ಬೆಂಗಳೂರು: ಅಸ್ಸಾಂ ಮೂಲದ ಶಂಕಿತ ಉಗ್ರ (Terrorist Accused) ಅಖ್ತರ್ ಹುಸೇನ್‌ನನ್ನು ಸೋಮವಾರ (ಜು.25) ಬೆಳಗ್ಗೆ ಬಂಧಿಸಿದ್ದ ಸಿಸಿಬಿ ಪೊಲೀಸರು ಇದೀಗ ಮತ್ತೊಬ್ಬ ಶಂಕಿತ ಉಗ್ರ ಅದಿಲ್ ಹುಸೇನ್ ಎಂಬಾತನನ್ನು ಬಂಧಿಸಿದ್ದಾರೆ.
ಅಖ್ತರ್ ಹುಸೇನ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ಸಿಸಿಬಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ಅದಿಲ್ ಹುಸೇನ್ ವಶಕ್ಕೆ ಪಡೆಯಲಾಗಿದೆ. ಇವರೆಲ್ಲರು ಉಗ್ರ ಸಂಘಟನೆಗಳ ಜತೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.
ಸೋಶಿಯಲ್ ಮೀಡಿಯಾದಲ್ಲೇ ಉಗ್ರರ ಸ್ಕೆಚ್ ಪ್ಲಾನ್
ಸಿಸಿಬಿ ಸೆರೆಯಾಗಿರುವ ಶಂಕಿತ ಉಗ್ರರ ಪ್ಲಾನ್ ಆಫ್ ಆಕ್ಷನ್‌ಗೆ ಯಾವುದೇ ನೇರ ಭೇಟಿ ಅಥವಾ ಫೋನ್ ಕಾಲ್ ಬಳಸುತ್ತಿರಲಿಲ್ಲ. ಬದಲಿಗೆ ಸೋಶಿಯಲ್ ಮೀಡಿಯಾದಲ್ಲೇ ಸ್ಕೆಚ್ ಪ್ಲಾನ್ ಮಾಡುತ್ತಿದ್ದರು. ಸೋಶಿಯಲ್ ಮೀಡಿಯಾಗಳಾದ ಫೇಸ್‌ಬುಕ್, ಟೆಲಿಗ್ರಾಂ ಮೆಸೆಂಜರ್ ಮೂಲಕ ಗ್ರೂಪ್ ರಚಿಸಿ ಬಳಿಕ ಐಎಸ್‌ಐ ಸಂಘಟನೆಗೆ ಸೇರುವಂತೆ ಪ್ರೇರೇಪಿಸುತ್ತಿದ್ದರು ಎಂದು ನ್ಯಾಯಾಧೀಶರ ಮುಂದೆ ಎಸಿಪಿ ಧರ್ಮೇಂದ್ರ ಮಾಹಿತಿ ನೀಡಿದ್ದಾರೆ.
10 ದಿನಗಳ ಪೊಲೀಸ್ ಕಸ್ಟಡಿಗೆ ಆದೇಶ
ಬಂಧಿತ ಉಗ್ರ ಅಖ್ತರ್ ಹುಸೇನ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಸಿಸಿಬಿ ಪೊಲೀಸರು ಹೆಚ್ಚಿನ ತನಿಖೆಗಾಗಿ ಕಸ್ಟಡಿಗೆ ಕೊಡುವಂತೆ ಮನವಿ ಮಾಡಿದರು. ಈಗಾಗಲೇ ಶಂಕಿತ ಉಗ್ರರ ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಕೋಲ್ಕತ್ತಾ, ಅಸ್ಸಾಂ, ಚೆನ್ನೈ ಹೋಗಿ ಪರಿಶೀಲನೆ ನಡೆಸಬೇಕಿದೆ ಎಂದು ನ್ಯಾಯಾಧೀಶರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಉಗ್ರ ಅಖ್ತರ್ ಹುಸೇನ್ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ನ್ಯಾಯಾಧೀಶರು ಆದೇಶಿಸಿದ್ದಾರೆ.