ಆನೇಕಲ್: ಅಮ್ಮನ ಆರೈಕೆ, ಅಪ್ಪನ ಆಸರೆಯಲ್ಲಿ ಇರಬೇಕಾದ ಆ ಪುಟ್ಟ ಮಗು ಹೆತ್ತವರಿಂದ ದೂರವಾಗಿತ್ತು. ಹೆತ್ತವಳೇ ಹೆತ್ತ ಮಗನನ್ನು ಮಾರಾಟ ಮಾಡಿದ್ದಾಳೆಂದು ಅಪ್ಪನಿಂದಲೇ ದೂರು ಬಂದಿತ್ತು. ಪೊಲೀಸರ ಮಧ್ಯಸ್ಥಿಕೆಯಿಂದಾಗಿ ದೂರದ (Baby boy Missing) ತಮಿಳುನಾಡಿನಲ್ಲಿದ್ದ ಆ ಮಗ ಈಗ ಅಪ್ಪನ ಕೈಸೇರಿದೆ.
ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎಂಬ ಮಾತು ಅಕ್ಷರಶಃ ಈ ಮಗುವಿನ ಪ್ರಕರಣದಲ್ಲಿ ನಡೆದಿದೆ. 2012ರಲ್ಲಿ ಜಯನಗರದ ಬಾಲಮಣಿ ಹಾಗು ಅತ್ತಿಬೆಲೆ ಸಮೀಪದ ಬಳ್ಳೂರಿನ ಮಮತಾ ಎಂಬುವವರು ಪ್ರೀತಿಸಿ ಮದುವೆಯಾಗಿದ್ದರು. ಪ್ರೀತಿಸಿ ಮದುವೆಯಾದ ಇಬ್ಬರ ಖುಷಿಯನ್ನು ದುಪ್ಪಟ್ಟು ಮಾಡುವಂತೆ ಮೊದಲೊಂದು ಹೆಣ್ಣು ಮಗು ಹುಟ್ಟಿತ್ತು. ಆದರೆ, ಆ ಮಗು ವಿಕಲಚೇತನವಾಗಿತ್ತು. ಆದರೂ ಇವರ ಸಂಸಾರಕ್ಕೆ ಯಾವುದೇ ತೊಡಕು ಇರಲಿಲ್ಲ. ವರ್ಷಗಳ ನಂತರ ಗಂಡು ಮಗುವೊಂದು ಹುಟ್ಟಿತ್ತು. ಮಗುವಿಗೆ ಒಂದೂವರೆ ವರ್ಷವಿದ್ದಾಗ ಇಬ್ಬರ ನಡುವೆ ಯಾವುದೋ ಕಾರಣಕ್ಕೆ ಪರಸ್ಪರ ಗಲಾಟೆ ಆಗಿ ದೂರವಾಗಿದ್ದರು.
ಈ ವೇಳೆ ಮಕ್ಕಳೊಂದಿಗೆ 2018ರಲ್ಲಿ ಮಮತಾ ತವರು ಮನೆ ಸೇರಿದ್ದಳು. ಈ ಮಧ್ಯೆ ಒಂದೂವರೆ ತಿಂಗಳ ಬಳಿಕ ಹೆಂಡತಿ ಮಕ್ಕಳನ್ನು ನೋಡುವಾಸೆಯಾಗಿ ಬಳ್ಳೂರಿಗೆ ಬಾಲಮಣಿ ಬಂದಿದ್ದ. ಮನೆಗೆ ಬಂದವನಿಗೆ ಶಾಕ್‌ವೊಂದು ಕಾದಿತ್ತು. ತನ್ನ ಗಂಡು ಮಗು ಮನೆಯಲ್ಲಿ ಇರಲಿಲ್ಲ. ಪತ್ನಿ ಮಮತಾಳನ್ನು ಪ್ರಶ್ನೆ ಮಾಡಿದಾಗ ಮಗುವನ್ನು ಹಾಸ್ಟೆಲ್‌ನಲ್ಲಿ ಬಿಟ್ಟಿರುವುದಾಗಿ ಹೇಳಿದ್ದಳು. ಆದರೆ, ಮಗು ಎಲ್ಲಿದೆ ಎನ್ನುವುದನ್ನು ತಾಯಿ ಮಮತಾ ತೋರಿಸುತ್ತಿರಲಿಲ್ಲ.
