ಬೆಂಗಳೂರು: ಒಂದೊಂದು ಯುಗದಲ್ಲಿ ಭೂಮಿಯಲ್ಲಿ ಜನಿಸಿ ನಮ್ಮೊಂದಿಗಿದ್ದು ಸಂತೋಷ ನೀಡಿ ಮತ್ತೆ ದೇವರ ಬಳಿಗೆ ಸಾಗುವ ದೇವರ ಮಗನಾಗಿ ಕಲಿಯುಗದಲ್ಲಿ ಪುನೀತ್ ರಾಜಕುಮಾರ್ ಜನಿಸಿದ್ದರು ಎಂದು ಸೂಪರ್ ಸ್ಟಾರ್ ರಜನಿಕಾಂತ್ ಭಾವುಕವಾಗಿ ನುಡಿದಿದ್ದಾರೆ.
ವಿಧಾನಸೌಧದ ಮಹಾ ಮೆಟ್ಟಿಲುಗಳ ಮೇಲೆ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರ ʼಕರ್ನಾಟಕ ರತ್ನʼ ಪ್ರಶಸ್ತಿ ನೀಡಿದ ಸಮಾರಂಭದಲ್ಲಿ ಮಾತನಾಡಿದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ಆರಂಭವಾದ ಜಿಟಿಜಿಟಿ ಮಳೆಯ ನಡುವೆಯೇ ಮಾತನಾಡಿದ ರಜನಿಕಾಂತ್, ಕರ್ನಾಟಕದ ಎಲ್ಲರೂ ಸಹೋದರರಾಗಿ ಇರಬೇಕೆಂದು ರಾಜರಾಜೇಶ್ವರಿ, ಅಲ್ಲಾಹ್, ಜೀಸಸ್‌ನಲ್ಲಿ ಕೇಳಿಕೊಳ್ಳುತ್ತೇನೆ. ಅಪ್ಪು ಅವರು ಮಾರ್ಕಂಡೇಯ, ಪ್ರಹ್ಲಾದ, ನಚಿಕೇತನ ರೀತಿ ಕಲಿಯುಗದಲ್ಲಿ ಅಪ್ಪು ಜನಿಸಿದ್ದಾರೆ. ಅಪ್ಪು ದೇವರ ಮಗು. ನಮ್ಮಲ್ಲಿ ಸ್ವಲ್ಪ ದಿನ ಇದ್ದು ಮತ್ತೆ ದೇವರ ಬಳಿ ಸೇರಿದೆ. ಆ ಮಗುವಿನ ಆತ್ಮ ನಮ್ಮ ಸುತ್ತಲೇ ಇದೆ ಎಂದರು.
ಶಬರಿ ಮಲೆ ಯಾತ್ರೆಯೊಂದರ ಸಂದರ್ಭವನ್ನು ನೆನೆದ ರಜನಿಕಾಂತ್, ಶಬರಿ ಮಲೆ ಯಾತ್ರೆಯಲ್ಲಿ ಘೋಷಣೆಗಳನ್ನು ವೀರಮಣಿ ಎಂಬ ದೊಡ್ಡ ಗಾಯಕರು ಹೇಳುತ್ತಿದ್ದಾರೆ. 1979ರಲ್ಲಿ ಒಂದು ಚಿಕ್ಕ ಮಗು ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಕೂಗಿತು. ಎಲ್ಲರಿಗೂ ಇದನ್ನು ಕೇಳಿ ರೋಮಾಂಚನ ಆಯಿತು.
ಆಗ ರಾಜಕುಮಾರ್ ಮಡಿಲಲ್ಲಿ ಅಪ್ಪು ಎಂಬ ಮಗು ಚಂದ್ರನಂತಹ ಕಳೆ, ನಕ್ಷತ್ರದಂತಹ ಕಣ್ಗಳಿಂದ ಕುಳಿತಿತ್ತು. ಆ ಮಗುವನ್ನು ಅಣ್ಣಾವ್ರು ಹೆಗಲ ಮೇಲೆ ಕೂರಿಸಿಕೊಂಡು ನಡೆದರು. ನಾನು ನೋಡಿದ ಆ ಮಗು ಬೆಳೆಯಿತು. ಅಪ್ಪು ಸಿನಿಮಾ ಬಂದಿದೆ, ನೋಡುತ್ತೀರ ಎಂದು ಅಣ್ಣಾವ್ರು ಕೇಳಿದರು. ಅಪ್ಪು ಸಿನಿಮಾದಲ್ಲಿ ಅವರ ಡ್ಯಾನ್ಸ್, ಫೈಟ್ ನೋಡಿದೆ. 100 ದಿನ ಈ ಚಿತ್ರ ಸಾಗಿದರೆ ನೀವೇ ಶೀಲ್ಡ್ ಕೊಡಬೇಕು ಎಂದು ಅಣ್ಣಾವ್ರು ಹೇಳಿದ್ದರು. ಸಿನಿಮಾ 100 ದಿನ ಆದ ನಂತರ ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾನೇ ಶೀಲ್ಡ್ ನೀಡಿದೆ ಎಂದರು.
