ಆರೋಗ್ಯ
Ayush Doctors Demands: ಆಯುಷ್ ವೈದ್ಯರ ಕೆಲಸಕ್ಕೆ ಸಿಗದ ಸಮಾನ ವೇತನ; ಶ್ರೀನಿವಾಸಾಚಾರಿ ವರದಿ ಅನುಷ್ಠಾನಕ್ಕೆ ಪಟ್ಟು
Ayush Doctors Demands: ಆರೋಗ್ಯ ಇಲಾಖೆಯ ಗುತ್ತಿಗೆ ಹೊರಗುತ್ತಿಗೆ ಅಡಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ಪಾಡು ಹೇಳತೀರದು. ವೇತನ ತಾರತಮ್ಯ ವಿಚಾರವಾಗಿ ಕಳೆದ ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆಯು ಮೌನಕ್ಕೆ ಶರಣಾಗಿದೆ.
ಬೆಂಗಳೂರು: ಓದಿದ್ದು ಒಂದೇ ಮಾದರಿಯ ಪಠ್ಯ, ನಿರ್ವಹಿಸುತ್ತಿರುವುದು ಒಂದೇ ಮಾದರಿಯ ಕೆಲಸವಾದರೂ ವೇತನದಲ್ಲಿ ಅಜಾಗಜಾಂತರ ವ್ಯತ್ಯಾಸ ಇದೆ. ಕಳೆದ ಹಲವಾರು ವರ್ಷಗಳಿಂದ ಹೋರಾಟ ನಡೆಸಿದರೂ ಆಯುಷ್ ವೈದ್ಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಸಿಗದೆ (Ayush Doctors Demands) ಪರದಾಡುವಂತಾಗಿದೆ.
ರಾಜ್ಯದ ಆಯುಷ್ ಇಲಾಖೆಯಡಿ ಕರ್ತವ್ಯ ನಿರ್ವಹಿಸುವ ವೈದ್ಯರಿಗೆ 45,000 ರೂ. ವೇತನ ಇದ್ದರೆ, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ (ಎನ್ಎಚ್ಎಂ) ನೇಮಕಗೊಂಡಿರುವ ಆಯುಷ್ ವೈದ್ಯರಿಗೆ ಕೇವಲ 25,000 ರೂ. ವೇತನವಷ್ಟೇ. ರಾಜ್ಯ ಆಯುಷ್ ಇಲಾಖೆಯಡಿ 55 ವೈದ್ಯರು ಇದ್ದರೆ ಎನ್ಎಚ್ಎಂ ಆಯುಷ್ ಅಡಿ 676 ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ರಾಜ್ಯದಲ್ಲಿ ಭಾರತೀಯ ವೈದ್ಯ ಪದ್ಧತಿಯನ್ನು ಅನುಷ್ಠಾನ ಮಾಡುವ ಸಲುವಾಗಿ 2005-06ರಲ್ಲಿ ಎನ್‌ಎಚ್‌ಎಂ (NHM) ಕಾರ್ಯಕ್ರಮ ಆರಂಭವಾಯಿತು. ಸರ್ಕಾರಿ ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ಕೇವಲ ರೂ.6000 ವೇತನಕ್ಕೆ ಗುತ್ತಿಗೆ ಆಧಾರದಲ್ಲಿ ಸುಮಾರು 676 ಆಯುಷ್ ವೈದ್ಯರನ್ನು ನೇಮಕಾತಿ ಮಾಡಲಾಯಿತು.
ಈ ವೈದ್ಯರು ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಸೇವೆ ನೀಡುವ ಜತೆಗೆ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವಲ್ಲಿ ಇವರ ಪಾತ್ರ ದೊಡ್ಡದಿದೆ. ಹಾಗೆ ಕೋವಿಡ್‌ನಂತಹ ಮಾರಕ ವೈರಸ್ ಬಂದಾಗ ಜಗ್ಗದೆ ಹಿರಿಯ ಅಧಿಕಾರಿಗಳು ವಹಿಸಿದ ಕೆಲಸಗಳನ್ನು ಮಾಡಲಾಗಿದೆ. ಆದರೂ ನಮಗೇಕೆ ತಾರತಮ್ಯ ಎಂಬ ಕೂಗು ಕೇಳಿಬಂದಿದೆ.
ಸಮಾನ ಕೆಲಸಕ್ಕೆ ಸಮಾನ ವೇತನಕ್ಕೆ ಆಗ್ರಹ
ಈ ಆಯುಷ್ ವೈದ್ಯರಿಗೆ ಸರ್ಕಾರ ನಿಗದಿಪಡಿಸಿದ ವೇತನ ನ್ಯಾಯ ಸಮ್ಮತವಾಗಿಲ್ಲ ಎಂದು ಕಿಡಿಕಾರಿದ್ದು, ವೇತನವನ್ನು ಪರಿಷ್ಕರಣೆ ಮಾಡಲು ಸರ್ಕಾರಕ್ಕೆ ಹಾಗೂ ಇಲಾಖೆಗೆ ಹಲವು ಬಾರಿ ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಂದಿಸದ ಆರೋಗ್ಯ ಇಲಾಖೆ ಯಾವುದೇ ಬೇಡಿಕೆಗಳನ್ನು ಈಡೇರಿಸಲು ಮುಂದಾಗದೆ ಇರುವುದಕ್ಕೆ ಅಸಮಾಧಾನ ಹೊರಹಾಕಿದ್ದಾರೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ನಿಗದಿಪಡಿಸಿದ ವೇತನಕ್ಕೆ ವರ್ಷಕ್ಕೆ 5% ಹೆಚ್ಚಳ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ. ಅಂದರೆ 6000 ವೇತನಕ್ಕೆ 5% ಅಂದರೆ ರೂ.300 ರಂತೆ ಮುಂದಿನ ವರ್ಷಕ್ಕೆ 6300 ಆದಂತೇ ಆಯಿತು. ಸದ್ಯಕ್ಕೆ ಆಯುಷ್ ವೈದ್ಯರ ವೇತನ 2022ಕ್ಕೆ ರೂ 24,765 ಅನ್ನು ಸರ್ಕಾರ ಪಾವತಿ ಮಾಡುತ್ತಿರುವುದಕ್ಕೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ. 2016ರಲ್ಲಿ ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಸುಪ್ರೀಂ ಕೋರ್ಟ್ ಆದೇಶಕ್ಕೂ ಬೆಲೆ ಇಲ್ಲದಂತಾಗಿದೆ. ಆರೋಗ್ಯ ಎಂಬ ವಿಷಯವೂ ಆಯಾ ರಾಜ್ಯ ಸರ್ಕಾರದ ಅಡಿಯಲ್ಲಿ ಬರುತ್ತಿದ್ದು ರಾಜ್ಯ ಸರ್ಕಾರ ಮಾತ್ರ ಯಾವುದೇ ಕಾಯ್ದೆ ಕಾನೂನು ರಚನೆ ಮಾಡುತ್ತಿಲ್ಲ.
