Site icon Vistara News

Apple Office in Bangalore: ಬೆಂಗಳೂರಿನಲ್ಲಿ ಆ್ಯಪಲ್‌ನ 15 ಅಂತಸ್ತಿನ ಭವ್ಯ ಕಚೇರಿ, ಒಳಾಂಗಣ ಹೇಗಿದೆ ಗೊತ್ತಾ!

apple office

ಬೆಂಗಳೂರು: ಜಾಗತಿಕ ಟೆಕ್‌ ದೈತ್ಯ, ಐಫೋನ್‌ (iPhone) ತಯಾರಿಕಾ ಸಂಸ್ಥೆ ಆ್ಯಪಲ್ ತನ್ನ ಬೃಹತ್ ಹೊಸ ಕಚೇರಿಯನ್ನು ಭಾರತದ ಸಿಲಿಕಾನ್ ವ್ಯಾಲಿ ಬೆಂಗಳೂರಿನಲ್ಲಿ (Apple Office in Bangalore) ಜನವರಿ 17ರಂದು ತೆರೆದಿದೆ. ಈ ಹೊಸ ಕಚೇರಿ ಬೆಂಗಳೂರಿನ ಹೃದಯ ಭಾಗವಾದ ಕಬ್ಬನ್ ರಸ್ತೆಯ ಮಿನ್ಸ್ಕ್ ಸ್ಕ್ವೇರ್‌ನಲ್ಲಿದೆ.

15 ಮಹಡಿಗಳ ಈ ಕಚೇರಿಯಲ್ಲಿ 1,200 ಉದ್ಯೋಗಿಗಳು ಕೆಲಸ ಮಾಡಲಿದ್ದಾರೆ. ಹೊಸ ಕಚೇರಿಯಲ್ಲಿ ಹಲವು ವಿಧದ ಕೆಲಸದ ಸ್ಥಳಗಳು, ಪ್ರಯೋಗಾಲಯ, ವೆಲ್‌ನೆಸ್‌ ಸೆಂಟರ್‌ಗಳು, ಕೆಫೆಗಳು ಇವೆ. 740 ಕಾರುಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕೂಡ ಇದೆ. ಈ ಕಚೇರಿಯ ವೈಶಿಷ್ಟ್ಯ ಎಂದರೆ, ಇದು ಸಂಪೂರ್ಣವಾಗಿ 100 ಪ್ರತಿಶತ ನವೀಕರಿಸಬಹುದಾದ ಇಂಧನದಿಂದ ಕಾರ್ಯನಿರ್ವಹಿಸುತ್ತದೆ. ಇಂಧನ ಮತ್ತು ಪರಿಸರ ವಿನ್ಯಾಸದಲ್ಲಿ ನಾಯಕತ್ವದ ರ್ಯಾಂಕಿಂಗ್‌ಗಾಗಿ (Leadership in Energy and Environmental Design- LEED) ಈ ಕಚೇರಿ ಗುರಿ ಇಟ್ಟಿದೆ.

apple office

ಕಂಪನಿಯ ಒಳಾಂಗಣ ಸಾಕಷ್ಟು ವೈಭವೋಪೇತವಾಗಿದೆ. ಕಚೇರಿಯ ಒಳಗೂ ಹಾಗೂ ಸುತ್ತಲೂ ಸಾಕಷ್ಟು ಸ್ಥಳೀಯ ಸಸ್ಯಗಳನ್ನು ಬಳಸಲಾಗಿದೆ. ಸ್ಥಳೀಯ ಮೂಲದ ಮರಮುಟ್ಟು, ಕಲ್ಲುಗಳು ಹಾಗೂ ನೆಲಹಾಸುಗಳಿಗೆ ಬಟ್ಟೆಗಳನ್ನು ಬಳಸಲಾಗಿದೆ.

“ಭಾರತದಲ್ಲಿ ನಮ್ಮ ವಿಸ್ತರಣೆಯನ್ನು ಬೆಂಗಳೂರಿನ ಹೃದಯಭಾಗದಲ್ಲಿರುವ ನಮ್ಮ ಹೊಸ ಕಚೇರಿಯೊಂದಿಗೆ ಮಾಡುವುದು ನಮಗೆ ಥ್ರಿಲ್ ನೀಡಿದೆ. ಈ ಮೆಟ್ರೋ ನಗರವು ಈಗಾಗಲೇ ಸಾಫ್ಟ್‌ವೇರ್ ಎಂಜಿನಿಯರಿಂಗ್, ಹಾರ್ಡ್‌ವೇರ್ ತಂತ್ರಜ್ಞಾನಗಳು, ಗ್ರಾಹಕ ಬೆಂಬಲ ಇತ್ಯಾದಿಗಳನ್ನು ಒಳಗೊಂಡು ನಮ್ಮ ಅನೇಕ ಪ್ರತಿಭಾವಂತ ತಂಡಗಳಿಗೆ ನೆಲೆಯಾಗಿದೆ. ಈ ಕಚೇರಿನ್ನು ನಾವೀನ್ಯತೆ, ಸೃಜನಶೀಲತೆ ಮತ್ತು ಸಂಪರ್ಕವನ್ನು ಬೆಳೆಸಲು ರಚಿಸಲಾಗಿದೆ” ಎಂದು ಹೊಸ ಕಚೇರಿಯ ಬಗ್ಗೆ ಆ್ಯಪಲ್ ಹೇಳಿದೆ.

apple office

ಆಪಲ್ ಬೆಂಗಳೂರು, ಮುಂಬೈ, ಹೈದರಾಬಾದ್ ಮತ್ತು ಗುರುಗ್ರಾಮದಲ್ಲಿ ತನ್ನ ಕಚೇರಿಗಳನ್ನು ಸ್ಥಾಪಿಸಿದೆ. ಬೆಂಗಳೂರು ಕಚೇರಿಯು ಸಾಫ್ಟ್‌ವೇರ್, ಹಾರ್ಡ್‌ವೇರ್, ಸೇವೆಗಳು, IS&T, ಕಾರ್ಯಾಚರಣೆಗಳು, ಗ್ರಾಹಕ ಬೆಂಬಲ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿದೆ.

ಆ್ಯಪಲ್ ಕಂಪನಿ ಪ್ರಸ್ತುತ ಭಾರತದಲ್ಲಿ 3,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. 2023ರಲ್ಲಿ ಭಾರತದಲ್ಲಿ ಎರಡು ಆ್ಯಪಲ್ ಸ್ಟೋರ್‌ಗಳು ಉದ್ಘಾಟನೆ ಆಗಿದ್ದವು. ಒಂದು ಮುಂಬಯಿಯ BKCಯಲ್ಲಿ ಮತ್ತು ಇನ್ನೊಂದು ಸಾಕೇತ್‌ನಲ್ಲಿ. ಇದು ಭಾರತೀಯ ಮಾರುಕಟ್ಟೆಗೆ ಆ್ಯಪಲ್‌ನ ಹೆಚ್ಚಿನ ಗುರಿಯನ್ನು ಸೂಚಿಸಿದೆ.

ಇದನ್ನೂ ಓದಿ: Hacking Alert: ʼಹ್ಯಾಕಿಂಗ್‌ ಅಲರ್ಟ್‌ʼಗೂ ಮುನ್ನ ʼಆ್ಯಪಲ್ ಸಾಧನದಲ್ಲಿ ಗಂಭೀರ ದೋಷʼದ ಎಚ್ಚರಿಕೆ ನೀಡಿದ್ದ ಕೇಂದ್ರ

Exit mobile version