Site icon Vistara News

Tata Motors: ಟಾಟಾ ಮೋಟರ್ಸ್‌ನಿಂದ ‘ಆಟೋಮೋಟಿವ್ ಸ್ಕಿಲ್ ಲ್ಯಾಬ್ಸ್’ ಮೂಲಕ 4000 ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ

Automotive skill training for 4000 students through Automotive Skill Labs by Tata Motors

ಬೆಂಗಳೂರು: ಯುವ ಪ್ರತಿಭೆಗಳನ್ನು ಬೆಳೆಸುವ ಮತ್ತು ಆಟೋಮೋಟಿವ್ ಉದ್ಯಮಕ್ಕೆ ಬೇಕಾಗುವ ನುರಿತ ಉದ್ಯೋಗಿಗಳನ್ನು ಸಿದ್ಧಗೊಳಿಸುವ ನಿಟ್ಟಿನಲ್ಲಿ ಟಾಟಾ ಮೋಟಾರ್ಸ್ ಕಂಪನಿಯು (Tata Motors) ನವೋದಯ ವಿದ್ಯಾಲಯ ಸಮಿತಿ (ಎನ್‌ವಿಎಸ್) ಸಹಯೋಗದ ಮೂಲಕ ಜವಾಹರ್ ನವೋದಯ ವಿದ್ಯಾಲಯಗಳಲ್ಲಿ (ಜೆಎನ್‌ವಿ) ‘ಆಟೋಮೋಟಿವ್ ಸ್ಕಿಲ್ ಲ್ಯಾಬ್ಸ್’ ಸ್ಥಾಪಿಸಿದೆ.

ಇಲ್ಲಿಯವರೆಗೂ ಮಹಾರಾಷ್ಟ್ರ, ಕರ್ನಾಟಕ, ಗುಜರಾತ್, ಜಾರ್ಖಂಡ್, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಆಯ್ದ ಜೆಎನ್‌ವಿಗಳಲ್ಲಿ ಅಗತ್ಯ ಉಪಕರಣಗಳಿಂದ ಸುಸಜ್ಜಿತಗೊಂಡ 25 ಲ್ಯಾಬ್‌ಗಳನ್ನು ಸ್ಥಾಪಿಸಲಾಗಿದೆ. ಈ ವಿಶಿಷ್ಟವಾದ ಔದ್ಯಮಿಕ- ಶೈಕ್ಷಣಿಕ ಜಂಟಿ ಉಪಕ್ರಮದ ಮೂಲಕ ವರ್ಷದಲ್ಲಿ ಸುಮಾರು 4000 ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಆಟೋಮೋಟಿವ್ ಕೌಶಲ್ಯಗಳನ್ನು ಕಲಿಸುವ ಮೂಲಕ ಆಟೋಮೋಟಿವ್ ಕ್ಷೇತ್ರಕ್ಕೆ ಬೇಕಾದ ಉದ್ಯೋಗಿಗಳನ್ನಾಗಿ ಸಜ್ಜುಗೊಳಿಸಲಾಗುತ್ತದೆ. ಅಷ್ಟು ಮಂದಿಯಲ್ಲಿ 30% ಮಂದಿ ಹುಡುಗಿಯರಾಗಿರುತ್ತಾರೆ ಎನ್ನುವುದು ವಿಶೇಷ.

‘ರಾಷ್ಟ್ರೀಯ ಶಿಕ್ಷಣ ನೀತಿ 2020’ ರಲ್ಲಿ ಪರಿಕಲ್ಪಿಸಲಾದ ವೃತ್ತಿಪರ ಕೋರ್ಸ್‌ಗಳ ಸಾಲಿನಲ್ಲಿ ನಿಲ್ಲುವ ಟಾಟಾ ಮೋಟಾರ್ಸ್‌ನ ‘ಆಟೋಮೋಟಿವ್ ಸ್ಕಿಲ್ ಲ್ಯಾಬ್ಸ್,’ 9 ರಿಂದ 12 ನೇ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿಯೇ ಅವರಿಗೆ ಅಗತ್ಯವಾಗಿ ಬೇಕಾಗುವ ವಿಷಯ ಜ್ಞಾನ, ಪ್ರಾಯೋಗಿಕ ಕೌಶಲ್ಯಗಳನ್ನು ಕಲಿಯುವುದರ ಕಡೆಗೆ ಮತ್ತು ಅವರಿಗೆ ಉತ್ತಮವಾದ ಔದ್ಯಮಿಕ ಕ್ಷೇತ್ರದ ಅರಿವು ನೀಡುವ ಕಡೆಗೆ ಗಮನ ಕೇಂದ್ರೀಕರಿಸುತ್ತದೆ.