ಮಗು ಬಗ್ಗೆ ಕೇಳಿದ್ದಕ್ಕೆ ಠಾಣೆ ಮೆಟ್ಟಿಲೇರಿದ ತಾಯಿ
ಬಾಲಮಣಿ ಪದೇ ಪದೆ ಮಗುವಿನ ಬಗ್ಗೆ ಕೇಳಿದಾಗ ಮಮತಾ ಗಂಡನ ವಿರುದ್ಧವೇ ತಮಿಳುನಾಡಿನ ಹೊಸೂರು ಸಮೀಪದ ಸಿಪ್ ಕಾಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಇದೇ ಸಂದರ್ಭದಲ್ಲಿ ವಿಕಲಚೇತನ ಮಗುವನ್ನು ತಂದೆಯ ಬಳಿ ಬಿಟ್ಟು ಹೊರಟು ಹೋಗಿದ್ದಳು. ಮಮತಾ ಹೊರಟು ಹೋಗುತ್ತಿದ್ದಂತೆ ಹೆಣ್ಣು ಮಗುವಿನ ಜತೆ ಬೆಂಗಳೂರಿನ ಜಯನಗರಕ್ಕೆ ಬಾಲಮಣಿ ವಾಪಸ್ ಆಗಿದ್ದರು.
ಮಗನ ಹುಡುಕಾಟಕ್ಕೆ ಮುಂದಾದ ತಂದೆ
ಬೆಂಗಳೂರಿಗೆ ವಾಪಸ್ ಆದ ಬಳಿಕ ಮಗನಿಗಾಗಿ ತಮಿಳುನಾಡಿನಲ್ಲಿ ಸುಮಾರು 4 ವರ್ಷಗಳ ಕಾಲ ಹುಡುಕಾಟ ನಡೆಸಿದರೂ, ಮಗ ಪತ್ತೆ ಆಗಿರಲಿಲ್ಲ. ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಆಮ್ ಆದ್ಮಿ ಪಾರ್ಟಿಯವರ ಬಳಿ ಎಲ್ಲ ವಿಚಾರವನ್ನು ಬಾಲಮಣಿ ಎಳೆಎಳೆಯಾಗಿ ಹೇಳಿದ್ದರು. ಬಳಿಕ ಆಮ್ ಆದ್ಮಿ ಪಾರ್ಟಿಯ ಉಪಾಧ್ಯಕ್ಷ ಹಾಗೂ ಮಾಜಿ ಪೊಲೀಸ್ ಆಯುಕ್ತರಾಗಿದ್ದ ಭಾಸ್ಕರ್ ರಾವ್ ಅವರು ಅತ್ತಿಬೆಲೆ ಪೊಲೀಸರಿಗೆ ಮಗುವನ್ನು ಹುಡುಕಿಕೊಡುವಂತೆ ಮಾಹಿತಿ ನೀಡಿದ್ದರು.
ನಾಲ್ಕೂವರೆ ವರ್ಷದ ಬಳಿಕ ಅಪ್ಪನ ಕೈ ಸೇರಿದ ಮಗು
ತನಿಖೆಗಿಳಿದ ಅತ್ತಿಬೆಲೆ ಪೊಲೀಸರಿಗೆ ಬಾಲಮಣಿಯವರ ಮಗ ತಮಿಳುನಾಡಿನ ಈರೋಡ್ ಎಂಬ ಕಡೆ ಇರುವ ಮಾಹಿತಿ ಸಿಕ್ಕಿದೆ. ತಾಯಿಯಿಂದ ಬೇರ್ಪಟ್ಟ ಮಗ ಐದಾರು ಕೈ ಬದಲಿಸಿ ಕುಟುಂಬವೊಂದಕ್ಕೆ ಸೇರಿತ್ತು. ಸದ್ಯ ಆ ಬಾಲಕ ಹಾಗೂ ಕುಟುಂಬದವರನ್ನು ಅತ್ತಿಬೆಲೆ ಪೊಲೀಸ್ ಠಾಣೆಗೆ ಕರೆತರಲಾಗಿದೆ. ನಾಲ್ಕೂವರೆ ವರ್ಷದ ಬಳಿಕ ಮಗನನ್ನು ನೋಡಿ ತಂದೆ ಬಾಲಮಣಿ ಸಂತಸಗೊಂಡಿದ್ದಾರೆ.
ಇದನ್ನೂ ಓದಿ | Negligence | ಅವಳಿ ಮಕ್ಕಳ ಸಹಿತ ತಾಯಿ ಸಾವು; ತಾಯಿ ಕಾರ್ಡ್ ಇಲ್ಲವೆಂದು ವಾಪಸ್ ಕಳಿಸಿದ ಸರ್ಕಾರಿ ಆಸ್ಪತ್ರೆ