ಹಾಸನ: ಹಾಸನದ ಕೊರಿಯರ್ ಅಂಗಡಿಯಲ್ಲಿ ಕಳೆದ ಡಿಸೆಂಬರ್ ೨೬ರಂದು ಸಂಭವಿಸಿದ ಮಿಕ್ಸಿ ಸ್ಫೋಟ ಪ್ರಕರಣದ ಪ್ರಧಾನ ಆರೋಪಿ ಅನೂಪ್ ಕುಮಾರ್‌ನನ್ನು ಬಂಧಿಸಲಾಗಿದೆ. ಆತನನ್ನು ನೆಲಮಂಗಲ ಬಳಿ ಬಂಧಿಸಿದ್ದು, ಆರೋಪಿಯನ್ನು ಕೋರ್ಟ್‌ಗೆ ಹಾಜರುಪಡಿಸಿ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ ಎಂದು ಹಾಸನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದರು. ಇದರ ಜತೆಗೆ ಆತ ಈ ಕೃತ್ಯವನ್ನು ಯಾಕೆ ಮಾಡಿದ್ದ ಎಂಬುದರ ಬಗ್ಗೆಯೂ ವಿವರಣೆ ನೀಡಿದ್ದಾರೆ.
ಹಾಸನದ ವಿಚ್ಛೇದಿತ ಮಹಿಳೆ ವಸಂತಾಗೆ ಮ್ಯಾಟ್ರಿಮೊನಿಯಲ್ಲಿ ಪರಿಚಿತನಾದ ಅನೂಪ್ ಕುಮಾರ್ ಎಂಬಾತ ಆಕೆಯ ರೂಪಕ್ಕೆ ಮರುಳಾಗಿ ಒಂದಿಷ್ಟು ಕಾಲ ಆಕೆ ಜತೆ ಓಡಾಡಿದ್ದ. ಲಕ್ಷಾಂತರ ರೂ. ಹಣವನ್ನೂ ನೀಡಿದ್ದ ಎನ್ನಲಾಗಿದೆ. ಆದರೆ, ಕೊನೆಗೆ ಆಕೆ ತನ್ನನ್ನು ದೂರ ಮಾಡಲು ಮುಂದಾದಾಗ ಆಕೆಯನ್ನು ಸಾಯಿಸಲು ಇಲ್ಲವೇ ಸೌಂದರ್ಯವನ್ನು ವಿರೂಪಗೊಳಿಸಲು ಮಾಡಿದ ತಂತ್ರವೇ ಈ ಮಿಕ್ಸಿ ಬಾಂಬ್! ಆದರೆ, ವಸಂತಾ ಮೂರನೇ ಬಾರಿ ಬಂದ ಪಾರ್ಸೆಲನ್ನು ಕೊರಿಯರ್ ಅಂಗಡಿಗೇ ತಂದು ಕೊಟ್ಟಿದ್ದರು. ಅಂದು ಅವಸರದಲ್ಲಿದ್ದ ಅಂಗಡಿ ಮಾಲೀಕ ಶಶಿಕುಮಾರ್ ಈ ಮಿಕ್ಸಿಯನ್ನು ಎತ್ತಿ ಪಕ್ಕಕ್ಕೆ ಇಟ್ಟಾಗ ಅದು ಸ್ಫೋಟಗೊಂಡಿತ್ತು. ಶಶಿಕುಮಾರ್ ಅವರ ಎರಡು ಕೈಬೆರಳುಗಳು ಕತ್ತರಿಸಿ ಹೋಗಿದ್ದವು.
ಬ್ಲಾಸ್ಟ್ ಬಗ್ಗೆ ಇಂಟರ್ನೆಟ್‌ನಲ್ಲಿ ಸರ್ಚ್!
ತನ್ನ ಪ್ರಿತಿ ನಿರಾಕರಿಸಿದ್ದಕ್ಕೆ, ಅವಮಾನ ಮಾಡಿದ್ದಕ್ಕೆ ವಸಂತಾಳನ್ನು ಕೊಲ್ಲಲು ನಿರ್ಧರಿಸಿದ್ದೆ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ. ಈ ವೇಳೆ ಆರೋಪಿ ಸ್ಫೋಟಕ್ಕೆ ನಡೆಸಿದ ಸಿದ್ಧತೆಗಳ ಬಗ್ಗೆಯೂ ಬಾಯಿ ಬಿಟ್ಟಿದ್ದಾನೆ.
