ಬೆಂಗಳೂರು: ಮತದಾರರ ಮಾಹಿತಿಯನ್ನು (Voter Data) ಅಕ್ರಮವಾಗಿ ಸಂಗ್ರಹಿಸಲಾಗುತ್ತಿತ್ತು ಎಂಬ ಆರೋಪದಲ್ಲಿ ಮತ್ತೊಬ್ಬನನ್ನು ಪೊಲೀಸರು ಬಂದಿಸಿದ್ದು, ಚಿಲುಮೆ ಸಂಸ್ಥೆಯ ಪ್ರಕರಣದಲ್ಲಿ ಆರಕ್ಕೂ ಹೆಚ್ಚು ಜನರು ಬಂಧನವಾದಂತಾಗಿದೆ.
ಹಲಸೂರು ಗೇಟ್ ಪೊಲೀಸರು ಅನಿಲ್ ಎಂಬಾತನನ್ನು ಬಂಧಿಸಿದ್ದು, ಈತ ಮಹದೇವಪುರದ ಉಸ್ತುವಾರಿ ವಹಿಸಿದ್ದ ಎನ್ನಲಾಗಿದೆ. ಬಿಎಲ್ಒ ಕಾರ್ಡ್ ಪಡೆಯುವುದು, ಮ್ಯಾಪಿಂಗ್ ಮಾಡುವುದು, ಮಾಹಿತಿ ಸಂಗ್ರಹಕ್ಕೆ ಎಷ್ಟು ಜನ ಬೇಕು ಎನ್ನುವ ವಿಚಾರವನ್ನು ನೋಡಿಕೊಳ್ಳುತ್ತಿದ್ದ. ಚಿಲುಮೆ ಮುಖ್ಯಸ್ಥ ರವಿಕುಮಾರ್ ಜೊತೆಯೇ ಇರುತ್ತಾ ಇದ್ದ ಎನ್ನಲಾಗಿದ್ದು, ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಹೇಳಿದ್ದಾರೆ.
ಭಯ ಬಿದ್ದ ಬಿಬಿಎಂಪಿ ಅಧಿಕಾರಿಗಳು
ಒಂದೆಡೆ ಆರೋಪಿಗಳನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದರೆ ಇನ್ನೊಂದೆಡೆ ತಮಗೆ ಮಾನವ ಹಕ್ಕು ಉಲ್ಲಂಘನೆ ಆಗುವ ರೀತಿಯಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಆರೋಪಿಸಿದ್ದಾರೆ.
ಈಗಾಗಲೆ ಆರೋಪಕ್ಕೆ ಒಳಗಾಗಿರುವ ಆರ್‌ಒ ಹಾಗೂ ಎಆರ್‌ಒಗಳು ಬಿಬಿಎಂಪಿ ಅಧಿಕಾರಿಗಳ ಮತ್ತು ನೌಕರರ ಸಂಘದ ಮೊರೆ ಹೋಗಿದ್ದಾರೆ. ಪೊಲೀಸರ ವಿಚಾರಣೆ ನೆಪ ಹೇಳಿ ಅರೆಸ್ಟ್ ಮಾಡುತ್ತಿರುವುದು ಕಂಡುಬರುತ್ತಿದೆ.
ತಮ್ಮನ್ನೂ ಇದೇ ರೀತಿ ಬಂಧಿಸಿದರೆ ಕುಟುಂಬದ ಪರಿಸ್ಥಿತಿಯೇನು ಎಂಬುದು ಪ್ರಶ್ನೆ. ಈ ಹಿನ್ನೆಲೆ 200ಕ್ಕೂ ಹೆಚ್ಚು ಅಧಿಕಾರಿಗಳಿಂದ ನಿರೀಕ್ಷಣಾ ಜಾಮೀನಿಗೆ ಸಿದ್ದತೆ ನಡೆಸಲಾಗಿದೆ. ಬಹುಶಃ ಮಂಗಳವಾರ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.
ಇದನ್ನೂ ಓದಿ | Voter Data | ಖಾಲಿ ಬಿಎಲ್‌ಒ ಕಾರ್ಡ್‌ಗಳಿಗೆ ಸೀಲ್, ಸಹಿ ಮಾಡಿ ವಿತರಿಸುತ್ತಿದ್ದ ಆರ್‌ಒಗಳು!