ಇದನ್ನೂ ಓದಿ: Healthy Heart Tips: ನಿಮ್ಮ ಹೃದಯ ಆರೋಗ್ಯವಾಗಿರಬೇಕೆ? ಮಳೆಗಾಲದಲ್ಲಿ ಈ ಏಳು ಆಹಾರಗಳಿಂದ ದೂರವಿರಿ!

ಜತೆಗೆ ವಿದ್ಯಾರ್ಥಿಗಳು ಟಾಟಾ ಮೋಟಾರ್ಸ್‌ನ ಘಟಕಗಳಿಗೆ ಭೇಟಿ ನೀಡಬಹುದು. ಸರ್ವೀಸ್ ಮತ್ತು ಡೀಲರ್‌ಶಿಪ್ ವೃತ್ತಿಪರರ ಜತೆ ಸಂವಹನ ನಡೆಸಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಉದ್ಯಮ ತಜ್ಞರ ಉಪನ್ಯಾಸ ಕಾರ್ಯಕ್ರದಲ್ಲಿ ಭಾಗಿಯಾಗಿ ಹೆಚ್ಚು ಜ್ಞಾನ ಪಡೆಯುವ ಮತ್ತು ಉತ್ತಮ ಅನುಭವ ಹೊಂದುವ ಅವಕಾಶ ಪಡೆಯಲಿದ್ದಾರೆ. ಅಷ್ಟು ಮಾತ್ರವಲ್ಲದೆ ಈ ಲ್ಯಾಬ್‌ಗಳಲ್ಲಿ ಬೋಧನೆ ಮಾಡುವ ಬೋಧಕರು ಕಂಪನಿಯ ಪ್ಲಾಂಟ್‌ಗಳಿರುವ ಸ್ಥಳಗಳಲ್ಲಿ ಅಗತ್ಯ ತರಬೇತಿಯನ್ನು ಪಡೆಯುತ್ತಾರೆ. ಪುಣೆಯ ಸ್ಕಿಲ್ ಲ್ಯಾಬ್‌ನಲ್ಲಿ ವಿದ್ಯಾರ್ಥಿಗಳು ರಚಿಸಿರುವ ಇ-ರಿಕ್ಷಾ ಈ ವಿಶಿಷ್ಟವಾದ ಕಲಿಕಾ ಉಪಕ್ರಮದ ಯಶಸ್ಸಿಗೆ ಒಂದು ಶ್ರೇಷ್ಠ ಪುರಾವೆಯಾಗಿದೆ.

ಈ ಕಲಿಕಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬಳಿಕ ವಿದ್ಯಾರ್ಥಿಗಳು ಟಾಟಾ ಮೋಟಾರ್ಸ್ ಮತ್ತು ಎನ್‌ವಿಎಸ್ ನಿಂದ ಜಂಟಿ ಪ್ರಮಾಣಪತ್ರ ಸ್ವೀಕರಿಸುತ್ತಾರೆ. ತಮ್ಮ ಶಿಕ್ಷಣದ ಬಳಿಕ ವಿದ್ಯಾರ್ಥಿಗಳು ಡಿಪ್ಲೊಮಾ ಇನ್ ಮ್ಯಾನುಫ್ಯಾಕ್ಚರಿಂಗ್ ಟೆಕ್ನಾಲಜಿಗೆ ಸೇರಿಕೊಳ್ಳಬಹುದು. ಸೇರಿಕೊಳ್ಳುವವರಿಗೆ ಪೂರ್ತಿ ಸ್ಟೈಫಂಡ್ ನೀಡಲಾಗುತ್ತದೆ ಮತ್ತು ಟಾಟಾ ಮೋಟಾರ್ಸ್‌ನ ಉತ್ಪಾದನಾ ಘಟಕಗಳಲ್ಲಿ ಉದ್ಯೋಗ ತರಬೇತಿಯನ್ನೂ ಪಡೆಯಬಹುದಾಗಿದೆ. ಜತೆಗೆ ಟಾಟಾ ಮೋಟಾರ್ಸ್‌ನಲ್ಲಿ ಮುಂದುವರಿಯಲು ಆಸಕ್ತಿಯುಳ್ಳವರು ಆಯ್ದ ಎಂಜಿನಿಯರಿಂಗ್ ಸಂಸ್ಥೆಗಳ ಸಹಯೋಗದೊಂದಿಗೆ ನಡೆಸುವ 3.5 ವರ್ಷಗಳ ವಿಶೇಷ ಶಿಕ್ಷಣ ಕಾರ್ಯಕ್ರಮವಾದ ಬಿಟೆಕ್ ಇನ್ ಎಂಜಿನಿಯರಿಂಗ್‌ ಪದವಿಗೆ ಸೇರಿಕೊಳ್ಳಬಹುದು. ಹಾಗೆ ಮಾಡಿದರೆ ಐದು ವರ್ಷಗಳ ನಂತರ ಟಾಟಾ ಮೋಟಾರ್ಸ್‌ನಲ್ಲಿ ಪರ್ಮನೆಂಟ್ ಉದ್ಯೋಗಕ್ಕೆ ಸೇರಿಕೊಳ್ಳಬಹುದು.