ವರ್ಗಾವಣೆ ನೀತಿ ಜಾರಿಗೆ ಒತ್ತಾಯ
ಆಯುಷ್ ವೈದ್ಯರು ತಮ್ಮ ತಮ್ಮ ಜಿಲ್ಲೆ ಬಿಟ್ಟು ಸಾಕಷ್ಟು ವರ್ಷಗಳೇ ಕಳೆದಿದೆ. ಸರ್ಕಾರಕ್ಕೆ ವರ್ಗಾವಣೆ ನೀತಿ ಜಾರಿ ಮಾಡಿ ಎಂದು ಮನವಿ ಮಾಡಿದ್ದರು ವರ್ಗಾವಣೆ ನೀತಿ ಜಾರಿ ಮಾಡದೇ ಇದ್ದು, ಆಯುಷ್ ವೈದ್ಯರು ಕುಟುಂಬದಿಂದ ದೂರ ಇದ್ದು ಮಾನಸಿಕವಾಗಿ ಮತ್ತು ಆರ್ಥಿಕವಾಗಿ ನೊಂದಿರುವುದಾಗಿ ಹೇಳಿಕೊಂಡಿದ್ದಾರೆ. ಕೋವಿಡ್ ಸಮಯದಲ್ಲಿ ಸಾಕಷ್ಟು ಕೆಲಸ ಮಾಡಿಸಿಕೊಂಡು ಯಾವುದೇ ಸೌಲಭ್ಯಗಳನ್ನು ನೀಡದೆ ಕೇವಲ ಹೂ ಮಳೆ ಚಪ್ಪಾಳೆಗೆ ಸೀಮಿತ ಆಗಿದೆ ಎಂದು ಕಿಡಿಕಾರಿದ್ದಾರೆ.
ಪಕ್ಕದ ಹರಿಯಾಣ, ಅಸ್ಸಾಂ ಮತ್ತು ಮಣಿಪುರ, ಬಿಹಾರ, ತೆಲಂಗಾಣ, ಗೋವಾ ರಾಜ್ಯದಲ್ಲಿ ನೌಕರರ ಪರವಾಗಿ ಕೆಲವೊಂದು ಬೇಡಿಕೆಗಳನ್ನು ಈಡೇರಿಸಿ 45- 50 ಸಾವಿರ ಹೆಚ್ಚಳ ಮಾಡಿ ನೌಕರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇದೇ ರೀತಿ ರಾಜ್ಯದಲ್ಲೂ ವೇತನ ಹೆಚ್ಚಳಕ್ಕೆ ಒತ್ತಾಯಿಸಿದ್ದಾರೆ. ಕಾಯಂ ನೌಕರರಿಗೆ ಮಾತ್ರ ಸರ್ಕಾರ ಸ್ಪಂದಿಸುತ್ತಿದ್ದು, ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದ ನೌಕರರನ್ನೂ ಜೀತದ ಆಳಾಗಿ ನೋಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಶ್ರೀನಿವಾಸಾಚಾರಿ ವರದಿ ಅನುಷ್ಠಾನಕ್ಕೆ ಮೀನಮೇಷ
ಹಲವು ವರ್ಷಗಳಿಂದ ಕಡಿಮೆ ವೇತನಕ್ಕೆ ದುಡಿಯುವ ಸರ್ಕಾರಿ ಗುತ್ತಿಗೆ-ಹೊರಗುತ್ತಿಗೆ ನೌಕರರಿಗೆ ದುಡಿದ ಸಂಬಳ ನೀಡಲು ಮತ್ತು ಶ್ರೀನಿವಾಸಾಚಾರಿ ವರದಿ ಅನುಷ್ಠಾನ ಮಾಡಲು ಸರ್ಕಾರವು ಸತಾಯಿಸುತ್ತಿದ್ದು, ಮೀನಮೇಷ ಎಣಿಸುತ್ತಿದೆ. ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸಾಚಾರಿ ಅಧ್ಯಕ್ಷತೆಯಲ್ಲಿ ರಚಿಸಿದ ಸಮಿತಿ ತನ್ನ ವರದಿಯನ್ನು ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಇದನ್ನೂ ಓದಿ: Santro Ravi Case: ಹೆಚ್ಚು ಮಾತ್ರೆ ನುಂಗಿದ ಸ್ಯಾಂಟ್ರೋ ರವಿ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು
ವರದಿ ಪ್ರಕಾರ 15% ವೇತನ ಹೆಚ್ಚಳ, ವರ್ಗಾವಣೆ, ವಿಮೆ ಯೋಜನೆ, ವೈದ್ಯಕೀಯ ಚಿಕಿತ್ಸೆ ಮರುಪಾವತಿ ಹಾಗೂ ಇತರೆ ಸೌಲಭ್ಯಗಳನ್ನು ನೀಡಿ ಎಂದು ಸರ್ಕಾರಕ್ಕೆ ಸಲ್ಲಿಸಿದೆ. ಆದರೆ, ಸರ್ಕಾರ ಮಾತ್ರ 2 ವರ್ಷದಿಂದ ಪರಿಶೀಲನಾ ಹಂತದಲ್ಲಿ ಇದೆ ಎಂದು ಕೈತೊಳೆದುಕೊಂಡಿದೆ.
ಆರೋಗ್ಯ
Liver transplant: 73 ವರ್ಷದ ರೋಗಿಗೆ 6 ಗಂಟೆ ಶಸ್ತ್ರಚಿಕಿತ್ಸೆ ಯಶಸ್ವಿ ಲಿವರ್ ಕಸಿ ಮಾಡಿದ ಬೆಂಗಳೂರು ವೈದ್ಯರು
ಬ್ಲಾಕ್‌ಫಂಗಸ್ ಚಿಕಿತ್ಸೆಯನ್ನು ರಾಜ್ಯದಲ್ಲೇ ಅತಿ ಹೆಚ್ಚು ರೋಗಿಗಳನ್ನು ಚಿಕಿತ್ಸೆ ನೀಡಿದ ಟ್ರಸ್ಟ್‌ವೆಲ್ ಆಸ್ಪತ್ರೆ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿ ಲಿವರ್ ಕಸಿ ಶಸ್ತ್ರಚಿಕಿತ್ಸೆಯನ್ನು (Liver transplant) ನಡೆಸಿದೆ. 6 ಗಂಟೆ ಶಸ್ತ್ರಚಿಕಿತ್ಸೆ ಮೂಲಕ 73 ವರ್ಷದ ರೋಗಿಗೆ ಮರುಜೀವ ನೀಡಿದ್ದಾರೆ.