ಯಾವುದಾದರೂ ವಸ್ತುವನ್ನು ಪಾರ್ಸೆಲ್ ಮಾಡುವುದು, ಅದನ್ನು ತೆರೆದಾಗ ಸ್ಫೋಟಗೊಳ್ಳುವಂತೆ ಮಾಡುವುದು ಅನೂಪ್ ಕುಮಾರ್ ಪ್ಲ್ಯಾನ್ ಆಗಿತ್ತು. ಆದರೆ, ಯಾವುದನ್ನು ಇಡುವುದು, ಹೇಗೆ ಇಡುವುದು ಎನ್ನುವುದು ಅವನಿಗೆ ಗೊತ್ತಿರಲಿಲ್ಲ. ಇದಕ್ಕಾಗಿ ಮಿಕ್ಸಿಯಲ್ಲಿ ಡಿಟೋನೆಟರ್ ಇಟ್ಟು ಬ್ಲಾಸ್ಟ್ ಮಾಡುವುದು ಹೇಗೆ ಎಂದು ಇಂಟರ್‌ನೆಟ್ ನಲ್ಲಿ ಸರ್ಚ್ ಮಾಡಿದ್ದಾನೆ. ಮಾತ್ರವಲ್ಲ, ರಾಮನಗರದಲ್ಲಿ ನಡೆಯುತ್ತಿರುವ ಕ್ವಾರಿಗೆ ಹೋಗಿ ಎರಡು ಡಿಟೋನೆಟರ್ ತಂದಿದ್ದಾನೆ.
ಹತ್ತು ದಿನಗಳ ಕಾಯುವಿಕೆ!
ಅನೂಪ್ ಈ ಹಿಂದೆಯು ಕೆಲವೊಂದು ಗಿಫ್ಟ್ ಕಳುಹಿಸಿದ್ದನಾದರೂ ಸ್ಫೋಟಕ ಕಳುಹಿಸಿದ್ದು ಮೊದಲ ಬಾರಿ. ಡಿ.16ರಂದು ಆತ ಪಾರ್ಸೆಲ್ ಕಳುಹಿಸಿದ್ದ. ಡಿ. 26ರಂದು ಮಿಕ್ಸಿ ಬ್ಲಾಸ್ಟ್ ಆಗಿತ್ತು. ಆದರೆ, ಈ ಹತ್ತು ದಿನಗಳ ಕಾಲ ಅನೂಪ್ ಕುಮಾರ್ ಮಿಕ್ಸಿ ಬ್ಲಾಸ್ಟ್ ಆಯ್ತಾ? ಏನು ಹಾನಿ ಆಯ್ತು ಅಂತ ಭಾರಿ ಕುತೂಹಲದಿಂದ ನೋಡಿದ್ದಾನೆ.
ಡಿ.17ರಿಂದಲೇ ಕೊರಿಯರ್ ಟ್ರ್ಯಾಕಿಂಗ್ ಮಾಡಿದ್ದಾನೆ, ಮಿಕ್ಸಿ ಡೆಲಿವರಿ ಆಗಿದೆಯಾ ಎಂದು ಹುಡುಕಿದ್ದಾನೆ. ಬಾಂಬ್ ಸ್ಫೋಟವಾಯಿತಾ? ಈ ಬಗ್ಗೆ ಏನಾದರೂ ಸುದ್ದಿ ಬಂದಿದೆಯಾ ಎಂದು ಗೂಗಲ್‌ನಲ್ಲಿ ಸರ್ಚ್ ಮಾಡಿದ್ದಾನೆ. ಬಾಂಬ್ ತಯಾರಿಕೆ ಬಗ್ಗೆಯೂ ಸರ್ಚ್ ಮಾಡಿದ್ದಾನೆ!
ಡೆಟೊನೆಟರ್ ಬ್ಲಾಸ್ಟ್ ಮಾಡುವ ವೈರ್‌ನ್ನು ತಲಘಟ್ಟಪುರದಲ್ಲಿರುವ ಆತನ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ. ಮಿಕ್ಸಿಯ ಮೂರನೇ ಜಾರ್ ಕೂಡಾ ಅಲ್ಲೇ ಸಿಕ್ಕಿದೆ.
ಏನಿದು ಪ್ರಕರಣ?
