ಬೆಂಗಳೂರು: ಓದಿದ್ದು ಒಂದೇ ಮಾದರಿಯ ಪಠ್ಯ, ನಿರ್ವಹಿಸುತ್ತಿರುವುದು ಒಂದೇ ಮಾದರಿಯ ಕೆಲಸವಾದರೂ ವೇತನದಲ್ಲಿ ಅಜಾಗಜಾಂತರ ವ್ಯತ್ಯಾಸ ಇದೆ. ಕಳೆದ ಹಲವಾರು ವರ್ಷಗಳಿಂದ ಹೋರಾಟ ನಡೆಸಿದರೂ ಆಯುಷ್ ವೈದ್ಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಸಿಗದೆ (Ayush Doctors Demands) ಪರದಾಡುವಂತಾಗಿದೆ.
ರಾಜ್ಯದ ಆಯುಷ್ ಇಲಾಖೆಯಡಿ ಕರ್ತವ್ಯ ನಿರ್ವಹಿಸುವ ವೈದ್ಯರಿಗೆ 45,000 ರೂ. ವೇತನ ಇದ್ದರೆ, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ (ಎನ್ಎಚ್ಎಂ) ನೇಮಕಗೊಂಡಿರುವ ಆಯುಷ್ ವೈದ್ಯರಿಗೆ ಕೇವಲ 25,000 ರೂ. ವೇತನವಷ್ಟೇ. ರಾಜ್ಯ ಆಯುಷ್ ಇಲಾಖೆಯಡಿ 55 ವೈದ್ಯರು ಇದ್ದರೆ ಎನ್ಎಚ್ಎಂ ಆಯುಷ್ ಅಡಿ 676 ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ರಾಜ್ಯದಲ್ಲಿ ಭಾರತೀಯ ವೈದ್ಯ ಪದ್ಧತಿಯನ್ನು ಅನುಷ್ಠಾನ ಮಾಡುವ ಸಲುವಾಗಿ 2005-06ರಲ್ಲಿ ಎನ್‌ಎಚ್‌ಎಂ (NHM) ಕಾರ್ಯಕ್ರಮ ಆರಂಭವಾಯಿತು. ಸರ್ಕಾರಿ ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಕೇವಲ ರೂ.6000 ವೇತನಕ್ಕೆ ಗುತ್ತಿಗೆ ಆಧಾರದಲ್ಲಿ ಸುಮಾರು 676 ಆಯುಷ್ ವೈದ್ಯರನ್ನು ನೇಮಕಾತಿ ಮಾಡಲಾಯಿತು.
ಈ ವೈದ್ಯರು ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಸೇವೆ ನೀಡುವ ಜತೆಗೆ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವಲ್ಲಿ ಇವರ ಪಾತ್ರ ದೊಡ್ಡದಿದೆ. ಹಾಗೆ ಕೋವಿಡ್‌ನಂತಹ ಮಾರಕ ವೈರಸ್ ಬಂದಾಗ ಜಗ್ಗದೆ ಹಿರಿಯ ಅಧಿಕಾರಿಗಳು ವಹಿಸಿದ ಕೆಲಸಗಳನ್ನು ಮಾಡಲಾಗಿದೆ. ಆದರೂ ನಮಗೇಕೆ ತಾರತಮ್ಯ ಎಂಬ ಕೂಗು ಕೇಳಿಬಂದಿದೆ.
ಸಮಾನ ಕೆಲಸಕ್ಕೆ ಸಮಾನ ವೇತನಕ್ಕೆ ಆಗ್ರಹ
ಈ ಆಯುಷ್ ವೈದ್ಯರಿಗೆ ಸರ್ಕಾರ ನಿಗದಿಪಡಿಸಿದ ವೇತನ ನ್ಯಾಯ ಸಮ್ಮತವಾಗಿಲ್ಲ ಎಂದು ಕಿಡಿಕಾರಿದ್ದು, ವೇತನವನ್ನು ಪರಿಷ್ಕರಣೆ ಮಾಡಲು ಸರ್ಕಾರಕ್ಕೆ ಹಾಗೂ ಇಲಾಖೆಗೆ ಹಲವು ಬಾರಿ ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸದ ಆರೋಗ್ಯ ಇಲಾಖೆ ಯಾವುದೇ ಬೇಡಿಕೆಗಳನ್ನು ಈಡೇರಿಸಲು ಮುಂದಾಗದೆ ಇರುವುದಕ್ಕೆ ಅಸಮಾಧಾನ ಹೊರಹಾಕಿದ್ದಾರೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ನಿಗದಿಪಡಿಸಿದ ವೇತನಕ್ಕೆ ವರ್ಷಕ್ಕೆ 5% ಹೆಚ್ಚಳ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ. ಅಂದರೆ 6000 ವೇತನಕ್ಕೆ 5% ಅಂದರೆ ರೂ.300 ರಂತೆ ಮುಂದಿನ ವರ್ಷಕ್ಕೆ 6300 ಆದಂತೇ ಆಯಿತು. ಸದ್ಯಕ್ಕೆ ಆಯುಷ್ ವೈದ್ಯರ ವೇತನ 2022ಕ್ಕೆ ರೂ 24,765 ಅನ್ನು ಸರ್ಕಾರ ಪಾವತಿ ಮಾಡುತ್ತಿರುವುದಕ್ಕೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ. 2016ರಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಸುಪ್ರೀಂ ಕೋರ್ಟ್ ಆದೇಶಕ್ಕೂ ಬೆಲೆ ಇಲ್ಲದಂತಾಗಿದೆ. ಆರೋಗ್ಯ ಎಂಬ ವಿಷಯವೂ ಆಯಾ ರಾಜ್ಯ ಸರ್ಕಾರದ ಅಡಿಯಲ್ಲಿ ಬರುತ್ತಿದ್ದು ರಾಜ್ಯ ಸರ್ಕಾರ ಮಾತ್ರ ಯಾವುದೇ ಕಾಯ್ದೆ ಕಾನೂನು ರಚನೆ ಮಾಡುತ್ತಿಲ್ಲ.
