ಹುಬ್ಬಳ್ಳಿ: ನೇಹಾ ಹಿರೇಮಠ ಕೊಲೆ ಬೆನ್ನಲ್ಲೇ ನಡೆದ ಅಂಜಲಿ ಹತ್ಯೆ ಪ್ರಕರಣ (Anjali Murder Case) ಅವಳಿ ನಗರದ ಜನರನ್ನು ಬೆಚ್ಚಿ ಬೀಳಿಸಿದೆ. ಅಂಜಲಿ ಹತ್ಯೆ ಪ್ರಕರಣದಲ್ಲಿ ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಇನ್ಸ್‌ಪೆಕ್ಟರ್ ಹಾಗೂ ಮಹಿಳಾ ಪೇದೆಯನ್ನು ಅಮಾನತು ಮಾಡಿದ ಬೆನ್ನಲ್ಲೇ ಇದೀಗ ಐಪಿಎಸ್ ಅಧಿಕಾರಿಯ ತಲೆದಂಡವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಲೋಪ ಎಸಗಿದ್ದರಿಂದ ಹುಬ್ಬಳ್ಳಿ-ಧಾರವಾಡ ಡಿಸಿಪಿ ರಾಜೀವ್ ಅಮಾನತುಗೊಂಡಿದ್ದಾರೆ.
ಡಿಸಿಪಿ ರಾಜೀವ್ ಅವರನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಗೃಹ ಸಚಿವರು ಹುಬ್ಬಳ್ಳಿಗೆ ಭೇಟಿ ನೀಡುವ ಮುನ್ನಾ ಅಮಾನತು ಆದೇಶ ಹೊರಬಿದ್ದಿದ್ದು, ಸೋಮವಾರ ಹುಬ್ಬಳ್ಳಿಗೆ ಗೃಹ ಸಚಿವ ಪರಮೇಶ್ವರ್ ಆಗಮಿಸಲಿದ್ದಾರೆ. ಹುಬ್ಬಳ್ಳಿಯಲ್ಲಿ ಸರಣಿ ಹತ್ಯೆಗಳ ಹಿನ್ನೆಲೆಯಲ್ಲಿ ಐಪಿಎಸ್ ಅಧಿಕಾರಿ ವಿರುದ್ಧ ಕ್ರಮವಾಗಿದೆ. ಇನ್ನು ಈ ಪ್ರಕರಣದಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರ ತಲೆದಂಡವೂ ಆಗಲಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ | Anjali Murder Case: ನನ್ನ ಮಗ ಮಾಡಿದ್ದು ತಪ್ಪು, ಕೋರ್ಟ್ ಅವನಿಗೆ ಯಾವ ಶಿಕ್ಷೆಯಾದ್ರೂ ಕೊಡಲಿ: ಆರೋಪಿ ಗಿರೀಶ್ ತಾಯಿ
ಕರ್ತವ್ಯ ಲೋಪ; ಇನ್ಸ್‌ಪೆಕ್ಟರ್, ಮಹಿಳಾ ಪೇದೆ ಅಮಾನತು
ಅಂಜಲಿ ಕೊಲೆ ಪ್ರಕರಣದಲ್ಲಿ (Anjali Murder Case) ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಹಾಗೂ ಮಹಿಳಾ ಪೇದೆಯನ್ನು ಅಮಾನತು ಮಾಡಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಇತ್ತೀಚೆಗೆ ಆದೇಶ ಹೊರಡಿಸಿದ್ದರು.
ಕೊಲೆ ಪ್ರಕರಣಕ್ಕೂ ಮೊದಲೇ ಅಂಜಲಿ ಅಜ್ಜಿ, ಬೆಂಡಿಗೇರಿ ಪೊಲೀಸ್ ಠಾಣೆಗೆ ಬಂದು ಬೆದರಿಕೆ ಇದೆ ಎಂದು ದೂರು ನೀಡಿದ್ದರು. ದೂರು ನೀಡಿದರೂ ಪೊಲೀಸರು ನಿರ್ಲಕ್ಷ್ಯ ಮಾಡಿರುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ಬೆಂಡಿಗೇರಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಹಾಗೂ ಮಹಿಳಾ ಪೊಲೀಸ್ ಪೇದೆ ರೇಖಾ ಅವರನ್ನು ಹು-ಧಾ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಅಮಾನತು ಮಾಡಿದ್ದರು.