Site icon Vistara News

Santro Ravi case | ಸಮಗ್ರ ತನಿಖೆ ಹೇಳಿಕೆ, ರಾಜಕೀಯ ವಾಕ್ಸಮರ ನಡುವೆಯೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ ಸ್ಯಾಂಟ್ರೊ ರವಿ

santro Ravi

ಮೈಸೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದ ವೇಶ್ಯವಾಟಿಕೆ ದಂಧೆಕೋರ ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೋ ರವಿಯ (Santro Ravi case) ಬಗ್ಗೆ ಸಮಗ್ರ ತನಿಖೆ ನಡೆಯಲಿದೆ ಎಂಬ ಪೊಲೀಸರು, ರಾಜಕಾರಣಿಗಳ ಹೇಳಿಕೆಗಳ ನಡುವೆಯೇ ಆತ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾನೆ.

ದಲಿತ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿದ, ವಂಚಿಸಿದ ಪ್ರಕರಣದ ಮೂಲಕ ಆತನ ಹಳೆ ಪುರಾಣಗಳೆಲ್ಲ ಬಿಚ್ಚಿಕೊಳ್ಳುತ್ತಿವೆ. ಆದರೆ, ಅಚ್ಚರಿ ಎಂದರೆ ಎಲ್ಲರೂ ಮಾತಿಗೆ ಮಾತು ಸೇರಿಸುತ್ತಾ ಕೆಸರು ಎರಚಿಕೊಳ್ಳುತ್ತಿದ್ದಾರಷ್ಟೇ ಹೊರತು ಇದುವರೆಗೂ ಆತನ ವಿಚಾರಣೆಯಾಗಲೀ, ಬಂಧನವಾಗಲೀ ನಡೆದಿಲ್ಲ. ದೂರು ನೀಡಿ ಮೂರು ದಿನಗಳ ಕಳೆದರೂ ಕಾನೂನು ಕ್ರಮವೇ ಆರಂಭಗೊಂಡಿಲ್ಲ. ಇದರ ನಡುವೆ ಮುಂದಿನ ದಿನಗಳಲ್ಲಿ ಒತ್ತಡ ಬಿದ್ದು ಬಂಧನವೇನಾದರೂ ಆದರೆ ಸುರಕ್ಷತೆಗೆ ಇರಲಿ ಎಂದು ಸ್ಯಾಂಟ್ರೋ ರವಿಯೇ ಸ್ವತಃ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾನೆ.

ಚುನಾವಣೆ ಹೊಸ್ತಿಲಲ್ಲಿ ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿರುವ ಸ್ಯಾಂಟ್ರೋ ರವಿ ಮೇಲೆ ವೇಶ್ಯವಾಟಿಕೆ ದಂಧೆಯಲ್ಲಿ ಪಾಲ್ಗೊಂಡ ಕಾರಣಕ್ಕೆ ಡಜನ್‌‌ಗಟ್ಟಲೇ ಈತನ ಮೇಲೆ ಕೇಸ್ ದಾಖಲಾಗಿವೆ. ಈ ಸರಣಿಗೆ ಮತ್ತೊಂದು ಕೇಸ್ ಮೈಸೂರಿನಲ್ಲಿ ಸೇರ್ಪಡೆಯಾಗಿದೆ. ಸ್ಯಾಂಟ್ರೋ ರವಿ ಎರಡನೇ ಪತ್ನಿ, ಅತ್ಯಾಚಾರ ಹಾಗೂ ವಂಚನೆ ಕೇಸ್ ದಾಖಲಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ದೂರಿಗೆ ಪೂರಕವಾದ ಸಾಕ್ಷ್ಯಾಧಾರ ಕಲೆ ಹಾಕುತ್ತಿದ್ದೇವೆ ಎಂದಿದ್ದಾರೆ.

ಶುಕ್ರವಾರ ಬೀದರ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಿಎಂ ಎಚ್.ಡಿ‌.ಕುಮಾರಸ್ವಾಮಿ, ಸಚಿವ ಎಸ್.ಟಿ. ಸೋಮಶೇಖರ್ ಅವರಿದ್ದ ವಿಡಿಯೊ ತುಣುಕು ಬಹಿರಂಗಪಡಿಸಿದ್ದರು. ಹೆಚ್ಚು ಮಾತನಾಡಿದ್ರೆ ಮತ್ತಷ್ಟು ವಿಡಿಯೋ ಬಿಡ್ತೀನಿ ಅಂತ ಎಚ್ಚರಿಕೆ ನೀಡಿದ್ದರು.