ಬೆಂಗಳೂರು: ಲಿವರ್ ಸಿರೋಸಿಸ್ ಹಾಗೂ ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 73 ವರ್ಷದ ವೃದ್ಧರೊಬ್ಬರಿಗೆ ಯಶಸ್ವಿ ಲಿವರ್ ಕಸಿ ಮಾಡುವ ಮೂಲಕ ಬೆಂಗಳೂರಿನ ಟ್ರಸ್ಟ್‌ವೆಲ್ ಆಸ್ಪತ್ರೆಯ ವೈದ್ಯರು ಮರುಜೀವ ನೀಡಿದ್ದಾರೆ. ಮುಂಬೈ ಮೂಲದ ಯೋಗೇಶ್ (ಹೆಸರು ಬದಲಾಯಿಸಲಾಗಿದೆ) ವ್ಯಕ್ತಿಗೆ ಯಕೃತ್ತಿನ ಕಸಿ ಹೊರತುಪಡಿಸಿ ಬೇರೆ ಯಾವುದೇ ಆಯ್ಕೆಯಿರಲಿಲ್ಲ. ಹೀಗಾಗಿ 6 ಗಂಟೆಯ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಮತ್ತೆ ಅವರ ಮುಖದಲ್ಲಿ ನಗು ಮೂಡಿಸಿದ್ದಾರೆ.
ಯೋಗೇಶ್ ಅವರನ್ನು ಮೊದಲು ಗ್ಯಾಸ್ಟ್ರೋಎಂಟರಾಲಜಿಸ್ಟ್ ಮತ್ತು ಹೆಪಟೊಲೊಜಿಸ್ಟ್ ಅವರಿಗೆ ತೋರಿಸಲಾಯಿತು. ಈ ವೇಳೆ ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯಲು ತಕ್ಷಣವೇ ಟ್ರಾನ್ಸ್ ಆರ್ಟಿರಿಯಲ್ ಕೀಮೋ-ಎಂಬೋಲೈಸೇಶನ್‌ಗೆ ಒಳಗಾಗಲು ತಿಳಿಸಿದರು. ಅದು ಅಲ್ಲದೇ ಯಕೃತ್ತಿನ ಕಸಿ ಮಾಡುವುದು ಕೂಡ ಅವಶ್ಯಕವಾಗಿತ್ತು. ಆದರೆ, ಯೋಗೇಶ್ ಅವರು ಮಧುಮೇಹ ಹಾಗೂ ಸ್ಟೆಂಟ್ ಪ್ಲೇಸ್ ಮೆಂಟ್‌ನೊಂದಿಗೆ ಪರಿಧಮನಿಯ ಆಂಜಿಯೋಗ್ರಫಿಗೆ ಒಳಗಾಗಿದ್ದರು. ಈ ಎಲ್ಲ ಕಾರಣದಿಂದಾಗಿ ಇವರಿಗೆ ಯಕೃತ್ತಿನ ಕಸಿ ಮಾಡುವುದು ಕೂಡ ತೀರಾ ಸವಾಲಿನ ಕೆಲಸವಾಗಿತ್ತು.
ಈ ಎಲ್ಲ ಸವಾಲಿನ ನಡುವೆ ಮಾರ್ಚ್ 7ರಂದು ವೈದ್ಯರ ತಂಡವು 6 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯನ್ನು ನಡೆಸಿತು. ಕಸಿ ಶಸ್ತ್ರಚಿಕಿತ್ಸೆಯ ನಂತರ ಯೋಗೇಶ್ 6 ದಿನಗಳಲ್ಲಿ ಅವರನ್ನು ಡಿಸ್ಚಾರ್ಜ್ ಸಹ ಮಾಡಲಾಯಿತು. ಡಾ.ರವಿಮೋಹನ್, ಡಾ.ಸುನೀಲ್ ಶೇನ್ವಿ, ಡಾ.ಮನೀಶ್ ಜೋಶಿ, ಡಾ.ಮಿಚುವಲ್, ಡಾ.ಮಾಧವಿ, ಡಾ.ಅಮೇಯ ಮತ್ತು ಡಾ.ಎನ್.ಎಸ್.ಚಂದ್ರಶೇಖರ್ ವೈದ್ಯಕೀಯ ತಜ್ಞರು ಈ ಸವಾಲಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಗೊಳಿಸಿದ್ದಾರೆ.
ಇದನ್ನೂ ಓದಿ: Damaged Saree: ಯುಗಾದಿ ಹಬ್ಬಕ್ಕೆ ಗಾಂಧಿನಗರದಲ್ಲಿ ಹರಿದ ಸೀರೆ ಕೊಟ್ಟರಾ ದಿನೇಶ್ ಗುಂಡೂರಾವ್? ಸೀರೆ ನೀಡಿ ಮಹಿಳೆಯರ ಕಿಡಿ
ಇನ್ನು ಯಶಸ್ವಿಯಾಗಿ ಯಕೃತ್ತು ಕಸಿ ಶಸ್ತ್ರಚಿಕಿತ್ಸೆಯನ್ನು ಮಾಡಲು ಸಾಧ್ಯವಾಗಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿದ ಟ್ರಸ್ಟ್ ವೆಲ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಎಚ್.ವಿ. ಮಧುಸೂದನ್, ಇದು ನಮ್ಮ ಶಸ್ತ್ರಚಿಕಿತ್ಸಕ ತಂಡದ ಕೌಶಲ್ಯ ಮತ್ತು ಸಮರ್ಪಣೆಗೆ ಸಾಕ್ಷಿಯಾಗಿದೆ. ಈ ಸಾಧನೆಯ ಬಗ್ಗೆ ನಾವು ತುಂಬಾ ಹೆಮ್ಮೆಪಡುತ್ತೇವೆ ಮತ್ತು ನಮ್ಮ ಎಲ್ಲ ರೋಗಿಗಳಿಗೆ ಅತ್ಯುನ್ನತ ಮಟ್ಟದ ಆರೈಕೆಯನ್ನು ಒದಗಿಸುತ್ತೇವೆ ಎಂದರು. ಯಕೃತ್ತಿನ ಕಸಿಯು ಜೀವ ಉಳಿಸುವ ವಿಧಾನವಾಗಿದ್ದು, ಇದು ರೋಗಿಗಳಿಗೆ ಹೊಸ ಜೀವನವನ್ನು ಕಟ್ಟಿಕೊಟ್ಟಂತೆ ಆಗುತ್ತದೆ. ಯಶಸ್ವಿ ಫಲಿತಾಂಶವನ್ನು ಪಡೆಯಲು ನುರಿತ ವೈದ್ಯರ ತಂಡದ ಅಗತ್ಯವಿದೆ ಎಂದರು.
