ಬೆಂಗಳೂರು: ಮ್ಯಾಜಿಸ್ಟ್ರೇಟ್ ಕೋರ್ಟ್ (Magistrate’s Court) ಆವರಣದಲ್ಲಿ ಹಿರಿಯ ವಕೀಲರೊಬ್ಬರ ಮೇಲೆ ಮಹಿಳೆಯೊಬ್ಬಳು ಚಾಕುವಿನಿಂದ ಹಲ್ಲೆ (Assault Case) ನಡೆಸಿ ಪರಾರಿ ಆಗಿರುವ ಘಟನೆ ಶುಕ್ರವಾರ ನಡೆದಿದೆ. ಹಿರಿಯ ವಕೀಲ ಕೃಷ್ಣಾ ರೆಡ್ಡಿ ಮೇಲೆ ಕಾಂಚನ ಎಂಬಾಕೆ ಹಲ್ಲೆ ನಡೆಸಿದ್ದಾಳೆ.
ಹರೀಶ್ ಎಂಬುವರಿಂದ ಕಾಂಚನ 5 ಲಕ್ಷ ರೂಪಾಯಿ ಪಡೆದಿದ್ದಳು. ಕಳೆದ ಮೂರು ವರ್ಷದಿಂದ ಹಣ ಮರು ಪಾವತಿಸುವುದಾಗಿ ಹೇಳಿ ವಂಚಿಸಿದ್ದಳು. ಈ ಸಂಬಂಧ ಕಾಂಚನ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿತ್ತು. ಈ ವಿಚಾರವಾಗಿ ಶುಕ್ರವಾರ ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಕಾಂಚನ ಹಾಜರಾಗಿದ್ದಳು.
ಹರೀಶ್ ಪರ ಹಾಜರಿದ್ದ ವಕೀಲ ಕೃಷ್ಣಾರೆಡ್ಡಿ ಕೇಸ್ ಮುಂದುವರಿಸುವುದಾಗಿ ಹೇಳಿದ್ದರು. ಆ ಬಳಿಕ ಕೋರ್ಟ್ ಕಲಾಪ ಮುಗಿಸಿ ನ್ಯಾಯಾಲಯದ ಆವರಣಕ್ಕೆ ಬಂದಿದ್ದರು. ಈ ವೇಳೆ ಕೃಷ್ಣಾರೆಡ್ಡಿ ಬಳಿ ಬಂದವಳೇ ಮತ್ತೆ ಕೇಸ್ ಮುಂದುವರೆಸುತ್ತೀಯಾ ಎಂದು ಕೇಳಿ, ಮೊದಲೇ ಪ್ಲಾನ್ ಮಾಡಿಕೊಂಡು ಬಂದಂತೆ, ಚಾಕುವಿನಿಂದ ಹಲ್ಲೆ ಮಾಡಿದ್ದಾಳೆ.
ಇದನ್ನೂ ಓದಿ: 2nd PUC Result 2023: ಪಿಯು ಪರೀಕ್ಷೆಯಲ್ಲಿ 4 ವಿಷಯಗಳಲ್ಲಿ ಫೇಲ್; ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
ನ್ಯಾಯಾಲಯದ ಆವರಣದಲ್ಲೇ ಹಿರಿಯ ವಕೀಲರಿಗೆ ಚಾಕುವಿನಿಂದ ಹಲ್ಲೆ ಮಾಡಿ ಬಳಿಕ ಅಲ್ಲಿಂದ ಪರಾರಿ ಆಗಿದ್ದಾಳೆ. ಇತ್ತ ಸ್ಥಳದಲ್ಲಿದ್ದ ಇತರೆ ವಕೀಲರು ಗಾಯಾಳು ಕೃಷ್ಣಾ ರೆಡ್ಡಿಯವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕಾಂಚನಾಗೆ ಬಲೆ ಬೀಸಿದ್ದಾರೆ.