ಬಿಜೆಪಿ ಸರ್ಕಾರ ಮತ್ತು ಸಚಿವರ ಮೇಲೆ ಬಂದಿರುವ ಆರೋಪಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿಡಿಮಿಡಿಗೊಂಡಿದ್ದಾರೆ. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, 20 ವರ್ಷದಿಂದ ಎಲ್ಲ ರಾಜಕಾರಣಿಗಳೊಂದಿಗೂ ಅವನಿಗೆ ನಂಟಿದೆ. ಪ್ರತಿಪಕ್ಷದವರಿಗೂ ಆತನ ನಂಟು ಇದೆ. ಆದ್ದರಿಂದ ಸಮಗ್ರ ತನಿಖೆ ನಡೆಸುವಂತೆ ಸೂಚಿಸಿದ್ದೇನೆ ಅಂತ ಸಮಜಾಯಿಷಿ ನೀಡಿದ್ದಾರೆ.

ಜಿ.ಟಿ. ದೇವೇಗೌಡ ಹೇಳಿದ್ದೇನು?
ಸಿಎಂ ಕಾರು ಹತ್ತುವಾಗ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹಳೆಯ ಕೇಸ್‌ವೊಂದನ್ನು ಪ್ರಸ್ತಾಪ ಮಾಡಿದ್ದಾರೆ. 2014ರಲ್ಲಿ ಸ್ಯಾಂಟ್ರೋ ರವಿ ಮನೆ ಮೇಲೆ ಆಗಿನ ಕುವೆಂಪು ನಗರ ಠಾಣೆ ಇನ್ಸ್‌ಪೆಕ್ಟರ್ ಯಶವಂತ್ ಮತ್ತು ಸಿಬ್ಬಂದಿ ದಾಳಿ ಮಾಡಿದ್ದರು. ಇದರ ವಿರುದ್ಧ ದೂರು ನೀಡಿದ್ದ ಸ್ಯಾಂಟ್ರೋ ರವಿ ಮೊದಲ ಪತ್ನಿ, ಇನ್ಸ್‌ಪೆಕ್ಟರ್ ನನ್ನನ್ನು ರೇಪ್ ಮಾಡಲು ಬಂದಿದ್ದರು ಅಂತ ದೂರು ನೀಡಿದ್ದಳು. ಆ ಕೇಸ್ ಆಧಾರದ ಮೇಲೆ ಖಡಕ್ ಅಧಿಕಾರಿ ಯಶವಂತ್ ಅವರನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಸ್ಪೆಂಡ್ ಮಾಡಿತ್ತು. ಈ ವಿಚಾರವನ್ನು ಜಿಟಿಡಿ, ಸಿಎಂ ಗಮನಕ್ಕೆ ತಂದರು. ಬಹುಶಃ ಇದು ಮತ್ತೊಂದು ಸುತ್ತಿನ ಕೆಸರೆರಚಾಟಕ್ಕೆ ಕಾರಣವಾಗಬಹುದು ಅಷ್ಟೆ.

ಸ್ಯಾಂಟ್ರೋ ರವಿ ದಂಧೆ ಈಗ ಎಲ್ಲ ಕಡೆ ಚರ್ಚೆ ಆಗುತ್ತಿದೆ. ಸದ್ಯಕ್ಕಂತೂ ಮೈಸೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬಂಧನದ ಭೀತಿ ಎದುರಿಸುತ್ತಿರುವ ಸ್ಯಾಂಟ್ರೋ ರವಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾನೆ. ಬಂಧನ ಆಗುತ್ತದೋ, ಒಂದೆರಡು ದಿನ ಚರ್ಚೆಯಾಗಿ ಮರೆಯಾಗುತ್ತದೋ ಕಾದು ನೋಡಬೇಕು.

ಇದನ್ನೂ ಓದಿ Santro Ravi case | ರಾಜಕಾರಣಿಗಳ ಜತೆ ಸ್ಯಾಂಟ್ರೋ ರವಿ ನಂಟು: 20 ವರ್ಷಗಳ ಇತಿಹಾಸದ ಬಗ್ಗೆ ತನಿಖೆ ಎಂದ ಬೊಮ್ಮಾಯಿ

Exit mobile version