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಆರೋಗ್ಯ
Covid Origin: ಪ್ರಾಣಿಗಳಿಂದಲೇ ಮನುಷ್ಯರಿಗೆ ತಗುಲಿದ ಕೋವಿಡ್ ಸೋಂಕು!
Covid Origin: ಜಗತ್ತಿಗೇ ಅಪಾಯವನ್ನು ತಂದೊಡ್ಡಿದ್ದ ಕೋವಿಡ್-19 ಸೋಂಕು ಮೂಲ ಶೋಧನೆಯ ಕುರಿತು ಈವರೆಗೆ ಅನೇಕ ವರದಿಗಳು ಪ್ರಕಟವಾಗಿವೆ. ಈಗ ಹೊಸ ವರದಿಯೊಂದು ಪ್ರಕಟವಾಗಿದ್ದು, ಪ್ರಾಣಿಗಳಿಂದಲೇ ಮನುಷ್ಯರಿಗೆ ಕೋವಿಡ್ ಸೋಂಕು ತಗುಲಿದೆ ಎಂದು ಹೇಳಲಾಗಿದೆ.
ನವದೆಹಲಿ: ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದ ಕೋವಿಡ್-19 ಮೂಲ ಯಾವುದು ಎಂಬ ಚರ್ಚೆ ಇನ್ನೂ ನಿಂತಿಲ್ಲ. ಕೆಲವರು ಇದು ಮಾನವ ನಿರ್ಮಿತ ಎಂದು ವಾದಿಸುತ್ತಾರೆ, ಮತ್ತೆ ಕೆಲವರು ಚೀನಾದಿಂದಲೇ ಈ ವೈರಸ್ ಇಡೀ ಜಗತ್ತಿಗೆ ಅಂಟಿದೆ ಎಂದು ಹೇಳುತ್ತಾರೆ. ಈಗ ಹೊಸ ಅಧ್ಯಯನ ವರದಿಯೊಂದರಲ್ಲಿ ಕೋವಿಡ್-19 ಮೂಲ (Covid Origin) ಯಾವುದು ಎಂಬುದರ ಮೇಲೆ ಬೆಳಕು ಚೆಲ್ಲಲಾಗಿದೆ. ಚೀನಾ ವುಹಾನ್ ಮಾರುಕಟ್ಟೆಯಿಂದ ಪಡೆದ ಕೆಲವು ಸ್ಯಾಂಪಲ್‌ಗಳನ್ನು ಅಧ್ಯಯನ ಮಾಡಿರುವ ಸಂಶೋಧಕರು, ಕೋವಿಡ್-19 ಸೋಂಕು ಪ್ರಾಣಿಗಳಿಂದ ಮನುಷ್ಯರಿಗೆ ತಗಲಿದೆ ಎಂಬ ನಿರ್ಣಯಕ್ಕೆ ಬಂದಿದ್ದಾರೆ.
ರೋಗಕ್ಕೆ ತುತ್ತಾಗುವ ರಕೂನ್ ನಾಯಿಗಳು ಸೇರಿದಂತೆ ಅನೇಕ ಪ್ರಾಣಿಗಳ ಆನುವಂಶಿಕ ವಸ್ತುಗಳ ಜೊತೆಗೆ ನಾವೆಲ್ ಕೊರೊನಾ ವೈರಸ್ ಇರುವ ಪುರಾವೆಗಳನ್ನು ಮಾದರಿಗಳು ಕಂಡುಕೊಂಡಿವೆ. ಈ ಬಗ್ಗೆ ಓಪನ್ ಸೈನ್ಸ್ ಜಾಲತಾಣವಾಗಿರುವ Zenodo.orgನಲ್ಲಿ ವರದಿಯೊಂದನ್ನು ಪ್ರಕಟಿಸಲಾಗಿದೆ. ಈ ವರದಿಯ ಪ್ರಕಾರ, ಹುವಾನಾನ್ ಸಗಟು ಸಮುದ್ರಾಹಾರ ಮಾರುಕಟ್ಟೆಯು ಸಾಂಕ್ರಾಮಿಕದ ಕೇಂದ್ರಬಿಂದುವಾಗಿದೆ ಎಂದು ತಿಳಿಸಲಾಗಿದೆ.
ಕೆಲವು ಸ್ಯಾಂಪಲ್‌ಗಳಲ್ಲಿ ಪ್ರಾಣಿಗಳಲ್ಲಿ ಸಂಭವನೀಯ SARS-CoV-2 ಸೋಂಕನ್ನು ಸೂಚಿಸುವ ಮಾನವ ಆನುವಂಶಿಕ ವಸ್ತುಗಳಿಗಿಂತ ಹೆಚ್ಚು ಪ್ರಾಣಿಗಳ ಆನುವಂಶಿಕ ವಸ್ತುಗಳು ಕಂಡುಬಂದಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ, ಈ ವರದಿಗೆ ಇನ್ನೂ ಯಾವುದೇ ವೈಜ್ಞಾನಿಕ ಸಮುದಾಯವು ತನ್ನ ಒಪ್ಪಿಗೆ ನೀಡಿಲ್ಲ. ಸಾಂಕ್ರಾಮಿಕ ಸಮಯದಲ್ಲಿ ಅನೇಕ ಅಧ್ಯಯನ ವರದಿಗಳನ್ನು ಬಿಡುಗಡೆ ಮಾಡಲಾಗಿತ್ತು. ಆದರೆ, ವೈಜ್ಞಾನಿಕ ಸಮುದಾಯವು ಈ ಎಲ್ಲ ವರದಿಗಳನ್ನು ಪರಿಶೀಲಿಸಲು ಹೋಗಿಲ್ಲ.
