Site icon Vistara News

leopard captured: ಮೈಸೂರಿನಲ್ಲಿ ಮತ್ತೊಂದು ಚಿರತೆ ಸೆರೆ; ಕಾಡಿಗೆ ರವಾನಿಸಿದ ಅಧಿಕಾರಿಗಳು

leopard attack in mysore

ಮೈಸೂರು: ತಾಲೂಕಿನ ಮೈದನಹಳ್ಳಿಯಲ್ಲಿ ಚಿರತೆಯೊಂದು ಬೋನಿಗೆ (leopard captured) ಬಿದ್ದಿದೆ. ಈ ವಿಷಯ ತಿಳಿದ ಸಾರ್ವಜನಿಕರು ತಂಡೋಪತಂಡವಾಗಿ ಬಂದು ವೀಕ್ಷಿಸಿ ಹೋಗಿದ್ದಲ್ಲದೆ, ನಿಟ್ಟುಸಿರು ಬಿಟ್ಟಿದ್ದಾರೆ. ಜಿಲ್ಲೆಯಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಎಲ್ಲ ಕಡೆ ತೀವ್ರ ನಿಗಾವಹಿಸಬೇಕೆಂಬ ಆಗ್ರಹವೂ ಕೇಳಿಬಂದಿದೆ.

ಜಿಲ್ಲೆಯ ಕೆಲವು ಕಡೆ ಚಿರತೆಗಳು ದಾಳಿ ನಡೆಸಿ ಆತಂಕಕ್ಕೆ ಕಾರಣವಾಗುತ್ತಲೇ ಇವೆ. ಕೆಲವರ ಜೀವಕ್ಕೂ ಕುತ್ತು ತಂದಿವೆ. ತಿ.ನರಸೀಪುರ ತಾಲೂಕಿನ ಹೊರಳಹಳ್ಳಿ ಗ್ರಾಮದಲ್ಲಿ ಜನವರಿ ೨೧ರಂದು ತಡರಾತ್ರಿ ಚಿರತೆ ದಾಳಿಯಿಂದ (leopard attack) 11 ವರ್ಷದ ಬಾಲಕ ಮೃತಪಟ್ಟಿದ್ದ. ಅಲ್ಲದೆ, ಈ ತಾಲೂಕಿನಲ್ಲಿಯೇ ನಾಲ್ಕು ತಿಂಗಳ ಅವಧಿಯಲ್ಲಿ ನಾಲ್ವರು ಚಿರತೆಗೆ ಬಲಿಯಾಗಿದ್ದರು. ಕೊನೆಗೂ ಅರಣ್ಯ ಇಲಾಖೆ ಸಿಬ್ಬಂದಿ ಆ ನರಹಂತಕ ಚಿರತೆಯನ್ನು ಜನವರಿ ೨೬ರಂದು ಸೆರೆಹಿಡಿದಿದ್ದರು. ಈಗ ಮತ್ತೊಂದು ಚಿರತೆಯು ಬೋನಿಗೆ ಬಿದ್ದಿದೆ.

ಇದನ್ನೂ ಓದಿ: Administrative Reforms : 20 ಅಂಕ ಪಡೆದರೂ SSLC ಪಾಸ್‌; 3,457 ಕಿರಿಯ ಪ್ರಾಥಮಿಕ ಶಾಲೆಗಳ ವಿಲೀನ: ಆಡಳಿತ ಸುಧಾರಣಾ ವರದಿ ಶಿಫಾರಸು

ರೈತರ ಜಮೀನಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇರಿಸಿದ್ದರು. ಈ ಬೋನಿಗೆ ಈಗ ಹೆಣ್ಣು ಚಿರತೆಯೊಂದು ಸೆರೆಸಿಕ್ಕಿದೆ. ಸುಮಾರು ಎರಡು ವರ್ಷದ ಹೆಣ್ಣು ಚಿರತೆ ಎಂದು ಹೇಳಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ವಲಯ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಚಿರತೆಯನ್ನು ಅರಣ್ಯಕ್ಕೆ ರವಾನಿಸಿದ್ದಾರೆ. ಸಾರ್ವಜನಿಕರು ಆತಂಕ ಪಡಬೇಡಿ ಎಂದು ಆರ್‌ಎಫ್ಒ ಸುರೇಂದ್ರ ಕೆ ಹೇಳಿದ್ದಾರೆ.

