Site icon Vistara News

Arecanut Insurance Karnataka: ಅಡಿಕೆ ಬೆಳೆ ವಿಮೆ ನೋಂದಣಿ ಮುಗಿಯದ ಗೋಳು; ಸಮಸ್ಯೆಗಳು ಸಾಲುಸಾಲು!

Arecanut Insurance Karnataka

Arecanut Insurance Registration Problem In Karnataka

| ಅರವಿಂದ ಸಿಗದಾಳ್, ಮೇಲುಕೊಪ್ಪ

ಸಹಜವಾಗಿ ಯಾವುದೇ ಹೊಸ (Arecanut insurance Karnataka) ತಂತ್ರಜ್ಞಾನವನ್ನು ಅಳವಡಿಸುವಾಗ, ‘ಗೋ ಲೈವ್’ ಎಂದು ಅನುಷ್ಠಾನಕ್ಕೆ ತರುವಾಗ, ಒಂದು ಮಾಕ್ ಟೆಸ್ಟ್ ಅಥವಾ ಪ್ರಾಯೋಗಿಕ ಪರೀಕ್ಷೆ ಮಾಡುತ್ತಾರೆ. ಆದರೆ, ಇತ್ತೀಚಿಗಿನ ಕೃಷಿ ಕ್ಷೇತ್ರದಲ್ಲಿ ಅಳವಡಿಸುತ್ತಿರುವ ಆ್ಯಪ್ ಮತ್ತು ವೆಬ್‌ಸೈಟ್ ತಂತ್ರಜ್ಞಾನಗಳಿಗೆ ಈ ಪ್ರಾಯೋಗಿಕ ಪರೀಕ್ಷೆ ಮಾಡದೆ, ಎದುರಾಗಬಹುದಾದ ಪ್ರಾಕ್ಟಿಕಲ್ ಸಮಸ್ಯೆಗಳನ್ನು ಬಗೆಹರಿಸದೆ, ನೇರವಾಗಿ ತಂತ್ರಜ್ಞಾನಗಳನ್ನು ತೋಟಗಾರಿಕೆ, ಕೃಷಿ ಇಲಾಖೆಗಳ ಮೂಲಕ ಅನುಷ್ಠಾನಕ್ಕೆ ತರಲಾಗುತ್ತಿದೆ. ಇದರ ಪರಿಣಾಮ ರೈತರು, ಕೃಷಿ/ತೋಟಗಾರಿಕಾ ಅಧಿಕಾರಿಗಳು, VAಗಳು, ತಾಲೂಕು ಕಚೇರಿ ಅಧಿಕಾರಿಗಳು, ಬ್ಯಾಂಕ್ ಮತ್ತು ಕೊ-ಆಪರೇಟಿವ್ ಸೊಸೈಟಿ ಅಧಿಕಾರಿಗಳು ತಮ್ಮ ಸಮಯ ವ್ಯವದಾನಗಳನ್ನು ಕಳೆದುಕೊಳ್ಳುವಂತಾಗುತ್ತಿದೆ. ಜನಸಾಮಾನ್ಯರ ಗೋಳಾಟ ಹೆಚ್ಚಾಗುತ್ತಿದೆ!

ಕೃಷಿ ಸಂಬಂಧಿಸಿದ ತಂತ್ರಜ್ಞಾನವನ್ನು ಅಳವಡಿಸುವಾಗ ವಾಸ್ತವದ ಮತ್ತು ಎದುರಾಗಬಹುದಾದ ಸಮಸ್ಯೆಗಳನ್ನು ಒಂದು ಟ್ರಯಲ್ ಮಾಡಿ ನೋಡುವುದು ಬೇಡವಾ? ಯಾರು ಇಂತಹ ಅಸಂಬದ್ಧ ಅವ್ಯವಸ್ಥೆಯ ತಂತ್ರಜ್ಞಾನಗಳನ್ನು ಪ್ರತೀವರ್ಷ ಅನುಷ್ಠಾನಕ್ಕೆ ತಂದು ಎಲ್ಲರನ್ನೂ ಗೋಳಿನ ಕೂಪಕ್ಕೆ ತಳ್ಳುವುದು? ಆ್ಯಪ್/ವೆಬ್ಸೈಟ್ ಮಾಡುವವರು ಯಾರು? ಯಾವ ಅತಿ ಬುದ್ದಿವಂತರು ಇದನ್ನು ಅನುಮೋದನೆ ಮಾಡುವವರು?
ಕಳೆದ ವರ್ಷ ಅಸ್ತಿತ್ವಕ್ಕೆ ತಂದ ಬೆಳೆ ಸರ್ವೆ ಆ್ಯಪ್‌ನ ದೋಷದಿಂದ ಬರಿ ಚಿಕ್ಕಮಗಳೂರು ಜಿಲ್ಲೆಯಲ್ಲಿ 8876 ಬೆಳೆ ಸರ್ವೆಗಳು ತಪ್ಪಾಗಿ ದಾಖಲಾದವು. ಮತ್ತೆ ಅದನ್ನು ಸರಿ ಪಡಿಸಲು ತಿಂಗಳುಗಳೇ ಬೇಕಾದವು. ಕೆಲವಷ್ಟು ಇನ್ನೂ ಸರಿಯಾಗಿಲ್ಲ. ಇದು ಒಂದು ಜಿಲ್ಲೆಯದು. ಇಡೀ ರಾಜ್ಯದಲ್ಲಿ ಆದ ಪ್ರಕರಣಗಳು ಇನ್ನೆಷ್ಟೋ!

