ತುಮಕೂರು: ಈಗಾಗಲೆ ಸಚಿವ ಉಮೇಶ್ ಕತ್ತಿ, ಮಾಜಿ ಶಾಸಕ ಸುರೇಶ್ ಗೌಡ ನೀಡಿದ ಹೇಳಿಕೆಯಿಂದ ಎದ್ದ ವಿವಾದದಿಂದ ಹೊರಬರುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಮತ್ತೊಂದು ಮುಜುಗರ ಎದುರಾಗಿದೆ. ಈ ಸರ್ಕಾರ ನಡೀತಾ ಇಲ್ಲ, ಹೇಗೊ ಎಂಟು ತಿಂಗಳು ಕಳೆದರೆ ಸಾಕು ಎಂದು ಮ್ಯಾನೇಜ್ ಮಾಡ್ತಾ ಇದ್ದೀವಿ ಎಂದು ಹಿರಿಯ ರಾಜಕಾರಣಿ, ಸರ್ಕಾರದಲ್ಲಿ ಕಾನೂನು ಸಚಿವರಾಗಿರುವ ಜೆ.ಸಿ. ಮಾಧುಸ್ವಾಮಿ ಆಡಿರುವ ಮಾತು ಈಗ ವೈರಲ್ ಆಗಿದೆ.
ಭಾಸ್ಕರ್ ಎಂಬ ಸಾಮಾಜಿಕ ಕಾರ್ಯಕರ್ತರೊಬ್ಬರು ಮಾಧುಸ್ವಾಮಿಯವರಿಗೆ ಕರೆ ಮಾಡಿರುವ ಆಡಿಯೊ ಇದು. ಚನ್ನಪಟ್ಟಣದಿಂದ ಭಾಸ್ಕರ್ ಎಂಬ ಸಾಮಾಜಿಕ ಕಾರ್ಯಕರ್ತರು ಮಾತನಾಡಿದ್ದಾರೆ. ಅದರಲ್ಲಿನ ಸಂಭಾಷಣೆ ಹೀಗಿದೆ.
ಭಾಸ್ಕರ್: ವಿಎಸ್‌ಎಸ್‌ಎನ್ ಬ್ಯಾಂಕ್‌ನಲ್ಲಿ ರೈತರು ಪಡೆದಿದ್ದ 50 ಸಾವಿರ ರೂ. ಸಾಲವನ್ನು ನವೀಕರಣ ಮಾಡುವ ಸಲುವಾಗಿ 1300 ರೂ. ಪಡೆಯುತ್ತಿದ್ದಾರೆ. ಕರ್ನಾಟಕದಾದ್ಯಂತ ಇದು ನಡೆಯುತ್ತಿದೆ.
ಮಾಧುಸ್ವಾಮಿ: ಇದೆಲ್ಲ ನನಗೆ ಗೊತ್ತು, ಏನು ಮಾಡಲಿ? ಸಹಕಾರ ಸಚಿವ ಸೋಮಶೇಖರ್ ಅವರ ಗಮನಕ್ಕೆ ಇದನ್ನು ತಂದಿದ್ದೇನೆ. ಏನೂ ಕ್ರಮ ಕೈಗೊಳ್ಳುತತಿಲ್ಲ ಅವರು, ಏನು ಮಾಡೋದು?
ಭಾಸ್ಕರ್: ಹೀಗೆ ಮಾಡಿ ಬ್ಯಾಂಕ್‌ನವರು ರೈತರನ್ನು ಮಂಗ ಮಾಡುತ್ತಿದ್ದಾರೆ…
ಮಾಧುಸ್ವಾಮಿ: ರೈತರಿಗಷ್ಟೆ ಅಲ್ಲ, ನಾನೇ ಕಟ್ಟಿದ್ದೇನೆ. ನನ್ನ ಕೈಯಿಂದಲೇ ಕಟ್ಟಿಸಿಕೊಂಡಿದ್ದಾರೆ.
ಭಾಸ್ಕರ್: ನೋಡಿ ಸರ್, ಸರ್ಕಾರದಲ್ಲಿ ಇದೆಲ್ಲ ಯಾಕೊ ಸರಿಯಾಗಿ ಕಾಣುತ್ತಿಲ್ಲ…
ಮಾಧುಸ್ವಾಮಿ: ನೋಡಿ, ಇಲ್ಲಿ ಸರ್ಕಾರ ನಡೀತಿಲ್ಲ. ಮ್ಯಾನೇಜ್‌ಮೆಂಟ್ ಮಾಡುತ್ತಿದ್ದೇವೆ ಅಷ್ಟೆ. ಹೇಗೊ ಇನ್ನು ಎಂಟು ತಿಂಗಳು ತಳ್ಳಿದರೆ ಸಾಕು ಎಂದು ಸುಮ್ಮನಿದ್ದೇವೆ.
