ವಿಧಾನಸಭೆ: ನಾಗಮಂಗಲ ಡಿಪೊ ಕೆಎಸ್‌ಆರ್‌ಟಿಸಿ ಚಾಲಕ ಜಗದೀಶ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಸಚಿವ ಚೆಲುವರಾಯಸ್ವಾಮಿ ಏಕವಚನದಲ್ಲೇ ಪರಸ್ಪರ ಬೈದುಕೊಂಡರು. ಸಾಕಷ್ಟು ಹೊತ್ತು ಮಾತಿನ ಚಕಮಕಿ ನಂತರ ಸ್ಪೀಕರ್ ಕಚೇರಿಯಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಯಿತು. ಸಾರಿಗೆ ಇಲಾಖೆಯ ಪ್ರಕರಣವನ್ನು ಹಿರಿಯ ಪೊಲೀಸ್ ಅಧಿಕಾರಿಯಿಂದ ಕೂಲಂಕಶ ತನಿಖೆ ನಡೆಸುವುದಾಗಿ ಗೃಹಸಚಿವ ಡಾ. ಜಿ. ಪರಮೇಶ್ವರ್ ಘೊಷಿಸಿದರು. ಪ್ರತಿಭಟನೆಯನ್ನು ಹಿಂಪಡೆಯುವುದಾಗಿ ಕುಮಾರಸ್ವಾಮಿ ಹೇಳಿದರು.
ನಾಗಮಂಗಲ ಚಾಲಕ ಆತ್ಮಹತ್ಯೆ ಯತ್ನ ಪ್ರಕರಣದ ಕುರಿತು ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಸದನದಲ್ಲಿ ಉತ್ತರ ನೀಡಿದ ನಂತರ ಚೆಲುವರಾಯಸ್ವಾಮಿ ಸಿಎಂ ಸಿದ್ದರಾಮಯ್ಯ ಬಳಿ ಹೋಗಿ ಕೈಕುಲುಕಿದ್ದಕ್ಕೆ ಆಕ್ರೋಶಗೊಂಡರು. ಬಹಳ ಚೆನ್ನಾಗಿ ಉತ್ತರ ಕೊಟ್ಟಿದ್ದಾರೆ ಎಂದು ಶೇಕ್ ಹ್ಯಾಂಡ್ ಬೇರೆ. ಇದಕ್ಕೆಲ್ಲಾ ನಾನು ಕೇರ್ ಮಾಡಲ್ಲ. ನಾವು ಇಂಥದ್ದನ್ನು ಬಹಳ ನೋಡಿದ್ದೇವೆ. ಈ ರೀತಿಯ ರಾಜಕಾರಣ ಶಾಶ್ವತ ಅಲ್ಲ ಎಂದರು.
ಇದಕ್ಕೆ ಸಿಟ್ಟಾದ ಸಿಎಂ ಸಿದ್ದರಾಮಯ್ಯ, ರೀ ಕುಮಾರಸ್ವಾಮಿ ಅವರೇ ನಿಮಗೆ ಹೆದರಿಕೊಳ್ಳುತ್ತೇವಾ ನಾವು? ನೀವು ಕೇರ್ ಮಾಡಲ್ಲ ಅಂದರೆ ನಾವೂ ಮಾಡಲ್ಲ. ನೀವು ಕೇರ್ ಮಾಡಿದರೆ ನಾವು ಕೇರ್ ಮಾಡ್ತೀವಿ. ಯಾರೂ ಹೆದರಿಕೊಳ್ಳುವವರಿಲ್ಲ. ನಾನು ಸುಮ್ಮನೆ ಕುಳಿತುಕೊಂಡಿದ್ದೆ, ಅವರು ಬಂದು ಕೈಕೊಟ್ಟರು. ಅದಕ್ಕೆ ಚೆನ್ನಾಗಿ ಉತ್ತರ ಕೊಟ್ಟೆ ಎಂದು ಕೈಕುಲುಕಿದೆ ಎನ್ನುತ್ತಿದ್ದೀರ. ನನಗೂ ಇದಕ್ಕೂ ಸಂಬಂಧ ಇಲ್ಲ. ಕೆಲಸಕ್ಕೆ ಬಾರದನ್ನು ಮಾತನಾಡುತ್ತೀರಲ್ವ. ಯಾರನ್ನು ಕಂಡರೆ ಯಾರೂ ಕೇರ್ ಮಾಡಲ್ಲ ಅಂದಾದರೆ ನಾನು ಅದರ ಅಪ್ಪನಷ್ಟು ಕೇರ್ ಮಾಡಲ್ಲ. ಯಾರಿಗೆ ಹೇಳುತ್ತಿದ್ದೀರಿ ನೀವು ಎಂದು ಸಿದ್ದರಾಮಯ್ಯ ಸಿಟ್ಟಾದರು.