ಪ್ರಾಯೋಗಿಕ ಪರೀಕ್ಷೆ ಏಕಿಲ್ಲ?

ಈ ತಂತ್ರಜ್ಞಾನ ಅನುಷ್ಠಾನದ ಮೊದಲು ಒಂದು ಗ್ರಾಮವನ್ನೋ, ಒಂದು ಹೋಬಳಿಯನ್ನೋ ಆಯ್ಕೆ ಮಾಡಿಕೊಂಡು, ಪ್ರಾಯೋಗಿಕ ಪರೀಕ್ಷೆ ಮಾಡಿ, ಎದುರಾಗುವ ಪ್ರಾಕ್ಟಿಕಲ್ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳುವ ಅಪ್‌ಡೇಟ್‌ನೊಂದಿಗೆ ಇಡೀ ರಾಜ್ಯಕ್ಕೆ ತಂತ್ರಜ್ಞಾನವನ್ನು ಅಳವಡಿಸಬಹುದಲ್ಲವಾ? ಇಷ್ಟಕ್ಕೂ ಹೊಸ ತಂತ್ರಜ್ಞಾನವನ್ನು ಅಳವಡಿಸುವ ಮೊದಲು ಒಂದು ಆಡಿಟ್ ವ್ಯವಸ್ಥೆ ಇರೋದಿಲ್ವಾ?

ರೈತರ ಜಮೀನಿನ ಫ್ರೂಟ್ ಐಡಿ (Farmer Registration and a Unified beneficiary Information System (FRUITS) ಮಾಡುವಾಗಲೂ ಇದೇ ಸಮಸ್ಯೆ, ಆಧಾರ್-ಪಹಣಿ ಸೀಡಿಂಗ್ ಮಾಡುವಾಗಲೂ ಇದೇ ಸಮಸ್ಯೆ, ಈಗ ಬೆಳೆ ವಿಮೆ ನೊಂದಣಿ ಮಾಡಿಸುವಾಗಲೂ ಇದೇ ಗೋಳು. ಅಡಿಕೆ, ಮೆಣಸು ಬೆಳೆಗಳಿಗೆ ವಿಮೆ ನೊಂದಣಿ ಮಾಡಿಸಲು ಹತ್ತು ಜನ ರೈತರು ಬ್ಯಾಂಕ್, ಕೋ ಆಪರೇಟಿವ್ ಸಂಸ್ಥೆಗಳಿಗೆ ಹೋದರೆ, ಸುಸೂತ್ರವಾಗಿ ಇಬ್ಬರು ರೈತರಿಗೂ ಬೆಳೆ ವಿಮೆ ನೊಂದಣಿ ಆಗ್ತಾ ಇಲ್ಲ ಅಂತ ಅಧಿಕಾರಿಗಳು ಹೇಳ್ತಾ ಇದಾರೆ. ತಂತ್ರಜ್ಞಾನದಲ್ಲಿ ಒಬ್ಬೊಬ್ಬ ರೈತರ ನೋಂದಣಿಗೆ ಒಂದೊಂದು ಸಮಸ್ಯೆ.

