ಹುಬ್ಬಳ್ಳಿ.: ಹುಬ್ಬಳ್ಳಿಯಲ್ಲಿ ಯುವಕನನ್ನು ಬೆತ್ತಲೆಗೊಳಿಸಿ ಹಲ್ಲೆ ಪ್ರಕರಣದಲ್ಲಿ (Assault Case) ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಬೆಂಡಿಗೇರಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಬಿ.ಟಿ. ಬುಡ್ನಿ ಎಂಬುವವರನ್ನು ಎತ್ತಂಗಡಿ ಮಾಡಲಾಗಿದೆ. ಇವರನ್ನು ಬೆಂಡಿಗೇರಿ ಪೊಲೀಸ್ ಠಾಣೆಯಿಂದ ಮಹಿಳಾ ಪೊಲೀಸ್ ಠಾಣೆಗೆ ಮುಂದಿನ ಆದೇಶದವರೆಗೆ ನಿಯೋಜನೆ ಮಾಡಲಾಗಿದೆ.
ಇನ್ನು ಮಹಿಳಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜಯಪಾಲ್ ಪಾಟೀಲ್ ಅವರನ್ನು ಬೆಂಡಿಗೇರಿ ಪೊಲೀಸ್ ಠಾಣೆಗೆ ನಿಯೋಜನೆ ಮಾಡಲಾಗಿದೆ. ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಇನ್ಸ್‌ಪೆಕ್ಟರ್ ವಿಫಲವಾದ ಹಿನ್ನೆಲೆಯಲ್ಲಿ ಕಮಿಷನರ್ ಕ್ರಮ ಕೈಗೊಂಡಿದ್ದಾರೆ.
ಹಳೇ ಹುಬ್ಬಳ್ಳಿಯಲ್ಲಿ ಯುವಕನನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಲಾಗಿತ್ತು. ಆದರೆ, ಕಳೆದ ನಾಲ್ಕು ತಿಂಗಳ ಹಿಂದೆ ನಡೆದ ಘಟನೆ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಬಂದಿರಲಿಲ್ಲ. ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾದ ಬಳಿಕ ಬೆಂಡಿಗೇರಿ ಪೊಲೀಸರು ಎಚ್ಚೆತ್ತು ತನಿಖೆ ಕೈಗೊಂಡಿದ್ದರು. ಹೀಗಾಗಿ ಠಾಣೆಯ ಇನ್ಸ್‌ಪೆಕ್ಟರ್ ಬಿ.ಟಿ. ಬುಡ್ನಿ ಅವರನ್ನು ಬೇರೊಂದು ಠಾಣೆಗೆ ನಿಯೋಜನೆ ಮಾಡಲಾಗಿದೆ.
ಇದನ್ನೂ ಓದಿ | Loan App torture : ಲೋನ್ ಆ್ಯಪ್ ಹಿಂಸೆಗೆ ತತ್ತರಿಸಿ ಎಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ
ಸಂತ್ರಸ್ತ ಯುವಕನನ್ನು ಪತ್ತೆಹಚ್ಚಿದ ಪೊಲೀಸರು
ಕ್ಷುಲ್ಲಕ ಕಾರಣಕ್ಕೆ ಯುವಕನನ್ನು ಬೆತ್ತಲೆಗೊಳಿಸಿ ಥಳಿಸಿದ ಪ್ರಕರಣದಲ್ಲಿ ಹಲ್ಲೆಗೊಳಗಾದ ಯುವಕ ಸಂದೀಪ್‌ನನ್ನು ಪೊಲೀಸರು ಪತ್ತೆಹಚ್ಚಿ, ಠಾಣೆಗೆ ಕರೆತಂದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆಯೇ ಸಂದೀಪ್ ನಾಪತ್ತೆಯಾಗಿದ್ದ.
ತನ್ನ ಮೇಲೆ ಪುಡಿರೌಡಿಗಳು ಮತ್ತೆ ಹಲ್ಲೆ ಮಾಡುವರೆಂಬ ಭೀತಿ ಇದೆ ಎಂದು ಹೇಳಿರುವ ಯುವಕ, ಹಲ್ಲೆಕೋರರ ಮೇಲೆ ದೂರು ನೀಡಲು ಹಿಂಜರಿಯುತ್ತಿದ್ದಾನೆ ಎನ್ನಲಾಗಿದೆ. ಈಗಾಗಲೇ ಐವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ರೀಲ್ಸ್ ವಿಷಯಕ್ಕೆ ನಡೆಯಿತು ಹಲ್ಲೆ
ರೀಲ್ಸ್ ವಿಷಯಕ್ಕೆ ಯುವಕವ ಮೇಲೆ ಹಲ್ಲೆ ನಡೆದಿರುವುದು ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್, ವಿನಾಯಕ್, ಗಣೇಶ್, ಸಚಿನ್, ಮಂಜುನಾಥ ಎಂಬ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ | Matrimony Sites : ಮ್ಯಾಟ್ರಿಮೊನಿ ವರನ ಬಗ್ಗೆ ಇರಲಿ ಎಚ್ಚರ; ಆತನಿಗೆ ಡಜನ್ ಮದುವೆ ಆಗಿರಬಹುದು!
ಸಂತ್ರಸ್ತ ಯುವಕ ಸಂದೀಪ್ ಮತ್ತು ಆರೋಪಿಗಳು ಈ ಹಿಂದೆ ಒಂದೇ ಏರಿಯಾದಲ್ಲಿ ವಾಸಿಸುತ್ತಿದ್ದರು. ಪರಸ್ಪರ ಸ್ನೇಹಿತರಾಗಿದ್ದವರು ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ದೂರವಾಗಿದ್ದರು. ಕೆಲವು ದಿನಗಳ ಬಳಿಕ ಸಂದೀಪ್ ಧಾರವಾಡಕ್ಕೆ ಹೋಗಿ ನೆಲೆಸಿದ್ದ. ನಂತರ ಆರೋಪಿ ಪ್ರಜ್ವಲ್ ಜತೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸಂದೀಪ್ ಚಾಟ್ ಮಾಡಿದ್ದ. ರೀಲ್ಸ್‌ನಲ್ಲಿ ಇಬ್ಬರೂ ಪರಸ್ಪರ ಕಾಲೆಳೆದುಕೊಂಡಿದ್ದರು. ರೀಲ್ಸ್‌ನಲ್ಲಿ ಪ್ರಜ್ವಲ್ ತಾಯಿಯನ್ನು ಸಂದೀಪ್ ನಿಂದಿಸಿದ್ದ ಎನ್ನಲಾಗಿದೆ. ಹೀಗಾಗಿ ಕೋಪಗೊಂಡ ಪ್ರಜ್ವಲ್ ತನ್ನ ಸ್ನೇಹಿತರ ಜತೆ ಸೇರಿ ಸಂದೀಪ್‌ನನ್ನು ಬೆತ್ತಲೆಗೊಳಿಸಿ ಥಳಿಸಿದ್ದ. ಮೂರು ತಿಂಗಳ ನಂತರ ಆರೋಪಿಗಳು ಹಲ್ಲೆಯ ವಿಡಿಯೊ ವೈರಲ್ ಮಾಡಿದ್ದಾರೆ. ಇದರಿಂದ ಪ್ರಕರಣ ಬೆಳಕಿಗೆ ಬಂದಿತ್ತು. ಹೀಗಾಗಿ ಬೆಂಡಿಗೇರಿ ಠಾಣೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.