ಇದನ್ನೂ ಓದಿ: H3N2 Virus : ಹಾಸನದ ವ್ಯಕ್ತಿ H3N2ಗೆ ಬಲಿ, ಕೋವಿಡ್‌ನಂತೆ ದೇಶದ ಮೊದಲ ಸಾವು ರಾಜ್ಯದಲ್ಲೆ, ಹರಿಯಾಣದಲ್ಲಿ 2ನೇ ಮೃತ್ಯು
ಈಗಾಗಲೇ ಹೇಳಿದಂತೆ, ಕೋವಿಡ್-19 ಸಾಂಕ್ರಾಮಿಕ ಸ್ಫೋಟಗೊಳ್ಳುತ್ತಿದ್ದಂತೆ ಜಗತ್ತಿನಾದ್ಯಂತ ಸಂಶೋಧಕರು ಕೋವಿಡ್ ಮೂಲ ಹುಡುಕಲು ಆರಂಭಿಸಿದರು. ಬಹುತೇಕ ಅಧ್ಯಯನ ವರದಿಗಳು ಚೀನಾದ ವುಹಾನ್ ಮಾರುಕಟ್ಟೆಯತ್ತಲೇ ಬೊಟ್ಟು ಮಾಡಿ ತೋರಿಸಿವೆ. ಆದರೆ, ಈ ವರೆಗೂ ಚೀನಾ ಕೋವಿಡ್-19 ಸಾಂಕ್ರಾಮಿಕಕ್ಕೆ ತನ್ನ ದೇಶದ ಮಾರುಕಟ್ಟೆ ಎಂಬುದನ್ನು ಒಪ್ಪಿಕೊಂಡಿಲ್ಲ. ಈಗ ಹೊಸ ವರದಿ ಕೂಡ ಚೀನಾವೇ ಮೂಲ ಎಂಬ ಸತ್ಯವನ್ನು ಕಂಡುಕೊಂಡಿದೆ. ಈ ವರದಿಗೆ ಚೀನಾ ಹೇಗೆ ಪ್ರತಿಕ್ರಿಯಿಸಲಿದೆ ಎಂದು ಕಾದು ನೋಡಬೇಕು.
ಆರೋಗ್ಯ
ತಾಜಾ ತರಕಾರಿ-ಕಾಳುಗಳನ್ನು ಸೇವಿಸಿ, ಸಂಸ್ಕರಿಸಿದ ಆಹಾರದಿಂದ ದೂರವಿರಿ; ಮಾರ್ಗಸೂಚಿ ಬಿಡುಗಡೆ ಮಾಡಿದ ರಾಜ್ಯ ಆರೋಗ್ಯ ಇಲಾಖೆ
ಮಾಂಸವನ್ನು ತಿನ್ನಬಹುದು ಎಂದು ಹೇಳಿರುವ ಆರೋಗ್ಯ ಇಲಾಖೆ ಸಂಸ್ಕರಿಸಲ್ಪಟ್ಟಿರುವ ಕೆಂಪು ಮಾಂಸಗಳಿಗಿಂತಲೂ ಬಿಳಿ ಮಾಂಸ ಮತ್ತು ಮೀನನ್ನು ಬಳಕೆ ಮಾಡಿ. ಹಾಲು ಮತ್ತು ಹಾಲಿನ ಉತ್ಪನ್ನಗಳ ಉಪಯೋಗ ಜಾಸ್ತಿ ಇರಲಿ ಎಂದಿದೆ.
ಬೆಂಗಳೂರು: ಬೇಸಿಗೆ ಕಾಲ ಬರುತ್ತಿದೆ, ಜತೆಜತೆಗೆ ಎಚ್3ಎನ್2, ಕೊವಿಡ್ 19 ಸೇರಿ, ವಿವಿಧ ಸ್ವರೂಪದ ಜ್ವರ, ಸೋಂಕುಗಳು ಜಾಸ್ತಿಯಾಗುತ್ತಿರುವ ಬೆನ್ನಲ್ಲೇ, ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಹಾರ ಸೇವನೆಗೆ ಸಂಬಂಧಪಟ್ಟ ಮಾರ್ಗಸೂಚಿ (Dietary Advisory) ಬಿಡುಗಡೆ ಮಾಡಿದೆ. ಸಾಧ್ಯವಾದಷ್ಟು ತಾಜಾ ಆಗಿರುವ ಮತ್ತು ಸಂಸ್ಕರಿಸದ ಆಹಾರಗಳನ್ನೇ ಸೇವಿಸಿ ಎಂದು ಜನರಿಗೆ ಸಲಹೆ ನೀಡಿದೆ. ‘ಕೊವಿಡ್ 19 ಸವಾಲು ಒಡ್ಡುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಪ್ರತಿಯೊಬ್ಬರಲ್ಲೂ ರೋಗನಿರೋಧಕ ಶಕ್ತಿ ಹೆಚ್ಚಾಗಬೇಕು. ಇದಕ್ಕಾಗಿ ಎಲ್ಲರೂ ಆರೋಗ್ಯಕರ ಡಯೆಟ್ ಮತ್ತು ಜೀವನಶೈಲಿ ಅಭ್ಯಾಸ ಮಾಡಿಕೊಳ್ಳಬೇಕು’ ಎಂದು ರಾಜ್ಯ ಆರೋಗ್ಯ ಆಯುಕ್ತರ ಕಚೇರಿ ಬಿಡುಗಡೆ ಮಾಡಿದ ಮಾರ್ಗದರ್ಶಿಯಲ್ಲಿ ಉಲ್ಲೇಖಿಸಲಾಗಿದೆ.
