ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್ ರಾಜಕುಮಾರ್ (Appu Namana) ಅವರಿಗೆ ನೀಡಲಾಗುತ್ತಿರುವ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಸಮಾರಂಭಕ್ಕೆ ನಾನು ಹೋಗುತ್ತಿಲ್ಲ. ಶಿಷ್ಟಾಚಾರದ ಪ್ರಕಾರ ನನ್ನನ್ನು ಕರೆದಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದ ಮುಂಭಾಗ ಹಾಕಲಾಗಿರುವ ಬೃಹತ್ ವೇದಿಕೆಯಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಪುನೀತ್ ರಾಜಕುಮಾರ್ ಪರವಾಗಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕೊಡಮಾಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಅನೇಕ ಗಣ್ಯರು ಭಾಗವಹಿಸುತ್ತಿದ್ದಾರೆ.
ಆಮಂತ್ರಣ ಪತ್ರಿಕೆಯಲ್ಲಿ ಸಿದ್ದರಾಮಯ್ಯ ಹೆಸರನ್ನು ಮುದ್ರಿಸಿದ್ದರೂ ಅವರನ್ನು ಶಿಷ್ಟಾಚಾರದ ಪ್ರಕಾರ ಆಹ್ವಾನ ನೀಡಿಲ್ಲ ಎಂಬ ಆರೋಪ ಈಗ ಕೇಳಿಬಂದಿದೆ. ಈ ಬಗ್ಗೆ ಸ್ವತಃ ಸಿದ್ದರಾಮಯ್ಯ ಅವರೇ ಮಾತನಾಡಿ, ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರ ಪ್ರಶಸ್ತಿಯನ್ನು ಕೊಡಲಾಗುತ್ತಿದೆ. ಇದನ್ನು ನಾನು ಸ್ವಾಗತ ಮಾಡುತ್ತೇನೆ. ಆದರೆ ಪ್ರೋಟೋಕಾಲ್ ಪ್ರಕಾರ ನನ್ನನ್ನು ಕರೆದಿಲ್ಲ. ಹಾಗಾಗಿ ನಾನು ಹೋಗುತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯಪಾಲರಿಗೂ ಇಲ್ಲ ಆಹ್ವಾನ
ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಶಿಷ್ಟಾಚಾರ ಉಲ್ಲಂಘನೆಯ ಮಾತುಗಳು ಕೇಳಿಬರುತ್ತಿವೆ. “ಕರ್ನಾಟಕ ರತ್ನ”ವು ರಾಜ್ಯದ ಅತ್ಯುನ್ನತ ಪ್ರಶಸ್ತಿಯಾಗಿದೆ. ಆದರೆ, ಈ ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಶಿಷ್ಟಾಚಾರದ ಪ್ರಕಾರ ಆಹ್ವಾನ ನೀಡಿಲ್ಲ. 1992ರಲ್ಲಿ ರಾಜಕುಮಾರ್‌ಗೆ ಆಗಿನ ರಾಜ್ಯಪಾಲರಿಂದ ಪ್ರಶಸ್ತಿ ಪ್ರದಾನವಾಗಿತ್ತು.
ಇದನ್ನೂ ಓದಿ | Appu Namana | ಬೆಂಗಳೂರಿಗೆ ಸೂಪರ್ ಸ್ಟಾರ್ ರಜನಿಕಾಂತ್, ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