ಆ ಸಮಾರಂಭ ಅಪ್ಪುಗೆ ಸೇರಿದ್ದು. ಈ ಸಮಾರಂಭವೂ ಅಪ್ಪು ಸಮಾರಂಭ, ಅವನೇ ನಾಯಕ. ಅವನು ನಮ್ಮೊಂದಿಗೆ ಇಲ್ಲ ಎಂದು ಜೀರ್ಣ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಪ್ಪು ನಿಧನವಾದಾಗ ನಾನು ಶಸ್ತ್ರಚಿಕಿತ್ಸೆಗೆ ಒಳಗಾಗಿ ಐಸಿಯುನಲ್ಲಿದ್ದೆ. ಆಗ ನನಗೆ ಯಾರೂ ವಿಷಯ ಹೇಳಿರಲಿಲ್ಲ. ಇದನ್ನು ಕೇಳಿದ ನಂತರ ನನಗೆ ನಂಬಲು ಆಗಲೇ ಇಲ್ಲ. ಈ ಕಷ್ಟವನ್ನು ಪುನೀತ್ ಪತ್ನಿ ಅಶ್ವಿನಿ ಹೇಗೆ ತಡೆದುಕೊಂಡಿದ್ದಾರೆ ಗೊತ್ತಾಗುತ್ತಿಲ್ಲ ಎಂದು ಹೇಳಿದರು.
ಅಪ್ಪು ನಿಧನರಾದಾಗ ಅಷ್ಟು ಜನರು ಏಕೆ ಬಂದರು? ಆತನ ಮನುಷ್ಯತ್ವಕ್ಕೆ, ದಾನ ಮಾಡುವ ಗುಣಕ್ಕೆ ಆಗಮಿಸಿದರು. ಒಂದು ಕೈಯಲ್ಲಿ ಮಾಡಿದ ದಾನ ಇನ್ನೊಂದು ಕೈಗೆ ಗೊತ್ತಾಗಬಾರದು ಎಂದು ಅಪ್ಪು ದಾನ ಮಾಡಿದ್ದರು. ನಟ ನಿಜ ಜೀವನದಲ್ಲಿ ಹೇಗೆ ಬಾಳುತ್ತಾನೆ ಎನ್ನುವುದರ ಆಧಾರದಲ್ಲಿ ಆತ ಜನರ ಮನಸ್ಸಿನಲ್ಲಿ ಉಳಿಯುತ್ತಾನೆ ಎಂದು ತಮಿಳುನಾಡಿನ ಎಂಜಿಆರ್ ಹೇಳಿದ್ದರು. ಅದೇ ರೀತಿ ಅಪ್ಪು ನಡೆದುಕೊಂಡರು. ಅದೇ ರೀತಿ ಎನ್‌ಟಿಆರ್ ಬಾಳಿದರು. ಅದೇ ರೀತಿ ಡಾ. ರಾಜಕುಮಾರ್ ಸಹ ಜನರ ಆರಾಧ್ಯ ದೈವವಾಗಿದ್ದರು. ಅವರೆಲ್ಲರೂ ಅರವತ್ತು-ಎಪ್ಪತ್ತು ವರ್ಷದಲ್ಲಿ ಮಾಡಿದ ಸಾಧನೆಯನ್ನು ಕೇವಲ 21 ವರ್ಷದಲ್ಲಿ ಮಾಡಿ ಹೋಗಿದ್ದಾನೆ. ಅಪ್ಪು ಯಾವಾಗಲೂ ನಮ್ಮ ಜತೆಯಲ್ಲೇ ಇರುತ್ತಾನೆ. ಕರ್ನಾಟಕ ರತ್ನ ಪ್ರಶಸ್ತಿಯನ್ನು ಇದೇ ವೇದಿಕೆಯಲ್ಲಿ ರಾಜಕುಮಾರ್ ಅವರಿಗೆ ನೀಡಲಾಗಿತ್ತು. ಅಂದಿನ ದಿನವೂ ಮಳೆ ಬಂದಿತ್ತು ಎಂದು ಕೇಳಲ್ಪಟ್ಟಿದ್ದೇನೆ. ಇಂದು ಮಳೆ ಆಗಮಿಸುತ್ತಿದೆ. ಈ ಪ್ರಶಸ್ತಿ ನೀಡಿದ ಕರ್ನಾಟಕಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಪುನೀತ್ ರಾಜ್ ಕುಮಾರ್ ಅವರೇ ಕರ್ನಾಟಕ ರತ್ನ
ಜೂನಿಯರ್ ಎನ್‌ಟಿಆರ್ ಮಾತನಾಡಿ, ಇಡೀ ಕರ್ನಾಟಕ ರಾಜ್ಯಕ್ಕೆ ಹಾಗೂ ಪ್ರಪಂಚಾದ್ಯಂತ ಇರುವ ಎಲ್ಲ ಕನ್ನಡ ಜನರಿಗೆ ರಾಜ್ಯೋತ್ಸವ ಶುಭಾಶಯಗಳು. ಪರಂಪರೆ ಹಾಗೂ ಉಪನಾಮ ಹಿರಿಯರಿಂದ ಬರುತ್ತದೆ, ಆದರೆ ವ್ಯಕ್ತಿತ್ವ ಎನ್ನುವುದು ವ್ಯಕ್ತಿಯ ಸ್ವಂತ ಸಂಪಾದನೆ. ಅಹಂಕಾರ, ಅಹಂ ಇಲ್ಲದೆ ತಮ್ಮ ನಗುವಿನಿಂದ ಒಂದು ರಾಜ್ಯವನ್ನೇ ಗೆದ್ದ ರಾಜಕುಮಾರ ಇದ್ದರೆ ಅದು ಪುನೀತ್ ರಾಜಕುಮಾರ್ ಮಾತ್ರ.