ಕಾಂಗ್ರೆಸ್ ಅಟ್ಯಾಕ್
ಸರ್ಕಾರದ ವಿರುದ್ಧ ನಿರಂತರ ದಾಳಿ ನಡೆಸುತ್ತಿರುವ ಕಾಂಗ್ರೆಸ್, ಮಾಧುಸ್ವಾಮಿ ಆಡಿಯೋವನ್ನೂ ಬಳಕೆ ಮಾಡಿಕೊಂಡಿದೆ. ಕೆಪಿಸಿಸಿ ಟ್ವಿಟರ್ ಖಾತೆಯಲ್ಲಿ ಈ ಆಡಿಯೊ ತುಣುಕನ್ನು ಅಪ್‌ಲೋಡ್ ಮಾಡಲಾಗಿದ್ದು, “ಬಿಜೆಪಿ ಸರ್ಕಾರದ ನಿಷ್ಕ್ರಿಯತೆ, ಸಚಿವರುಗಳ ಅಸಾಮರ್ಥ್ಯ, ರೈತರಿಗೆ ಎಸಗುತ್ತಿರುವ ಅನ್ಯಾಯಗಳು ಸಚಿವ ಮಾಧುಸ್ವಾಮಿಯವರಿಂದ ಬಯಲಾಗಿದೆ. ಬಿಜೆಪಿ ಸರ್ಕಾರದಲ್ಲಿ ನಡೆಯುತ್ತಿರುವುದು ಭ್ರಷ್ಟಾಚಾರದ ಮ್ಯಾನೇಜ್ಮೆಂಟ್ ಮಾತ್ರ. ಸಿಎಂ ಬಸವರಾಜ ಬೊಮ್ಮಾಯಿ ಅವರ ನಿಷ್ಕ್ರಿಯ ಆಡಳಿತಕ್ಕೆ, ರೈತರಿಗಾಗುತ್ತಿರುವ ಅನ್ಯಾಯಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ?” ಎಂದು ಪ್ರಶ್ನಿಸಲಾಗಿದೆ.
‘ತಳ್ಳಿದರೆ ಸಾಕು ಇನ್ನೆಂಟು ತಿಂಗಳು ಅಂತ ತಳ್ತಾ ಇದೀವಿ ಅಷ್ಟೇ’ ಇದು ಸಚಿವ ಮಾಧುಸ್ವಾಮಿಯವರ ಅಸಹಾಯಕತೆಯೋ, ತಮ್ಮದೇ ಸರ್ಕಾರದ ವಿರುದ್ದದ ಆರೋಪವೋ? ಬಸವರಾಜ ಬೊಮ್ಮಾಯಿ ಅವರ ಅಡಳಿತದ ವಿರುದ್ಧ ಅಸಮಾಧಾನವೊ ಬಿಜೆಪಿ? ಕೆಟ್ಟು ನಿಂತಿರುವ ‘ಡಬಲ್ ಇಂಜಿನ್’ ಸರ್ಕಾರವು ತಳ್ಳಿಕೊಂಡು ಹೋಗುವ ದೈನೇಸಿ ಸ್ಥಿತಿಗೆ ಬಂದಿರುವುದು ದುರಂತ ಎಂದು ಟೀಕಿಸಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಮಾಧುಸ್ವಾಮಿಯವರು ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಅವರಿಗೆ ಈ ಆಡಿಯೊ ವೈರಲ್ ಆಗುತ್ತದೆ ಎಂದು ಗೊತ್ತಿರಲಿಲ್ಲ ಹಾಗಾಗಿ ಸತ್ಯ ಮಾತಾಡಿದ್ದಾರೆ. ಬಹಿರಂಗವಾಗಿ ಸತ್ಯವನ್ನು ಒಪ್ಪಿಕೊಳ್ಳುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ | ನಾನು 65 ವರ್ಷದ ಯುವಕ, 75ರವರೆಗೂ Young: CM ಆಗುವ ಅವಕಾಶವಿದೆ ಎಂದ ಉಮೇಶ್ ಕತ್ತಿ