ಬೆಂಗಳೂರಿನಲ್ಲಿ ಕೊವಿಡ್ 19 ವೈರಸ್ನ 661 ಕೇಸ್ಗಳು ಸಕ್ರಿಯವಾಗಿವೆ. ಫೆಬ್ರವರಿಯಲ್ಲಿ 278 ಇದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ ಈಗ 661ಕ್ಕೆ ಏರಿಕೆಯಾಗಿದೆ. ಇದರಲ್ಲಿ ಗಂಭೀರ ಸ್ವರೂಪದ ಕೇಸ್ ಸಂಖ್ಯೆ ಕಡಿಮೆಯಿದ್ದರೂ, ನಿರ್ಲಕ್ಷ್ಯ ವಹಿಸುವಂಥದ್ದಲ್ಲ. ಅದರ ಜತೆ ದೇಶಾದ್ಯಂತ ಕಾಡುತ್ತಿರುವ ಎಚ್3ಎನ್2 ಸೇರಿ, ಹಲವು ವೈರಸ್ಗಳೂ ಕಾಡುತ್ತಿವೆ. ಹೀಗಾಗಿ ಪ್ರತಿರೋಧಕ ವ್ಯವಸ್ಥೆ ಹೆಚ್ಚಿಸಿಕೊಳ್ಳಲು ಬಹುಮುಖ್ಯವಾಗಿ ನಮ್ಮ ದೇಹಕ್ಕೆ ಪೋಷಕಾಂಶಗಳು ಬೇಕು. ಅಲ್ಲದೆ, ದೇಹ ಹೈಡ್ರೇಟ್ ಆಗಿರಬೇಕು. ಹೀಗಾಗಿ ಸಮತೋಲಿತವಾದ ಆಹಾರಗಳನ್ನು ಸೇವಿಸಬೇಕು. ಇದರಿಂದ ಕೊವಿಡ್ 19 ಮತ್ತಿತರ ಸೋಂಕಿನ ಅಪಾಯ ಅತ್ಯಂತ ಕಡಿಮೆ ಇರುತ್ತದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ಸಲಹೆ ಮೇರೆಗೆ 22ಕೆಜಿ ತೂಕ ಇಳಿಸಿಕೊಂಡ ಕೇಂದ್ರ ಸಚಿವ; ಆಯುರ್ವೇದ ಪದ್ಧತಿ ಅನುಸರಿಸಿ ಡಯೆಟ್
‘ತಾಜಾ ಆಗಿರುವ, ಸಂಸ್ಕರಣೆ ಮಾಡಿರದ ವಿವಿಧ ರೀತಿಯ ಆಹಾರಗಳನ್ನು ಸೇವಿಸಿ. ಈ ಮೂಲಕ ಅಗತ್ಯ ವಿಟಮಿನ್ಗಳು, ಖನಿಜಾಂಶಗಳು, ನಾರಿನಾಂಶ, ಪ್ರೋಟಿನ್, ಉತ್ಕರ್ಷಣ ನಿರೋಧಕಗಳನ್ನು ದೇಹಕ್ಕೆ ಪಡೆಯಿರಿ. ದೇಹದ ನಿರ್ಜಲೀಕರಣ ತಪ್ಪಿಸಲು ಸಾಕಷ್ಟು ನೀರು ಕುಡಿಯಬೇಕು. ಸಕ್ಕರೆ, ಕೊಬ್ಬು ಮತ್ತು ಉಪ್ಪಿನಾಂಶವುಳ್ಳ ಆಹಾರ ಸೇವೆಯನ್ನು ಕಡಿಮೆ ಮಾಡುವ ಮೂಲಕ ತೂಕ ಹೆಚ್ಚುವುದನ್ನು, ಹೃದಯ ಕಾಯಿಲೆಗಳು, ಸ್ಟ್ರೋಕ್, ಮಧುಮೇಹ ಮತ್ತು ಇತರ ಕೆಲವು ವಿಧದ ಕ್ಯಾನ್ಸರ್‌ನಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಿ’ ಎಂದು ಮಾರ್ಗಸೂಚಿಯಲ್ಲಿ ಉಲ್ಲೇಖಿಸಲಾಗಿದೆ. ‘ತಾಜಾ ತರಕಾರಿ, ಹಣ್ಣುಗಳು, ದ್ವಿದಳ ಧಾನ್ಯಗಳು, ಆಲೂಗಡ್ಡೆ, ಗೆಣಸಿನಂಥ ಬೇರು ತರಕಾರಿಗಳು, ಮಾಂಸ, ಮೀನು, ಮೊಟ್ಟೆ, ಹಾಲುಗಳನ್ನು ಸೇವಿಸಿ ಎಂದು ಸಲಹೆ ನೀಡಿದೆ
ಮಾಂಸವನ್ನು ತಿನ್ನಬಹುದು ಎಂದು ಹೇಳಿರುವ ಆರೋಗ್ಯ ಇಲಾಖೆ ಸಂಸ್ಕರಿಸಲ್ಪಟ್ಟಿರುವ ಕೆಂಪು ಮಾಂಸಗಳಿಗಿಂತಲೂ ಬಿಳಿ ಮಾಂಸ ಮತ್ತು ಮೀನನ್ನು ಬಳಕೆ ಮಾಡಿ. ಹಾಲು ಮತ್ತು ಹಾಲಿನ ಉತ್ಪನ್ನಗಳ ಉಪಯೋಗ ಜಾಸ್ತಿ ಇರಲಿ. ಫಾಸ್ಟ್ಫುಡ್, ಸ್ನ್ಯಾಕ್ಸ್, ಕರಿದ ಪದಾರ್ಥಗಳು, ಫಿಜ್ಜಾ, ಕುಕ್ಕೀಸ್ಗಳಂಥ ಆಹಾರಗಳ ಸೇವನೆಯನ್ನು ನಿಲ್ಲಿಸಿಬಿಡಿ ಎಂದೂ ಸಲಹೆ ನೀಡಿದೆ.
ಆರೋಗ್ಯ
Migraine Headache: ಬೇಸಿಗೆಯಲ್ಲಿ ಉಲ್ಬಣಿಸುವ ತಲೆನೋವಿಗೆ ಪರಿಹಾರ ನಿಮ್ಮಲ್ಲೇ ಇದೆ!
ಮೈಗ್ರೇನಿನ ಸಮಸ್ಯೆಯಿದ್ದವರಿಗಂತೂ ಬೇಸಗೆಯಲ್ಲಿ ತಲೆನೋವಿನ ಸಂಭವ ಹೆಚ್ಚು. ಅತಿಯಾದ ಬೆಳಗು, ಬಿಸಿಲು ಇಂಥವಕ್ಕೆ ಒಳಪಟ್ಟರೆ ಈ ತೊಂದರೆಯಿರುವವರಿಗೆ ಮೈಗ್ರೇನ್ ಮತ್ತೆ ಕಾಟಕೊಡದೇ ಇರುವುದಿಲ್ಲ. ಬೇಸಿಗೆಯಲ್ಲಿ ಕಾಡುವ ಇಂತಹ ತಲೆನೋವಿನಿಂದ ಹೇಗೆ ಪಾರಾಗಬಹುದು (headache relief) ಎಂಬುದನ್ನು ನೋಡೋಣ.
