Site icon Vistara News

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ; ವಿದ್ಯಾರ್ಥಿಗೆ ಥಳಿಸಿದ ಕಿಡಿಗೇಡಿಗಳು!

ನೈತಿಕ ಪೊಲೀಸ್‌ ಗಿರಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ನೈತಿಕ ಪೊಲೀಸ್‌ಗಿರಿ ಪ್ರಕರಣ ಬೆಳಕಿಗೆ ಬಂದಿದ್ದು, ಅನ್ಯಕೋಮಿನ ವಿದ್ಯಾರ್ಥಿ ಜತೆ ಯುವತಿಯೊಬ್ಬಳು ಮಾತನಾಡುತ್ತಿದ್ದಳು ಎಂಬ ಕಾರಣಕ್ಕೆ ಕಿಡಿಗೇಡಿಗಳು ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ಸಂಬಂಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಳ್ಯದ ಸರ್ಕಾರಿ ಜೂನಿಯರ್ ಕಾಲೇಜು ವಿದ್ಯಾರ್ಥಿಗಳ ಮೇಲೆ ಹಲ್ಲೆ‌ ನಡೆದಿದ್ದು, ಮಂಗಳವಾರ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಒಂದೇ ಕಾಲೇಜಿನಲ್ಲಿ ಕಲಿಯುತ್ತಿದ್ದ ಬೇರೆ ಬೇರೆ ಕೋಮಿನ ವಿದ್ಯಾರ್ಥಿಗಳಿಬ್ಬರು ಒಟ್ಟಿಗೆ ಇರುತ್ತಿರುವುದೇ ಹಲ್ಲೆಗೆ ಕಾರಣ ಎನ್ನಲಾಗಿದೆ.

ವಿದ್ಯಾರ್ಥಿಗಳ ಮೇಲೆ ನೈತಿಕ ಪೊಲೀಸ್ ಗಿರಿ

ಪ್ರಥಮ ಬಿಕಾಂ ಕಲಿಯುತ್ತಿದ್ದ ಮಹಮ್ಮದ್ ಹನೀಫ್‌ ಹಾಗೂ ಆತನ ಸಹಪಾಠಿ ವಿದ್ಯಾರ್ಥಿನಿ ಆತ್ಮೀಯವಾಗಿ ಮಾತನಾಡುತ್ತಿದ್ದರು. ಈ ಬಗ್ಗೆ ಒಂದು ಬಾರಿ ಎಚ್ಚರಿಕೆಯನ್ನೂ ನೀಡಿದ್ದಾರೆನ್ನಲಾಗಿದೆ. ಆದರೆ, ಇಬ್ಬರೂ ಇದಕ್ಕೆ ತಲೆಕೆಡಿಸಿಕೊಳ್ಳದೆ ನಮ್ಮ ವಿಷಯ ನಿಮಗೆ ಏಕೆ ಎಂದು ಪ್ರಶ್ನೆ ಮಾಡಿದ್ದರಿಂದ ಕಿಡಿಗೇಡಿಗಳ ಗುಂಪು ಕೆರಳಿದೆ ಎನ್ನಲಾಗಿದೆ.

ಈ ಬಗ್ಗೆ ಕಾಲೇಜಿನ ಕೆಲ ವಿದ್ಯಾರ್ಥಿಗಳು ಅಸಮಾಧಾನ ಹೊಂದಿದ್ದರು. ಅಲ್ಲದೆ, ಈ ಇಬ್ಬರು ವಿದ್ಯಾರ್ಥಿಗಳು ತರಗತಿಗೆ ಹಾಜರಾಗದೆ ಹೊರಗೆ ಏಕಾಂತದಲ್ಲಿ ಕುಳಿತಿದ್ದನ್ನು ನೋಡಿದ್ದ ಗುಂಪು, ಮತ್ತೆ ಇವರನ್ನು ಪ್ರಶ್ನೆ ಮಾಡಿದೆ. ಆಗ ವಿದ್ಯಾರ್ಥಿ ಇವರನ್ನು ಗದರಿಸಿ ಕಳುಹಿಸಿದ್ದಾಳೆ ಎಂದು ಹೇಳಲಾಗಿದೆ. ಇದು ಹಲ್ಲೆಗೆ ಕಾರಣ ಎನ್ನಲಾಗಿದೆ.

೮ಕ್ಕೂ ಹೆಚ್ಚು ಮಂದಿ ಹಲ್ಲೆ ಹಲ್ಲೆ

ಕಾಲೇಜಿನ ಹೊರಗೆ ವಿದ್ಯಾರ್ಥಿನಿ ಜತೆ ಇದ್ದ ಬಿ.ಕಾಂ ವಿದ್ಯಾರ್ಥಿ ಮಹಮ್ಮದ್ ಹನೀಫ್‌ನನ್ನು ಕಂಡ ೮ ಜನರ ಗುಂಪು ಆತನನ್ನು ಕರೆದೊಯ್ದು ಹಲ್ಲೆ ನಡೆಸಿದ್ದಾಗಿ ಹನೀಫ್ ದೂರು ನೀಡಿದ್ದಾನೆ. ಎಂಟಕ್ಕೂ ಹೆಚ್ಚು ಮಂದಿ ಹಲ್ಲೆ ನಡೆಸಿದ್ದು, ಬೆನ್ನು ಸೇರಿದಂತೆ ಮೈಮೇಲೆ ಬಾಸುಂಡೆ ಬರುವ ಹಾಗೆ ಥಳಿಸಿದ್ದಾರೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಈ ಬಗ್ಗೆ ಸಾರ್ವಜನಿಕವಾಗಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಇದನ್ನೂ ಓದಿ | ಯುವಕ-ಯುವತಿಯ ಚಾಟಿಂಗ್ ಅವಾಂತರ; ಮಂಗಳೂರು ಏರ್‌ಪೋರ್ಟ್‌ನಲ್ಲಿ ಆತಂಕ

Exit mobile version