ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಬ್ಬರದ ಪ್ರಚಾರ ನಡೆಸುತ್ತಿವೆ. ಈಗಾಗಲೇ ಅಮಿತ್ ಶಾ ಅವರು ಕರ್ನಾಟಕದಲ್ಲಿ ಬೀಡುಬಿಟ್ಟಿದ್ದಾರೆ. ಅಧಿಕಾರದ ಗದ್ದುಗೆ ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವ ಬಿಜೆಪಿಯು ನರೇಂದ್ರ ಮೋದಿ ಅವರ ವರ್ಚಸ್ಸನ್ನು ಬಳಸಿಕೊಳ್ಳುವ ಮೂಲಕ ಜನರ ಮನಗೆಲ್ಲಲು ಮುಂದಾಗಿದೆ. ಹಾಗಾಗಿ, ರಾಜ್ಯದಲ್ಲಿ ಮೋದಿ ಅವರು ಸಾಲು ಸಾಲು ಚುನಾವಣೆ ರ‍್ಯಾಲಿಗಳನ್ನು ನಡೆಸಲಿದ್ದು, ಇದಕ್ಕಾಗಿ ಹಲವು ಪ್ರದೇಶಗಳನ್ನು ಗುರುತಿಸಲಾಗಿದೆ. ಏಪ್ರಿಲ್ 28ರ ನಂತರದ ರ‍್ಯಾಲಿಗಳ ದಿನಾಂಕ ನಿಗದಿಯಾಗಿದ್ದು, ಮೇ 3ರೊಳಗೆ ಅಂಕೋಲಾದಲ್ಲಿ ರ‍್ಯಾಲಿ ನಡೆಸಲಿದ್ದಾರೆ. ಈಗಾಗಲೇ ಕಾರವಾರ ಹಾಗೂ ಅಂಕೋಲಾ ಮಧ್ಯೆ ಮೋದಿ ರ‍್ಯಾಲಿಗೆ ಜಾಗವನ್ನೂ ಗುರುತಿಸಲಾಗಿದೆ.
ಶಿವಮೊಗ್ಗಕ್ಕೆ ಮತ್ತೆ ಮೋದಿ ಭೇಟಿ
ಕಳೆದ ತಿಂಗಳಷ್ಟೇ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಚಾಲನೆ ನೀಡಿದ್ದ ಮೋದಿ, ಮತ್ತೆ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ. ಮೇ 1ರಂದು ಅವರು ಶಿವಮೊಗ್ಗಕ್ಕೆ ಆಗಮಿಸುವ ಸಾಧ್ಯತೆ ಇದ್ದು, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಆಯನೂರಿನಲ್ಲಿ ಮೋದಿ ರ‍್ಯಾಲಿ ನಡೆಸಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ.
ಆಯನೂರಿನ ಸಮಾವೇಶದಲ್ಲಿ ಲಕ್ಷಾಂತರ ಮಂದಿಯನ್ನು ಸೇರಿಸಲು ಬಿಜೆಪಿ ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ, ಕರಾವಳಿಯಿಂದಲೇ ಮೋದಿ ಅವರು ಕರ್ನಾಟಕದಲ್ಲಿ ಚುನಾವಣೆ ಪ್ರಚಾರಕ್ಕೆ ಮುನ್ನುಡಿ ಬರೆಯಲಿದ್ದಾರೆ ಎನ್ನಲಾಗಿದೆ. ಕರಾವಳಿಯಲ್ಲಿ ಬಿಜೆಪಿ ‘ಅಲೆ’ ಇರುವುದರಿಂದ ಅಲ್ಲಿಂದಲೇ ಪ್ರಚಾರ ಆರಂಭಿಸಿ, ನಂತರ ಬೇರೆ ಕಡೆ ರ‍್ಯಾಲಿ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
6 ಬಾರಿ ಆಗಮನ, 18 ರ‍್ಯಾಲಿಯಲ್ಲಿ ಭಾಗಿ
ವಿಧಾನಸಭೆ ಚುನಾವಣೆಗೂ ಮುನ್ನ ನರೇಂದ್ರ ಮೋದಿ ಅವರು ಆರು ಬಾರಿ ಕರ್ನಾಟಕದಲ್ಲಿ ಅಬ್ಬರದ ಪ್ರಚಾರ ಕೈಗೊಳ್ಳಲಿದ್ದಾರೆ. ಒಮ್ಮೆ ಬಂದರೆ ಮೂರು ರ‍್ಯಾಲಿಗಳಲ್ಲಿ ಮೋದಿ ಭಾಗವಹಿಸಲಿದ್ದು, ಹಲವು ಕ್ಷೇತ್ರಗಳ ಮೇಲೆ ಪರಿಣಾಮ ಬೀರುವ ಜಾಗದಲ್ಲಿ ರ‍್ಯಾಲಿ ಆಯೋಜನೆಗೆ ಸಿದ್ಧತೆ ನಡೆದಿದೆ ಎಂದು ತಿಳಿದುಬಂದಿದೆ. ಹೀಗೆ, ಒಮ್ಮೆ ಮೂರು ರ‍್ಯಾಲಿಯಂತೆ ಆರು ಬಾರಿ ಬಂದು 18 ರ‍್ಯಾಲಿಗಳಲ್ಲಿ ಮೋದಿ ಮೋಡಿ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಅವರು ಕಾಂಗ್ರೆಸ್ ಸೇರಿದ ಕಾರಣ ಬಿಜೆಪಿಯಲ್ಲಿ ಲಿಂಗಾಯತರನ್ನು ಕಡೆಗಣಿಸಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಇನ್ನು, ಹಲವು ನಾಯಕರಿಗೆ ಟಿಕೆಟ್ ನೀಡದ ಕಾರಣ ಬಿಜೆಪಿಯಲ್ಲಿ ಬಂಡಾಯ ಎದ್ದಿದೆ. ಆಡಳಿತ ವಿರೋಧಿ ಅಲೆಯೂ ಬಿಜೆಪಿಗೆ ಮುಳುವಾಗುವ ಸಾಧ್ಯತೆ ಇದೆ. ಇವೆಲ್ಲ ವಿಚಾರಗಳು ಗೌಣವಾಗಿ, ಜನ ಬಿಜೆಪಿ ಪರ ವಾಲಲು ನರೇಂದ್ರ ಮೋದಿ ಅವರ ರ‍್ಯಾಲಿಗಳು ನಿರ್ಣಾಯಕ ಎಂದೇ ಹೇಳಲಾಗುತ್ತಿದೆ.