ಚಳಿಗಾಲ ತನ್ನ ಬಾಹುಬಂಧನವನ್ನು ಕಳಚಿ ಮೆಲ್ಲಗೆ ಹಿಂದೆ ಸರಿಯುತ್ತಿರುವಾಗ ಬೇಸಗೆ ಮೆಲ್ಲಮೆಲ್ಲನೆ ತನ್ನ ಹಿಡಿಯನ್ನು ಬಿಗಿಗೊಳಿಸುವ ಕಾಲ ಇದೀಗ ಬರುತ್ತಿದೆ. ಚಳಿಗಾಲದಲ್ಲಿ ಕಾಡಿದ ಒಂದೊಂದು ಸಮಸ್ಯೆಯನ್ನು ನೆನೆದು ಬಿಸಿಲುಗಾಲ ಬಂದಾಗ ನಿಟ್ಟುಸಿರು ಬಿಟ್ಟರೂ, ಬಿಸಿಲ ಝಳ ತರುವ ಒಂದೊಂದು ಸಮಸ್ಯೆಯೂ ಚಳಿಗಾಲದ ಸಮಸ್ಯೆಗಿಂತ ಸರಳವೇನೂ ಇಲ್ಲ. ಮುಖ್ಯವಾಗಿ ಸೂರ್ಯ ನೆತ್ತಿಯ ಮೇಲೆ ಬಂದಾಗ ಕೆಲಸದ ನಿಮಿತ್ತವೋ, ಇನ್ನಿತರ ಕಾರಣಗಳಿಂದಲೋ ಮನೆಯಿಂದ ಹೊರಗೆ ಕಾಲಿಟ್ಟರೆ, ಬಿಸಿಲಲ್ಲಿ ತಿರುಗಾಡಿದರೆ ಹಲವರಿಗೆ ತಲೆ ಸಿಡಿದುಹೋಗುವಂತೆ ನೋವಾಗುವುದು (summer headache) ನಿಶ್ಚಿತ. ಮೈಗ್ರೇನಿನ ಸಮಸ್ಯೆಯಿದ್ದವರಿಗಂತೂ ಬೇಸಗೆಯಲ್ಲಿ ತಲೆನೋವಿನ ಸಂಭವ ಹೆಚ್ಚು. ಅತಿಯಾದ ಬೆಳಗು, ಬಿಸಿಲು ಇಂಥವಕ್ಕೆ ಒಳಪಟ್ಟರೆ ಈ ತೊಂದರೆಯಿರುವವರಿಗೆ ಮೈಗ್ರೇನ್ ಮತ್ತೆ ಕಾಟಕೊಡದೇ ಇರುವುದಿಲ್ಲ. ಇನ್ನು ಕೆಲವರು ನೀರು ಕಡಿಮೆ ಕುಡಿಯುವುದರಿಂದಾಗಿ ನಿರ್ಜಲೀಕರಣ ಸ್ಥಿತಿಯೂ ಉಂಟಾಗುವುದರಿಂದ ತಲೆಸುತ್ತು, ತಲೆನೋವಿನಂತಹ ತೊಂದರೆಗೆ ಎಡೆ ಮಾಡುತ್ತದೆ. ಕೆಲವರಿಗೆ ವ್ಯಾಯಾಮ ಇತ್ಯಾದಿಗಳನ್ನು ಬಿಸಿಲಿನಲ್ಲೇ ಮಾಡುವುದರಿಂದಲೂ ತಲೆನೋವಿಗೆ ಕಾರಣವಾಗಬಹುದು. ನಿದ್ದೆಯ ಕೊರತೆಯಾದ ಮಂದಿಗೆ, ಮಧ್ಯಾಹ್ನದೂಟ ಬಿಟ್ಟಿದ್ದರೂ ಕೆಲವರಿಗೆ ತಲೆನೋವು ತೀವ್ರವಾಗಿ ಕಾಡುವುದುಂಟು. ಹಾಗಾದರೆ, ನಮ್ಮದೇ ಆಹಾರಕ್ರಮ ಬದಲಾವಣೆ ಹಾಗೂ ಜೀವನಶೈಲಿಯ ಬದಲಾವಣೆಯಿಂದ ಬೇಸಿಗೆಯಲ್ಲಿ ಕಾಡುವ ಇಂತಹ ತಲೆನೋವಿನಿಂದ ಹೇಗೆ ಪಾರಾಗಬಹುದು (headache relief) ಎಂಬುದನ್ನು ನೋಡೋಣ.
1. ಸರಿಯಾಗಿ ನೀರು ಕುಡಿಯಿರಿ: ನಿತ್ಯವೂ ಸರಿಯಾಗಿ ನೀರು ಕುಡಿಯಿರಿ. ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಹಿಡಿದು, ಇಡೀ ದಿನ ಕನಿಷ್ಟ ನಾಲ್ಕು ಲೀಟರ್ ನೀರಾದರೂ ಕುಡಿಯುವುದು ಅಗತ್ಯ.
2. ದೇಹವನ್ನು ತಂಪಾಗಿಡುವ ಪಾನೀಯಗಳನ್ನು ಸೇವಿಸಿ: ಬೇಸಿಗೆಯ ತಲೆನೋವನ್ನು ತಪ್ಪಿಸಲು, ದೇಹವನ್ನು ತಂಪಾಗಿ ಇಡುವುದು ಅತ್ಯಗತ್ಯ. ಕೋಕಂ ಶರಬತ್ತು, ಕಲ್ಲಂಗಡಿ ಹಣ್ಣಿನ ಜ್ಯೂಸು, ಎಳನೀರು, ಹಾಲಿನೊಂದಿಗೆ ಗುಲ್ಕಂದ್ ಇತ್ಯಾದಿಗಳನ್ನು ಸೇವಿಸಬಹುದು.
3. ಚಹಾ ಕಾಫಿಯನ್ನು ಆದಷ್ಟೂ ಕಡಿಮೆ ಮಾಡಿ: ತಲೆನೋವು ಎಂದು ಪದೇ ಪದೇ ಕಾಫಿ ಕುಡಿಯುವುದು, ಚಹಾ ಸೇವಿಸುವುದು ಮಾಡಬೇಡಿ. ಬೇಸಿಗೆಯಲ್ಲಿ ಕೆಫೀನ್‌ಯುಕ್ತ ಪೇಯಗಳನ್ನು ಮಿತವಾಗಿಟ್ಟಿರಿ. ಶುಂಠಿ ಚಹಾ ಮಾಡಿ ಕುಡಿದರೆ, ತಲೆನೋವು ಕೊಂಚ ಸುಧಾರಣೆ ಕಾಣಬಹುದು.
4. ಮೆಗ್ನೀಶಿಯಂಯುಕ್ತ ಹಣ್ಣು ತಿನ್ನಿ: ಬೇಸಿಗೆಯಲ್ಲಿ ಮೆಗ್ನೀಶಿಯಂಯುಕ್ತ ಹಣ್ಣುಗಳನ್ನು ಸೇವಿಸಿ. ಬಾಳೆಹಣ್ಣು, ಅನನಾಸು, ಕಲ್ಲಂಗಡಿ ಹಣ್ಣು, ಆಪ್ರಿಕಾಟ್ ಮತ್ತಿತರ ಹಣ್ಣುಗಳಲ್ಲಿ ಮೆಗ್ನೀಶಿಯಂ ಅಧಿಕವಾಗಿದೆ.
5. ಮಜ್ಜಿಗೆ ಸೇವಿಸಿ: ಮೊಸರು ಹಾಗೂ ಮೊಸರಿನ ಸಂಬಂಧೀ ಪೇಯಗಳನ್ನು ಕುಡಿಯಿರಿ: ಮೊಸರಿನ ಉತ್ಪನ್ನಗಳಾದ ಮಜ್ಜಿಗೆ, ಲಸ್ಸಿ ಇತ್ಯಾದಿಗಳನ್ನೂ ಸೇವಿಸಬಹುದು. ಆದಷ್ಟೂ ತಂಪಾದ ಮಜ್ಜಿಗೆ ಕುಡಿಯಿರಿ.