ಇದಕ್ಕೆ ನಾನೂ ಕೇರ್ ಮಾಡಲ್ಲ ಎಂದ ಎಚ್.ಡಿ. ಕುಮಾರಸ್ವಾಮಿ, ಕೇರ್ ಮಾಡದಿದ್ದರೂ ಪರವಾಗಿಲ್ಲ ಹೋಗ್ರಿ. ಸೆಕ್ಯುಲರ್ ಎಂದು ಹೇಳಿ ದೇವೇಗೌಡರ ಕುತ್ತಿಗೆ ಕೊಯ್ದರಲ್ಲಾ ನೀವು. ಸೆಕ್ಯುಲರ್ ಎಂದು ಹೇಳಿ ಕತ್ತು ಕೊಯ್ದರಲ್ಲಾ ನೀವು ಎಂದು ಕಿಡಿಕಾರಿದರು.
ಇದಕ್ಕೂ ಮುನ್ನ ಕೆಲಕಾಲ ಚೆಲುವರಾಯಸ್ವಾಮಿ ಹಾಗೂ ಎಚ್.ಡಿ. ಕುಮಾರಸ್ವಾಮಿ ನಡುವೆ ವಾಕ್ಸಮರ ನಡೆಯಿತು. ಅವರ್ಯಾರೋ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಮಾತಿಗೆ ಚೆಲುವರಾಯಸ್ವಾಮಿ ಆಕ್ಷೇಪಿಸಿದರು. ಹತಾಶರಾಗಿ ಅದ್ಯಾರೋ ಅಂತಾ ಲಘುವಾಗಿ ಹೇಳಬೇಡಿ. ನಾವು 135 ಜನ ಇಲ್ಲಿ ಕುಳಿತಿರೋದನ್ನ ನಿಮಗೆಸಹಿಸೋಕೆ ನಿಮ್ಮಿಂದ ಆಗುತ್ತಿಲ್ಲ. ನಿಮಗೆ ನಾಚಿಕೆಯಾಗಬೇಕು. ಕೂತ್ಕೊಳ್ಳರಿ ಎಂದು ಗದರಿದರು.
ಸಚಿವರ ಹೇಳಿಕೆಗೆ ಕೆಂಡಕಾರಿದ ಎಚ್.ಡಿ. ಕುಮಾರಸ್ವಾಮಿ, ನಮಗೆ ಯಾಕೆ ನಾಚಿಕೆ? ಹೇ ನೀನು ಕೂರಯ್ಯ. ನಾಚಿಕೆ ಆಗುವಂಥದ್ದು ನಾನೇನು ಮಾಡಿಲ್ಲ, ಮಾಡಿಕೊಂಡಿರೋದು ನೀವು ಎಂದು ಎಂದರು.
ನಿಮ್ಮನ್ನು ಸಿಎಂ ಮಾಡಿದ್ದು ಯಾರು? ಎಂದು ಚೆಲುವರಾಯಸ್ವಾಮಿ ಪ್ರಶ್ನಿಸಿದರೆ, ಹೌದೌದು ಇರಪ್ಪ ನಿನ್ನಿಂದ ಸಿಎಂ ಆಗಿದ್ನಾ ಎಂದು ಎಚ್.ಡಿ. ಕುಮಾರಸ್ವಾಮಿ ಏಕವಚನದಲ್ಲೇ ಮಾತನಾಡಿದರು. ಚೆಲುವರಾಯಸ್ವಾಮಿ ಸಹ ಏಕವಚನದಲ್ಲೇ, ಏನೇನೋ ಮಾತನಾಡಬೇಡ ಸುಮ್ನಿರಪ್ಪ ಎಂದರು.
ಈ ಸಮಯದಲ್ಲಿ ಕೆ.ಎನ್.ರಾಜಣ್ಣ ಮಧ್ಯಪ್ರವೇಶಿಸಿ, ಅಧ್ಯಕ್ಷರೇ ಒಳ್ಳೆಯ ವಿಷಯ ಚರ್ಚೆಯಾಗ್ತಿದೆ. ನೀವು ಚರ್ಚೆಗೆ ಅವಕಾಶ ಮಾಡಿಕೊಡಿ. ಯಾರ‍್ಯಾರ ಇತಿಹಾಸ ಏನಿದೆ ತಿಳಿಯೋಣ ಎಂದರು.
ನಾನು ಬಹಳ ವರ್ಷದಿಂದ ನೋಡ್ತಿದ್ದೇನೆ, ಅಧಿಕಾರ ಇಲ್ಲ ಅಂದಾಗ ಈ ರೀತಿ ಬರ್ತಾರೆ. ದಾಖಲೆ ಇದೆ, ಪೆನ್‌ಡ್ರೈವ್ ಇದೆ ಅಂತ ಬರ್ತಾರೆ. ರಾಜಕೀಯವಾಗಿ ಬೇಕಾದರೆ ಎದುರಿಸೋಣ. ಇಂತಹದ್ದನ್ನೆಲ್ಲ ನೀವು ಮಾಡಬೇಡಿ. ನನ್ನನ್ನ ಈ ವಿಚಾರದಲ್ಲಿ ಅಪರಾಧಿ ಮಾಡುತ್ತಿದ್ದಾರೆ. ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಇತಿಹಾಸ ಗೊತ್ತಾಗಬೇಕಾದ್ರೆ ಒಂದು ದಿನ ಕೊಡಿ. ಆಗ ಎಲ್ಲಾ ಇತಿಹಾಸ ಇಲ್ಲಿ ಮಾತನಾಡೋಣ ಎಂದು ಚೆಲುವರಾಯಸ್ವಾಮಿ ಹೇಳಿದರು.