ಬಾಲಕನ ರುಂಡ ಹೊತ್ತೊಯ್ದಿದ್ದ ಚಿರತೆ ದಾಳಿ ಪ್ರಕರಣ

ಹೊರಳಹಳ್ಳಿ ಗ್ರಾಮದಲ್ಲಿ ಜನವರಿ ೨೧ರ ತಡರಾತ್ರಿ ಚಿರತೆ ದಾಳಿ ನಡೆಸಿ ೧೧ ವರ್ಷದ ಜಯಂತ್‌ನನ್ನು ಎಳೆದೊಯ್ದಿತ್ತು. ಜಯಂತ್ ಶವಕ್ಕಾಗಿ ಗ್ರಾಮಸ್ಥರು ರಾತ್ರಿಯಿಡಿ ಹುಡುಕಾಟ ನಡೆಸಿದ್ದರು. ಭಾನುವಾರ ಬೆಳಗ್ಗೆ ಜಯಂತ್‌ ಮೃತದೇಹ ಪತ್ತೆಯಾಗಿತ್ತು. ಬಾಲಕನ ರುಂಡವನ್ನು ಚಿರತೆ ಹೊತ್ತೊಯ್ದಿತ್ತು. ಇದು ಎಲ್ಲರನ್ನೂ ಆತಂಕಕ್ಕೆ ದೂಡಿತ್ತು.

ಜ.23ರಂದು ನಾಯಿ, ಎಮ್ಮೆ ಮೇಲೆ ದಾಳಿ

ಮಂಡ್ಯದ ಮದ್ದೂರು ತಾಲೂಕಿನ‌ ಕೆ.ಬೆಳ್ಳೂರು ಗ್ರಾಮದಲ್ಲಿ ಜನವರಿ ೨೩ರ ರಾತ್ರಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಮನೆಯಲ್ಲಿದ್ದ ನಾಯಿಯನ್ನು ಹೊತ್ತೊಯ್ದಿತ್ತು. ಗ್ರಾಮದ ನರ್ಸರಿ ರಮೇಶ್ ಎಂಬುವವರು ಸಾಕಿದ್ದ ನಾಯಿಯ ಮೇಲೆ ಚಿರತೆ ದಾಳಿ ಮಾಡಿ ಹೊತ್ತೊಯ್ದಿತ್ತು. ಇನ್ನು ಮೈಸೂರಿನ ತಿ.ನರಸೀಪುರ ತಾಲೂಕಿನ ಸಿದ್ದನಹುಂಡಿಯಲ್ಲೂ ಅದೇ ದಿನ ಚಿರತೆ ದಾಳಿ ನಡೆಸಿದ್ದು, ರತ್ನಮ್ಮ ಎಂಬುವವರ ಮನೆ ಕೊಟ್ಟಿಗೆಯಲ್ಲಿದ್ದ ಎಮ್ಮೆಯನ್ನು ಕೊಂದು ಹಾಕಿತ್ತು.

ಇದನ್ನೂ ಓದಿ: Murder Case: ಮಂಗಳೂರು ಜ್ಯುವೆಲ್ಲರಿಗೆ ನುಗ್ಗಿ ನೌಕರನಿಗೆ ಚಾಕು ಇರಿದು ಕೊಂದ ಮುಸುಕುಧಾರಿ

ತಿ.ನರಸೀಪುರ ತಾಲೂಕಲ್ಲಿ ನವೆಂಬರ್‌ನಿಂದ ನಡೆದಿರುವ ದಾಳಿ

ತಿ.ನರಸೀಪುರ ತಾಲೂಕಿನ ಕಳೆದ ನವೆಂಬರ್‌ನಿಂದ ನಿರಂತರವಾಗಿ ಚಿರತೆ ದಾಳಿ ನಡೆದಿದ್ದು, ನಾಲ್ವರು ಬಲಿಯಾದಂತಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಜನತೆ ತೀವ್ರ ಆತಂಕ ಹಾಗೂ ಭಯದಲ್ಲಿದ್ದಾರೆ. ಮೃತಪಟ್ಟವರ ವಿವರ ಇಂತಿದೆ. ೨೦೨೨ ನವೆಂಬರ್‌ 1: ಉಕ್ಕಲಗೆರೆ ಮಂಜುನಾಥ್, ೨೦೨೨ ಡಿಸೆಂಬರ್‌ 2: ಎಸ್.ಕೆಬ್ಬೇಹುಂಡಿ ಮೇಘನಾ, ೨೦೨೩ ಜನವರಿ 20: ಕನ್ನಾಯಕನಹಳ್ಳಿ ಸಿದ್ದಮ್ಮ, ೨೦೨೩ ಜನವರಿ 22: ಹೊರಳಹಳ್ಳಿ ಜಯಂತ್ ದಾಳಿಯಲ್ಲಿ ಮೃತಪಟ್ಟಿದ್ದಾರೆ.

Exit mobile version