ಇದನ್ನೂ ಓದಿ: Health Tips: ತಂಪು ತಂಪು ಕೂಲ್ ಕೂಲ್ ಈ ಲಾವಂಚ ಎಂಬ ಬೇಸಿಗೆಯ ಬಂಧು!
6. ದೇಸೀ ಪರ್ಯಾಯಗಳನ್ನು ಹುಡುಕಿ: ಬಾರ್ಲಿ ಗಂಜಿ, ರಾಗಿ ಅಂಬಲಿ ಇತ್ಯಾದಿ ದೇಸೀ ಪರಿಹಾರಗಳನ್ನು ಕಂಡುಕೊಳ್ಳಲು ಪ್ರಯತ್ನಿಸಿ. ಆದಷ್ಟೂ ಕಾರ್ಬೋನೇಟೆಡ್ ಡ್ರಿಂಕ್‌ಗಳಿಂದ ದೂರವಿರಿ.
7. ಅಗಸೆಬೀಜ ತಿನ್ನಿ: ಫ್ಲ್ಯಾಕ್‌ಸೀಡ್ ಅಥವಾ ಅಗಸೆ ಬೀಜ ಮೆಗ್ನೀಶಿಯಂನಿಂದ ಶ್ರೀಮಂತವಾಗಿರುವ ಬೀಜವಾಗಿರುವುದರಿಂದ ಬೇಸಗೆಯಲ್ಲಿ ನಿತ್ಯ ನಿಮ್ಮ ಆಹಾರದೊಂದಿಗೆ ಅಗಸೆಬೀಜ ಬಳಸುವುದನ್ನು ರೂಢಿ ಮಾಡಿಕೊಳ್ಳಿ. 100 ಗ್ರಾಂ ಅಗಸೆಬೀಜದಲ್ಲಿ 392 ಮಿಲಿಗ್ರಾಂನಷ್ಟು ಮೆಗ್ನೀಶಿಯಂ ಇದೆ.
8. ಮೀನು ತಿನ್ನಿ: ಸಾಲ್ಮನ್, ಟೂನಾದಂತಹ ಮೀನನ್ನು ಬೇಸಗೆಯಲ್ಲಿ ತಿನ್ನುವುದು ಒಳ್ಳೆಯದು. ಇದರಲ್ಲಿ ಒಮೆಗಾ ೩ ಫ್ಯಾಟಿ ಆಸಿಡ್ ಇರುವುದರಿಂದ ಇದು ತಲೆನೋವಿಗೂ ಒಳ್ಳೆಯದು.
9. ಸಪ್ಲಿಮೆಂಟ್ ಕೂಡಾ ಪರಿಹಾರವಾಗಬಹುದು: ತಲೆನೋವು ಅತ್ಯಂತ ಹೆಚ್ಚು ಬಾಧೆ ಕೊಡುತ್ತಿದ್ದರೆ ವೈದ್ಯರ ಸಲಹೆ ಮೇರೆಗೆ ಮಲ್ಟಿವಿಟಮಿನ್ ಸಪ್ಲಿಮೆಂಟ್ ಮಾತ್ರೆಗಳನ್ನು ಸೇವಿಸಬಹುದು. ಕಬ್ಬಿಣಾಂಶ ಹಾಗೂ ಮೆಗ್ನೀಶೀಯಂಯುಕ್ತ ಮಾತ್ರೆಗಳ ಸೇವನೆಯಿಂದಲೂ ಪರಿಹಾರ ಕಾಣಬಹುದು. ಆದರೆ, ವೈದ್ಯರ ಸಲಹೆ ಮೇರೆಗೆ ಇದನ್ನು ಸೇವಿಸಬಹುದು.
ಇದನ್ನೂ ಓದಿ: Health Tips: ನಾನ್‌ಸ್ಟಿಕ್ ಪಾತ್ರೆಗಳು ಆರೋಗ್ಯಕ್ಕೆ ಮಾರಕವಾಗದಂತೆ ಬಳಸುವುದು ಹೇಗೆ?
-
ಸುವಚನ14 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ19 hours ago
ವಿಸ್ತಾರ ಸಂಪಾದಕೀಯ: ಪಬ್ಲಿಕ್ ಪರೀಕ್ಷೆ ಗೊಂದಲ; ವಿದ್ಯಾರ್ಥಿಗಳು, ಪೋಷಕರ ಮೇಲೆ ಮಾನಸಿಕ ಒತ್ತಡ
-
ಕರ್ನಾಟಕ23 hours ago
Life changing story : ನಿಂದನೆಯೇ ವರವಾಯಿತು, ಹಠ ತೊಟ್ಟು ವಕೀಲನಾಗಿ ಕರಿಕೋಟು ಧರಿಸಿ ವಾದಿಸಿ ಗೆದ್ದ ಯುವಕ!
-
ಆಟೋಮೊಬೈಲ್20 hours ago
Oscar 2023 : ನಾಟು ನಾಟು ಹಾಡಿಗೆ ಡಾನ್ಸ್ಮಾಡಿದ ಟೆಸ್ಲಾ ಕಾರುಗಳು! ಇಲ್ಲಿದೆ ನೋಡಿ ವಿಡಿಯೊ
-
ಕ್ರಿಕೆಟ್4 hours ago
IND VS AUS: ಭಾರತ-ಆಸ್ಟ್ರೇಲಿಯಾ ಅಂತಿಮ ಏಕದಿನ ಪಂದ್ಯದ ಪಿಚ್ ರಿಪೋರ್ಟ್, ಸಂಭಾವ್ಯ ತಂಡ
-
ಕರ್ನಾಟಕ9 hours ago
Shivamogga politics : ಯುಗಾದಿ, ರಂಜಾನ್ಗೆ ಶುಭ ಕೋರಿ ಫ್ಲೆಕ್ಸ್ ಹಾಕಿಸಿದ ಆಯನೂರು, ಹರಕು ಬಾಯಿ ಮುಚ್ಚಲಿ ಅಂದಿದ್ದು ಯಾರಿಗೆ?
-
ಧಾರ್ಮಿಕ7 hours ago
Ugadi 2023 : ಜಗದ ಆದಿ ಈ ಯುಗಾದಿ!
-
ಅಂಕಣ9 hours ago
ನನ್ನ ದೇಶ ನನ್ನ ದನಿ ಅಂಕಣ: ಪಂಜಾಬ್ ನಾಶವಾಗುವುದು ಒಳ್ಳೆಯ ಲಕ್ಷಣವಲ್ಲ