Site icon Vistara News

Karnataka Election: ಹಾಸನ ಜಿಲ್ಲೆಯಲ್ಲಿ ತಂದೆ-ಮಗನ ಅಬ್ಬರ; ವಿವಿಧೆಡೆ ಯಡಿಯೂರಪ್ಪ, ವಿಜಯೇಂದ್ರ ರೋಡ್‌ ಶೋ

Yediyurappa, Vijayendra hold roadshows at various places in Hassan district

Yediyurappa, Vijayendra hold roadshows at various places in Hassan district

ಹಾಸನ: ವಿಧಾನಸಭಾ ಚುನಾವಣೆ (Karnataka Election) ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಶುಕ್ರವಾರ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರತ್ಯೇಕವಾಗಿ ರೋಡ್‌ ಶೋ ನಡೆಸಿ ಭರ್ಜರಿ ಪ್ರಚಾರ ನಡೆಸಿದರು. ಬಿ.ಎಸ್‌. ಯಡಿಯೂರಪ್ಪ ಅವರು ಸಕಲೇಶಪುರದಲ್ಲಿ ಪ್ರಚಾರ ನಡೆಸಿದರೆ, ಬಿ.ವೈ.ವಿಜಯೇಂದ್ರ ಅವರು ಹಾಸನ, ಬೇಲೂರು ಹಾಗೂ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಮತಯಾಚನೆ ಮಾಡಿದರು.

ನಾವು ಕನಿಷ್ಠ 130 ಸೀಟ್‌ ಗೆಲ್ಲುತ್ತೇವೆ: ಬಿ.ಎಸ್‌.ಯಡಿಯೂರಪ್ಪ

ಹಾಸನ: ಜಿಲ್ಲೆ ಸಕಲೇಶಪುರದಲ್ಲಿ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರು ರೋಡ್‌ ಶೋ ಮೂಲಕ ಅಭ್ಯರ್ಥಿ ಸಿಮೆಂಟ್ ಮಂಜು ಪರ ಅಬ್ಬರದ ಪ್ರಚಾರ ನಡೆಸಿದರು. ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿಯಾಗಿದ್ದರು.

ಈ ವೇಳೆ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ಸುಮಾರು 80 ಕ್ಷೇತ್ರಕ್ಕೂ ಹೆಚ್ಚು ಕಡೆ ಹೋಗಿ ಬಂದಿದ್ದೇನೆ. ಬಿಜೆಪಿ ಪರ ವಾತಾವರಣ ನಮ್ಮ ನಿರೀಕ್ಷೆಗೂ ಮೀರಿ ತುಂಬಾ ಚೆನ್ನಾಗಿದೆ. ಈ ಬಾರಿ ನಾವು ಕನಿಷ್ಠ 130 ಸೀಟ್‌ ಗೆದ್ದು ಸರ್ಕಾರ ರಚನೆ ಮಾಡುವುದು 100% ನಿಶ್ಚಿತ, ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಪ್ರವಾಸದಿಂದ ಬಿಜೆಪಿಗೆ ಇನ್ನೂ ಹೆಚ್ಚು ಶಕ್ತಿ ಬಂದಿದೆ. ಇವೆಲ್ಲದರ ಲಾಭ ಬಿಜೆಪಿಗೆ ಆಗುತ್ತದೆ. ನಿಶ್ಚಿತವಾಗಿ ಸರ್ಕಾರ ರಚನೆ ಮಾಡುತ್ತೇವೆ. ಯಾರ ಹಂಗಿಲ್ಲದೆ, ಯಾರ ಬೆಂಬಲವಿಲ್ಲದೆ ಸ್ವತಂತ್ರವಾಗಿ ನಾವು ಸರ್ಕಾರ ರಚನೆ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಾಸನದಲ್ಲಿ ಪ್ರೀತಂಗೌಡ ವಿರುದ್ಧ ದೇವೇಗೌಡರ ಪ್ರಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರೇ, ಎಲ್ಲಿ, ಏನೇ ಓಡಾಡಿದರೂ ಪ್ರೀತಂಗೌಡ 35ರಿಂದ 40 ಸಾವಿರ ಮತಗಳ ಅಂತರದಲ್ಲಿ ಗೆಲ್ಲುವುದು ನಿಶ್ಚಿತ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಯಾರು ಬೇಕಾದರೂ ಹೋಗಲಿ, ಪ್ರಚಾರ ಮಾಡಲಿ. ವೈಯುಕ್ತಿಕ ದ್ವೇಷದಿಂದ ಬೇರೆಯವರು ಮಾತನಾಡುತ್ತಿದ್ದಾರೆ. ಅದರಿಂದ ಏನು ತೊಂದರೆ ಆಗಲ್ಲ, ಪ್ರೀತಂಗೌಡ 100% ದೊಡ್ಡ ಅಂತರದಲ್ಲಿ ಗೆಲ್ಲುತ್ತಾನೆ ಎಂದು ಹೇಳಿದರು.

