Site icon Vistara News

Anna Bhagya: ಅನ್ನ ಭಾಗ್ಯ ಹಣ ವರ್ಗಾವಣೆಗೆ ಚಾಲನೆ: ಎರಡು ಜಿಲ್ಲೆ ಫಲಾನುಭವಿಗಳ ಖಾತೆಗೆ ತಲಾ 170 ರೂ. ರವಾನೆ

Anna bhagya scheme launched by siddaramaiah DK Shivakumar

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಐದು ಗ್ಯಾರಂಟಿ ಯೋಜನೆಗಳಲ್ಲೊಂದಾದ (Congress Guarantee) ಅನ್ನಭಾಗ್ಯಕ್ಕೆ (Anna Bhagya) ವಿಧಾನಸೌಧದಲ್ಲಿ ಚಾಲನೆ ಸಿಕ್ಕಿದೆ. ರಾಜ್ಯಕ್ಕೆ ಅಗತ್ಯವಾದ 2.3 ಮೆಟ್ರಿಕ್‌ ಟನ್‌ ಅಕ್ಕಿ ದೊರಕದ ಕಾರಣ ಅಲ್ಲಿವರೆಗೆ ಫಲಾನುಭವಿಗಳ ಖಾತೆಗೆ ಮಾಸಿಕ 170 ರೂ. ಹಾಕುವ ಕಾರ್ಯಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.

ಕೋಲಾರ, ಮೈಸೂರು ಜಿಲ್ಲೆಗಳಿಗೆ ನಗದು ವರ್ಗಾವಣೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಾಯಿತು. ಧಾರವಾಡ, ರಾಮನಗರ, ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ ಹಾಗೂ ಯಾದಗಿರಿ ಜಿಲ್ಲೆಗಳಿಗೆ ನೇರ ವರ್ಗಾವಣೆ ಆಗಲಿದೆ. ಹಂತಹಂತವಾಗಿ ಎಲ್ಲ ಜಿಲ್ಲೆಗಳಿಗೆ ಹಣ ವರ್ಗಾವಣೆ ಆಗಲಿದೆ. ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್‌ ಮತ್ತಿತರ ಸಚಿವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌. ಮುನಿಯಪ್ಪ ಮಾತನಾಡಿ, ಮನುಷ್ಯ ಸಾಕು ಎನ್ನುವುದು ಯಾವುದಾದರೂ ಇದ್ದರೆ ಅದು ಊಟ. ಇಂತಹ ದಿಟ್ಟ ಹೆಜ್ಜೆಯನ್ನು ಸಿದ್ದರಾಮಯ್ಯ ಅವರ ಸರ್ಕಾರ ಇಟ್ಟಿದೆ. ಕಾಂಗ್ರೆಸ್ ನೇತೃತ್ವದಲ್ಲಿ, ಯುಪಿಎ ಸರ್ಕಾರದ ಪ್ರಧಾನಿಯಾಗಿದ್ದ ಮನ್‌ಮೋಹನ್ ಸಿಂಗ್ ಅವ್ರು ಕಾಯ್ದೆ ತಂದಿದ್ದರು. ರಾಷ್ಟ್ರದಲ್ಲಿ ಯಾರು ಹಸಿವಿನಿಂದ ಇರಬಾರದು ಎಂದು ಆಹಾರ ಭದ್ರತಾ ಕಾಯ್ದೆ ತಂದಿದ್ದರು.

ಅಕ್ಕಿ ತರಲು ಎಲ್ಲಾ ಯೋಜನೆಯನ್ನು ರಾಜ್ಯ ಸರ್ಕಾರ ಮಾಡಿತ್ತು. ಕೇಂದ್ರ ಸರ್ಕಾರದ ಬಳಿ ಅಕ್ಕಿ ಇದ್ದರೂ ಕೊಡದೆ ಬಡವರ ಯೋಜನೆಯಲ್ಲಿ ರಾಜಕೀಯ ಮಾಡುವ ಪ್ರಯತ್ನ ಮಾಡಿದೆ. ಸಿಎಂ ನೇತೃತ್ವದ ಸಚಿವ ಸಂಪುಟದಲ್ಲಿ ನಿರ್ಧಾರ ಮಾಡಿ ಅಕ್ಕಿಯ ಬದಲಿಗೆ ಹಣ ಕೊಡಲು ತೀರ್ಮಾನಿಸಲಾಯಿತು. ಇಂದು ಕೋಲಾರ, ಮೈಸೂರು ಜಿಲ್ಲೆಗಳಿಗೆ ನಗದು ವರ್ಗಾವಣೆ ಮಾಡಲಾಗಿದೆ. ಇನ್ನು 10-15 ದಿನಗಳಲ್ಲಿ ಸಂಪೂರ್ಣವಾಗಿ ಎಲ್ಲಾ ಜಿಲ್ಲೆಗಳಿಗೆ ಹೋಗಿ ಯೋಜನೆ ತಲುಪಿಸುವ ಕೆಲಸ ಮಾಡುತ್ತೇವೆ ಎಂದರು.