ಅಡಿಕೆ ಮೆಣಸು ಬೆಳೆ ವಿಮೆ ಸಮಸ್ಯೆ

ಮಲೆನಾಡು-ಕರಾವಳಿಗಳಲ್ಲಿ ಅಡಿಕೆ ಮೆಣಸು ಬೆಳೆ ವಿಮೆ ನೊಂದಣಿ ಪ್ರಕ್ರಿಯೆ ಪ್ರಾರಂಭಿಸಿ 12 ದಿನಗಳಾದವು. ಸಾಫ್ಟ್‌ವೇರ್ ಸಮಸ್ಯೆಗಳು ಇನ್ನೂ ಮುಂದುವರೆದಿವೆ. ಬೆಳೆ ವಿಮೆ ನೊಂದಣಿಯಲ್ಲಿ ಕಾಣಿಸುತ್ತಿರುವ ಸಾಮಾನ್ಯ ಸಮಸ್ಯೆಗಳು, ದೂರುಗಳು ಇಲ್ಲಿವೆ.
1) Aadhar not valided. You cannot generate this application
2) No FRUIT details available for this district, taluk and Gram panchayat ULB combinations
3) Error connecting to FRUIT server
4) FRUIT details not available for this Aadhar No. You can not enroll
5) ಕೆಲವು ರೈತರ ಬೆಳೆ ವಿಮೆ ಕಟ್ಟಿಯಾಗಿದೆ. ಆದರೆ, ಬೆಳೆ ವಿಸ್ತೀರ್ಣವೇ ವ್ಯತ್ಯಾಸ ಆಗಿದೆ. 17 ಗುಂಟೆ ಭಾಗಾಯ್ತು ಅಂತ ಪಹಣಿ ಇದೆ, ಸಿಸ್ಟಮ್‌ನಲ್ಲಿ ಎಂಟು ಗುಂಟೆಗೆ ಬೆಳೆ ವಿಮೆ ನೊಂದಣಿ ಆಗಿದೆ.
6) ಕಳೆದ ವರ್ಷ ಜಮೀನು ಜಾಯಿಂಟ್ ಅಕೌಂಟ್‌ನಲ್ಲಿದ್ದರೂ ಬೆಳೆ ವಿಮೆ ಮಾಡಿಸಬಹುದಿತ್ತು. ಈ ವರ್ಷ ಅದಕ್ಕೆ “ಎಲ್ಲಾ ಸದಸ್ಯರ FRUIT ID ಇಲ್ಲ, ಹಾಗಾಗಿ ನೊಂದಣಿ ಆಗ್ತಾ ಇಲ್ಲ” ಅನ್ನುವ ಕಂಪ್ಲೇಂಟ್‌.
7) ಕಳೆದ ವರ್ಷ ಬೆಳೆ ಸರ್ವೆಯಲ್ಲಾದ ಲೋಪಗಳನ್ನು ಸರಿಪಡಿಸಲಾಗಿಲ್ಲ, ಹಾಗಾಗಿ ನೊಂದಣಿ ಆಗ್ತಾ ಇಲ್ಲ.
ಹೀಗೆ ಬೇರೆ ಬೇರೆ ರೈತರ ಪಹಣಿಗೆ ಬೇರೆ ಬೇರೆ ಸಮಸ್ಯೆಗಳು. ಕೊ-ಆಪರೇಟಿವ್ ಸಂಸ್ಥೆಗಳಿಗೆ, ಬ್ಯಾಂಕುಗಳಿಗೆ ರೈತರಿಂದ ದಿನಾ ಕರೆಗಳು “ಸಾರ್, ನಮ್ದು ಇನ್ಷ್ಯೂರೆನ್ಸ್ ಕಟ್ಟಿ ಆಯ್ತಾ?” ಅಂತ.
ಮೊನ್ನೆ ದಕ್ಷಿಣ ಕೋರಿಯಾದಲ್ಲಿ ರೋಬೋಟ್ ಒಂದು ಮಾನಸಿಕ ಅಸ್ವಸ್ಥತೆಯಿಂದ ಆತ್ಮಹತ್ಯೆ ಮಾಡಿಕೊಂಡಿತ್ತಂತೆ!! ಈ ಕೃಷಿ ಸಾಫ್ಟ್‌ವೇರ್‌ಗಳು ಬೆಳೆ ನೊಂದಣಿಗೆ ಸಹಕರಿಸದೆ ರೈತರಿಗೆ ‘ಅಸಹಕಾರ’ ತೋರುತ್ತಿವೆಯಾ ಹೇಗೆ?
ಬೆಳೆ ವಿಮೆ ನೊಂದಣಿಗೆ ಇನ್ನು 18 ದಿನಗಳ ಸಮಯ ಮಾತ್ರ ಇರುವುದು. ಅಷ್ಟರಲ್ಲಿ ಎಲ್ಲ ಸಮಸ್ಯೆಗಳು ಬಗೆಹರಿಯಬಹುದಾ? ಬೆಳೆ ವಿಮೆ ನೊಂದಣಿ ಆಗುತ್ತಾ? ಅಥವಾ ಬಹುತೇಕ ರೈತರಿಗೆ ಗೋಳಾಟವೇ ಗತಿಯಾ?

ಇದನ್ನೂ ಓದಿ: Arecanut Import: ಅಕ್ರಮ ಅಡಿಕೆ ಆಮದು ರೋಗಕ್ಕೆ ಔಷಧವೇ ಇಲ್ಲವೇ?

Exit mobile version