ಕರ್ನಾಟಕದ ಸೂಪರ್ ಸ್ಟಾರ್, ಉತ್ತಮ ಪತಿ, ನಟ, ಸ್ನೇಹಿತ ಹಾಗೂ ಮಾನವೀಯ ವ್ಯಕ್ತಿತ್ವ ಅಪ್ಪುವಿನದ್ದು. ಅವರ ನಗುವಿನಲ್ಲಿದ್ದ ಶ್ರೀಮಂತಿಕೆಯನ್ನು ಎಲ್ಲಿಯೂ ನೋಡಲು ಸಿಗುವುದಿಲ್ಲ. ಕರ್ನಾಟಕ ರತ್ನ ಪ್ರಶಸ್ತಿಯನ್ನು ಅವರಿಗೆ ನೀಡುವುದಲ್ಲ, ಕರ್ನಾಟಕ ರತ್ನದ ಅರ್ಥವೇ ಪುನೀತ್ ರಾಜಕುಮಾರ್. ಈ ಗೌರವ ನೀಡಿದ ಕರ್ನಾಟಕ ಸರ್ಕಾರಕ್ಕೆ ಧನ್ಯವಾದಗಳು. ನನ್ನನ್ನು ತಮ್ಮ ಕುಟುಂಬದಂತೆ ಭಾವಿಸಿದ್ದಕ್ಕೆ ಧನ್ಯವಾದಗಳು ಎಂದರು.
ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ದೇವರು ಮಳೆಯ ರೂಪದಲ್ಲಿ ದೊಡ್ಡ ಪ್ರಮಾಣದಲ್ಲಿ ಆಶೀರ್ವಾದ ಮಾಡುತ್ತಿದ್ದಾನೆ. ಅಪ್ಪುಗೆ ಇಡೀ ಕರ್ನಾಟಕದಲ್ಲಿ, ಪ್ರತಿ ಗ್ರಾಮದಲ್ಲಿ ಆಚರಣೆ ಆಗುತ್ತಿದೆ. ಪ್ರಶಸ್ತಿ ನೀಡುತ್ತಿರುವುದು ನನ್ನ, ಸರ್ಕಾರದ ಪುಣ್ಯ ಭಾಗ್ಯ. ಇಂತಹ ಸೌಭಾಗ್ಯ ನಮಗೆ ಸಿಕ್ಕಿದೆ. ಪುನೀತ್ ಕೆಳಗೆ ಬಂದು ನೋಡಿ, ಜನರು ಎಷ್ಟು ಅಭಿಮಾನಿಗಳು ಬಂದಿದ್ದಾರೆ. ಇಲ್ಲಿ ಮತ್ತೊಮ್ಮೆ ಕನ್ನಡ ನಾಡಿನಲ್ಲಿ ಹುಟ್ಟಿ ಬಾ ಎಂದು ಆಶಿಸುತ್ತೇವೆ. ಅಪ್ಪು ಎಲ್ಲರ ಮನದಲ್ಲಿ ನೆಲೆಸಿದ್ದಾರೆ ಎಂದು ಭಾವುಕವಾಗಿ ನುಡಿದರು.
ಇದನ್ನೂ ಓದಿ | Appu Namana | ಕರ್ನಾಟಕ ರತ್ನ ಕಾರ್ಯಕ್ರಮಕ್ಕೆ ಜನಸಾಗರ, ಮೋಡಿ ಮಾಡಿದ ವಿಜಯಪ್ರಕಾಶ್ ಗಾಯನ