ಈ ಪ್ರಕರಣದ ಕೇಂದ್ರ ಬಿಂದುವಾಗಿರುವ ಮಹಿಳೆ ಹಾಸನದ ಕುವೆಂಪು ನಗರದ ೪೧ ವರ್ಷದ ಒಬ್ಬ ಡೈವೋರ್ಸಿ. ಹೆಸರು ವಸಂತಾ. ಮದುವೆಯಾಗಿ ಕೆಲವು ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ ಆಕೆ ಬಳಿಕ ವರ ಬೇಕು ಎಂದು ಮ್ಯಾಟ್ರಿಮೋನಿಯಲ್ಲಿ ತನ್ನ ಫೋಟೊ ಹಾಕಿದ್ದಳು. ಇದನ್ನು ಗಮನಿಸಿದ ಮೂಲತಃ ಮಂಡ್ಯ ಜಿಲ್ಲೆಯ, ಹಾಲಿ ಬೆಂಗಳೂರಿನಲ್ಲಿ ವಾಸವಾಗಿರುವ ಸೈನಿಕನ ಮಗ ಅನೂಪ್‌ಕುಮಾರ್, ಈ ಮಹಿಳೆಯನ್ನು ಮೆಚ್ಚಿಕೊಂಡು ಮದುವೆ ಪ್ರಸ್ತಾಪವನ್ನೂ ಮುಂದಿಟ್ಟಿದ್ದ.
ಇದಕ್ಕೆ ಓಕೆ ಎಂದ ಮಹಿಳೆ ಮತ್ತು ಅನೂಪ್‌ಕುಮಾರ್ ಬಹುಬೇಗ ಹತ್ತಿರವಾದರು. ಅನೇಕ ಕಡೆಗಳಲ್ಲಿ ಇಬ್ಬರು ಜೊತೆಯಾಗಿ ಓಡಾಡಿದ್ದರು. ಈ ನಡುವೆ ಅನೂಪ್ ಕುಮಾರ್‌ನಿಂದ ಅನೇಕ ಕಾರಣ ನೀಡಿ ಮಹಿಳೆ ಲಕ್ಷಾಂತರ ರೂ. ಹಣವನ್ನು ವಸೂಲಿ ಮಾಡಿದ್ದಳು. ನಂತರದಲ್ಲಿ ಉಲ್ಟಾ ಹೊಡೆದ ವಸಂತಾ ಮದುವೆಗೆ ನಿರಾಕರಿಸಿ ಬಿಟ್ಟಳು. ಇದರಿಂದ ತೀವ್ರ ನಿರಾಸೆಗೆ ಒಳಗಾದ ಅನೂಪ್, ತಾನು ನೀಡಿರುವ ಹಣವನ್ನು ವಾಪಸ್ ಕೇಳಿದಾಗ ಮಹಿಳೆ ಅದಕ್ಕೂ ಸ್ಪಂದಿಸಿರಲಿಲ್ಲ. ಈ ಮಧ್ಯೆ ಒಂದೆರಡು ಬಾರಿ ಹಾಸನಕ್ಕೂ ಬಂದಿದ್ದ ಅನೂಪ್, ಮಹಿಳೆಯ ಮನೆ ಎದುರು ಗಲಾಟೆ ಮಾಡಿದ್ದ. ಈತನ ವಿರುದ್ಧ ಪೊಲೀಸರು ಮತ್ತು ರಾಜ್ಯ ಮಹಿಳಾ ಆಯೋಗಕ್ಕೆ ಮಹಿಳೆ ದೂರು ನೀಡಿದ್ದಳು.