ವರ್ಗಾವಣೆ ನೀತಿ ಜಾರಿಗೆ ಒತ್ತಾಯ
ಆಯುಷ್ ವೈದ್ಯರು ತಮ್ಮ ತಮ್ಮ ಜಿಲ್ಲೆ ಬಿಟ್ಟು ಸಾಕಷ್ಟು ವರ್ಷಗಳೇ ಕಳೆದಿದೆ. ಸರ್ಕಾರಕ್ಕೆ ವರ್ಗಾವಣೆ ನೀತಿ ಜಾರಿ ಮಾಡಿ ಎಂದು ಮನವಿ ಮಾಡಿದ್ದರು ವರ್ಗಾವಣೆ ನೀತಿ ಜಾರಿ ಮಾಡದೇ ಇದ್ದು, ಆಯುಷ್ ವೈದ್ಯರು ಕುಟುಂಬದಿಂದ ದೂರ ಇದ್ದು ಮಾನಸಿಕವಾಗಿ ಮತ್ತು ಆರ್ಥಿಕವಾಗಿ ನೊಂದಿರುವುದಾಗಿ ಹೇಳಿಕೊಂಡಿದ್ದಾರೆ. ಕೋವಿಡ್ ಸಮಯದಲ್ಲಿ ಸಾಕಷ್ಟು ಕೆಲಸ ಮಾಡಿಸಿಕೊಂಡು ಯಾವುದೇ ಸೌಲಭ್ಯಗಳನ್ನು ನೀಡದೆ ಕೇವಲ ಹೂ ಮಳೆ ಚಪ್ಪಾಳೆಗೆ ಸೀಮಿತ ಆಗಿದೆ ಎಂದು ಕಿಡಿಕಾರಿದ್ದಾರೆ.
ಪಕ್ಕದ ಹರಿಯಾಣ, ಅಸ್ಸಾಂ ಮತ್ತು ಮಣಿಪುರ, ಬಿಹಾರ, ತೆಲಂಗಾಣ, ಗೋವಾ ರಾಜ್ಯದಲ್ಲಿ ನೌಕರರ ಪರವಾಗಿ ಕೆಲವೊಂದು ಬೇಡಿಕೆಗಳನ್ನು ಈಡೇರಿಸಿ 45- 50 ಸಾವಿರ ಹೆಚ್ಚಳ ಮಾಡಿ ನೌಕರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇದೇ ರೀತಿ ರಾಜ್ಯದಲ್ಲೂ ವೇತನ ಹೆಚ್ಚಳಕ್ಕೆ ಒತ್ತಾಯಿಸಿದ್ದಾರೆ. ಕಾಯಂ ನೌಕರರಿಗೆ ಮಾತ್ರ ಸರ್ಕಾರ ಸ್ಪಂದಿಸುತ್ತಿದ್ದು, ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದ ನೌಕರರನ್ನೂ ಜೀತದ ಆಳಾಗಿ ನೋಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಶ್ರೀನಿವಾಸಾಚಾರಿ ವರದಿ ಅನುಷ್ಠಾನಕ್ಕೆ ಮೀನಮೇಷ
ಹಲವು ವರ್ಷಗಳಿಂದ ಕಡಿಮೆ ವೇತನಕ್ಕೆ ದುಡಿಯುವ ಸರ್ಕಾರಿ ಗುತ್ತಿಗೆ-ಹೊರಗುತ್ತಿಗೆ ನೌಕರರಿಗೆ ದುಡಿದ ಸಂಬಳ ನೀಡಲು ಮತ್ತು ಶ್ರೀನಿವಾಸಾಚಾರಿ ವರದಿ ಅನುಷ್ಠಾನ ಮಾಡಲು ಸರ್ಕಾರವು ಸತಾಯಿಸುತ್ತಿದ್ದು, ಮೀನಮೇಷ ಎಣಿಸುತ್ತಿದೆ. ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಾಚಾರಿ ಅಧ್ಯಕ್ಷತೆಯಲ್ಲಿ ರಚಿಸಿದ ಸಮಿತಿ ತನ್ನ ವರದಿಯನ್ನು ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಇದನ್ನೂ ಓದಿ: Santro Ravi Case: ಹೆಚ್ಚು ಮಾತ್ರೆ ನುಂಗಿದ ಸ್ಯಾಂಟ್ರೋ ರವಿ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು
ವರದಿ ಪ್ರಕಾರ 15% ವೇತನ ಹೆಚ್ಚಳ, ವರ್ಗಾವಣೆ, ವಿಮೆ ಯೋಜನೆ, ವೈದ್ಯಕೀಯ ಚಿಕಿತ್ಸೆ ಮರುಪಾವತಿ ಹಾಗೂ ಇತರೆ ಸೌಲಭ್ಯಗಳನ್ನು ನೀಡಿ ಎಂದು ಸರ್ಕಾರಕ್ಕೆ ಸಲ್ಲಿಸಿದೆ. ಆದರೆ, ಸರ್ಕಾರ ಮಾತ್ರ 2 ವರ್ಷದಿಂದ ಪರಿಶೀಲನಾ ಹಂತದಲ್ಲಿ ಇದೆ ಎಂದು ಕೈತೊಳೆದುಕೊಂಡಿದೆ.