ಕೋಲಾರ: ಮಾಲೂರು ತಾಲೂಕಿನ (Malur) ಜಯಮಂಗಲ ಗ್ರಾಮ ಪಂಚಾಯಿತಿ ಸದಸ್ಯ ಅನಿಲ್ ಕುಮಾರ್ ಹತ್ಯೆ ಪ್ರಕರಣದ ಆರೋಪಿಯು ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾನೆ. ಕೊನೆಗೆ ಪೊಲೀಸರು ಆತನ ಕಾಲಿಗೆ ಗುಂಡೇಟು (Firing) ಕೊಟ್ಟು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಅಶೋಕ್ ಎಂದು ಗುರುತಿಸಲಾಗಿದೆ.
ಅಕ್ಟೋಬರ್ 21ರಂದು ಜಯಮಂಗಲ ಗ್ರಾಪಂ ಕಾಂಗ್ರೆಸ್ ಬೆಂಬಲಿತ ಸದಸ್ಯ ಅನಿಲ್ ಕುಮಾರ್ ಅವರನ್ನು ಮಾಲೂರು ತಾಲೂಕಿನ ಕೋಡಿಹಳ್ಳಿ ಕ್ರಾಸ್ ಬಳಿ ಹತ್ಯೆ ಮಾಡಲಾಗಿದೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಅಶೋಕ್‌ನನ್ನು ಬಂಧಿಸಲು ಪೊಲೀಸರು ಮಾಲೂರು ಕೈಗಾರಿಕಾ ಪ್ರದೇಶಕ್ಕೆ ತೆರಳಿದ್ದಾರೆ. ಇದೇ ವೇಳೆ ಅಶೊಕನು ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾನೆ.
ಪೊಲೀಸರ ಮೇಲೆ ಹಲ್ಲೆ ನಡೆಸಿದ ಅಶೋಕ್ ಪರಾರಿಯಾಗಲು ಯತ್ನಿಸಿದ್ದಾನೆ. ಇದೇ ವೇಳೆ ಪೊಲೀಸರು ಅಶೋಕನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಪೊಲೀಸ್ ಸಿಬ್ಬಂದಿ ಕೋದಂಡಪಾಣಿ ಹಾಗೂ ಅಶೋಕ್ ಎಂಬುವರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಕೊನೆಗೆ ಪೊಲೀಸರು ಫೈರಿಂಗ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Murder Case: ಕೋಲಾರದಲ್ಲಿ ಮತ್ತೆ ಹರಿದ ನೆತ್ತರು; 17 ವರ್ಷದ ಬಾಲಕನ ಭೀಕರ ಕೊಲೆ
ಕೊಲೆ ಆರೋಪಿ ಅಶೋಕ್ ಹಾಗೂ ಇಬ್ಬರು ಪೊಲೀಸರಿಗೆ ಮಾಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಮಿಣಸಂದ್ರ ಗ್ರಾಮದವರಾದ ಅನಿಲ್ ಕುಮಾರ್ ಅವರನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.