ಬೆಂಗಳೂರು: ಮೇ 22ರ ಸೋಮವಾರದಿಂದ ಮೇ 24ರ ಬುಧವಾರದವರೆಗೆ ಬೆಂಗಳೂರಿನ ವಿಧಾನಸೌಧದಲ್ಲಿ ಮೂರು-ದಿನಗಳ ಕಾಲ ರಾಜ್ಯ ವಿಧಾನಸಭಾ ಅಧಿವೇಶನ ನಡೆಯಲಿದೆ.
ಇದಕ್ಕಾಗಿ ರಾಜ್ಯಪಾಲರ ಅನುಮತಿ ಕೋರಿದ್ದು, ಈ ಅಧಿವೇಶನದಲ್ಲಿ ನೂತನವಾಗಿ ಆಯ್ಕೆಯಾದವರು ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮೊದಲ ಸಂಪುಟ ಸಭೆಯ ನಂತರ ನಡೆಸಿದ ಮೊದಲ ಸುದ್ದಿಗೋಷ್ಠಿಯಲ್ಲಿ ಈ ವಿಚಾರವನ್ನು ಸಿದ್ದರಾಮಯ್ಯ ತಿಳಿಸಿದರು. ಸದನದ ಅತ್ಯಂತ ಹಿರಿಯ ಸದಸ್ಯ ಆರ್. ವಿ. ದೇಶಪಾಂಡೆ ಅವರನ್ನು ಹಂಗಾಮಿ ಸಭಾಧ್ಯಕ್ಷರಾಗಿ (ಪ್ರೋಟೆಮ್ ಸ್ಪೀಕರ್ ) ಕಾರ್ಯ ನಿರ್ವಹಿಸುವಂತೆ ವಿನಂತಿಸಲಾಗಿದ್ದು ಸೋಮವಾರವೇ ನೂತನ ಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಸ್ಪೀಕರ್ ಹುದ್ದೆ ಖಾಲಿಯಾದಾಗ ಹಂಗಾಮಿ ಸಭಾಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ. ಹಂಗಾಮಿ ಸಭಾಧ್ಯಕ್ಷರ ನೇತೃತ್ವದಲ್ಲಿ ಸಭಾಧ್ಯಕ್ಷರ ಆಯ್ಕೆ ಚುನಾವಣೆ ಅಥವಾ ಪ್ರಕ್ರಿಯೆ ನಡೆಯಲಿದೆ. ಸದನದ ಹಿರಿಯ ಸದಸ್ಯ ಎಂಬ ಕಾರಣಕ್ಕೆ ಆರ್.ವಿ. ದೇಶಪಾಂಡೆ ಅವರನ್ನು ಆಯ್ಕೆ ಮಾಡಲಾಗಿದೆ. ಆದರೆ ಅವರನ್ನೇ ಸ್ಪೀಕರ್ ಆಗಿ ಆಯ್ಕೆ ಮಾಡುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಮಾಜಿ ಸಚಿವ ಎಚ್.ಕೆ. ಪಾಟೀಲ್ ಅವರನ್ನು ಸಭಾಧ್ಯಕ್ಷರಾಗಿ ಹಾಗೂ ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಅವರನ್ನು ಉಪಸಭಾಧ್ಯಕ್ಷರಾಗಿ ಆಯ್ಕೆ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಪ್ರಸ್ತುತ ಸ್ದಗಿತಗೊಂಡಿರುವ ಇಂದಿರಾ ಕ್ಯಾಂಟೀನ್‌ಗಳನ್ನು ಸದ್ಯದಲ್ಲಿಯೇ ಪುನಾರಂಭ ಮಾಡಲಾಗುವುದು ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ಘೋಷಿಸಿದರು. ಇದಕ್ಕಾಗಿ ಎಲ್ಲ ಜಿಲ್ಲೆಗಳಿಂದ ಮಾಹಿತಿಯನ್ನು ಪಡೆಯುವುದಾಗಿ ತಿಳಿಸಿದರು.
ಇದಕ್ಕೂ ಮೊದಲು ಕಾಂಗ್ರೆಸ್‌ನ ಐದು ಗ್ಯಾರಂಟಿ ಯೋಜನೆಗಳ ಕುರಿತು ಮಾತನಾಡಿದರು. ಪ್ರತಿ ವರ್ಷ ಈಗ 56 ಸಾವಿರ ಕೋಟಿ ರೂ. ಸಾಲ ಹಾಗೂ ಬಡ್ಡಿ ಮರುಪಾವತಿ ಮಾಡುತ್ತಿದ್ದೇವೆ. ಅಸಲು ಬಡ್ಡಿಗೇ ಇಷ್ಟು ಹಣ ನೀಡುತ್ತಿರುವಾಗ ಇಷ್ಟು ಹಣ ಜನರಿಗೆ ನೀಡಲು ಆಗುವುದಿಲ್ಲವೇ? ಹೆಚ್ಚು ತೆರಿಗೆ ವಸೂಲಿ ಮಾಡುವುದರಿಂದ 15 ಸಾವಿರ ಕೋಟಿ ರೂ. ಪಡೆಯುತ್ತೇವೆ. ದುಂದುವೆಚ್ಚ ಕಡಿಮೆ ಮಾಡಿ, ಸಾಲವನ್ನು ಕಡಿಮೆ ಮಾಡುವುದೂ ಸೇರಿ 50 ಸಾವಿರ ಕೋಟಿ ರೂ. ಹೊಂದಿಸಲು ಕಷ್ಟ ಆಗುವುದಿಲ್ಲ. ಈ ಐದು ಗ್ಯಾರಂಟಿಗಳಿಗೆ ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಮತ್ತಷ್ಟು ವಿವರ ಪಡೆದು, ಎಷ್ಟೇ ಹೊರೆಯಾದರೂ ಐದೂ ಗ್ಯಾರಂಟಿಗಳನ್ನೂ ಈಡೇರಿಸುತ್ತೇವೆ ಎಂದರು.