ಇದು ಅನೂಪ್‌ನನ್ನು ಕೆರಳಿಸಿತ್ತು. ಯಾವಾಗ ಅನೂಪ್ ಕಾಟ ಹೆಚ್ಚಾಯಿತೋ ಆಗ ಆತನ ನಂಬರ್‌ಗಳನ್ನು ಮಹಿಳೆ ಬ್ಲಾಕ್ ಮಾಡಿದ್ದಳು. ಆದರೂ ನನಗೆ ಮೋಸ ಮಾಡಿದವಳಿಗೆ ಒಂದು ಗತಿ ಕಾಣಿಸಲೇಬೇಕೆಂದು, ಅನೂಪ್ ಮೊದಲು ಸೀರೆ ಕೊರಿಯರ್ ಮಾಡಿದ್ದ. ನಂತರ ಸೀರಿಯಲ್ ಸೆಟ್ ಕಳುಹಿಸಿದ್ದ. ಮೂರನೇ ಬಾರಿಗೆ ಮಿಕ್ಸಿಯಲ್ಲಿ ಡಿಟೋನೇಟರ್ ಇಟ್ಟು ಕಳಿಸಿದ್ದ. ಆದರೆ ಮಹಿಳೆ ರಿಸೀವ್ ಮಾಡಿರಲಿಲ್ಲ. ಆಕೆ ಸತ್ತರೆ ಸಾಯಲಿ, ಇಲ್ಲ ಅಂದ್ರೆ ಮುಖ, ದೇಹದ ಭಾಗ ವಿಕಾರವಾಗಬೇಕು ಎಂಬುದು ಅನೂಪ್‌ನ ಉದ್ದೇಶವಾಗಿತ್ತು. ಡಿಟಿಡಿಸಿ ಕೊರಿಯರ್ ಅಂಗಡಿಯಿಂದ ಗಣೇಶ್ ಎಂಬಾತ ಡಿ.17ರಂದು ಅದನ್ನು ಮಹಿಳೆ ಮನೆಗೆ ಡೆಲಿವರಿ ಮಾಡಿದ್ದ.
ಹೀಗೆ ಆವತ್ತು ಬಂದಿದ್ದೇ ಮಿಕ್ಸಿ ಪಾರ್ಸೆಲ್. ಬೆಂಗಳೂರಿನ ಪೀಣ್ಯ ಶಾಖೆ, ನಾಗಸಂದ್ರದಿಂದ ಸಂಖ್ಯೆ AA-26753848 ರಲ್ಲಿ RASOIYA CLASSIC ಮಿಕ್ಸರ್ ಗ್ರೈಂಡರ್ ಹೆಸರಿನ ನಾಲ್ಕು ಕೆ.ಜಿ ತೂಕದ ಪಾರ್ಸೆಲ್ ಬಂದಿತ್ತು. ಫ್ರಂ ಅಡ್ರೆಸ್ ಇಲ್ಲದ ಈ ಕೊರಿಯರ್‌ನ್ನು ವಾಪಸ್ ಕಳಿಸುವಂತೆ ಆಕೆ ಡಿಸೆಂಬರ್ ೨೬ರಂದು ಕೊರಿಯರ್ ಅಂಗಡಿಗೆ ಮರಳಿಸಿದ್ದಾಳೆ. ಆದರೆ, ಹಿಂದೆ ಕಳುಹಿಸಲು ೩೦೦ ರೂ. ವೆಚ್ಚವಾಗಲಿದೆ ಎಂದು ಅಂಗಡಿ ಮಾಲೀಕ ಶಶಿಕುಮಾರ್ ಹೇಳಿದ್ದರು.
ಇಷ್ಟು ಹಣ ನನ್ನ ಬಳಿಯಿಲ್ಲ ಎಂದ ಮಹಿಳೆ, ಮಿಕ್ಸಿಯನ್ನು ಏನಾದರೂ ಮಾಡಿಕೊಳ್ಳಿ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಳು. ಶಶಿ ತನ್ನ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಅರ್ಜೆಂಟ್‌ನಲ್ಲಿ ಮಿಕ್ಸಿಯನ್ನು ಪಕ್ಕಕ್ಕೆ ಎತ್ತಿಡಲು ಮುಂದಾಗಿದ್ದಾರೆ. ಈ ವೇಳೆ ಮಿಕ್ಸಿ ಹಾಗೂ ಜಾರ್ ಕೈಜಾರಿ ಕೆಳಗೆ ಬಿದ್ದು ಸ್ಫೋಟಗೊಂಡು ಶಶಿ ಕುಮಾರ್ ತೀವ್ರವಾಗಿ ಗಾಯಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಶಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ | Hassan Blast | ಮಿಕ್ಸಿ ಬಾಂಬರ್ ಬಳಿ ಕೆಜಿಗಟ್ಟಲೆ ಚಿನ್ನ, ಕೋಟಿ ಹಣ? ಕಿರಾತಕ ಮಾಡಿದ ವಿಡಿಯೋಗಳ ಅಸಲಿಯತ್ತು ಇಲ್ಲಿದೆ ನೋಡಿ!