆ ಮಾಡಲು ಮುಂದಾಗಿದ್ದಳುʼʼ ಎಂದು ಗಂಗಮ್ಮ ತಿಳಿಸಿದ್ದಾರೆ.

ಎನ್‌ಕೌಂಟರ್‌ ಮಾಡಿ

ಶುಕ್ರವಾರ ವಿಸ್ತಾರ ನ್ಯೂಸ್‌ ಜತೆ ಮಾತನಾಡಿದ್ದ ಅಂಜಲಿಯ ಇನ್ನೋರ್ವ ಸಹೋದರಿ ಪೂಜಾ, ʼʼಗಿರೀಶ್‌ನನ್ನು ಎನ್‌ಕೌಂಟರ್ ಮಾಡಬೇಕು. ಯಾವುದೇ ಕಾರಣಕ್ಕೂ ಆರೋಪಿಗೆ ಚಿಕಿತ್ಸೆ ಕೊಡಬಾರದು. ಅವನನ್ನು ಆದಷ್ಟು ಬೇಗ ಎನ್‌ಕೌಂಟರ್ ಮಾಡಬೇಕು. ನಮ್ಮ ಅಕ್ಕ ಹೇಗೆ ರಕ್ತ ಸುರಿದು ಪ್ರಾಣ ಬಿಟ್ಟಳೋ ಅದೇ ರೀತಿ ಅವನು ಸಾಯಬೇಕುʼʼ ಎಂದು ಆಗ್ರಹಿಸಿದ್ದರು.

ʼʼನಮ್ಮ ಅಕ್ಕನಿಗೂ ಅವನಿಗೂ ಯಾವುದೇ ಸಂಬಂಧ ಇಲ್ಲ. ಏನೇನೋ ಹೇಳಿ ದಿಕ್ಕು ತಪ್ಪಿಸುತ್ತಿದ್ದಾರೆ. ಪೊಲೀಸರು ಹೇಗೆ ಬೇಕೋ ಹಾಗೆ ಮಾಡುವ ವಿಚಾರದಲ್ಲಿದ್ದಾರೆ. ಇದನ್ನು ಆದಷ್ಟು ಬೇಗ ತನಿಖೆ ಮಾಡಬೇಕು. ಬೆಳಿಗ್ಗೆ ಮಾತನಾಡಲು ಬಂದವನು ಚಾಕು ಹಾಕಿದ. ನಾವು ನಮ್ಮ ಅಕ್ಕನ ಜತೆ ಮಾತನಾಡಲು ಸಹ ಆಗಲಿಲ್ಲ. ಕೊನೆ ಗಳಿಗೆಯಲ್ಲಿ ಪೊಲೀಸರು ಬಂದು ಡಾಕ್ಟರ್ ಸಹ ಕರೆಯಲಿಲ್ಲ. ಕೇವಲ ಪೋಟೋ ತೆಗೆದುಕೊಂಡು ಹೋದರು. ಅವನಿಗೆ ಅದೇ ರೀತಿ ಶಿಕ್ಷೆ ಆಗಬೇಕುʼʼ ಎಂದು ಹೇಳಿದ್ದರು.

ʼʼನಮ್ಮ ಅಕ್ಕನಿಗೂ ಗಿರೀಶ್‌ಗೂ ಏನೇನೋ ಸಂಬಂಧ ಕಲ್ಪಿಸುತ್ತಿದ್ದಾರೆ. ಹಾಗಾದರೆ ರೈಲಿನಲ್ಲಿ ಅವನು ಯಾರದೋ ಜತೆ ಜಗಳ ಮಾಡಿದ್ದ. ಅವರಿಗೂ, ಅವನಿಗೂ ಸಂಬಂಧ ಇದೆಯಾ?ʼʼ ಎಂದು ಸಹೋದರಿ ಪ್ರಶ್ನೆ ಮಾಡಿದ್ದರು.

ಇದನ್ನೂ ಓದಿ: Anjali Murder Case: ಅಂಜಲಿ ಕೊಂದವನ ಎನ್‌ಕೌಂಟರ್ ಮಾಡಿ: ಸಹೋದರಿ ಪೂಜಾ ಆಗ್ರಹ

ಶಾಸಕ ಅರವಿಂದ ಬೆಲ್ಲದ್ ಭೇಟಿ

ಅಂಜಲಿ ಮನೆಗೆ ಭಾನುವಾರ ಭೇಟಿ ನೀಡಿದ ಶಾಸಕ ಅರವಿಂದ ಬೆಲ್ಲದ್ ಸಾಂತ್ವಾನ ಹೇಳಿದ್ದಾರೆ. ವೀರಾಪುರ ಓಣಿಯಲ್ಲಿರುವ ಅಂಜಲಿ ಮನೆಗೆ ಆಗಮಿಸಿ ಅಂಜಲಿ ಅವರ ಅಜ್ಜಿ ಗಂಗಮ್ಮ, ಸಹೋದರಿಯರಿಗೆ ಸಾಂತ್ವನ ಹೇಳಿದ್ದಾರೆ. ಕುಟುಂಬದ ಜತೆಗೆ ಇರುತ್ತೇವೆ ಎಂದು ಧೈರ್ಯ ಹೇಳಿದ್ದಾರೆ. ಕೊಲೆಗಡುಕ ಗಿರೀಶ್‌ಗೆ ಗಲ್ಲು ಶಿಕ್ಷೆ ಆಗಬೇಕೆಂದು ಬೆಲ್ಲದ್ ಆಗ್ರಹಿಸಿದ್ದಾರೆ.

Exit mobile version