ನಮ್ಮ ಕುಟುಂಬಕ್ಕೆ ಇತಿಹಾಸವಿದೆ. ಕೆಂಪುಕೋಟೆ ಧ್ವಜ ಹಾರಿಸಿದ ಸಾಕ್ಷ್ಯ ಕುಟುಂಬಕ್ಕಿದೆ. ಮುಖ್ಯಮಂತ್ರಿ, ಪ್ರಧಾನಮಂತ್ರಿ ಸ್ಥಾನವನ್ನು ದೇವೇಗೌಡ್ರು ಹುಡುಕಿಕೊಂಡು ಹೋದೋರಲ್ಲ. ಯಾವುದೇ ತಪ್ಪು ಮಾಡದ ಕನ್ನಡಿಗನನ್ನು ಅಧಿಕಾರದಿಂದ ಇಳಿಸಿದವರು ಈ ಕಾಂಗ್ರೆಸ್‌ನವರು. ದೇವೇಗೌಡರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್‌ನವರಲ್ಲ. ಬೇರೆ ಪಕ್ಷಗಳ ಬೆಂಬಲದಿಂದ ಅವರು ಪ್ರಧಾನಿ ಆಗಿದ್ದು. ಅವರ ಏನು ಪ್ರಧಾನಿಗಳಾಗೋಕೆ ಅರ್ಜಿ ಹಾಕೊಂಡು ಹೋಗಿದ್ದರ? ನಾನು ನಿನ್ನೆ ಡಾಕ್ಟರ್ ಜೊತೆ ಮಾತಾಡಿರೋದು, ಕುಟುಂಬ ಸದಸ್ಯರ ಜೊತೆ ಮಾತಾಡಿರೋ ಆಡಿಯೋ ಇರುತ್ತದೆ. ನಿಮ್ಮ ಪೊಲೀಸನವರೇ ಅದನ್ನು ಮಾಡಿಸಿರ್ತಾರೆ.ಆ ವ್ಯಕ್ತಿ ಸಾಯಬೇಕು, ಆ ವ್ಯಕ್ತಿ ಸಾವಿನ ಮೇಲೆ ರಾಜಕಾರಣ ಮಾಡೋಕೆ ಅಂತಾ ಅವ್ರು ಆಪಾದನೆ ಮಾಡಿದ್ದಾರೆ.ಹೀಗಾಗಿ ಇದರ ಬಗ್ಗೆ ತನಿಖೆ ಆಗಲೇಬೇಕು. ಅಲ್ಲಿವರೆಗೂ ಇವ್ರು ರಾಜೀನಾಮೆ ಕೊಟ್ಟು ಹೊರಗೆ ಇರಲಿ ಎಂದು ಕುಮಾರಸ್ವಾಮಿ ಸುದೀರ್ಘವಾಗಿ ಮಾತನಾಡಿದರು.
ನನ್ನ ಜೀವನದಲ್ಲಿ ಲಕ್ಷಾಂತರ ಜೀವಗಳನ್ನು ಉಳಿಸಿ ಬಂದವನು ನಾನು. ನಾನು ಇವರ ತರ ಕೊಲೆಗಡುಕ ರಾಜಕೀಯ ಮಾಡಿ ಬಂದಿಲ್ಲ ಎಂದು ಬಾಲಕೃಷ್ಣ ಹಾಗೂ ಚೆಲುವರಾಯಸ್ವಾಮಿ ಕುರಿತು ಎಚ್.ಡಿ. ಕುಮಾರಸ್ವಾಮಿ ಮಾತಾಡಿದ ಕೂಡಲೆ ಕಾಂಗ್ರೆಸ್ ಸದಸ್ಯರು ರೊಚ್ಚಿಗೆದ್ದರು. ನಮ್ಮ ಹಂಗಿನಲ್ಲಿ ನೀವು ಸಿಎಂ ಆಗಿದ್ದು. ಈ ಸದನ ನಿಮ್ಮ ಅಪ್ಪಂದು ಅಲ್ಲ, ನಮ್ಮ ಅಪ್ಪಂದು ಅಲ್ಲ. ರಾಜ್ಯದ ಆರುವರೆ ಕೋಟಿಯ ಜನರದ್ದು ಎಂದು ಬಾಲಕೃಷ್ಣ ಹೇಳಿದರು.