Site icon Vistara News

Assault Case: ಬೆಳ್ತಂಗಡಿಯಲ್ಲಿ ಬಿಜೆಪಿ ಮುಖಂಡನ ಮೇಲೆ ತಲ್ವಾರ್‌ನಿಂದ ಹಲ್ಲೆ; ಸುರಪುರದಲ್ಲಿ ರಾಜುಗೌಡ ಅಳಿಯನ ಕಾರಿನ ಮೇಲೆ ಕಲ್ಲೆಸೆತ

Assault Case

ಮಂಗಳೂರು/ಯಾದಗಿರಿ: ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ (Assault Case) ಬಿಜೆಪಿ ಕಾರ್ಯಕರ್ತ ಮತ್ತು ಬಿಜೆಪಿ ಮುಖಂಡನ ಮೇಲೆ ಕಾಂಗ್ರೆಸ್‌ ಕಾರ್ಯಕರ್ತರು ದಾಳಿ ನಡೆಸಿರುವುದು ಮಂಗಳವಾರ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕಾರ್ಯತಡ್ಕದ ಪೇಟೆಯಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ತಲ್ವಾರ್‌ನಿಂದ ಹಲ್ಲೆ ಮಾಡಲಾಗಿದ್ದು, ಸುರಪುರದಲ್ಲಿ ಉಪಚುನಾವಣೆಯ ಬಿಜೆಪಿ ಪರಾಜಿತ ಅಭ್ಯರ್ಥಿ ರಾಜುಗೌಡ ಅಳಿಯನ ಕಾರಿನ ಮೇಲೆ ಕೈ ಕಾರ್ಯಕರ್ತರಿಂದ ಕಲ್ಲು ತೂರಾಟ ಆರೋಪ ಕೇಳಿಬಂದಿದೆ.

ಪಟಾಕಿ ಸಿಡಿಸಿದ್ದಕ್ಕೆ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕಾರ್ಯತಡ್ಕದ ಪೇಟೆಯಲ್ಲಿ ಪಟಾಕಿ ಸಿಡಿಸಿದ್ದಕ್ಕೆ ಬಿಜೆಪಿ ಮುಖಂಡನ ಮೇಲೆ ಕಾಂಗ್ರೆಸ್ ಕಾರ್ಯಕರ್ತ ತಲ್ವಾರ್‌ನಿಂದ ದಾಳಿ ನಡೆಸಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡ ಬಿಜೆಪಿ ಕಾರ್ಯಕರ್ತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳ್ತಂಗಡಿ ತಾಲೂಕಿನ ಬಿಜೆಪಿ ಮಂಡಳದ ಎಸ್ಟಿ ಮೊರ್ಚಾದ ಅಧ್ಯಕ್ಷ ರಾಜೇಶ್ ಎಮ್.ಕೆ(33) ಹಲ್ಲೆಗೊಳಾಗಾದವರು. ಕಳೆಂಜದ ಕುಶಲಪ್ಪ ಗೌಡ ಕಜೆ ಹಲ್ಲೆ ಆರೋಪಿ. ರಾಜೇಶ್‌ಗೆ ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಧರ್ಮಸ್ಥಳ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ‌ ಅಭ್ಯರ್ಥಿ ಬ್ರಿಜೇಶ್‌ ಚೌಟ ಗೆಲುವು ಸಾಧಿಸಿದ್ದಕ್ಕೆ ಕಾರ್ಯಕರ್ತ ರಾಜೇಶ್ ಪಟಾಕಿ ಸಿಡಿಸಿದ್ದರು. ಆರೋಪಿ ಕುಶಲಪ್ಪ‌ ಮನೆ ಮುಂದೆ ರಾಜೇಶ್ ಮತ್ತು ತಂಡ ಪಟಾಕಿ ಸಿಡಿಸಿದ ಹಿನ್ನೆಲೆಯಲ್ಲಿ ಹಲ್ಲೆ ನಡೆಸಲಾಗಿದೆ.

ಪರಾಜಿತ ಅಭ್ಯರ್ಥಿ ಅಳಿಯನ ಕಾರಿನ ಮೇಲೆ ಕಲ್ಲು ತೂರಾಟ

ಯಾದಗಿರಿ: ಸುರಪುರ ಉಪಚುನಾವಣೆ ಬಿಜೆಪಿ ಪರಾಜಿತ ಅಭ್ಯರ್ಥಿ ರಾಜುಗೌಡ ಅಳಿಯನ ಕಾರಿನ ಮೇಲೆ ಕೈ ಕಾರ್ಯಕರ್ತರಿಂದ ಕಲ್ಲು ತೂರಾಟ ನಡೆಸಿರುವ ಆರೋಪ ಕೇಳಿಬಂದಿದೆ. ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದಲ್ಲಿ ಮಂಗಳವಾರ ಘಟನೆ ನಡೆದಿದೆ.

ಇದನ್ನೂ ಓದಿ | Narendra Modi Election: ಚುನಾವಣೆ ಫಲಿತಾಂಶದ ಬಳಿಕ ತಾಯಿಯ ನೆನೆದು ಭಾವುಕರಾದ ಮೋದಿ

ಬಿಜೆಪಿ ಪರಾಜಿತ ಅಭ್ಯರ್ಥಿ ರಾಜುಗೌಡ ಅಳಿಯ ಶಂಕರ್ ನಾಯಕ ಹಲ್ಲೆಗೊಳಗಾದವರು. ದಾಳಿ ವೇಳೆ ರಾಜುಗೌಡ ಅಳಿಯ ಹಾಗೂ ಬಿಜೆಪಿಯ ಇಬ್ಬರು ಕಾರ್ಯಕರ್ತರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಕಾರಿನ ಹಿಂಭಾಗದ ಗ್ಲಾಸ್‌ಗೆ ಕಲ್ಲು ಬಿದ್ದಿದ್ದು, ಅದೃಷ್ಟವಶಾತ್ ಕಾರ್‌ನಲ್ಲಿದ್ದ ಬಿಜೆಪಿ ಕಾರ್ಯಕರ್ತರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Exit mobile version