ಈಗಾಗಲೆ ಕೇಂದ್ರ ಸರ್ಕಾರ ನೀಡುತ್ತಿರುವ ತಲಾ ಐದು ಕೆ.ಜಿ. ಅಕ್ಕಿ ಜತೆಗೆ ಮತ್ತೆ ಐದು ಕೆ.ಜಿ. ಸೇರಿಸಿ 10 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡುವುದಾಗಿ ಕಾಂಗ್ರೆಸ್‌ ಪಕ್ಷ ಚುನಾವಣೆಗೂ ಮುನ್ನ ಭರವಸೆ ನೀಡಿತ್ತು. ಅದರಂತೆ ಸಿದ್ದರಾಮಯ್ಯ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಪಕ್ಷ ಮೊದಲ ಸಂಪುಟ ಸಭೆಯಲ್ಲೇ ಎಲ್ಲ ಐದು ಗ್ಯಾರಂಟಿಗಳನ್ನೂ ಈಡೇರಿಸುವುದಾಗಿ ತಿಳಿಸಿತ್ತು.

ಆದರೆ ಅನ್ನ ಭಾಗ್ಯ ಯೋಜನೆಗೆ 2.3 ಮೆಟ್ರಿಕ್‌ ಟನ್‌ ಅಕ್ಕಿ ಬೇಕಾಗಿದ್ದರಿಂದ ಕೇಂದ್ರ ಸರ್ಕಾರದ ಅಧೀನದ ಭಾರತೀಯ ಆಹಾರ ನಿಗಮವನ್ನು (ಎಫ್‌ಸಿಐ) ರಾಜ್ಯ ಸರ್ಕಾರ ಸಂಪರ್ಕಿಸಿತ್ತು. ಮೊದಲಿಗೆ ಅಕ್ಕಿಯನ್ನು ತಲಾ 34 ರೂ.ನಂತೆ ನೀಡುವುದಾಗಿ ಎಫ್‌ಸಿಐ ಒಪ್ಪಿತ್ತು. ಆದರೆ ದೇಶದಲ್ಲಿ ಅಕ್ಕಿ ದರ ನಿಯಂತ್ರಿಸುವ ಸಲುವಾಗಿ ರಾಜ್ಯಗಳಿಗೆ ಅಕ್ಕಿ ನೀಡದಂತೆ ಕೇಂದ್ರ ಸರ್ಕಾರ ಎಫ್‌ಸಿಐಗೆ ಪತ್ರ ಬರೆದಿತ್ತು.

ಇದನ್ನೂ ಓದಿ: Congress Guarantee: ಅಕ್ಕಿಗಾಗಿ ಮತ್ತೆ ಕೇಂದ್ರಕ್ಕೆ ಮೊರೆಯಿಟ್ಟ ಕರ್ನಾಟಕ: ಫಲಿತಾಂಶ ಜೀರೊ ಎಂದ ಸಚಿವ ಮುನಿಯಪ್ಪ

ಇದರ ನಂತರ ರಾಜಕೀಯ ಹಗ್ಗಜಗ್ಗಾಟ ನಡೆದಿದೆ. ಕೇಂದ್ರ ಸರ್ಕಾರವು ಕಾಂಗ್ರೆಸ್‌ ಪಕ್ಷದ ಯೋಜನೆಯ ಸಫಲತೆಯನ್ನು ತಡೆಯಲು ಅನಗತ್ಯವಾಗಿ ಅಡ್ಡಿಪಡಿಸುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌. ಮುನಿಯಪ್ಪ ಸೇರಿ ಅನೇಕರು ಆರೋಪಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಯೋಜನೆಯನ್ನು ಜಾರಿ ಮಾಡಲಾಗದೆ ಕೇಂದ್ರದ ವಿರುದ್ಧ ಆರೋಪ ಮಾಡುತ್ತಿದೆ ಎಂದು ಬಿಜೆಪಿ ಹೇಳುತ್ತಿದೆ.

ಇದೆಲ್ಲದರ ನಡುವೆ, ಅಕ್ಕಿ ದೊರೆಯುವವರೆಗೂ ಪ್ರತಿ ಫಲಾನುಭವಿಗೆ ತಲಾ ಕೆ.ಜಿ. ಅಕ್ಕಿಗೆ ತಗಲುತ್ತಿದ್ದ 34 ರೂ.ನಂತೆ 5 ಕೆ.ಜಿ. ಅಕ್ಕಿಗೆ 170 ರೂ.ನಂತೆ ಕುಟುಂಬದ ಮುಖ್ಯಸ್ಥರ ಪಡಿತರ ಚೀಟಿಯೊಂದಿಗೆ ಸಂಪರ್ಕ ಹೊಂದಿರುವ ಖಾತೆಗೆ ಜಮಾ ಮಾಡುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.

Exit mobile version