ಬಿಜೆಪಿ ಭ್ರಷ್ಟ ದರ ಪಟ್ಟಿ ಎಂಬ ಕಾಂಗ್ರೆಸ್ ಜಾಹೀರಾತು ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅದನ್ನು ನೋಡುತ್ತಾ ಇದ್ದೇನೆ. ವಕೀಲರನ್ನು ಕನ್ಸ‌ಲ್ಟ್ ಮಾಡಿ ಮಾನನಷ್ಟ ಮೊಕದ್ದಮೆ ಹಾಕಲು ಆಗುವುದಾದರೆ ಅದನ್ನು ಹಾಕಲು ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು. ಇದೇ ವೇಳೆ ಕಾಂಗ್ರೆಸ್‌ಗೆ ಬಹುಮತ ಬರುತ್ತೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ, ಕಾಂಗ್ರೆಸ್‌ನವರು ಬಹುಮತ ಬರುತ್ತದೆ ಎಂದು ಹೇಳಿಕೊಳ್ಳಲಿ ಯಾರು ಬೇಡ ಎನ್ನುತ್ತಾರೆ ಎಂದು ವ್ಯಂಗ್ಯವಾಡಿದರು.

ಹಾಸನದಲ್ಲಿ ಬಿ.ವೈ. ವಿಜಯೇಂದ್ರ ಬೈಕ್‌ ರ‍್ಯಾಲಿ

ಹಾಸನದಲ್ಲಿ ಶಾಸಕ ಪ್ರೀತಂಗೌಡ ಜತೆ ಬಿ.ವೈ.ವಿಜಯೇಂದ್ರ ಬೈಕ್ ರ‍್ಯಾಲಿ ನಡೆಸಿದರು. ಭೂವನಹಳ್ಳಿ ಹೆಲಿಪ್ಯಾಡ್‌ನಿಂದ ಬೈಕ್ ಪ್ರಾರಂಭವಾದ ರ‍್ಯಾಲಿ ಬಿ.ಎಂ ರಸ್ತೆ ಮೂಲಕ ಮಹಾವೀರ ವೃತ್ತದವರೆಗೆ ಸಾಗಿತು. ಈ ವೇಳೆ ಮಾತನಾಡಿದ ಬಿ.ವೈ. ವಿಜಯೇಂದ್ರ ಅವರು, ಒಬ್ಬ ದಕ್ಷ ಯುವ ಶಾಸಕರನ್ನು ಜನರು ಪಡೆದಿರುವ ಪರಿಣಾಮ ಹಾಸನ ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವಾಗಿದ್ದು, ಬಿಜೆಪಿ ಗೆಲುವಿನ ಮೊದಲ ಫಲಿತಾಂಶ ಹಾಸನದ್ದಾಗುವ ವಿಶ್ವಾಸವಿದೆ ಎಂದು ತಿಳಿಸಿದರು.

ಬೇಲೂರಿನಲ್ಲಿ ಬೃಹತ್ ರೋಡ್‌ ಶೋ

ಬೇಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹುಲ್ಲಹಳ್ಳಿ ಸುರೇಶ್ ಅವರ ಪರವಾಗಿ ಬಿ.ವೈ. ವಿಜಯೇಂದ್ರ ಅವರು ಬೃಹತ್ ರೋಡ್ ಶೋ ನಡೆಸಿ ಚುನಾವಣಾ ಪ್ರಚಾರ ನಡೆಸಿದರು. ಸರಳ ವ್ಯಕ್ತಿಯಾಗಿರುವ ಸುರೇಶ್ ಅವರಿಗೆ ಪಕ್ಷ ಅವಕಾಶ ಕಲ್ಪಿಸಿದ್ದು, ನಮ್ಮ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಕ್ಕೆ ಬಲ ತುಂಬಲು ಬಿಜೆಪಿ ಗೆಲ್ಲಿಸಬೇಕೆಂದು ಬಿ.ವೈ.ವಿಜಯೇಂದ್ರ ಮನವಿ ಮಾಡಿದರು.‌

ಇದನ್ನೂ ಓದಿ | Karnataka Election 2023: ‘ದಿ ಕೇರಳ ಸ್ಟೋರಿ’ ಸಿನಿಮಾ ಮೂಲಕ ಲವ್ ಜಿಹಾದ್ ಪ್ರಸ್ತಾಪಿಸಿ, ಕಾಂಗ್ರೆಸ್‌ ಟೀಕಿಸಿದ ಪ್ರಧಾನಿ ಮೋದಿ

ಪಿರಿಯಾಪಟ್ಟಣದಲ್ಲಿ ಸಿ.ಎಚ್. ವಿಜಯಶಂಕರ್ ಪರ ಮತಯಾಚನೆ

ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಬಿಜೆಪಿ ಸಮಾವೇಶದಲ್ಲಿ ಬಿ.ವೈ. ವಿಜಯೇಂದ್ರ ಭಾಗಿಯಾಗಿ ಬಿಜೆಪಿ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ಅವರ ಪರ ಮತಯಾಚಿಸಿದರು. ಈ ವೇಳೆ ಹಿರಿಯರಾದ ಸಿ.ಎಚ್. ವಿಜಯಶಂಕರ್ ಅವರನ್ನು ಗೆಲ್ಲಿಸಿ ಕ್ಷೇತ್ರದ ಅಭಿವೃದ್ಧಿಗೆ ಅನುವು ಮಾಡಿಕೊಡಬೇಕೆಂದು ಜನರಲ್ಲಿ ಮನವಿ ಮಾಡಿದರು.

ಇನ್ನು ಶುಕ್ರವಾರ ಸಂಜೆ ಅರಸೀಕೆರೆ ಹಾಗೂ ಹೊಸದುರ್ಗ ಕ್ಷೇತ್ರಗಳಲ್ಲೂ ಬಿ.ವೈ. ವಿಜಯೇಂದ್ರ ಅವರು ಪ್ರಚಾರ ನಡೆಸಲಿದ್ದಾರೆ.

Exit mobile version