ಈ ಕುರಿತು ಟಾಟಾ ಮೋಟಾರ್ಸ್‌ನ ಸಿಎಸ್‌ಆರ್ ಮುಖ್ಯಸ್ಥ ವಿನೋದ್ ಕುಲಕರ್ಣಿ ಮಾತನಾಡಿ, “ನಮ್ಮ ಆಟೋಮೋಟಿವ್ ಸ್ಕಿಲ್ ಲ್ಯಾಬ್‌ಗಳು ನಿರ್ಲಕ್ಷ್ಯಕ್ಕೆ ಒಳಗಾದ ಸಮುದಾಯಗಳ ಯುವಜನತೆಗೆ ಬೆಳೆಯುತ್ತಿರುವ ಆಟೋಮೋಟಿವ್‌ ಕ್ಷೇತ್ರದ ಉದ್ಯೋಗ ಗಳಿಸಲು ಬೇಕಾಗುವ ಸೂಕ್ತವಾದ ಕೌಶಲ್ಯಗಳನ್ನು ಕಲಿಸಿ ಅವರನ್ನು ಸಶಕ್ತಗೊಳಿಸುತ್ತವೆ. ಈ ಲ್ಯಾಬ್ ಗಳು 9 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಪಡೆಯಲು ಮತ್ತು ಉದ್ಯೋಗಾವಕಾಶಗಳನ್ನು ಹೊಂದಲು ದಾರಿಗಳನ್ನು ಸೃಷ್ಟಿಸುತ್ತದೆ.

ಇದನ್ನೂ ಓದಿ: One Nation One Rate: ಚಿನ್ನಕ್ಕೆ ದೇಶಾದ್ಯಂತ ಒಂದೇ ದರ! ಹೊಸ ನಿಯಮ ಶೀಘ್ರ ಜಾರಿ ಸಾಧ್ಯತೆ

‘ಸ್ಕಿಲ್ ಇಂಡಿಯಾ ಮಿಷನ್ʼಗೆ ಕೊಡುಗೆ ನೀಡುವ ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ನವೀನ ಚಿಂತನೆ, ಉದ್ಯಮಶೀಲತಾ ಮನೋಭಾವ, ವಿಶ್ಲೇಷಣಾತ್ಮಕ ಮನಸ್ಥಿತಿ ಮತ್ತು ವಿಮರ್ಶಾತ್ಮಕ ಸಂವಹನ ಇತ್ಯಾದಿ ಕೌಶಲಗಳನ್ನು ಬೆಳೆಸುತ್ತದೆ. ಈ ಉಪಕ್ರಮಕ್ಕೆ ವಿದ್ಯಾರ್ಥಿಯರು ಕೂಡ ಉತ್ತಮವಾಗಿ ಸ್ಪಂದಿಸಿದ್ದು, ಆ ಮೂಲಕ ವಿಕಸಿತ ಭಾರತ @2047 ಪರಿಕಲ್ಪನೆಗೆ ಪೂರಕವಾಗಿ ಭವಿಷ್ಯದ ನಾಯಕರನ್ನು ಸಜ್ಜುಗೊಳಿಸುವ ನಮ್ಮ ಬದ್ಧತೆಗೆ ಬಲ ದೊರೆತಿದೆ” ಎಂದು ತಿಳಿಸಿದ್ದಾರೆ.

Exit mobile version